‘ಶಿಕ್ಷಣದಲ್ಲಿ ಮಹಿಳೆಯರೇ ಮುಂದು’

ಬೆಂಗಳೂರು: ‘ರಾಜ್ಯದ ವಿಶ್ವವಿದ್ಯಾಲಯಗಳು ನಡೆಸಿದ ಬಹುತೇಕ ಘಟಿಕೋತ್ಸವಗಳಲ್ಲಿ ನಾನು ಭಾಗಿಯಾಗಿದ್ದೇನೆ. ಎಲ್ಲ ವಿ.ವಿಗಳಲ್ಲಿ ಪಿಎಚ್.ಡಿ ಪಡೆಯುವ ಸಾಧಕರಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿ ಇದ್ದಾರೆ. ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣದಲ್ಲೂ ಅವರ ಸಾಧನೆ ಹೆಮ್ಮೆ ಮೂಡಿಸಿದೆ’ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅಭಿಮಾನದಿಂದ ನುಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಎಲ್ಲ ರಂಗಗಳಲ್ಲೂ ಯುವತಿಯರ ಸಾಧನೆ ಅಚ್ಚರಿ ತರುವಂತಿದೆ. ಅವರಲ್ಲಿರುವ ವಿಶೇಷ ಶ್ರದ್ಧೆ ಮತ್ತು ಸಾಮರ್ಥ್ಯದ ಪರಿಣಾಮ ಉನ್ನತ ಹುದ್ದೆಗಳಿಗೂ ನೇಮಕಗೊಳ್ಳುತ್ತಿದ್ದಾರೆ. ಪಾಶ್ಚಿಮಾತ್ಯ ದೇಶಗಳ ಬ್ಯಾಂಕ್ಗಳು ಜವಾಬ್ದಾರಿ ಬಯಸುವ ಮಹತ್ವದ ಹುದ್ದೆಗಳನ್ನು ಹೆಚ್ಚಾಗಿ ಮಹಿಳೆಯರಿಗೇ ಮೀಸಲಿಡುತ್ತಿವೆ’ ಎಂದು ಹೇಳಿದರು.
‘ಸಮಯವನ್ನು ವ್ಯರ್ಥಗೊಳಿಸದೆ ಕಾರ್ಯ ನಿರ್ವಹಿಸುವುದು ಮಹಿಳೆಯರ ಹೆಚ್ಚುಗಾರಿಕೆಯಾಗಿದೆ’ ಎಂದ ಅವರು, ‘ಸಚಿವಾಲಯದಲ್ಲಿ ಬಹುಸಂಖ್ಯೆಯಲ್ಲಿ ಮಹಿಳಾ ಉದ್ಯೋಗಿಗಳಿದ್ದು, ಸರ್ಕಾರದ ಕೆಲಸಗಳು ಸುಸೂತ್ರವಾಗಿ ನಡೆಯಲು ಅವರ ಕೊಡುಗೆ ಅಪಾರವಾಗಿದೆ’ ಎಂದು ಕೊಂಡಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ, ‘ಶಿಕ್ಷಣ ಹಾಗೂ ನಿರುದ್ಯೋಗದ ಸಮಸ್ಯೆಯಿಂದ ಯುವಕರು ಕೆಟ್ಟ ಹವ್ಯಾಸಗಳಿಗೆ ಬಲಿಯಾಗುತ್ತಿದ್ದು, ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ನಿರುದ್ಯೋಗದ ಸಮಸ್ಯೆ ಬಗೆಹರಿದರೆ ದೌರ್ಜನ್ಯಗಳು ತಕ್ಕಮಟ್ಟಿಗೆ ಕಡಿಮೆ ಆಗಲಿವೆ’ ಎಂದು ಅಭಿಪ್ರಾಯಪಟ್ಟರು.
‘ಸಮಸ್ಯೆಯನ್ನು ಎದುರಿಸುವ ಛಾತಿಯನ್ನು ಮಹಿಳೆಯರೇ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ಸಹಕಾರ ಇಲಾಖೆ ಕಾರ್ಯದರ್ಶಿ ಡಾ.ಸಿ.-ಸೋಮಶೇಖರ್, ನಟಿ ಸುಧಾರಾಣಿ, ಸಂಘದ ಅಧ್ಯಕ್ಷ ಎಲ್.ಭೈರಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಂ. ಪಟೇಲ್ ಪಾಂಡು ವೇದಿಕೆ ಮೇಲಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ಬಿ.ಎಲ್. ಭಾಗ್ಯಲಕ್ಷ್ಮಿ, ಡಾ. ಆಶಾ ಬೆನಕಪ್ಪ, ಅರ್ಚನಾ ಉಡುಪ, ವಾಣಿ ಹರಿಕೃಷ್ಣ, ಎನ್.ಎನ್. ಗಂಗಮ್ಮ, ಫಿಲೊಮಿನಾ ಲೊಬೊ, ಎನ್.ಎಸ್. ರಾಜಲಕ್ಷ್ಮಿ, ಗೀತಾ ಕುಲಕರ್ಣಿ, ಮಂಜುಳಾ ಮತ್ತು ಎಂ.ಆರ್. ಕಮಲಾ ಅವರನ್ನು ಸತ್ಕರಿಸಲಾಯಿತು.
‘ರಾಜಕೀಯಕ್ಕೆ ಮುತಾಲಿಕ್: ದುರದೃಷ್ಟಕರ’
ಬೆಂಗಳೂರು: ‘ಮಂಗಳೂರು ಪಬ್ ದಾಳಿಯಲ್ಲಿ ಪಾಲ್ಗೊಂಡು ಜೈಲು ಪಾಲಾಗಿದ್ದವರು ಪ್ರಮೋದ್ ಮುತಾಲಿಕ್. ಅಂತಹ ವ್ಯಕ್ತಿ ರಾಜಕೀಯಕ್ಕೆ ಬಂದಿರುವುದು ದುರದೃಷ್ಟಕರ’ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಹೇಳಿದರು.
ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ‘ನಾನು ರಾಜ್ಯಪಾಲನಾಗಿ ಕರ್ನಾಟಕಕ್ಕೆ ಬಂದ ಹೊಸತರಲ್ಲಿ ಮಂಗಳೂರಿನ ಘಟನೆ ನಡೆದಿತ್ತು. ಅದರಲ್ಲಿ ಭಾಗಿಯಾದ ಆರೋಪಿಗಳಲ್ಲಿ ಮುತಾಲಿಕ್ ಸಹ ಒಬ್ಬರು. ಇಂತಹ ವ್ಯಕ್ತಿ ರಾಜಕೀಯ ಸೇರಬೇಕೇ’ ಎಂದು ಅವರು ಕೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.