‘ಶೀಘ್ರ ಅಭ್ಯರ್ಥಿಗಳ ಪಟ್ಟಿ ಅಂತಿಮ’

7
ಲೋಕಸಭಾ ಚುನಾವಣೆ

‘ಶೀಘ್ರ ಅಭ್ಯರ್ಥಿಗಳ ಪಟ್ಟಿ ಅಂತಿಮ’

Published:
Updated:

ಚಿಕ್ಕಮಗಳೂರು: ’ಲೋಕಸಭಾ ಚುನಾ­ವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಒಂದು ವಾರದಿಂದ ಚರ್ಚೆ ನಡೆಸುತ್ತಿದ್ದು, ಆದಷ್ಟು ಶೀಘ್ರ ಪಟ್ಟಿ ಅಂತಿಮಗೊಳಿಸುತ್ತೇವೆ’ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.­ದೇವೇಗೌಡರು ತಿಳಿಸಿದರು.ನಗರದ ಶರೀಫ್‌ ಗಲ್ಲಿಯ ಪ್ರಾರ್ಥನಾ ಮಂದಿರಕ್ಕೆ ಮಂಗಳವಾರ ಭೇಟಿ ನೀಡಿದ ನಂತರ ಪತ್ರಿಕಾ­ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆಗೆ ಪಕ್ಷದ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಜತೆಗೆ ಚರ್ಚಿಸುತ್ತಿದ್ದೇನೆ. ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳು ಯಾರಾಗಬಹುದೆಂದು ನಾವು ಲೆಕ್ಕಾಚಾರ ಹಾಕುತ್ತಿಲ್ಲ. ನಮ್ಮ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತಿದ್ದು, ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಯಾರಿಗೆ ಕೊಟ್ಟರೆ ಗೆಲುವಿನ ಅವಕಾಶವಿದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.ಒಮ್ಮೆ 2004ರಲ್ಲಿ ಚಿಕ್ಕ­ಮಗ­ಳೂರು ಮತ್ತು ಮಂಗಳೂರಿನಲ್ಲಿ ಕ್ಷೇತ್ರ­ವನ್ನು ಸಿಪಿಐಗೆ ಸ್ಪರ್ಧಿಸಲು ಬೆಂಬಲ ನೀಡಿದ್ದೆವು. 2006ರಲ್ಲಿ ಅವರು ನಮ್ಮಿಂದ ದೂರ ಸರಿದರು. ಆದರೆ, ಕೇರಳದಲ್ಲಿ ಇಂದಿಗೂ ಅವರ (ಸಿಪಿಐ) ಮತ್ತು ನಮ್ಮ ಸಂಬಂಧ ಚೆನ್ನಾಗಿಯೇ ಇದೆ. ಬರುವ ಚುನಾವಣೆಗೆ ನಾವು ಯಾವುದೇ ಪಕ್ಷದೊಂದಿಗೆ ಚುನಾ­ವಣಾ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಮ್ಮ ಪಕ್ಷವನ್ನು ಮುಂದಿನ ಚುನಾವಣೆಗೆ ಹೇಗೆ ಸಜ್ಜುಗೊಳಿ­ಸಬೇಕು? ನಮ್ಮ ದೋಷ ಮತ್ತು ವಿಫಲತೆಗಳೇನು? ಎನ್ನುವುದರ ಬಗ್ಗೆ­ಯೂ ಚರ್ಚಿ­ಸುತ್ತಿದ್ದೇವೆ. ಅವೆಲ್ಲವನ್ನು ಸರಿಪಡಿಸಿ­ಕೊಳ್ಳಲು ಪ್ರಯತ್ನಿಸುತ್ತಿ­ದ್ದೇವೆ ಎಂದರು.ತೃತೀಯ ರಂಗದ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಗೌಡರು, ಎಲ್ಲರೂ ಮುಲಾಯಂ ಮೂಸುತ್ತಾ ಕುಳಿತ್ತಿ­ದ್ದಾರೆ ಎಂದರು. ಯಡಿಯೂರಪ್ಪ ಬಿಜೆಪಿ ಸೇರುತ್ತಿರುವ ಬಗ್ಗೆ ಕೇಳಿದಾ­ಗಲೂ ಒಬ್ಬ ವ್ಯಕ್ತಿಯ ಗುಣಗಾನ ಮಾಡುತ್ತಾ ಕೂರುವುದು ನನ್ನ ಮಟ್ಟದಲ್ಲಿ ಸರಿಯಲ್ಲ. ನಾನು ಅವರ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂದರು, ಮೋದಿ ಬಗ್ಗೆ ಕೇಳಿದಾಗಲೂ, ದೇಶದಲ್ಲಿ ಮೋದಿ ಅಲೆ ಎಲ್ಲಿದೆ? ಅದು ನೀವೇ ಮಾಧ್ಯಮದವರು ಸೃಷ್ಟಿಸಿರುವುದು  ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry