‘ಸಬರಮತಿ ಸಂತ’ನಿಗೆ ಕ್ಸಿ ನಮನ

7

‘ಸಬರಮತಿ ಸಂತ’ನಿಗೆ ಕ್ಸಿ ನಮನ

Published:
Updated:

ಅಹಮದಾಬಾದ್‌ (ಐಎಎನ್‌ಎಸ್‌): ಗುಜರಾತ್‌ನ ಸಬರಮತಿ ನದಿಯ ದಡದಲ್ಲಿರುವ ಮಹಾತ್ಮ ಗಾಂಧೀಜಿ ಅವರ ವಿಶ್ವ ವಿಖ್ಯಾತ ಸಬರಮತಿ ಆಶ್ರಮಕ್ಕೆ ಬುಧವಾರ ಭೇಟಿ ನೀಡುವುದರೊಂದಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ತಮ್ಮ ಮೂರು ದಿನಗಳ ಭಾರತ ಪ್ರವಾಸವನ್ನು ಆರಂಭಿಸಿದರು.ಇಲ್ಲಿಗೆ ಬಂದಿಳಿದ ಕೂಡಲೇ  ನೇರವಾಗಿ ಸಬರಮತಿ ಆಶ್ರಮಕ್ಕೆ ತೆರಳಿದ ಅವರು ಮಹಾತ್ಮ ಗಾಂಧಿ ಅವರ ಪುತ್ಥಳಿಗೆ ನಮನ ಸಲ್ಲಿಸಿದರು. ಬಿಳಿ ಖಾದಿ ಜಾಕೆಟ್‌ ಹಾಗೂ ಅಂಗಿ ತೊಟ್ಟಿದ್ದ  ಕ್ಸಿ ಅವರನ್ನು  ಪ್ರಧಾನಿ ನರೇಂದ್ರ ಮೋದಿ ಹಾಗೂ ಗುಜರಾತ್‌ ಮುಖ್ಯಮಂತ್ರಿ ಆನಂದಿ ಬೆನ್‌ ಪಟೇಲ್‌ ಖಾದಿ ನೂಲುಗಳ ಹಾರ ಹಾಕಿ ಸ್ವಾಗತಿಸಿದರು.ಸಬರಮತಿ ಆಶ್ರಮದಲ್ಲಿದ್ದ ಬಾಪು   ಅವರ ಖಾಸಗಿ ಕೋಣೆ ‘ಹೃದಯ ಕುಂಜ್‌’ಗೆ  ತೆರಳಿದ ಕ್ಸಿ, ಗಾಂಧೀಜಿ ಅವರ ಭಾವಚಿತ್ರಕ್ಕೆ ಹತ್ತಿ ನೂಲಿನ ಹಾರ ಹಾಕಿ ಗೌರವ ಸಲ್ಲಿಸಿದರು. ಬೂಟುಗಳನ್ನು ಕಳಿಚಿಟ್ಟು ಬಾಪು ನೂಲುತ್ತಿದ್ದ ಚರಕದ ಮುಂದೆ ಕುಳಿತ ಅವರು ನೂಲು ತೆಗೆಯಲು ಯತ್ನಿಸಿದರು. ಮೋದಿ ಕೂಡ ಇದಕ್ಕೆ ಕೈ ಜೋಡಿಸಿದರು. ಬಳಿಕ ಇಬ್ಬರೂ ಗಣ್ಯರು ‘ಹೃದಯ ಕುಂಜ್‌’ದಲ್ಲಿಯೇ ಕೆಲ ಹೊತ್ತು ಕಳೆದರು. ಭಾರತ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಐತಿಹಾಸಿಕ ದಂಡಿ ಸತ್ಯಾಗ್ರಹ ಸೇರಿದಂತೆ ಆಶ್ರಮದಲ್ಲಿರುವ ಕಪ್ಪುಬಿಳಪು ಛಾಯಾಚಿತ್ರ ಪ್ರದರ್ಶನ­ವನ್ನು ಅವರು ಕುತೂಹಲದಿಂದ ವೀಕ್ಷಿಸಿದರು. ಸಂದರ್ಶಕರ ಪುಸ್ತಕದಲ್ಲಿ ಚೀನಿ ಭಾಷೆಯಲ್ಲಿ ತಮ್ಮ ಅನುಭವ ನಮೂದಿಸಿದ ಕ್ಸಿ ಹಸ್ತಾಕ್ಷರವನ್ನೂ ದಾಖಲಿಸಿದರು.ಕಾಣಿಕೆ

ಸಬರಮತಿ ಆಶ್ರಮ ಪ್ರಕಟಿಸಿದ ‘ಗಾಂಧಿ ಇನ್‌ ಎ ಅಮ್ದಾವದ್‌’ ಪುಸ್ತಕ,  ಬಾಪು  ನೂಲು ತೆಗೆಯು­ತ್ತಿದ್ದ ಚರಕದ ಪ್ರತಿಕೃತಿ, ಐತಿಹಾಸಿಕ ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಬಾಪು ಚಿತ್ರ ಹಾಗೂ  ಚೀನಾ ಭಾಷೆಯಲ್ಲಿರುವ ‘ಗೀತೆ’ಯ ಪ್ರತಿಯನ್ನು ಮೋದಿ, ಕ್ಸಿ ಅವರಿಗೆ ಕಾಣಿಕೆಯಾಗಿ ನೀಡಿದರು.ಪ್ರತಿಭಟನೆ

ಕ್ಸಿ ಜಿನ್‌ಪಿಂಗ್‌ ಭಾರತ ಭೇಟಿ ವಿರೋಧಿಸಿ ನವದೆಹಲಿಯ ಚೀನಾ ರಾಯಭಾರ ಕಚೇರಿ ಎದುರು ಪ್ರತಿ­ಭಟನೆಯಲ್ಲಿ ತೊಡಗಿದ್ದ 10 ಟಿಬೆಟ­ನ್ನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟಿಬೆಟ್‌ಗೆ ಸ್ವಾತಂತ್ರ್ಯ ನೀಡುವಂತೆ ಒತ್ತಾ­ಯಿಸಿ ಪ್ರದರ್ಶನ ನಡೆಸು­ತ್ತಿರುವುದಾಗಿ ಪ್ರತಿಭಟ­ನಾ­ನಿರತರು ಹೇಳಿದರು. ಕ್ಸಿ ಭೇಟಿಯಿಂದಾಗಿ ರಾಜಧಾನಿ­ಯಲ್ಲಿ  ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry