‘ಸಕಾಲದ ಕೃಷಿಯೇ ಯಶಸ್ಸಿನ ಗುಟ್ಟು’

7

‘ಸಕಾಲದ ಕೃಷಿಯೇ ಯಶಸ್ಸಿನ ಗುಟ್ಟು’

Published:
Updated:
‘ಸಕಾಲದ ಕೃಷಿಯೇ ಯಶಸ್ಸಿನ ಗುಟ್ಟು’

ಶಿರಸಿ (ಉ.ಕ.ಜಿಲ್ಲೆ): ‘ಸಕಾಲದಲ್ಲಿ ಕೆಲ್ಸಾ ಮಾಡಿದ್ರೆ ಕೃಷಿಯಲ್ಲಿ ಧೋಖಾ ಇಲ್ಲ ನೋಡಿ. ಕಾಲಕ್ಕೆ ಸರಿಯಾಗಿ ಗೊಬ್ಬರ ಕೊಟ್ರೆ ಒಳ್ಳೆ ಫಸಲು ಬಂದೇ ಬರ್ತದೆ. ರಾಸಾಯನಿಕ ಬಳಕೆಯಿಂದ ಮಾತ್ರ ಹೆಚ್ಚ್ ಬೆಳೆ ಬರ್ತದೆ ಅನ್ನೋ ಮಾತು ಖರೇ ಅಲ್ಲ ಅನ್ನೋದನ್ನು ನಾನೇ ಪಕ್ಕಾ ಮಾಡ್ಕೊಂಡೇನಿ....’

ಇದು ಬಂಪರ್‌ ಇಳುವರಿ ಪಡೆದಿರುವ ಭತ್ತ ಕೃಷಿಕ ದುಷ್ಯಂತರಾಜ ಕೊಲ್ಲೂರಿ ಮಾತು. ತಾಲ್ಲೂಕಿನ ಇಸಳೂರಿನಲ್ಲಿ ಎಂಟು ಎಕರೆ ಗದ್ದೆಯಲ್ಲಿ ಭತ್ತ ಕೃಷಿ ಮಾಡುತ್ತಿರುವ ಅವರು, ಒಂದು ಎಕರೆಗೆ ಗರಿಷ್ಠ 30–32 ಕ್ವಿಂಟಲ್ ಇಳುವರಿ ಪಡೆದಿದ್ದಾರೆ.ಜೂನ್‌ ಎರಡನೇ ವಾರದಲ್ಲಿ ಅಗಿ ಹಾಕಿ, 20–25 ದಿನಗಳ ಒಳಗಾಗಿ ಸಸಿ ನಾಟಿ ಮಾಡುವುದು, ನಾಟಿಯ ನಂತರ ಪ್ರತಿ 21 ದಿನಕ್ಕೆ ಪೊಟ್ಯಾಷ್‌, ಯೂರಿಯಾ ಮೇಲುಗೊಬ್ಬರ ನೀಡುವುದು, ಡಿಸೆಂಬರ್‌ ಮೊದಲ ವಾರದಲ್ಲಿ ಕಟಾವು ಮಾಡುವುದೇ ಅವರ ಅಧಿಕ ಇಳುವರಿಯ ಗುಟ್ಟು. ‘ಅಭಿಲಾಷಾ, ಹೇಮಾವತಿ ತಳಿಗಳು ಇಲ್ಲಿನ ಮಣ್ಣಿಗೆ ಉತ್ತಮ ಇಳುವರಿ ನೀಡುತ್ತವೆ. ಇವು ರೋಗನಿರೋಧಕ ಶಕ್ತಿ ಹೊಂದಿವೆ. ಹೀಗಾಗಿ ಔಷಧಿ ಸಿಂಪರಣೆಯೂ ಬೇಕಾಗಿಲ್ಲ. ವಿಶೇಷವಾಗಿ ಅಭಿಲಾಷಾ ತಳಿ, ಕೊಯ್ಲಿನ ಹಂತದವರೆಗೂ ಕಾಳನ್ನು ಗಿಡದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ’ ಎನ್ನುತ್ತಾರೆ ಕೊಲ್ಲೂರಿ.ಹಿಂಗಾರಿನಲ್ಲಿ ಸೆಣಬು, ಉದ್ದು, ಅಲಸಂದಿ ಮಿಶ್ರ ಬೆಳೆಯಾಗಿ ಬೆಳೆಯುವ ಅವರು ಸೆಣಬನ್ನು ಜಾನುವಾರು ಹಸಿರು ಮೇವಿಗೆ ಬಳಸುತ್ತಾರೆ. ಇದರಿಂದ ಅವರಿಗೆ ಬಿಳಿಹುಲ್ಲಿನ ಖರ್ಚು ಮಿತವಾಗಿದೆ. ಮನೆ ಬಳಕೆಗೆ ಮಿಕ್ಕಿದ ಉದ್ದು, ಅಲಸಂದಿಯನ್ನು ಮಾರಾಟ ಮಾಡುತ್ತಾರೆ. ಸೆಣಬನ್ನು ಎರಡು ಬಾರಿ ಕಟಾವು ಮಾಡಿದ ಮೇಲೆ ಮೂರನೇ ಬೆಳೆಯನ್ನು ಗದ್ದೆಯಲ್ಲೇ ಗೊಬ್ಬರವಾಗಿ ಬಿಟ್ಟರೆ ಗದ್ದೆಯ ಫಲವತ್ತತೆ ಹೆಚ್ಚುತ್ತದೆ ಎಂಬುದು ಅವರ ಅನುಭವ.ಸೆಣಬಿನ ಫಲವತ್ತತೆ, ಜೊತೆಗೆ ಒಂದು ಎಕರೆಗೆ 15–20 ಪವರ್ ಟಿಲ್ಲರ್‌ ದೊಡ್ಡಿ ಗೊಬ್ಬರ ಹಾಕಿ ಜೂನ್‌ ಮೊದಲ ವಾರದಲ್ಲಿ ಗದ್ದೆ ಊಳಿದರೆ ಮುಂಗಾರು ಬೆಳೆಗೆ ಗದ್ದೆ ಸಿದ್ಧವಾಗುತ್ತದೆ. ಹೀಗೆ ಎರಡು ದಶಕಗಳಿಂದ ಕೃಷಿ ಮಾಡಿಕೊಂಡು ಬಂದಿರುವ ಕೊಲ್ಲೂರಿ, ‘ರೈತರ ಮಕ್ಕಳು ರೈತರಾಗಬೇಕು ಎಂಬುದನ್ನು ಪಾಲಕರು ಮಕ್ಕಳಿಗೆ ತಿಳಿಸಬೇಕು. ಇನ್ನೊಬ್ಬರ ಕೃಷಿ ಪದ್ಧತಿ ಅನುಸರಿಸುವುದಕ್ಕಿಂತ ಕೃಷಿಕರು ತಮ್ಮ ಜಮೀನಿನ ಗುಣಕ್ಕೆ ಹೊಂದಾಣಿಕೆಯಾಗುವ ಕ್ರಮ ಅನುಸರಿಸಿದರೆ ಲಾಭದಾಯಕ ಕೃಷಿ ಮಾಡಲು ಸಾಧ್ಯವಿದೆ’ ಎನ್ನುತ್ತಾರೆ.‘ಈ ವರ್ಷ ಎಂಟು ಎಕರೆ ಗದ್ದೆಯಲ್ಲಿ 5 ಎಕರೆ ಗದ್ದೆಗೆ ರಾಸಾಯನಿಕ ಗೊಬ್ಬರ ಬಳಸಿದ್ದೆ. ಇನ್ನುಳಿದ 3 ಎಕರೆಗೆ ಯಾವುದೇ ರಾಸಾಯನಿಕ ಹಾಕಿಲ್ಲ. ಇಲಾಖೆ ಸೂಚಿಸಿದ ಪ್ರಮಾಣಕ್ಕಿಂತ ಶೇ 25ರಷ್ಟು ಕಡಿಮೆ ರಾಸಾಯನಿಕ ಬಳಕೆ ಮಾಡಿದ ಗದ್ದೆಯಲ್ಲಿ ದೊರೆತ ಇಳುವರಿಗೂ, ರಾಸಾಯನಿಕಮುಕ್ತ ಗದ್ದೆಯ ಇಳುವರಿಗೂ ಯಾವುದೇ ವ್ಯತ್ಯಾಸವಾಗಿಲ್ಲ’ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡರು.‘ಎರಡು ದಶಕಗಳ ಹಿಂದೆ ರಾಸಾಯನಿಕ ಬಳಕೆ ಮಾಡಿದರೆ ಮಾತ್ರ ಅಧಿಕ ಇಳುವರಿ ದೊರೆಯುತ್ತದೆ ಎಂಬ ಭ್ರಮೆ ಇತ್ತು. ಖರ್ಚು ಹೆಚ್ಚಾಯ್ತೇ ವಿನಃ ಇಳುವರಿ ಅಧಿಕವಾಗಿಲ್ಲ. ಕ್ರಮೇಣ ರಾಸಾಯನಿಕ ಗೊಬ್ಬರ ಕಡಿಮೆ ಮಾಡುತ್ತ ಬಂದೆ. ಖರ್ಚು ಕಡಿಮೆಯಾಗಿ ಲಾಭ ಹೆಚ್ಚಾಗುತ್ತ ಹೋಯ್ತು. ಈಗ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ರಾಸಾಯನಿಕ ಬಳಕೆ ಮಾಡುತ್ತೇವೆ’ ಎಂದು ಅವರು ಸಮರ್ಥಿಸಿಕೊಂಡರು.ಭತ್ತ ಕೃಷಿಯಲ್ಲಿ ಅಧಿಕ ಇಳುವರಿ ಪಡೆದಿದ್ದಕ್ಕಾಗಿ ಅವರಿಗೆ ಜಿಲ್ಲಾ ಮಟ್ಟದ, 2012–13ನೇ ಸಾಲಿನ ತಾಲ್ಲೂಕು ಮಟ್ಟದ ಪ್ರಶಸ್ತಿಗಳು ದೊರೆತಿವೆ. ಧಾರವಾಡ ಕೃಷಿ ವಿಶ್ವವಿದ್ಯಾಲಯ ಅವರ ಸಾಧನೆ ಗುರುತಿಸಿ ಸನ್ಮಾನಿಸಿದೆ.

ಫಲವತ್ತ ಮಣ್ಣಿನಿಂದ ಉತ್ತಮ ಇಳುವರಿ..

ಸಮಗ್ರ ಪೋಷಕಾಂಶ ನಿರ್ವಹಣೆ, ಸಾವಯವ ಮತ್ತು ಜೈವಿಕ ಗೊಬ್ಬರಗಳ ಅಧಿಕ ಬಳಕೆ, ರಾಸಾಯನಿಕ ಗೊಬ್ಬರದ ಕನಿಷ್ಠ ಬಳಕೆ ಮಾಡಿ, ಮಣ್ಣಿನ ಫಲವತ್ತತೆ ಉಳಿಸಿಕೊಂಡು ಉತ್ತಮ ಇಳುವರಿ ಪಡೆಯಬಹುದು ಎಂಬುದಕ್ಕೆ ಕೊಲ್ಲೂರಿ ಅವರ ಕೃಷಿ ಉತ್ತಮ ನಿದರ್ಶನ.

-ಶಿವಕುಮಾರ ಮಲ್ಲಾಡದ, ಸಹಾಯಕ ಕೃಷಿ ನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry