‘ಶಿಕ್ಷಣದಿಂದ ಮಹಿಳಾ ಸಬಲೀಕರಣ ಭ್ರಮೆ’

7

‘ಶಿಕ್ಷಣದಿಂದ ಮಹಿಳಾ ಸಬಲೀಕರಣ ಭ್ರಮೆ’

Published:
Updated:

ಮಂಗಳೂರು: ‘ರಾಜ್ಯದ ಅತ್ಯಂತ ಸುಶಿಕ್ಷಿತರ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್‌ಗಿರಿ ಆತಂಕಕಾರಿ. ಶಿಕ್ಷಣದಿಂದ ಮಹಿಳಾ ಸಬಲೀಕರಣ ಸಾಧ್ಯ ಎಂಬ ಮಾತಿನಲ್ಲಿ ಹುರುಳಿಲ್ಲ ಎಂಬುದಕ್ಕೆ ಇದು ಉದಾಹರಣೆ’ ಎಂದು ಹಿರಿಯ ಪತ್ರಕರ್ತೆ ಹಾಗೂ ಲೇಖಕಿ ಅಮ್ಮು ಜೋಸೆಫ್ ಅಭಿಪ್ರಾಯ­ಪಟ್ಟರು.ಸೇಂಟ್ ಆನ್ಸ್ ಶಿಕ್ಷಣ ಮಹಾವಿದ್ಯಾಲಯದ 70ನೇ ವಷಾರ್ಚರಣೆ ಅಂಗವಾಗಿ ಹಮ್ಮಿಕೊಂಡಿರುವ ‘ಶಿಕ್ಷಣ ಮತ್ತು ಮಹಿಳಾ ಸಬಲೀಕರಣ’ ಕುರಿತ ಎರಡು ದಿನಗಳ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಗುರುವಾರ ದಿಕ್ಸೂಚಿ ಭಾಷಣ ಮಾಡಿದರು.ಸುಶಿಕ್ಷಿತ ಮಹಿಳೆಯರೇ ಹೆಚ್ಚಾಗಿ ವರದಕ್ಷಿಣೆ ಸಾವಿಗೆ ತುತ್ತಾಗಿರುವ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ‘ಶಿಕ್ಷಣದ ಹೆಚ್ಚಳದಿಂದಾಗಿ ಹಿಂಸಾಚಾರ ಪ್ರಕರಣಗಳು ಕಡಿಮೆ­ಯಾಗಿವೆ­ಯಾದರೂ, ಸುಶಿಕ್ಷಿತ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯಗಳ ಸಂಖ್ಯೆ ಇಳಿದಿಲ್ಲ. ಪತಿಯ ಹಾಗೂ ಆತನ ಮನೆಯವರ ಕಿರುಕುಳ ತಡೆಯುವಲ್ಲಿ ಶಿಕ್ಷಣ ಮಹಿಳೆಯ ನೆರವಿಗೆ ಬರದು. ಉದ್ಯೋಗದಲ್ಲಿರುವ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಕೌಟುಂಬಿಕ ದೌರ್ಜನ್ಯ ಎದುರಿಸುತ್ತಿರುವುದು ಆಘಾತಕಾರಿ’ ಎಂದರು.‘ಹೆಣ್ಣು  ಕೇವಲ ಸರಕು ಎಂಬ ಪುರುಷರ ಮನೋಧರ್ಮ ಬದಲಾಗದ ಹೊರತು, ಲಿಂಗ ಸಂವೇದನೆ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ, ಮಹಿಳೆಯರ ಶೋಷಣೆ ನಿಲ್ಲದು’ ಎಂದು ಮುಂಬೈಯ ಪತ್ರಕರ್ತೆ ಹಾಗೂ ಮಹಿಳಾ ಸಂಘಟಕಿ ಕಲ್ಪನಾ ಶರ್ಮ ಅಭಿಪ್ರಾಯಪಟ್ಟರು. ‘ಸುಶಿಕ್ಷಿತ ಸಮಾಜದಲ್ಲೇ ಅತ್ಯಾಚಾರ, ದೌರ್ಜನ್ಯ ಮೊದಲಾದ ಸ್ತ್ರೀಶೋಷಣೆ  ಹೆಚ್ಚು. ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲೂ ಪುರುಷನಿಗೆ ಸಮಾನ ಸಾಧನೆ ಮಾಡಿದರೂ, ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಆಕೆ ಪುರುಷನಿಗೆ ಅಡಿಯಾಳು ಎಂಬಂತೆ ಬಿಂಬಿಸುತ್ತಿರುವುದು ದೌರ್ಭಾಗ್ಯ’ ಎಂದರು.‘ವೈವಾಹಿಕ ಜೀವನ ಎಂಬ ಹಣೆಪಟ್ಟಿ ಕಟ್ಟಿ, ಹೆಣ್ಣಿನ ಒಪ್ಪಿಗೆ ಇಲ್ಲದೆಯೇ ಆಕೆಯ ಮನಸ್ಸು ಹಾಗೂ ದೇಹದ ಮೇಲೆ ದಿನನಿತ್ಯ ಅತ್ಯಾಚಾರ ನಡೆಯುತ್ತಿದೆ. ಇಂತಹ ಮನೋಭಾವವನ್ನು ಹೋಗಲಾಡಿಸುವುದು ಸವಾಲಿನ ವಿಷಯ’ ಎಂದರು.ಮೈಸೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಇಂದಿರಾ ಮಾತನಾಡಿ, ‘ತನಗೆ ಬೇಕಾದುದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಹೆಣ್ಣನ್ನು ಸಬಲೆ ಎನ್ನಬಹುದು. ಎಲ್ಲಾ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದು ಅಂಕಿ ಅಂಶದಲ್ಲಿ ತೋರಿಸಿ ಪ್ರಯೋ­ಜನವಿಲ್ಲ. ಹೆಣ್ಣು ಮಕ್ಕಳು ನಿರ್ಭೀತಿಯಿಂದ ಶಾಲೆಗೆ ಹೋಗಿ­ಬರುವ ವ್ಯವಸ್ಥೆ ಇದೆಯೇ ಎಂದು ಆತ್ಮಾವಲೋಕನ ಮಾಡಿ­ಕೊಳ್ಳ­ಬೇಕು. 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿನಿ­ಯರಿಗೆ ಒಂದು ಹಾಜರಿಗೆ ಎರಡು ರೂಪಾಯಿ ನೀಡಲು ಸರ್ಕಾರ ಯೋಜನೆ ರೂಪಿಸಿದೆ. ಇಂತಹ ಯೋಜನೆಗಳ ಬದಲು ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವುದು ಮುಖ್ಯ’ ಎಂದರು.‘ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಸರ್ಕಾರ 2008ರಲ್ಲಿ ಆರಂಭಿಸಿದ ಹೊಸ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ತುಂಬಿ ತುಳುಕುತ್ತಿರುವುದು ಆಶಾದಾಯಕ ಬೆಳವಣಿಗೆ’ ಎಂದರು.ಪ್ರಾಂಶುಪಾಲರಾದ ಡಾ. ಸಿಸ್ಟರ್ ಲಿಯೋನಿಲಾ ಮಿನೇಜಸ್ ಅಧ್ಯಕ್ಷತೆ ವಹಿಸಿದ್ದರು.  ಸೇಂಟ್ ಆನ್ಸ್ ಕಾನ್ವೆಂಟಿನ ಡಾ. ಶಾಲಿನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಗರ್ಟ್ರೂಡ್ ವೇಗಸ್, ಸಂಯೋಜಕಿ ಡಾ. ಎ. ಶಶಿಕಲಾ ಉಪಸ್ಥಿತರಿದ್ದರು. ಡಾ. ಪದ್ಮಾವತಿ ಎಂ. ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry