ಬುಧವಾರ, ಜೂನ್ 23, 2021
30 °C
‘ಸಹಕಾರಿ ರತ್ನ ಬಿ.ಜಿ.ಬಣಕಾರ ಸಹಕಾರಿ ಸಮುದಾಯ ಭವನ’ ಉದ್ಘಾಟನೆ

‘ಸಹಕಾರಿ ಕ್ಷೇತ್ರಕ್ಕೆ ಸರ್ಕಾರದ ಹಸ್ತಕ್ಷೇಪ ಬೇಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ಇಲ್ಲಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕಿನ ಮೊದಲ ಮಹಡಿಯಲ್ಲಿ ನಿರ್ಮಿಸಿರುವ ‘ಸಹಕಾರಿ ರತ್ನ ಬಿ.ಜಿ.ಬಣಕಾರ ಸಹಕಾರಿ ಸಮುದಾಯ ಭವನ’ದ ಉದ್ಘಾಟನೆ ಮಂಗಳವಾರ ನಡೆಯಿತು.ಸಮುದಾಯ ಭವನ ಉದ್ಘಾಟಿಸಿದ ಶಾಸಕ ಯು.ಬಿ.ಬಣಕಾರ, ಸಹಕಾರಿ ಕ್ಷೇತ್ರದಲ್ಲಿ ನಿರ್ದೇಶಕ ಮಂಡಳಿಯು ಸರಿಯಾಗಿ ಕಾರ್ಯನಿರ್ವಹಿಸಿದರೆ ಸಂಸ್ಥೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ ಎಂಬುದಕ್ಕೆ ಪಿಎಲ್‌ಡಿ ಬ್ಯಾಂಕಿನ ಆಡಳಿತ ಮಂಡಳಿ 4 ವರ್ಷಗಳ ಅವಧಿಯಲ್ಲಿ ಸಾಧಿಸಿದ ಪ್ರಗತಿ ಸಾಕ್ಷಿಯಾಗಿದೆ. ಮುಚ್ಚುವ ಹಂತದಲ್ಲಿದ್ದ ಈ ಬ್ಯಾಂಕ್ಅನ್ನು ಲಾಭದ ಹಳಿಗೆ ತರಲು ಎಲ್ಲರೂ ಶ್ರಮಿಸಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಸರ್ಕಾರ ಹಸ್ತಕ್ಷೇಪವನ್ನು ಮಾಡಬಾರದು ಎಂದರು.ವಿಧಾನ ಸಭೆ ಮಾಜಿ ಅಧ್ಯಕ್ಷ ಬಿ.ಜಿ.ಬಣಕಾರ ಮಾತನಾಡಿ, ‘ರಾಜ್ಯದ 176 ಪಿಎಲ್‌ಡಿ ಬ್ಯಾಂಕುಗಳ ಪೈಕಿ ಸತತ 3 ವರ್ಷಗಳಿಂದ ಲಾಭದಲ್ಲಿರುವ ಕೆಲವೇ ಬ್ಯಾಂಕುಗಳಲ್ಲಿ ಇದೂ ಒಂದಾಗಿದೆ. ಹಾನಿಯನ್ನು ಹೊಡೆದು ಹಾಕಿ ಲಾಭದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ರೈತರಿಗೆ ದೀರ್ಘಾವಧಿ ಸಾಲವನ್ನು ನೀಡಿ ಅವರ ಆರ್ಥಿಕ ಸಂಪತ್ತು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಪಿಎಲ್‌ಡಿ ಬ್ಯಾಂಕುಗಳನ್ನು ಆರಂಭಿಸಿದೆ. ಇಲ್ಲಿ ನನ್ನ ಹೆಸರಿನ ಸಮುದಾಯ ಭವನವನ್ನು ಉದ್ಘಾಟಿಸಿದ್ದೀರಿ. ನನ್ನ ಹೆಸರು ಉಳಿಯಬೇಕೆಂದರೆ ತಾಲ್ಲೂಕಿನ ರೈತರ ಅಭಿವೃದ್ಧಿಗೆ ಬ್ಯಾಂಕ್ ನಿರಂತರವಾಗಿ ಶ್ರಮಿಸಬೇಕು’ ಎಂದು ಹೇಳಿದರು.ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್.ಪಾಟೀಲ ಮಾತನಾಡಿ, ಸಹಕಾರಿ ರಂಗದಲ್ಲಿ ಆಗಿರುವ ಪ್ರಗತಿಯನ್ನು ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಿಂದ ನೋಡಿ ನಾವು ಕಲಿಯಬೇಕು.  ಸಹಕಾರಿ ಧುರೀಣರು ಇದ್ದಂತೆ ಸಂಸ್ಥೆಗಳು ಇರುತ್ತವೆ. ನಾವು ಇತರರಿಗೆ ಮಾದರಿಯಾಗಿ ಇರಬೇಕು ಎಂದರು.ಸಾನ್ನಿಧ್ಯ ವಹಿಸಿದ್ದ ರಟ್ಟೀಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು.ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ ಮಾತನಾಡಿದರು. ಬ್ಯಾಂಕ್ ಅಧ್ಯಕ್ಷ ಮಂಜಪ್ಪ ಗಿಡ್ಡಣ್ಣನವರ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರೇಣುಕಮ್ಮ ಚಲವಾದಿ, ಕಸ್ಕಾಡ್‌ ಬ್ಯಾಂಕ್‌ ಜಿಲ್ಲಾ ವ್ಯವಸ್ಥಾಪಕ ಪ್ರಕಾಶ ಕುಲಕರ್ಣಿ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಶಂಭಣ್ಣ ವಡೆಯನಪುರ, ಬ್ಯಾಂಕಿನ ಉಪಾಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ನಿರ್ದೇಶಕರಾದ ಮಲ್ಲನಗೌಡ ಪುಟ್ಟಪ್ಪಗೌಡ್ರ, ರವೀಂದ್ರ ಮುದಿಯಪ್ಪನವರ, ಮರಬಸಪ್ಪ ಹೊಂಬರಡಿ, ಗದಿಗೆಪ್ಪ ಕವಲಿ, ಬಸವಣ್ಣೆಪ್ಪ ಕಾರಗಿ, ಷಣ್ಣುಖಯ್ಯ ಮಳಿಮಠ, ಧರ್ಮಣ್ಣ ಚಲವಾದಿ, ವೀರನಗೌಡ ಬಿದರಿ, ಗೀತಾ ನಂದಿಹಳ್ಳಿ, ವ್ಯವಸ್ಥಾಪಕಿ ಜಯಮ್ಮ ಕೋರಿ ಹಾಗೂ ಎಂ.ಎಲ್.ಭಜಂತ್ರಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.