‘ಶೈಕ್ಷಣಿಕ ಪ್ರಗತಿಗೆ ಸುತ್ತೂರು ಶ್ರೀ ಕೊಡುಗೆ ಅಪಾರ’

7

‘ಶೈಕ್ಷಣಿಕ ಪ್ರಗತಿಗೆ ಸುತ್ತೂರು ಶ್ರೀ ಕೊಡುಗೆ ಅಪಾರ’

Published:
Updated:

ಚಾಮರಾಜನಗರ: ‘ವಿದ್ಯಾದಾನ ಶ್ರೇಷ್ಠವಾದುದು. ಈ ಆಶಯದಡಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ನೀಡುವ ಮೂಲಕ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಅನುಪಮ ಕೊಡುಗೆ ನೀಡಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಿ. ನಾಗಶ್ರೀ ಹೇಳಿದರು.ಸಮೀಪದ ಮರಿಯಾಲದ ಜೆಎಸ್ಎಸ್ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಐಟಿಐ ಕಾಲೇಜು ಮತ್ತು ಜೆಎಸ್ಎಸ್ ರುಡ್‌ಸೆಟ್ ಸಂಸ್ಥೆಯಿಂದ ಶುಕ್ರವಾರ ನಡೆದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 98ನೇ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಶ್ರೀಗಳಿಗೆ ಹಿಂದುಳಿದ ಗ್ರಾಮೀಣ ಪ್ರದೇಶದ ಬಗ್ಗೆ ಅಪಾರವಾದ ಪ್ರೀತಿಯಿತ್ತು. ಅವರ ದೂರದೃಷ್ಟಿಯ ಫಲವಾಗಿ ಹಳ್ಳಿಗಳಲ್ಲಿ ಉಚಿತವಾಗಿ ಹಾಸ್ಟೆಲ್‌ ತೆರೆದರು. ಆ ಮೂಲಕ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಾಯ ಮಾಡಿದರು ಎಂದರು.ಪ್ರಸ್ತುತ ವಿದ್ಯಾವಂತರಿಗೆ ಕೆಲಸ ಇಲ್ಲ. ಇದರಿಂದ ಅವರು ಅಡ್ಡದಾರಿ ಹಿಡಿಯುತ್ತಿದ್ದಾರೆ ಎಂದು ವಿಷಾದಿಸಿದ ಅವರು, ಎಲ್ಲ ಧರ್ಮಗಳಲ್ಲಿ ಸಾಮರಸ್ಯ ಮೂಡಬೇಕಿದೆ. ಆಗ ಉತ್ತಮ ಸಮಾಜ ರೂಪಿಸಬಹುದು. ಜತೆಗೆ, ವಿದ್ಯಾವಂತರು ಕೂಡ ಸರಿದಾರಿಯಲ್ಲಿ ಸಾಗುತ್ತಾರೆ ಎಂದರು.ಜೆಎಸ್ಎಸ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಆರ್. ಉಮಾಕಾಂತ್ ಅಧ್ಯಕ್ಷತೆವಹಿಸಿದ್ದರು. ಕಾರಾಪುರ ವಿರಕ್ತ ಮಠದ ಬಸವರಾಜ ಸ್ವಾಮೀಜಿ, ಬದನಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ, ಮಾಜಿ ಅಧ್ಯಕ್ಷ ಅಬ್ದುಲ್ ಗಫಾರ್, ಪ್ರೊ.ಸಿ.ವಿ. ಬಸವರಾಜು, ಪ್ರಾಂಶು­ಪಾಲ ಬಿ.ಸಿ. ಈರಪ್ಪಾಜಿ, ಎಸ್. ಗಣೇಶ್ ಭಟ್, ಬಿ.ಎಂ. ಚಂದ್ರಶೇಖರ್, ಕೆ.ಎನ್. ಶಶಿಧರ್ ಹಾಜರಿದ್ದರು.ಶಿವರಾತ್ರಿ ರಾಜೇಂದ್ರ ಶ್ರೀ ಜಯಂತಿ

ಗುಂಡ್ಲುಪೇಟೆ
: ಪಟ್ಟಣದ ಜೆ.ಎಸ್.ಎಸ್. ಪದವಿ ಕಾಲೇಜು ವತಿಯಿಂದ ಅನುಭವ ಮಂಟಪದಲ್ಲಿ ಶಿವರಾತ್ರಿರಾಜೇಂದ್ರ ಸ್ವಾಮಿಗಳ ಜಯಂತಿ ಮಹೋತ್ಸವವನ್ನು ಶುಕ್ರವಾರ ಆಚರಿಸಲಾಯಿತು.ಮಾದಾಪಟ್ಟಣ ವಿರಕ್ತ ಮಠದ ಕಿರಿಯ ತೋಂಟದಾರ್ಯ ಸ್ವಾಮಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಬಿ.ಸಿದ್ದರಾಜುರರು ನುಡಿ ನಮನ ಸಲ್ಲಿಸಿದರು. ಕೊಡಗು ಜಿಲ್ಲೆ ಹಂಡ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮದ್ದಾನಪ್ಪ (ಕೆ.ಇ.ಎಸ್) ಪ್ರತಿಭಾ ಪುರಸ್ಕಾರ ವಿತರಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗಶ್ರೀ ಪ್ರತಾಪ್ ಅಧ್ಯಕ್ಷತೆ ವಹಿಸಿದ್ದರು.ಎಸ್.ಆರ್. ದಾಕ್ಷಾಯಣಿ ಮತ್ತು ತಂಡದವರು ಪ್ರಾರ್ಥನೆ ಸಲ್ಲಿಸಿದರು. ಜೆಎಸ್‌ಎಸ್ ಪದವಿ ಕಾಲೇಜಿನ ಉಪಪ್ರಾಂಶುಪಾಲ ಡಾ.ಎನ್. ಮಹ­ದೇವ­ಸ್ವಾಮಿ, ಸಿ.ಜಿ.ಲತಾ, ಜೆಎಸ್‌ಎಸ್ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಪಿ. ಬಸವರಾಜಪ್ಪ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ. ರೇವಣ್ಣ, ಜೆಎಸ್‌ಎಸ್ ಪ್ರೌಡಶಾಲೆಯ ಮುಖ್ಯ ಶಿಕ್ಷಕ ಎಂ.ಸಿ. ಚಾಮರಾಜು ಇದ್ದರು.ಸಂಸ್ಮರಣಾ ದಿನಾಚರಣೆ

ಗುಂಡ್ಲುಪೇಟೆ
: ತಾಲ್ಲೂಕಿನ ವಡ್ಡಗೆರೆ ಟಿ.ಎಸ್. ಸುಬ್ಬಣ್ಣನವರ ಸಾರ್ವಜನಿಕ ಪ್ರೌಢಶಾಲೆಯಲ್ಲಿ  ಟಿ.ಎಸ್. ಸುಬ್ಬಣ್ಣನವರ 22ನೇ  ಸಂಸ್ಮರಣಾ ದಿನವನ್ನು ಈಚೆಗೆ ಆಚರಿಸಲಾಯಿತು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟಿ.ಎಸ್. ಸುಬ್ಬಣ್ಣನವರು ಬಹಳ ಹಿಂದೆಯೇ ಸಮಾಜ ಸೇವೆಗಾಗಿ  ವಿದ್ಯಾಸಂಸ್ಥೆ ಹಾಗೂ ವಿದ್ಯಾರ್ಥಿ ನಿಲಯ­ಗಳನ್ನು  ಕಟ್ಟಿ ಅಕ್ಷರ ದಾಸೋಹ, ಅನ್ನ ದಾಸೋಹ ಜೊತೆಗೆ ಜ್ಞಾನ ದಾಸೋಹ ಮಾಡಿದ ಮಹಾನ್ ವ್ಯಕ್ತಿ ಎಂದು ವರ್ಣಿಸಿದರು.ಎಸ್‌ಡಿಎಂಸಿ ಕಾರ್ಯದರ್ಶಿ ಚೆನ್ನಬಸವರಾಜು, ನಾಗಮಲ್ಲಪ್ಪ ಕುಂದಕೆರೆ,  ಶಿವರುದ್ದಪ್ಪ ವಡ್ಡಗೆರೆ, ವಿವೇಕ ಕರಕಲಮಾದಹಳ್ಳಿ, ಮಲ್ಲಪ್ಪ, ಕರಿಯಪ್ಪ, ಶಿವಲಿಂಗಪ್ಪ, ಸಿದ್ದಯ್ಯ ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ಎಸ್.ಎಂ. ಪ್ರಭುಲಿಂಗಸ್ವಾಮಿ, ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry