ಶನಿವಾರ, ಜನವರಿ 25, 2020
19 °C

‘ಶೈಕ್ಷಣಿಕವಾಗಿ ಹಿಂದುಳಿದವರಿಗೆ ತರಬೇತಿ ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್:  ‘ಸಾಧಾರಣ ಅಂಕ ಗಳಿಸುವ ಕಡಿಮೆ ಬುದ್ಧಿಮತ್ತೆಯ ವಿದ್ಯಾರ್ಥಿ­ಗಳನ್ನು ಗುರುತಿಸಿ ವಿಶೇಷ ತರಬೇತಿ ನೀಡಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ­ವನ್ನು ಮಠವು ಚಿತ್ರದುರ್ಗದಲ್ಲಿ ಈಚೆಗೆ ಆರಂಭಿಸಿದ್ದು, ಇಂಥದೇ ಕಾರ್ಯಕ್ರಮ­ವನ್ನು ಇತರ ಜಿಲ್ಲೆಗಳಲ್ಲಿಯೂ ಆರಂಭಿಸ­ಲಾಗುವುದು’ ಎಂದು ಚಿತ್ರದುರ್ಗ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ನಗರದಲ್ಲಿ ಗುರುವಾರ ಆರಂಭ­ವಾದ ಮೂರು ದಿನಗಳ ‘ಶರಣ ಸಂಸ್ಕೃತಿ ಉತ್ಸವ’ದಲ್ಲಿ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದ ಅವರು, ವಿವಿಧ ಶಿಕ್ಷಣ ಸಂಸ್ಥೆಗಳು ಉನ್ನತ ಅಂಕ ಗಳಿಸಿದ ಮಕ್ಕಳನ್ನು ಆಯ್ಕೆ ಮಾಡಿ ಶಿಕ್ಷಣಕ್ಕೆ ಪೂರಕ ವಾತಾವರಣ ಕಲ್ಪಿಸುವುದು ಸಾಮಾನ್ಯ. ಆದರೆ, ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿಗಳ ಜ್ಞಾನಾಭಿವೃದ್ದಿ ಈಗಿನ ಅವಶ್ಯಕತೆ ಎಂದರು.‘ಗ್ರಾಮೀಣ ಭಾಗದ ಮತ್ತು ಬಡ ಕುಟಂಬದ ಮಕ್ಕಳು ಪೌಷ್ಟಿಕಾಂಶದ ಕೊರತೆ ಎದುರಿಸುತ್ತಿರುವುದು ಕೂಡಾ ಹೆಚ್ಚಿನವರ ಶೈಕ್ಷಣಿಕ ಹಿನ್ನಡೆಗೆ ಕಾರಣ. ಇಂಥ ಕೊರತೆಯನ್ನು ನೀಗಿಸುವುದು ಸರ್ಕಾರದ ಬಿಸಿಯೂಟ ಮತ್ತು ಕ್ಷೀರ ಭಾಗ್ಯ ಯೋಜನೆಯ ಉದ್ದೇಶ’ ಎಂದರು.

ವಿದ್ಯೆಯನ್ನು ಒಲಿಸಿಕೊಳ್ಳುವುದು ಕಷ್ಟದ ಕೆಲಸ. ಅದಕ್ಕಾಗಿ  ಕಠಿಣ ಶ್ರಮ ಅಗತ್ಯ. ವಿದ್ಯಾರ್ಥಿ ತನ್ನನ್ನೇ ಪ್ರಶ್ನಿಸಿಕೊಂಡು ಚಿಂತನ, ಮಂಥನ ಮಾಡಿ ಅಧ್ಯಯನ ಮಾಡಬೇಕು. ಕೀಳರಿಮೆಯಿಂದ ಬಳಲ­ಬಾರದು. ಆಗ ಮಾತ್ರವೇ  ಉತ್ತಮವಾದ ಸಾಧನೆ ಮಾಡುವುದು ಸಾಧ್ಯ ಎಂದು ಹೇಳಿದರು.ಯುವ ಸಮಾವೇಶ: ಸಸಿಗೆ ನೀರುಹಾಕುವ ಮೂಲಕ ಯುವ ಸಮಾ­ವೇಶ ಉದ್ಘಾಟಿಸಿದ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ‘ಜ್ಞಾನದ ಬೆಳಕು ಹೆಚ್ಚಾಗಲು ಧ್ಯಾನ ಪ್ರಮುಖ ಸಾಧನ. ವಿದ್ಯಾರ್ಥಿಗಳು ದಾಸರಾಗದ ಹೊರತು ದೈವತ್ವ ಸಿಗುವುದಿಲ್ಲ. ಇದರ ಜೊತೆಗೆ ವಿದ್ಯಾರ್ಥಿಗಳು ಧೈರ್ಯ ಮತ್ತು ಸ್ಥೈರ್ಯವನ್ನು ಮೂಡಿಸಿ­ಕೊಳ್ಳಬೇಕು’ ಎಂದರು.

ಅಂಗವಿಕಲತೆಯ ನಡುವೆಯೂ ಉನ್ನತ ಸಾಧನೆ ಮಾಡಿದ ಪೂನಾದ ರಚನಾ ಬೋತ್ರಾ ಮಾತನಾಡಿ, ‘ಅಂಗವಿಕಲೆ  ಎಂಬುದು ಎಂದಿಗೂ ನನ್ನ ಹಿನ್ನಡೆಗೆ ಕಾರಣವಾಗಲಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉತ್ತಮ ಸ್ಥಾನ ಗಳಿಸಲು ಆತ್ಮವಿಶ್ವಾಸ ಮತ್ತು ನಿರಂತರ ಶ್ರಮವೇ ಕಾರಣ ಎಂದರು.ಅಧ್ಯಕ್ಷತೆ ವಹಿಸಿದ ಕೆಆರ್ಇ ಸಂಸ್ಥೆ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಅಷ್ಟೂರ, ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕುಗ್ಗುತ್ತಿದೆ. ಅವರಲ್ಲಿ ಛಲ, ಓದುವ ಮನೋಭಾವ ಮೂಡಿಸಲು ಇಂಥ ಕಮ್ಮಟಗಳು ಅಗತ್ಯ ಎಂದರು.ಸನ್ಮಾನ: ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್ ಮತ್ತು ಬಿ.ವಿ.ಬಿ ಕಾಲೇಜಿನ ಪ್ರಾಚಾರ್ಯ ಡಾ. ಸಿ.ಎಸ್ ಪಾಟೀಲ್, ಹೆಚ್ಚು ಬಾರಿ ರಕ್ತದಾನ ಮಾಡಿದ ವನಪ್ರೀತ್ ಮೌಂಟಿ, ಗಾಯಕ ನಾಗರಾಜ ಜೋಗಿ ಅವರನ್ನು ಸನ್ಮಾನಿಸ­ಲಾಯಿತು.ಅಶ್ವಿನಿ ರಾಜಕುಮಾರ ಹಾಗೂ ಸಂಗಮೇಶ ಬಂಪಳ್ಳಿ ವಚನ ಸಂಗೀತ ನಡೆಸಿಕೊಟ್ಟರು. ಹುಲಸೂರಿನ ಶಿವಾನಂದ ಮಹಾಸ್ವಾಮಿ, ವೈಜಿನಾಥ ಕಮಠಾಣೆ, ರಮೇಶ ಕುಲಕರ್ಣಿ, ದರ್ಬಾರ್ ಸಿಂಗ್, ಪ್ರೊ. ಶಿವನಾಥ ಪಾಟೀಲ, ಜಯದೇವಿ ಯದಲಾಪೂರೆ, ಸೂರ್ಯಕಾಂತ ಐನಾಪೂರೆ ಇದ್ದರು.ಯುವ ಬಸವಕೇಂದ್ರದ ಅಧ್ಯಕ್ಷ ಸುರೇಶ ಚನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಿವಶಂಕರ ಟೋಕರೆ ನಿರೂಪಿಸಿದರು. ಯುವ ಕಾರ್ಯಾಧ್ಯಕ್ಷ ಜಗನ್ನಾಥ ಶಿವಯೋಗಿ ವಂದಿಸಿದರು.ಸಹಜ ಶಿವಯೋಗ: ಶರಣ ಸಂಸ್ಕೃತಿ ಉತ್ಸವ ನಿಮಿತ್ತ ಬೆಳಿಗ್ಗೆ ನಡೆದ ಸಹಜ ಶಿವಯೋಗದಲ್ಲಿ ನೂರಾರು ಶರಣರು ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡರು.ಇದಕ್ಕೂ ಮುನ್ನ ಧರ್ಮಧ್ವಜವನ್ನು ಅನುಭವ ಮಂಟಪದ ಸಂಚಾಲಕ ವಿ. ಸಿದ್ದರಾಮಣ್ಣ ಆರೋಹಣ ಮಾಡಿದರು.

‘ಅಂಧಶ್ರದ್ಧೆ ನಿರ್ಮೂಲನೆಗೆ ಇಷ್ಟಲಿಂಗ ಪೂಜೆ ಪೂರಕ. ಸಹಜ ಶಿವಯೋಗದಲ್ಲಿ  ಸ್ವ ಸ್ವರೂಪದ ಪೂಜೆ ಇರುತ್ತದೆ. ಇಂದು ವಿಶ್ವಕ್ಕೆ ಬಂದಿರುವ ವಿಪತ್ತು ನಿರ್ವಹಣೆಗೆ ಸಹಜ ಶಿವ­ಯೋಗದಲ್ಲಿ ತೊಡಗಬೇಕು’ ಎಂದರು.ಸಹಜ ಶಿವಯೋಗದ ಪ್ರಾತ್ಯಕ್ಷಿಕೆ­ಯನ್ನು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮಿ ನೆರವೇರಿಸಿದರು. ಪಂಚಯ್ಯ ಸ್ವಾಮಿಗಳು, ಚರಜಂಗಮ ಸಿದ್ರಾಮಪ್ಪ ಕಪಲಾಪೂರ, ಶಿವರಾಜ ಬಿರಾದರ, ವಿಜಯಕುಮಾರ ಖಾಜಾಪೂರ, ಸಂಗಪ್ಪಾ ಹಿಪ್ಪಳಗಾಂವ, ವಿಜಯಕುಮಾರ ಆನಂದೆ, ಅಶೋಕ ಪಾಟಿಲ್ ಅಲಿಯಬಾದ, ಅಮೃತ ಚಿಮಕೋಡೆ, ಗೋವರ್ಧನ ರಾಠೋಡ, ಶಾಮರಾವ ಭೀಮರಾವ ವೇದಿಕೆ ಮೇಲೆ ಉಪಸ್ಥಿತರಿದ್ದರು.ತೋಟಪ್ಪ ಉತ್ತಂಗಿ ಹಾಗೂ ಈಶ್ವರಪ್ಪಾ ಪಂಚಾಳ ವಚನ ಸಂಗೀತ ನಡೆಸಿಕೊಟ್ಟರು. ವಿರೂಪಾಕ್ಷ ದೇವರು ಸ್ವಾಗತಿಸಿದರು. ರೇವಣಪ್ಪ ಮೂಲಗೆ ನಿರೂಪಿಸಿದರು. ಶಿವಕುಮಾರ ಸಾಲಿ ವಂದಿಸಿದರು.

ಪ್ರತಿಕ್ರಿಯಿಸಿ (+)