ಗುರುವಾರ , ಮಾರ್ಚ್ 4, 2021
18 °C

‘ಸಾಂಪ್ರದಾಯಿಕ ನೆಲೆಯ ಸಿನಿಮಾ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಾಂಪ್ರದಾಯಿಕ ನೆಲೆಯ ಸಿನಿಮಾ ಅಗತ್ಯ’

ಬೆಳಗಾವಿ: ‘ಸಾಂಪ್ರದಾಯಿಕ ನೆಲೆಗಟ್ಟಿನ ಮೇಲೆ ಸಿನಿಮಾಗಳು ರೂಪುಗೊಳ್ಳ ಬೇಕಾದ ಅಗತ್ಯವಿದೆ. ಜೊತೆಗೆ ಶಿಕ್ಷಣದಲ್ಲಿ ರಸಗ್ರಹಣವನ್ನು ಅಳವಡಿಸಿ ಕೊಳ್ಳಬೇಕು’ ಎಂದು ಚಲನಚಿತ್ರ ನಟ ಹಾಗೂ ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದರು.ಕೆಎಲ್ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಲಿಂಗಾಯತ ಮಹಿಳಾ ಸಮಾಜ ಹಮ್ಮಿಕೊಂಡಿದ್ದ ಸಂವಾದ ಹಾಗೂ ಚಲನಚಿತ್ರ ರಸಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಇತ್ತೀಚೆಗೆ ನಮ್ಮ ನಿರ್ದೇಶಕರು ವಾಣಿಜ್ಯಾತ್ಮಕ ಸಿನಿಮಾಗಳನ್ನು ಮಾಡಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಚಲನಚಿತ್ರ ಇಂದು ಕೇವಲ ಹಣಗಳಿಸುವ ಉದ್ಯಮವಾಗಿದೆ. ಹೀಗಾಗಿ ಕಮರ್ಷಿಯಲ್‌ ಹಾಗೂ ಕಲಾತ್ಮಕ ಚಿತ್ರಗಳ ನಡುವೆ ನಮ್ಮ ಸಿನಿಮಾಗಳು ರೂಪುಗೊಳ್ಳಬೇಕು’ ಎಂದು ಅವರು ಅಭಿಪ್ರಾಯಪಟ್ಟರು.‘ಇಂದು ದೃಶ್ಯ ಮಾಧ್ಯಮಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅದರ ಗಾಢ ಪ್ರಭಾವ ಪ್ರತಿಯೊಬ್ಬ ಯುವ ಜನತೆ ಮೇಲಿದೆ. ಯಾವ ರೀತಿಯ ಸದಭಿರುಚಿಯ ಚಿತ್ರ ನೋಡಬೇಕೆಂಬ ಆಯ್ಕೆಯಲ್ಲೇ ಯುವ ಪೀಳಿಗೆ ಗೊಂದಲದಲ್ಲಿದೆ. ಹೀಗಾಗಿ ಈ ರೀತಿಯ ಸಂವಾದ, ರಸಗ್ರಹಣ ಶಿಬಿರಗಳು ಒಂದು ರೀತಿಯ ಶೈಕ್ಷಣಿಕ ಶಿಸ್ತನ್ನು ನೀಡುತ್ತವೆ’ ಎಂದರು.ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಆರ್. ಸಿದ್ಧಗಂಗಮ್ಮ, ‘ನಾಗಾ ಭರಣ ಅವರು ರಂಗಭೂಮಿಯಿಂದ ಬಂದ ನಟ, ನಿರ್ದೇಶಕರು. ಸಿನಿಮಾ, ಟಿವಿ ಧಾರಾವಾಹಿ, ನಾಟಕಗಳಲ್ಲಿ ದೇಶಿ ಸಂವೇದನೆಯನ್ನು ಅವರು ನೀಡಿರು ವುದು ವಿಶೇಷವಾಗಿದೆ. ಅವರ ರಂಗ ಭೂಮಿ ಪ್ರವೇಶಕ್ಕೆ ಒಂದು ಕಡೆ ಬಿ.ವಿ. ಕಾರಂತ ಹಾಗೂ ಇನ್ನೊಂದೆಡೆ ಗಿರೀಶ ಕಾರ್ನಾಡ್‌ ಕಾರಣರಾಗಿದ್ದಾರೆ’ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನಾಗಾ ಭರಣ ಹಾಗೂ ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿಯಾಗಿರುವ ಕಿರುತೆರೆ ನಟ ಸಂತೋಷ ಜಾವರೆ ಅವರನ್ನು ಸನ್ಮಾನಿಸಲಾಯಿತು.ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಸದಸ್ಯೆ ಶೈಲಜಾ ಭಿಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಡಾ.ಎಸ್.ಎಸ್. ಮಸಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ರಾದ ಡಾ. ರಂಜನಾ ಗೋದಿ, ಡಾ.ಜಿ.ಎನ್. ಶೀಲಿ, ಶಶಿಧರ ಹೊಸ ಕೋಟೆ, ಡಾ. ಮಹೇಶ ಗುರನಗೌಡರ, ಡಾ. ಹನುಮಂತ ಮೇಲಿನಮನಿ, ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಸರ್ವಮಂಗಳಾ ಪಾಟೀಲ, ವೀಣಾ ಕತ್ತಿ, ಶಿರೀಷ ಜೋಶಿ, ಸುಭಾಷ್ ಚೌಗುಲೆ ಹಾಜರಿದ್ದರು. ಅಮಿತ ಕಲಂ, ನೈನಾ ಗಿರಿಗೌಡರ್ ಪ್ರಾರ್ಥಿಸಿದರು. ಸಿದ್ಧನಗೌಡ ಪಾಟೀಲ ಹಾಗೂ ಶ್ರೀಶೈಲ ಲಟ್ಟೆ ನಿರೂಪಿಸಿದರು. ಶಿವಾನಂದ ತೋರಣಗಟ್ಟಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.