ಸೋಮವಾರ, ಜೂನ್ 21, 2021
28 °C

‘ಶಾಂತವೇರಿಯಂತಹ ಹೋರಾಟಗಾರ ಈಗಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸದಾ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಶಾಂತವೇರಿ ಗೋಪಾಲ ಗೌಡರಂತಹ ಹುಟ್ಟುಹೋರಾಟ ಗಾರರನ್ನು ಈ ದಿನಗಳಲ್ಲಿ ಕಾಣುವುದು ಕಷ್ಟ’ ಎಂದು ಸಂಸದ ಎಸ್‌.ಎಂ.ಕೃಷ್ಣ ಅಭಿಪ್ರಾಯಪಟ್ಟರು. ಕನ್ನಡ ಜನಶಕ್ತಿ ಕೇಂದ್ರವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಶಾಂತವೇರಿ ಗೋಪಾಲಗೌಡ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.‘ಅನ್ಯಾಯದ ವಿರುದ್ಧ ಸಿಡಿದೇಳುವ ಅವರ ಮನೋಭಾವ, ಸಮಾನತೆಯ ತತ್ವದ ಮೇಲೆ ಸಮಾಜ ಕಟ್ಟಬೇಕೆಂಬ ಅವರ ಆಶಯ ಇಂದಿನ ಪೀಳಿಗೆಗೆ ಆದರ್ಶ’ ಎಂದು ಹೇಳಿದರು.ಭಾಷಾ ಭಿನ್ನಾಭಿಪ್ರಾಯ: ‘ಶಾಂತವೇರಿ ಗೋಪಾಲಗೌಡರು  ಹಾಗೂ ನಾನು ಏಕಕಾಲಕ್ಕೆ ರಾಜಕೀಯ ಪ್ರವೇಶ ಮಾಡಿ ದೆವು. ಅವರು ತೀರ್ಥಹಳ್ಳಿಯಿಂದ ಸಮಾಜವಾದಿ ಪಕ್ಷದಿಂದ ಚುನಾವಣೆಗೆ ನಿಂತರೆ, ನಾನು ಕಾಂಗ್ರೆಸ್‌ನಿಂದ ಮದ್ದೂರಿನಿಂದ ಸ್ಪರ್ಧಿಸಿದ್ದೆ’ ಎಂದರು.

‘ಗೋಪಾಲಗೌಡರು ಮೊದಲಿ ನಿಂದಲೂ ಕನ್ನಡ ಭಾಷೆಯ ಅಭಿ ಮಾನಿ. ನಾನು ಆಗಷ್ಟೆ ಅಮೆರಿಕದಿಂದ ಮರಳಿದ್ದೆನಾದ್ದರಿಂದ ನನ್ನ ಭಾಷಣ ಪ್ರತಿಗಳು ಇಂಗ್ಲಿಷ್‌ನಲ್ಲಿರುತ್ತಿದ್ದವು. ಈ ಭಾಷೆಯ ಕಾರಣದಿಂದಾಗಿ ನಮ್ಮ ನಡುವೆ ಆಗಾಗ್ಗೆ ಭಿನ್ನಾಭಿಪ್ರಾಯ ತಲೆ ದೋರಿದ್ದವು’ ಎಂದು ನೆನಪಿಸಿ ಕೊಂಡರು.ಅರಸೊತ್ತಿಗೆ ವಿರೋಧಿಸಿದ್ದ ಗೋಪಾಲ ಗೌಡರು: ‘ಗೋಪಾಲಗೌಡರು ಮೈಸೂರು ಮಹಾರಾಜರು ಜಂಬೂ ಸವಾರಿ ಮಾಡುವುದನ್ನು ತೀವ್ರವಾಗಿ ವಿರೋಧಿಸಿದ್ದರು. ಸವಾರಿಯ ಸಂದರ್ಭ ದಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸಿ ಪೊಲೀಸರ ಆತಿಥ್ಯ ಪಡೆದಿದ್ದರು. ಹೀಗಿದ್ದರೂ ಕೂಡ ಅವರು ನಿಲುವು ಸ್ಪಷ್ಟವಾಗಿತ್ತು’ ಎಂದರು.‘ಎಂತಹುದ್ದೇ ಕಠಿಣ ಸಂದರ್ಭ ಗಳಲ್ಲಿಯೂ ವೈಚಾರಿಕ ನಿಲುವನ್ನು ಬಿಟ್ಟುಕೊಡದ ಅವರು ಇನ್ನಷ್ಟು ಕಾಲ ಬದುಕಬೇಕಿತ್ತು’ ಎಂದು ತಿಳಿಸಿದರು.ಗೋಪಾಲಗೌಡರ ಭಾಷಣ ಸುಬ್ಬುಲಕ್ಷ್ಮಿ ಸಂಗೀತದಂತೆ: ‘ಸಾಹಿತಿ ಅ.ನ.ಕೃಷ್ಣ ರಾವ್‌ ಅವರಿಂದ ಸ್ಫೂರ್ತಿ ಪಡೆದಿದ್ದ ಗೋಪಾಲಗೌಡರು ಭಾಷಣಕ್ಕೆ  ನಿಂತರೆ ಅದನ್ನು ಕೇಳುವುದೇ ಒಂದು ಆನಂದ. ಅವರ ಭಾಷಣದ ಓಘ ಎಂ.ಎಸ್‌. ಸುಬ್ಬುಲಕ್ಷ್ಮಿ ಅವರ ಗಾಯನದಂತೆ ಇರುತ್ತಿತ್ತು’ ಎಂದು ಬಣ್ಣಿಸಿದರು.‘ಕನ್ನಡ ಭಾಷೆ, ನಾಡಿಗಾಗಿ ಅವಿರತ ಶ್ರಮಿಸಿದ ಗೋಪಾಲಗೌಡರ ಹೆಸರಿ ನಲ್ಲಿ ಅ.ತಿ.ರಂಗನಾಥ್‌ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅ.ತಿ.ರಂಗನಾಥ್‌, ‘ಎಲ್ಲರ ಸಹಕಾರ ದಿಂದ ಮಾತ್ರ ಕನ್ನಡ ಸೇವೆಯನ್ನು ಮಾಡಲು ಸಾಧ್ಯವಾಯಿತು. ಎಚ್‌ಎ ಎಲ್‌ ಸಂಸ್ಥೆಯಲ್ಲಿ ಇತರೆ ಭಾಷಿಕರ ಹಾವಳಿ ಇದ್ದಾಗಲೂ ಕನ್ನಡ ಭಾಷೆಯ ಅಸ್ತಿತ್ವವನ್ನು ಪ್ರಬಲಗೊಳಿಸಲು ನೂರಾರು ಕನ್ನಡ ಸೇನಾನಿಗಳು ಹೋರಾಟ ನಡೆಸಿದರು’ ಎಂದರು.ಪ್ರಶಸ್ತಿಯೊಂದಿಗೆ ನೀಡಿದ ₨ 25 ಸಾವಿರ ಚೆಕ್‌ ಅನ್ನು ಹಿಂತಿರುಗಿಸಿದ ಅವರು, ಈ ಹಣವು ಕನ್ನಡ ಕಟ್ಟುವ ಕಾರ್ಯಕ್ಕೆ ಬಳಕೆಯಾಗಲಿ ಎಂದು ಆಶಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.