‘ಸಣ್ಣ ಕೈಗಾರಿಕೆಗಳು ಪ್ರಗತಿ ಕಾಣದಿದ್ದರೆ ನಿರುದ್ಯೋಗ’

7

‘ಸಣ್ಣ ಕೈಗಾರಿಕೆಗಳು ಪ್ರಗತಿ ಕಾಣದಿದ್ದರೆ ನಿರುದ್ಯೋಗ’

Published:
Updated:

ಗುಲ್ಬರ್ಗ: ದೇಶದಲ್ಲಿ ಸಣ್ಣ ಕೈಗಾರಿಕೆಗಳು ಅಭಿವೃದ್ಧಿ ಯಾಗದಿದ್ದರೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ ಎಂದು ಗುಲ್ಬರ್ಗ ವಿದ್ಯುತ್‌ ಸರಬರಾಜು ಕಂಪೆನಿ (ಜೆಸ್ಕಾಂ) ತಾಂತ್ರಿಕ ವಿಭಾಗದ ನಿರ್ದೇಶಕ ಎಂ. ಮಹಾದೇವ ಹೇಳಿದರು.ನಗರದ ಎಚ್‌ಕೆಸಿಸಿಐ ಸಭಾಂಗಣದಲ್ಲಿ ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿ ಸಂಸ್ಥೆ–ಎಂಎಸ್‌ಎಂಇ’ ಗುರುವಾರ ಏರ್ಪಡಿಸಿದ್ದ ‘ರಾಜ್ಯ ಮಟ್ಟದ ಮಾರಾಟಗಾರರ ಅಭಿವೃದ್ಧಿ ಯೋಜನೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ನಿರ್ಣಾಯಕ. ಸಣ್ಣ ಕೈಗಾರಿಕೆಗಳು ಭಾರತದ ಜೀವಾಳವಾಗಿದ್ದು, ಅವುಗಳ ಅಭಿವೃದ್ಧಿಯಿಂದ ದೇಶದ ಆರ್ಥಿಕ ಪ್ರಗತಿಯಾಗುತ್ತದೆ ಎಂದು ಮಹಾತ್ಮ ಗಾಂಧಿ ಹೇಳುತ್ತಿದ್ದರು ಎಂದು ನೆನಪಿಸಿದರು.

ಸಣ್ಣ ಕೈಗಾರಿಕೆಗಳಿಂದ ದೊರೆಯುವ ಸರಕುಗಳು ನೆರೆಯ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಅಗ್ಗವಾಗಿವೆ. ಹೀಗಾಗಿ ಜೆಸ್ಕಾಂಗೆ ಖರೀದಿಸುವ ಅನೇಕ ಸಾಧನಗಳು ಅಲ್ಲಿಂದ ಬರುತ್ತವೆ. ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕಾಗಿ ರಾಜ್ಯ ಸರ್ಕಾರ ಮೊದಲು ನೀಡುತ್ತಿದ್ದ ಸಹಾಯಧನವನ್ನು ಸ್ಥಗಿತ ಗೊಳಿಸಿದೆ. ಮತ್ತೆ ಆ ಯೋಜನೆ ಆರಂಭಿಸುವಂತೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಂ.ಪ್ರಥ್ವಿರಾಜ ಮಾತನಾಡಿ, ‘ಸಣ್ಣ ಕೈಗಾರಿಕೆಗಳು ತಂತ್ರಜ್ಞಾನ ಉನ್ನತೀಕರಣ ಮಾಡಿಕೊಳ್ಳುವುದಕ್ಕಾಗಿ ಹೊಸ ಯೋಜನೆ ಯೊಂದನ್ನು ರೂಪಿಸಲಾಗಿದೆ. ಈ ಯೋಜನೆಗೆ ಇಸ್ರೇಲ್‌ ದೇಶದ ಸಹಕಾರವಿದೆ. ಇಸ್ರೇಲ್‌ನಲ್ಲಿರುವ ಯಾವುದೇ ಸಣ್ಣ ಕೈಗಾರಿಕೆಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಭಾರತೀಯ ಸಣ್ಣ ಕೈಗಾರಿಕೆಗೆ ಅಗತ್ಯ ಕಾರ್ಯ ಯೋಜನೆಯನ್ನು ಒದಗಿಸಲಾಗುವುದು’ ಎಂದರು.ಜೆಸ್ಕಾಂ 1ನೇ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಸಿದ್ದರಾಮ ಪಾಟೀಲ, ಮಳಖೇಡ ರಾಜಶ್ರೀ ಸಿಮೆಂಟ್‌ ಕಂಪೆನಿಯ ಸರಕು ವಿಭಾಗದ ಪ್ರಧಾನ ವ್ಯವಸ್ಥಾಪಕ ಎಂ.ಎಂ. ಪ್ರತಾಪ್‌, ಸೇಡಂ ವಾಸವದತ್ತ ಸಿಮೆಂಟ್‌ ಕಂಪೆನಿಯ ಖರೀದಿ ವಿಭಾಗದ ವ್ಯವಸ್ಥಾಪಕ ಎನ್‌.ಆರ್‌. ಪ್ರಸಾದ್‌, ಎಚ್‌ಕೆಸಿಸಿಐ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಮಾತನಾಡಿದರು. ಎಂಎಸ್‌ಎಂಇ ಕಚೇರಿ ಅಧಿಕಾರಿಗಳಾದ ಬಿ.ಎಸ್‌. ಜೇವಣಗಿ, ವಿ.ಕೆ.ಕೆ. ನದಿಮಪಲ್ಲಿ, ಎಚ್‌ಕೆಸಿಸಿಐ ಕಾರ್ಯದರ್ಶಿ ಬಸವರಾಜ ಹಡಗಿಲ್‌ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry