‘ಶಾಲೆಗಾಗಿ ನಾವು– ನೀವು’ ಯೋಜನೆ ಸಾಕಾರ

7
ಕೂನನಕೊಪ್ಪಲು: ಶಾಲಾಭಿವೃದ್ಧಿಗೆ ಟೊಂಕ ಕಟ್ಟಿರುವ ಯುವಪಡೆ

‘ಶಾಲೆಗಾಗಿ ನಾವು– ನೀವು’ ಯೋಜನೆ ಸಾಕಾರ

Published:
Updated:

ಮಳವಳ್ಳಿ: ತಮ್ಮೂರಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಟೊಂಕ ಕಟ್ಟಿ ನಿಂತಿರುವ ಗ್ರಾಮಸ್ಥರು ಸರ್ಕಾರಿ ಶಾಲೆಯಲ್ಲಿಯೇ ಎಲ್ಲ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ.ತಾಲ್ಲೂಕಿನ ಕೂನನಕೊಪ್ಪಲು ಗ್ರಾಮದಲ್ಲಿಯೇ ಇಂತಹದೊಂದು ಪ್ರಯೋಗ ನಡೆದಿದೆ.  ಮಳೆಯಾಶ್ರಿತ ಪ್ರದೇಶವನ್ನೇ ಹೊಂದಿರುವ ಈ ಗ್ರಾಮದಲ್ಲಿ 80 ಕುಟುಂಬಗಳಿವೆ. ಗ್ರಾಮದಲ್ಲಿ 1 ರಿಂದ 5ನೇ ತರಗತಿವರೆಗೆ ಸರ್ಕಾರಿ ಶಾಲೆ ಇದ್ದು, ಒಟ್ಟು 28 ವಿದ್ಯಾರ್ಥಿಗಳಿದ್ದಾರೆ. ಹಂಚಿನ ಛಾವಣಿ ಹೊಂದಿರುವ ಎರಡು ಕೊಠಡಿಗಳ ಶಾಲೆಗೆ ಒಬ್ಬರೇ ಶಿಕ್ಷಕರಿದ್ದಾರೆ.ಇದನ್ನು ಗಮನಿಸಿದ ಗ್ರಾಮದ ಯುವಕರ ತಂಡದ ಎಂಜಿನಿಯರ್‌ ನಾಗರಾಜು, ಗ್ರಾ. ಪಂಚಾಯಿತಿ ಸದಸ್ಯ ಮಹದೇವ, ಮುಖಂಡರಾದ ದೇವರಾಜಾಚಾರಿ, ಹಲಗೂರಯ್ಯ, ಕೆ.ಸಿ. ಮಹದೇವಸ್ವಾಮಿ, ಸ್ವಾಮಿ, ಮಲ್ಲಯ್ಯ, ಲಿಂಗರಾಜು, ನಂದೀಶ್‌, ಚೌಡೇಶ್‌, ಸಿ.ಟಿ. ರಾಜು, ಮುತ್ತುರಾಜು, ಪ್ರತೀಕ್‌ಗೌಡ, ಯೋಗೀಶ್‌ ಶಾಲೆಯನ್ನು ಉನ್ನತ ಮಟ್ಟಕ್ಕೆ ಏರಿಸಲು ಚಿಂತನೆ ನಡೆಸಿದರು. ಇದಕ್ಕಾಗಿಯೇ ಇವರೆಲ್ಲರೂ ಸೇರಿಕೊಂಡು ಶಾಲಾ ಅಭಿವೃದ್ಧಿಗಾಗಿ ಜ್ಞಾನವಿ ಗ್ರಾಮೀಣಾಭಿವೃದ್ಧಿ ತಂಡ ಕಟ್ಟಿಕೊಂಡರು. ತಂಡದಿಂದಲೇ ವೇತನ ನೀಡಲು ನಿರ್ಧರಿಸಿ ಮತ್ತೊಬ್ಬ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.ಉಪಗ್ರಹ ಆಧಾರಿತ ಶಿಕ್ಷಣ ನೀಡಬೇನ್ನುವ ಉದ್ದೇಶದಿಂದ ಗ್ರಾಮದ ನಾಗರಾಜು ಅವರು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಗಳಲ್ಲಿರುವ ತಮ್ಮ ಸಹೊದ್ಯೋಗಿಗಳ ಸಹಯೋಗದೊಂದಿಗೆ ಶಾಲೆಗೆ 70 ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಕೊಡಿಸಿದ್ದಾರೆ. ಇತ್ತೀಚೆಗೆ 30ಕ್ಕೂ ಹೆಚ್ಚಿನ ಸಹೊದ್ಯೋಗಿಗಳನ್ನು ಕರೆತಂದು, ಶಾಲೆಯ ಅಭಿವೃದ್ದಿಗಾಗಿ ಗ್ರಾಮಸ್ಥರು ನೀಡಿರುವ ಕೊಡುಗೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.ಗ್ರಾಮದ ದೇವರಾಜಚಾರಿ ಎಂಬುವರು 15ಗುಂಟೆ ಜಮೀನನ್ನು ಶಾಲೆ ಕಟ್ಟಡ ನಿರ್ಮಿಸಲು ದಾನವಾಗಿ ನೀಡಿದ್ದಾರೆ. ಇದಲ್ಲದೇ, ಮೂರು ಎಕರೆ ಪ್ರದೇಶದಲ್ಲಿ ಉತ್ತಮ ಶಾಲೆ ಶಾಲೆ ನಿರ್ಮಿಸಿ, ಗುಣಮಟ್ಟದ ಶಿಕ್ಷಣ ನೀಡಬೇಕೆನ್ನುವ ಉದ್ದೇಶ ಹೊಂದಿದ್ದಾರೆ.

ಪ್ರಸ್ತುತ 15ಗುಂಟೆ ಜಮೀನಿನಲ್ಲಿ ಎರಡು ಉತ್ತಮ ಹಾಗೂ ದೊಡ್ಡ ಕೊಠಡಿಗಳನ್ನು ನಿರ್ಮಿಸಲಾಗಿದೆ.ಸ್ಥಳೀಯವಾಗಿ ದೊರೆಯುವ ಸಂಪನ್ಮೂಲಗಳನ್ನು ಗ್ರಾಮದ ಯುವಕರೇ ಪೂರೈಸಿದ್ದು, ದಾನಿಗಳಿಂದ 12 ಲಕ್ಷ  ರೂಪಾಯಿ ಸಂಗ್ರಹಿಸಿದ್ದಾರೆ. ಶೀಘ್ರವೇ ಕಟ್ಟಡ ಉದ್ಘಾಟನೆಗೆ ಸಿದ್ದಗೊಳ್ಳಲಿದೆ.‘ಶಾಲೆಗಾಗಿ ನಾವು– ನೀವು’ ಯೋಜನೆಯಡಿ ಜ್ಞಾನವಿ ಗ್ರಾಮೀಣಾಭಿವೃದ್ಧಿ ತಂಡ ವಿವಿಧ ಯೋಜನೆಗಳನ್ನು ಹೊಂದಿದೆ. ಶಾಲೆಯ ಆವರಣದಲ್ಲೇ ಅಂಗನವಾಡಿ ಕೇಂದ್ರ ತೆರೆದು ಅಲ್ಲಿನ ಮಕ್ಕಳಿಗೆ ಬೇಬಿ ಸಿಟ್ಟಿಂಗ್‌ ಮಾದರಿಯಲ್ಲಿ ಶಿಕ್ಷಣ ಕೊಡಿಸುವುದು. ಕೃಷಿಕರಿಗೆ ನೈಸರ್ಗಿಕ ಕೃಷಿ ತರಬೇತಿ ಶಿಬಿರ, ವಿದ್ಯಾರ್ಥಿಗಳಿಗೆ ಆಂಗ್ಲ ಮತ್ತು ಹಿಂದಿ ಭಾಷೆ ಕಲಿಸುವುದು,  ಯೋಗ ಮತ್ತು ಕರಾಟೆ ತರಬೇತಿ ಕೊಡಿಸುವ ಯೋಜನೆ ಹಮ್ಮಿಕೊಂಡಿದ್ದಾರೆ. ಒಟ್ಟಾರೆ ಸರ್ಕಾರಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಗ್ರಾಮದ ಯುವಕರು ಶ್ರಮಿಸುತ್ತಿರುವುದು ಪ್ರಶಂಸಾರ್ಹವಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry