ಶನಿವಾರ, ಫೆಬ್ರವರಿ 27, 2021
31 °C
ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಟಿ.ರಘುಮೂರ್ತಿ ತಾಕೀತು

‘ಸಮಸ್ಯೆ ಸರಿಪಡಿಸಲೂ ಆಗದಿದ್ದರೆ ಮನೆಗೆ ಹೊರಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಮಸ್ಯೆ ಸರಿಪಡಿಸಲೂ ಆಗದಿದ್ದರೆ ಮನೆಗೆ ಹೊರಡಿ’

ಚಳ್ಳಕೆರೆ: ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವ ಬಗ್ಗೆ ಸಾಕಷ್ಟು ಬಾರಿ ತಿಳಿಸಿದರೂ ನಿರ್ಲಕ್ಷ್ಯ ತೋರುತ್ತಿದ್ದೀರಿ. ನಿಮ್ಮಿಂದ ಕ್ರಮ ಕೈಗೊಳ್ಳಲಾಗದಿದ್ದರೆ ಹೇಳಿ, ರಜೆ ಮೇಲೆ ಮನೆಗೆ ಕಳುಹಿಸುತ್ತೇವೆ’ ಎಂದು ಶಾಸಕ ಟಿ.ರಘುಮೂರ್ತಿ ಅವರು ಅಬಕಾರಿ ಅಧಿಕಾರಿ ಪೂಜಾರಿ ವಿರುದ್ಧ  ಕಿಡಿಕಾರಿದರು.ತಾಲ್ಲೂಕಿನ ಬುಡ್ನಹಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವೀರದಿಮ್ಮನ ಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಕುಂದು ಕೊರತೆ  ವಿಚಾರಿಸಿ ಅವರು ಮಾತನಾಡಿದರು.ವೀರದಿಮ್ಮನಹಳ್ಳಿ ಗ್ರಾಮದಲ್ಲಿ ಯುವಕರಿಂದ ವಯಸ್ಸಾದವರೆಲ್ಲರೂ ಮದ್ಯಪಾನ ಮಾಡುವುದರಿಂದ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಕೂಲಿಯಿಂದ ಬಂದ ಹಣವನ್ನು ಗಂಡಸರು ಜಗಳವಾಡಿ ಕಸಿದುಕೊಂಡು ಹೋಗುತ್ತಾರೆ. ಜೀವನ ಸಾಗಿಸುವುದೇ ಕಷ್ಟವಾಗಿದೆ. ಗ್ರಾಮದಲ್ಲಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಗೌರಿಬಾಯಿ ಅವರು ಸಭೆಯಲ್ಲಿ ಅಳಲು ತೋಡಿಕೊಂಡರು.ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ‘ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಹೆಚ್ಚಿನ ಅನಾಹುತಗಳಿಗೆ ಅವಕಾಶ ನೀಡಬಾರದು. ಎರಡು ದಿನಗಳ ನಂತರ ಮತ್ತೆ ಬಂದು ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಅಬಕಾರಿ ನಿರೀಕ್ಷಕ ಪೂಜಾರಿ ಅವರಿಗೆ ಎಚ್ಚರಿಕೆ ನೀಡಿದರು.ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆಯೇ ಎಂಬ ಶಾಸಕರ ಪ್ರಶ್ನೆಗೆ ಉತ್ತರಿಸಿದ ಗ್ರಾಮಸ್ಥರು, ಒಂದು ಬೀದಿಯಲ್ಲಿ ನೀರು ಬಂದರೆ ಇನ್ನೊಂದು ಬೀದಿಯಲ್ಲಿ ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಪಿಡಿಒ ಶಶಿರಾಜು ಹಾಗೂ

ಎಇಇ ಸತೀಶ್ ಬಾಬು ಮಾತನಾಡಿ, ಗ್ರಾಮದಲ್ಲಿ ಹಲವರುಗುಂಡಿಗಳನ್ನು ತೋಡಿಕೊಂಡು ಅಕ್ರಮ ವಾಗಿ ನಲ್ಲಿಗಳ ಸಂಪರ್ಕ ಪಡೆದು ಕೊಂಡಿದ್ದಾರೆ. ಇದರಿಂದ ಸಮರ್ಪಕ ವಾಗಿ ಎಲ್ಲಾ ಕಡೆ ನೀರು ಹರಿಯುತ್ತಿಲ್ಲ ಎಂದು ಶಾಸಕರ ಗಮನ ಸೆಳೆದರು.ಬೇಸಿಗೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಬಹುದು. ಗ್ರಾಮಸ್ಥರ ಹಾಗೂ ಪೊಲೀಸರ ಸಹಕಾರದೊಂದಿಗೆ ಅಕ್ರಮ ಸಂಪರ್ಕ ಪಡೆದ ನಲ್ಲಿಗಳನ್ನು ತೆಗೆದುಹಾಕಿ. ಪ್ರತಿ ಕುಟುಂಬಕ್ಕೂ ಕುಡಿಯುವ ನೀರು ದೊರೆಯುವಂತೆ ಕ್ರಮ ಜರುಗಿಸಿ ಎಂದು  ಹೇಳಿದರು.   ಪುರಸಭೆ ಸದಸ್ಯೆ ಲಕ್ಷ್ಮೀದೇವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಗೀತಾಬಾಯಿ, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಟಿ.ಪಾಂಡ್ಯಪ್ಪ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.