ಸೋಮವಾರ, ಮಾರ್ಚ್ 8, 2021
31 °C

‘ಸರಳ ಜೀವನದಿಂದ ಆರ್ಥಿಕತೆ ಸುಭದ್ರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸರಳ ಜೀವನದಿಂದ ಆರ್ಥಿಕತೆ ಸುಭದ್ರ’

ಹಾವೇರಿ: ‘ದೇಶದ ಆರ್ಥಿಕತೆ ಸುಭದ್ರವಾಗಿರುವುದು ಶ್ರೀಮಂತರಿಂದ ಅಲ್ಲ, ಶೇ 30ರಿಂದ 40 ಜನ ಕಡಿಮೆ ವೆಚ್ಚದಲ್ಲಿ ಸರಳ ಜೀವನ ನಡೆಸುತ್ತಿರುವ ಕಾರಣ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.ಶಿಗ್ಗಾವಿ ತಾಲ್ಲೂಕಿನ ಹುಲಗೂರದಲ್ಲಿ ಸೋಮವಾರ ದೇಶಪಾಂಡೆ ಫೌಂಡೇಷನ್‌ ಕೃಷಿ ತರಬೇತಿ ಕೇಂದ್ರಕ್ಕೆ ಶಂಕುಸ್ಥಾಪನೆ ಹಾಗೂ ‘ಕೃಷಿ ಸಿಂಚನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಅಮೆರಿಕದಂತೆ ಭಾರತದ ಆರ್ಥಿಕ ಕುಸಿತ ಕಾಣುವುದಿಲ್ಲ. ಗಂಡನ ಕಿಸೆ ಕುಸಿತ ಕಂಡರೂ, ಸಾಸಿವೆ ಡಬ್ಬದಲ್ಲಿಟ್ಟಿದ್ದ ಹೆಂಡತಿಯ ಕಾಸು ಕುಟುಂಬ ಕಾಯುತ್ತದೆ’ ಎಂದು ಬಣ್ಣಿಸಿದರು.‘ರೈತರಿಗೆ ತಂತ್ರಜ್ಞಾನ ನೀಡಿ ಇಚ್ಛಾಶಕ್ತಿ ಹೆಚ್ಚಿಸುವ ಹಸಿರು ಕ್ರಾಂತಿ ಉದ್ದೇಶವನ್ನು ದೇಶಪಾಂಡೆ ಫೌಂಡೇಷನ್ ಹೊಂದಿದೆ. ಅದಕ್ಕಾಗಿ ತರಬೇತಿ ಕೇಂದ್ರ ಸ್ಥಾಪಿಸಿದೆ. ಈ ಹಿಂದೆ ಐದು ಸಾವಿರ ತೆಂಗು, ಎರಡು ಸಾವಿರ ಎಕರೆಯಲ್ಲಿ ಮಾವಿನ ಗಿಡ, ಬಿದಿರು, ಪಪ್ಪಾಯ ಬೆಳೆಸಿ ಮಾರುಕಟ್ಟೆ ನಿರ್ಮಿಸಿದೆ. ಮೌಲ್ಯವರ್ಧಿತವಾಗಿ ಮಾರಾಟಗೊಳ್ಳುವ ಕೆಲಸ ಮಾಡಿದೆ’ ಎಂದ ಅವರು, ‘ಈಗ ಮಾತನಾಡುವವರು ಹೇರಳ, ಆದರೆ, ಮಾಡುವವರು ವಿರಳ. ಈ ನಿಟ್ಟಿನಲ್ಲಿ ಗುರುರಾಜ ದೇಶಪಾಂಡೆ ಕೆಲಸಗಳೇ ಶ್ಲಾಘನೀಯ’ ಎಂದರು. ‘26 ಸಾವಿರ ಎಕರೆ ಹನಿ ನೀರಾವರಿ ಮಾಡಲಾಗಿದೆ. ಮುಂದಿನ 18 ತಿಂಗಳು 40 ಸಾವಿರ ಎಕರೆ ಹನಿ ನೀರಾವರಿಗೆ ಒಳಪಡಿಸಲಾಗುವುದು. ಒಟ್ಟಾರೆ, ತುಂಗಭದ್ರಾ ದಡದಿಂದ ಕೃಷ್ಣಾ ದಡ ತನಕ ಸುಮಾರು ಏಳು ಲಕ್ಷ ಎಕರೆ ಹನಿನೀರಾವರಿ ಮಾಡುವ ಯೋಜನೆಯನ್ನು ಸಚಿವನಾಗಿದ್ದಾಗ ರೂಪಿಸಿದ್ದು, ಜಾರಿಯಲ್ಲಿದೆ. ಈ ಪ್ರದೇಶದಲ್ಲಿ ಸುಮಾರು 100 ಆಹಾರ ಸಂಸ್ಕರಣ ಘಟಕ ಬರಲಿದೆ’ ಎಂದರು.‘ಒಂದು ಸೆಂಟಿ ಮೀಟರ್‌ ಫಲವತ್ತ ಮಣ್ಣಿನ ಪದರ ನಿರ್ಮಾಣಕ್ಕೆ ಸುಮಾರು ನಾಲ್ಕು ಶತಮಾನಬೇಕು. ಅಂತ ಸೂಕ್ಷ್ಮ ಮಣ್ಣು, ನೀರು, ಗಾಳಿಯನ್ನು ನಾವು ‘ಮಣ್ಣು’ ಮಾಡುತ್ತಿದ್ದೇವೆ’ ಎಂದರು. ‘ನೀರು, ಬೆಳಕು, ಮಣ್ಣು ಬಳಕೆ ಬಹುಮುಖ್ಯ. ಹೊಸ ತರಬೇತಿ ಕೇಂದ್ರ ದಲ್ಲಿ ನಾವು ನಿಮಗೆ ಹೇಳುವುದಿಲ್ಲ. ತಂತ್ರಜ್ಞಾನ ಹೇರುವುದಿಲ್ಲ. ಸಮಸ್ಯೆ ಎದುರಿಸಿದ ರೈತರೇ ತಾವೇ ಉತ್ತರ ಕಂಡುಕೊಂಡು ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ತರಬೇತಿ ನೀಡುತ್ತೇವೆ. ಅವರಿಗೆ ಪೂರಕವಾಗಲು ವಿವಿಧ ದೇಶದಿಂದ ವಿಜ್ಞಾನಿಗಳು, ತಜ್ಞ ರೈತರು, ಸಾಧಕರು  ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದು ದೇಶಪಾಂಡೆ ಫೌಂಡೇಷನ್‌ ಸಂಸ್ಥಾಪಕ ಗುರುರಾಜ ದೇಶಪಾಂಡೆ ಹೇಳಿದರು. ಜಯಶ್ರೀ ದೇಶಪಾಂಡೆ ಇದ್ದರು.ಇದಕ್ಕೂ ಮೊದಲು ನಡೆದ ರೈತರೊಂದಿಗಿನ ಸಂವಾದದಲ್ಲಿ ಪ್ರಕಾಶ್‌ ಭಟ್, ನಂದೀಶ, ಕೌಶಿಕ್‌, ಲೀಲಾವತಿ ನಾಯಕ ಮಾಹಿತಿ ನೀಡಿದರು.‘ಹೊಲವೇ ಪ್ರಯೋಗಾಲಯ ಆಗಲಿ’

‘ಪ್ರಯೋಗಾಲಯದಿಂದ ಹೊಲಕ್ಕೆ ಕೃಷಿ ತಂತ್ರಜ್ಞಾನ ಹರಿಸುವ ಬದಲು, ಹೊಲವೇ ಪ್ರಯೋಗಾಲಯ ಆಗಲಿ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

‘ಕೃಷಿ ಕಾಲೇಜು, ವಿಶ್ವವಿದ್ಯಾಲಯಗಳು ‘ಕ್ಯಾಂಪಸ್‌’ ಚೌಕಟ್ಟು ಮೀರಿ ಹೊಲಗಳತ್ತ ಬರಬೇಕು. ಹೊಲಗಳೇ ಕ್ಯಾಂಪಸ್‌ ಆಗಬೇಕು’ ಎಂದ ಅವರು, ‘ತಜ್ಞರು, ವಿಜ್ಞಾನಿಗಳು ಸಮಸ್ಯೆಗಳ ಕುರಿತು ಚರ್ಚೆ ಮಾಡಿದರೆ, ರೈತರು ಸಮಸ್ಯೆಗಳ ಜೊತೆ ಜೀವಿಸುತ್ತಾರೆ. ಹೀಗಾಗಿ ಸಮರ್ಪಕವಾಗಿ ಎದುರಿಸುತ್ತಾರೆ. ಈ ನಿಟ್ಟಿನಲ್ಲಿ ನಮ್ಮ ವಿ.ವಿಗಳಲ್ಲಿ ಸ್ಥಾನಿಕ ಬುದ್ಧಿವಂತಿಕೆ ಬಳಕೆ ಆಗಬೇಕು ಹಾಗೂ ಕೃಷಿಯಲ್ಲಿ ಸಮಯ, ಸಂಗಮ, ಸಮನ್ವಯ ಬಹಳಮುಖ್ಯ’ ಎಂದರು.‘ಜನಸಂಖ್ಯೆ ಹೆಚ್ಚಾದಂತೆ ಉತ್ಪಾದನೆಗಿಂತ ಬಳಕೆ ಹೆಚ್ಚಾಗುತ್ತದೆ. ಇದು ನಿಸರ್ಗದ ಹಾದಿಯನ್ನೇ ತಪ್ಪಿಸುವಂತೆ ಮಾಡಿದೆ. ಕೃಷಿ ನಿಸರ್ಗ ಪೂರಕ ಪ್ರಕ್ರಿಯೆ. ಅಲ್ಲೂ ಬುದ್ಧಿಶಕ್ತಿ ಪ್ರಯೋಗಿಸಿ ಭೂಮಿ, ನೀರು, ಗಾಳಿಗೆ  ವಿಷವುಣಿಸುತ್ತಿದ್ದಾನೆ’ ಎಂದ ಅವರು, ನಾವು ಶುದ್ಧತೆ ಕಾಯ್ದುಕೊಳ್ಳದಿದ್ದರೆ, ಎಷ್ಟೇ ಆಸ್ತಿ ಮಾಡಿಟ್ಟರೂ, ಮುಂದಿನ ಪೀಳಿಗೆ ಬದುಕು ದುರ್ಬರ’ ಎಂದರು.   ‘ನೀರು, ಬೆಳಕು, ಮಣ್ಣಿನ ಬಳಕೆ ಬಹು ಮುಖ್ಯ. ಅದಕ್ಕಾಗಿ ರೈತರೇ ಸಮಸ್ಯೆಗೆ ಉತ್ತರ ಕಂಡುಕೊಂಡು ಸ್ವಾವಲಂಬಿಯಾಗಿ ಕೃಷಿ ನಡೆಸುವ ನಿಟ್ಟಿನಲ್ಲಿ ಹೊಸ ತರಬೇತಿ ಕೇಂದ್ರದಲ್ಲಿ ಅವಕಾಶ ಕಲ್ಪಿಸುತ್ತೇವೆ’ ಎಂದು ಗುರುರಾಜ ದೇಶಪಾಂಡೆ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.