ಶುಕ್ರವಾರ, ಫೆಬ್ರವರಿ 26, 2021
22 °C

‘ಷರತ್ತು ಒಪ್ಪಿದರೆ ಜಿಎಸ್‌ಟಿಗೆ ತಕರಾರಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಷರತ್ತು ಒಪ್ಪಿದರೆ ಜಿಎಸ್‌ಟಿಗೆ ತಕರಾರಿಲ್ಲ’

ಮುಂಬೈ (ಪಿಟಿಐ): ‘ನಮ್ಮ ಪಕ್ಷ ವಿಧಿಸಿರುವ ಷರತ್ತುಗಳನ್ನು ಒಪ್ಪಿದರೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆ 15 ನಿಮಿಷಗಳಲ್ಲಿ ಸಂಸತ್ತಿನಲ್ಲಿ ಅಂಗೀಕಾರವಾಗುತ್ತದೆ’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.ಕಾಂಗ್ರೆಸ್‌ನ  ವರಿಷ್ಠರೊಂದಿಗೆ ಕುಳಿತು ಮಾತುಕತೆ ನಡೆಸಿದರೆ ಜಿಎಸ್‌ಟಿ ಮಸೂದೆಗೆ  ಅಂಗೀಕಾರ ಪಡೆಯಲು ಸಮಸ್ಯೆಯೇ ಆಗುವುದಿಲ್ಲ. ಆದರೆ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿಲ್ಲ ಎಂದು ಹೇಳಿದರು.ಏಳು ವರ್ಷಗಳ ಹಿಂದೆ ಜಿಎಸ್‌ಟಿ ಮಸೂದೆ ರೂಪಿಸಿದ್ದು ಕಾಂಗ್ರೆಸ್ ಸರ್ಕಾರ. ಆದರೆ, ಬಿಜೆಪಿ ಅದನ್ನು ವಿರೋಧಿಸುತ್ತ ಬಂದಿತು. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಜಿಎಸ್‌ಟಿ ಬೇಡ ಅಂದಿದ್ದರು ಎಂದು ತಿಳಿಸಿದರು.‘ಗರಿಷ್ಠ ತೆರಿಗೆ ಮಿತಿಯನ್ನು ಸ್ಪಷ್ಟಪಡಿಸದ ಜಿಎಸ್‌ಟಿ ನಮಗೆ ಬೇಡ. ತೆರಿಗೆ ವಿವಾದ ಬಗೆಹರಿಸಲು ತಟಸ್ಥ ವ್ಯವಸ್ಥೆ ಬೇಕು’ ಎಂದರು.

ಜಿಎಸ್‌ಟಿ ಒಳ್ಳೆಯದು ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಈಗ ಹೇಳುವ ಅಗತ್ಯವಿಲ್ಲ. ಅದೊಂದು ಒಳ್ಳೆಯ ವ್ಯವಸ್ಥೆ ಎನ್ನುವುದು ಮೊದಲಿನಿಂದಲೂ ಗೊತ್ತಿದೆ ಎಂದ ರಾಹುಲ್, ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸಲು ಜಿಎಸ್‌ಟಿಯನ್ನು ಆಯುಧವಾಗಿ ಬಳಸಲಾಗುತ್ತಿದೆ ಎಂಬುದು ಸುಳ್ಳು ಎಂದರು.ಅಂದು ರಾಜೀವ್‌; 30 ವರ್ಷಗಳ ಬಳಿಕ ರಾಹುಲ್‌: ರಾಹುಲ್‌ ಅವರು ಶನಿವಾರ ಏಷ್ಯಾದ ಅತಿದೊಡ್ಡ ಕೊಳೆಗೇರಿ ಎನಿಸಿರುವ  ಧಾರಾವಿಯಲ್ಲಿ ಪಾದಯಾತ್ರೆ ನಡೆಸಿದರು. ಮಾಜಿ ಪ್ರಧಾನಿ ದಿವಂಗತ ರಾಜೀವ್‌ ಗಾಂಧಿ 30 ವರ್ಷಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದರು. ಆ ಬಳಿಕ ಗಾಂಧಿ ಕುಟುಂಬದ ಸದಸ್ಯರೊಬ್ಬರು ಈ ಕೊಳೆಗೇರಿಗೆ ಭೇಟಿ ನೀಡಿದ್ದು ಇದೇ ಮೊದಲು. ಸುಮಾರು 5 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದರು.‘ಸ್ಟಾರ್ಟ್ ಅಪ್‌ ಇಂಡಿಯಾ ಮತ್ತು ಅಸಹಿಷ್ಣುತೆ ಒಟ್ಟಿಗೆ ಸಾಗಲು ಅಸಾಧ್ಯ’

ಮುಂಬೈ (ಪಿಟಿಐ): ಮಹತ್ವಾಕಾಂಕ್ಷೆ ಯೋಜನೆಯಾದ ಸ್ಟಾರ್ಟ್ ಅಪ್‌ ಇಂಡಿಯಾ ಮತ್ತು ಅಸಹಿಷ್ಣುತೆ ಒಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದರು.

ಆರ್ಎಸ್ಎಸ್ ಕಠೋರ ನಿಲುವು ಹೊಂದಿದೆ. ಆದರೆ, ಸ್ಟಾರ್ಟ್ ಅಪ್‌ ಇಂಡಿಯಾ ಯೋಜನೆಗೆ ಮುಕ್ತ ಚಿಂತನೆ ಅಗತ್ಯ ಎಂದು ಅವರು ಹೇಳಿದರು. ಬಿಜೆಪಿಯ  ಪ್ರಮುಖ ಅಂಗವಾಗಿರುವ ಆರ್ಎಸ್ಎಸ್‌ಗೆ ಜಗತ್ತು ಹೀಗೆಯೇ ಇರಬೇಕು ಎಂಬ ಕಠೋರ ನಿಲುವು ಇದೆ. ಅದೇ ರೀತಿ ಭಾರತ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಕಠೋರ ದೃಷ್ಟಿ ಕೋನವೂ ಅವರಿಗೆ ಇದೆ. ಆದರೆ ಈ ದೇಶಕ್ಕೆ ಬೇಕಾಗಿರುವುದು ಉದಾರ ನೀತಿ, ಮುಕ್ತ ವಿಚಾರ ವಿನಿಮಯ ಎಂದು ರಾಹುಲ್ ತಿಳಿಸಿದರು.ವಿಲೆ ಆರ್ಲೆಯಲ್ಲಿ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ಅವರು, ಎನ್‌ಡಿಎ ಸರ್ಕಾರದ ಕೃತಿ ಮತ್ತು ಮಾತಿನಲ್ಲಿ ಬಹಳ ವ್ಯತ್ಯಾಸವಿದೆ ಎಂದರು.ಅಸಹಿಷ್ಣುತೆ ಇದ್ದರೆ ಆರ್ಥಿಕ ರಂಗ ಮತ್ತು ಸ್ಟಾರ್ಟ್ ಅಪ್‌ ಆಂದೋಲನ ವಿಫಲವಾಗುತ್ತದೆ ಎಂದು ಟೀಕಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.