‘ಸಕ್ರಮ’ ಕರಡು ನಿಯಮ ಪ್ರಕಟ

7
ಅರ್ಜಿ ಸಲ್ಲಿಕೆಗೆ ಒಂದು ವರ್ಷ ಕಾಲಾವಕಾಶ

‘ಸಕ್ರಮ’ ಕರಡು ನಿಯಮ ಪ್ರಕಟ

Published:
Updated:

ಬೆಂಗಳೂರು: ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊ­ಳಿಸಲು ಅರ್ಜಿ ಸಲ್ಲಿಕೆಗೆ (ಸಕ್ರಮ ಯೋಜನೆ) ಒಂದು ವರ್ಷ ಕಾಲಾವ­ಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ 2013ರ ಡಿಸೆಂಬರ್‌ 31ರಂದು ಕರಡು ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.‘ಸಕ್ರಮ’ ಯೋಜನೆಯ ಅನುಷ್ಠಾನದ ದಿನಾಂಕವನ್ನು ಸರ್ಕಾರ ಇನ್ನೂ ಅಂತಿಮಗೊಳಿಸಿಲ್ಲ. ಆದರೆ, ಅನುಷ್ಠಾನ ಆರಂಭವಾದ ದಿನದಿಂದ ಒಂದು ವರ್ಷದವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲು ಉದ್ದೇಶಿಸಲಾಗಿದೆ.2013ರ ಅಕ್ಟೋಬರ್‌ 19ರವರೆಗೂ ನಡೆದ ಅನಧಿಕೃತ ನಿರ್ಮಾಣಗಳನ್ನು ಮಾತ್ರ ಸಕ್ರಮಗೊಳಿಸಲು ಅವಕಾಶ ನೀಡಲಾಗುತ್ತದೆ. ಉಳಿದಂತೆ ಹಿಂದಿನ ನಿಯಮಗಳಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ. 2009ರಲ್ಲಿ ಬಿಜೆಪಿ ಸರ್ಕಾರವು ನಿಗದಿ ಮಾಡಿದ್ದ ಶುಲ್ಕದ ದರವನ್ನೇ ಮುಂದುವರಿಸಲಾಗಿದೆ.

ನಕ್ಷೆ ಉಲ್ಲಂಘಿಸಿ ನಡೆದ ನಿರ್ಮಾಣ, ಕಟ್ಟಡ ವಿಸ್ತೀರ್ಣ ಅನುಪಾತ ಉಲ್ಲಂಘನೆ, ಭೂ ಪರಿವರ್ತನೆ ಆದೇಶ ಪಡೆಯದೇ ಕೃಷಿ ಜಮೀನಿನಲ್ಲಿ ಕಟ್ಟಿದ ಕಟ್ಟಡಗಳು, ಅನಧಿಕೃತ ಬಡಾವಣೆಗಳು ಮತ್ತು ನಿವೇಶನಗಳನ್ನು ಸಕ್ರಮಗೊಳಿ­ಸಲು ನಿಯಮಗಳಲ್ಲಿ ಅವಕಾಶ ನೀಡಲಾಗಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಈ ನಿಯಮಗಳು ಅನ್ವಯವಾಗಲಿವೆ.ಸಕ್ರಮ ಯೋಜನೆಯ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಈ ಹಿಂದೆ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸರ್ಕಾರವು ನ್ಯಾಯಾಲಯದ ಅನುಮತಿ ಪಡೆದ ಬಳಿಕವಷ್ಟೇ ಯೋಜನೆ ಜಾರಿ ಸಾಧ್ಯ.ಈ ಹಿಂದೆ ಅರ್ಜಿಗಳನ್ನು ಪರಿಶೀಲಿಸಿ ಆದೇಶ ಹೊರಡಿಸುವ ಅಧಿಕಾರ ಪರಿಶೀಲನಾ ಸಮಿತಿಗೆ ನೀಡಲಾಗಿತ್ತು. ಆದರೆ, ಹೊಸ ನಿಯಮಗಳಲ್ಲಿ ಈ ಅಧಿ­ಕಾ­ರವನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗಿದೆ. ‘ಅನಧಿಕೃತ ನಿರ್ಮಾಣ ಯಾವುದು?’ ಎಂದು ನಿಯಮಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.ಶುಲ್ಕ ನಿಗದಿ: ಶೇಕಡ 25ರಷ್ಟು ಉಲ್ಲಂಘನೆ ಇರುವ ವಸತಿ ಕಟ್ಟಡಗಳಿಗೆ ಅದರ ಮಾರ್ಗಸೂಚಿ ಮೌಲ್ಯದ ಶೇ 6ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಶೇ 25ರಿಂದ ಶೇ 50ರವರೆಗೆ ಉಲ್ಲಂಘನೆ ಹೊಂದಿದ್ದರೆ ಆ ಸ್ವತ್ತಿನ ಮಾರ್ಗಸೂಚಿ ಮೌಲ್ಯದ ಶೇ 8ರಷ್ಟು ಶುಲ್ಕ ವಿಧಿಸುವ ಪ್ರಸ್ತಾವವಿದೆ.ವಸತಿಯೇತರ ಕಟ್ಟಡಗಳಲ್ಲಿ ಶೇ 20ರವರೆಗಿನ ಉಲ್ಲಂಘನೆಗಳಿಗೆ ಆ ಸ್ವತ್ತಿನ ಮಾರ್ಗಸೂಚಿ ಮೌಲ್ಯದ ಶೇ 12.5 ಮತ್ತು ಶೇ 20ರಿಂದ ಶೇ  25ರವರೆಗಿನ ಉಲ್ಲಂಘನೆಗಳಿಗೆ ಮಾರ್ಗಸೂಚಿ ಮೌಲ್ಯದ ಶೇ 35ರಷ್ಟು ಶುಲ್ಕ ವಿಧಿಸಲು ನಿಯಮಗಳಲ್ಲಿ ಅವಕಾಶ ದೊರೆಯಲಿದೆ. ಪ್ಲಾಟ್‌ಗಳಿಗೆ ಪ್ರತಿ ಚದರ ಅಡಿಗೆ ₨ 1 ಮತ್ತು ಅನಧಿಕೃತ ಬಡಾವಣೆಗಳಿಗೆ ಪ್ರತಿ ಚದರ ಮೀ.ಗೆ ₨ 2 ಪರಿಶೀಲನಾ ಶುಲ್ಕ ವಿಧಿಸಲಾಗುತ್ತದೆ.ಆಕ್ಷೇಪಣೆ/ಸಲಹೆ: ಸಾರ್ವಜನಿಕರು ಈ ಕರಡು ನಿಯಮಗಳ ಕುರಿತು ಆಕ್ಷೇಪಣೆ ಅಥವಾ ಸಲಹೆಗಳನ್ನು ಸಲ್ಲಿಸಲು ಅವಕಾಶವಿದೆ.

ವಿಳಾಸ: ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ವಿಕಾಸಸೌಧ, ಬೆಂಗಳೂರು– 560001

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry