‘ಶಾಶ್ವತವಾಗಿ ಬಾಡಿಗೆ ಮನೆಯೇ ಗತಿ ಏನೋ’

ಬೆಂಗಳೂರು: ‘ನಮ್ಮ ಮನೆಯ ನಟ್ಟ ನಡುವೆಯೇ ರಾಜಕಾಲುವೆ ಬರುತ್ತದೆ ಎಂದು ಗುರುತು ಹಾಕಿದ್ದಾರೆ. ಸರ್ಕಾರಿ ಶಾಲೆ ಕಡೆಯಿಂದ ನೇರವಾಗಿ ಬರುವ ಕಾಲುವೆ ನಮ್ಮ ಮನೆಯ ಅಂಚಿನಲ್ಲೇ ತಿರುವು ಪಡೆಯುತ್ತದೆ ಹೇಳುತ್ತಿದ್ದಾರೆ. ನಮ್ಮ ಆತಂಕ, ಸಂಕಟ, ಕಷ್ಟ ಯಾರಿಗೂ ಅರ್ಥ ಆಗಲ್ಲ’ ಎಂದು ಸುಬ್ಬಣ್ಣ ಬಡಾವಣೆಯ ನಿವಾಸಿ ಶೀನಾ ಅಜಿತ್ ಭಾವುಕರಾದರು.
‘15 ವರ್ಷಗಳ ಹಿಂದೆ ಮನೆ ಕಟ್ಟಿದ್ದೇವೆ. ಆರು ತಿಂಗಳ ಹಿಂದೆ ಎರಡು ಅಡಿ ಜಾಗ ಹೋಗುತ್ತದೆ ಎಂದಿದ್ದರು. ನಾವೂ ಸುಮ್ಮನಾಗಿದ್ದೆವು. ಇದೀಗ ಬಂದು ಅರ್ಧ ಮನೆ ಹೋಗುವಂತೆ ಗುರುತು ಹಾಕಿದ್ದಾರೆ’
‘ಮೂರು ತಿಂಗಳ ಹಿಂದಷ್ಟೇ ಖಾಸಗಿ ಬ್ಯಾಂಕ್ನಲ್ಲಿ ₹ 30 ಲಕ್ಷ ಸಾಲ ಮಾಡಿ, ಮನೆ ನವೀಕರಣ ಹಾಗೂ ಮಹಡಿ ಕಟ್ಟಲು ಕೆಲಸ ಆರಂಭವಾಗಿತ್ತು. ಈಗಲೂ ಕೆಲಸ ನಡೆಯುತ್ತಿದೆ. ಹೀಗಾಗಿ ಬಾಡಿಗೆ ಮನೆಯಲ್ಲಿ ಇದ್ದೇವೆ. ಇನ್ನುಂದೆ, ಶಾಶ್ವತವಾಗಿ ಬಾಡಿಗೆ ಮನೆಯಲ್ಲಿಯೇ ಜೀವನ ಕಳೆಯಬೇಕೇನೋ ಎಂಬ ಆತಂಕ ಕಾಡುತ್ತಿದೆ’ ಎಂದು ಚಿಂತಿತರಾದರು.
‘ನಮ್ಮದು ಮೂರು ಅಂತಸ್ತಿನ ಮನೆ. ನಾವು ಎರಡನೇ ಅಂತಸ್ತಿನಲ್ಲಿ ಇದ್ದೇವೆ. ಒತ್ತುವರಿ ಆಗಿದೆ ಎಂದು ಒಡೆಯುತ್ತಿದ್ದಾರೆ. ಅದರಲ್ಲಿ ಮೇಲೆ ಹತ್ತುವ ಮೆಟ್ಟಿಲುಗಳೇ ಹೋಗುತ್ತವೆ. ಇದೀಗ ಎಲ್ಲಿಗೆ ಹೋಗಬೇಕು ತಿಳಿಯುತ್ತಿಲ್ಲ. ನಮ್ಮೂರು ದೊಡ್ಡಬಳ್ಳಾಪುರ. ಅಲ್ಲಿಯೇ ಹೋಗಲು ನಿರ್ಧರಿಸಿದ್ದೇವೆ’ ಎಂದು ಎಸ್. ಶ್ವೇತಾ ತಿಳಿಸಿದರು.
‘ಬೀದಿಯ ಎರಡೂ ತುದಿಗಳಿಂದ ಒಡೆಯುತ್ತ ಬರುತ್ತಿದ್ದಾರೆ. ನಮ್ಮ ಮನೆಗೆ ತಲುಪುವಷ್ಟರಲ್ಲಿ ನಾವು ಮನೆಯ ಸಾಮಗ್ರಿಗಳನ್ನು ಇಳಿಸಬೇಕಿದೆ’ ಎಂದು ಲಗುಬಗೆಯಿಂದ ಸ್ಥಳಾಂತರ ಕಾರ್ಯದಲ್ಲಿ ತೊಡಗಿದರು.
‘ ಹಳೆಯ ಸರ್ವೇಯಲ್ಲಿ ನಮ್ಮ ಜಾಗ ಇರಲಿಲ್ಲ. ಸೇಂಟ್ ಫಿಲೋಮಿನಾ ಶಾಲೆಯ ಜಾಗ ಉಳಿಸಲು ನಮ್ಮ ಜಾಗದಲ್ಲಿ ರಾಜಕಾಲುವೆ ಬರುತ್ತದೆ ಎಂದು ಗುರುತು ಹಾಕಿದ್ದಾರೆ. ನಮ್ಮ ಜಾಗದ ಆರಂಭದಲ್ಲೇ ಕಾಲುವೆ ತಿರುವು ಪಡೆಯುತ್ತದೆ ಎನ್ನುತ್ತಾರೆ. ಅದು ಹೇಗೆ ಸರಿಯಾಗಿ ಶಾಲೆ ಕಟ್ಟಡ ಹಾಗೂ ನಮ್ಮ ಜಾಗದ ಅಂಚಿಗೆ ತಿರುವು ಪಡೆಯುತ್ತದೆ’ ಎಂದು ಶ್ರುತಿ ರಾಕೇಶ್ ಪ್ರಶ್ನಿಸಿದರು.
ಇನ್ನಷ್ಟು ಸಮಯ ಕೊಡಬೇಕಿತ್ತು: ‘ಜಾಗ, ಕಟ್ಟಡ, ಬಾಡಿಗೆ’ ಎಲ್ಲವೂ ಕಳೆದುಕೊಂಡ ದುಃಖ ಕಟ್ಟಡಗಳ ಮಾಲೀಕರದ್ದು ಆಗಿದ್ದರೆ, ದಶಕಗಳ ಅಂಗಡಿ ಬಿಡುವ ಕಷ್ಟ ವ್ಯಾಪಾರಿಗಳದ್ದು.
‘ನಮ್ಮದು ಸೀರೆ ಅಂಗಡಿ ಇದೆ. ಲಕ್ಷಾಂತರ ರೂಪಾಯಿ ಸರಕು ಹಾಕಿದ್ದೇವೆ. ಒಂದೇ ದಿನದಲ್ಲಿ ತೆರವು ಮಾಡಿ ಎಂದರೆ ಎಲ್ಲಿಗೆ ಹೋಗಬೇಕು? ಅಧಿಕಾರಿಗಳು ಕಟ್ಟಡ ಒಡೆಯಲು ಯಂತ್ರಗಳನ್ನು ತಂದು ನಿಲ್ಲಿಸಿದ್ದನ್ನು ನೋಡಿ ನನ್ನ ಪತಿಗೆ ಎದೆ ನೋವು ಕಾಣಿಸಿಕೊಂಡಿತು’ ಎಂದು ಕಾವೇರಿ ಬಟ್ಟೆ ಅಂಗಡಿಯ ಶಾಂತಾ ಕಣ್ಣೀರು ಹರಿಸಿದರು. ಕಂಕುಳಲ್ಲಿದ್ದ ಪುಟ್ಟ ಮಗು ಕೂಡ ಅವರ ದುಃಖ ಹಂಚಿಕೊಂಡಿತು!
‘ನಮ್ಮದು ಹಾಸಿಗೆ ಅಂಗಡಿ ಇದೆ. ಹತ್ತಿ ಸೇರಿದಂತೆ ಎಲ್ಲಾ ವಸ್ತುಗಳನ್ನು ಆ ಕಡೆಯ ಮಳಿಗೆಯಲ್ಲಿ ಇತ್ತು. ಅವುಗಳನ್ನು ತೆಗೆದುಕೊಳ್ಳಲು ಒಂದು ಗಂಟೆಯೂ ಸಮಯ ಸಿಗಲಿಲ್ಲ. ಅಷ್ಟರಲ್ಲಿಯೇ ಯಂತ್ರಗಳೆಲ್ಲ ಒಡೆದು ಹಾಕಿದವು. ಎಲ್ಲವೂ ಮಣ್ಣುಪಾಲಾಯಿತು’ ಎಂದು ರಾಜ ಕುಲಾಯಪ್ಪ ರೋದಿಸಿದರು.
‘ಇವರ ಅಂಗಡಿ ನೆಚ್ಚಿ ನಾವು 10–12 ಜನರು ದಿನವೂ ಬದುಕು ನಡೆಸುತ್ತಿದ್ದೆವು. ನಿತ್ಯ ₹300 ಸಂಬಳ ಸಿಗುತ್ತಿತ್ತು. ಇದೀಗ ಅವರ ಅಂಗಡಿಯೇ ಹೀಗಾಗಿದೆ’ ಎಂದು ಅವರ ಬಳಿ ಕೆಲಸ ಮಾಡುವ ರಜಾಕ್ ನೊಂದುಕೊಂಡರು.
ಕಾರ್ಯಾಚರಣೆಯಲ್ಲಿ ತಮ್ಮ ಪೂಜಾ ಸಾಮಗ್ರಿಯ ಅಂಗಡಿ ಕಳೆದುಕೊಂಡ ಭಾಗ್ಯಮ್ಮ, ‘ಮನುಷ್ಯತ್ವವೇ ಇಲ್ಲದಂತೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ’ ಎಂದು ಹಿಡಿಶಾಪ ಹಾಕಿದರು.
‘ಇಡೀ ರಾತ್ರಿ ನಿದ್ದೆ ಮಾಡಿಲ್ಲ. ಸ್ನೇಹಿತರನ್ನು ಕರೆದುಕೊಂಡು ನಸುಕಿನಿಂದಲೇ ಎಲ್ಲಾ ಸಾಮಾನುಗಳನ್ನು ಸಾಗಿಸುತ್ತಿದ್ದೇನೆ. 20 ವರ್ಷದಿಂದ ಇಲ್ಲಿ ಅಂಗಡಿ ಇಟ್ಟಿದ್ದೆ. ಇದೀಗ ಒಂದೇ ಬಾರಿ ಹೋಗು ಎಂದರೆ ಎಲ್ಲಿಗೆ ಹೋಗಬೇಕು?’ ಎಂದು ಚಾಮುಂಡಿ ಎಲೆಕ್ಟ್ರಿಕಲ್ ಅಂಗಡಿಯ ನೇಮಿಚಂದ್ ಪ್ರಶ್ನಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.