‘ಸಾಮಾಜಿಕ–ಆರ್ಥಿಕ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಾಗಲಿ’

7

‘ಸಾಮಾಜಿಕ–ಆರ್ಥಿಕ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಾಗಲಿ’

Published:
Updated:

ಹಾಸನ: ‘ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ವಿಜ್ಞಾನ–ತಂತ್ರಜ್ಞಾನದ ಬಳಕೆ ಹೆಚ್ಚಾಗಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ 12ನೇ ಪಂಚವಾರ್ಷಿಕ ಯೋಜನೆ (2012–2017)ಯಲ್ಲಿ ಮಹತ್ವಾಕಾಂಕ್ಷೆಯ ಕೆಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ’ ಎಂದು ಕೇಂದ್ರ ಯೋಜನಾ ಆಯೋಗದ ಸದಸ್ಯ ಡಾ. ಕಸ್ತೂರಿ ರಂಗನ್‌ ತಿಳಿಸಿದರು.ಇಲ್ಲಿನ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಪ್ರಮುಖ ಭಾಷಣಕಾರರಾಗಿ ಅವರು ಮಾತನಾಡಿದರು.‘ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ದೇಶದ ಅಭಿವೃದ್ಧಿಯ ವೇಗವರ್ಧಕಗಳಂತೆ ಬಳಸಲು ಆದ್ಯತೆ ನೀಡಲಾಗಿದೆ. ಎಲ್ಲರನ್ನೂ ಒಳಗೊಳ್ಳುವಂಥ ಮತ್ತು ಸುಸ್ಥಿರ ಅಭಿವೃದ್ಧಿಯ ಮೂಲಕ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಜ್ಞಾನಾಧಾರಿತ ಅರ್ಥವ್ಯವಸ್ಥೆ ರೂಪಿಸಬೇಕು ಎಂಬ ಸರ್ಕಾರದ ಇಂಗಿತಕ್ಕೆ ಅನುಗುಣವಾಗಿ ಪಂಚವಾರ್ಷಿಕ ಯೋಜನೆಯಲ್ಲಿ ವಿಜ್ಞಾನ ತಂತ್ರಜ್ಞಾನಕ್ಕೆ ಆದ್ಯತೆ ನೀಡಿದ್ದೇವೆ ಎಂದರು.ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯನಿವರ್ಹಿಸಿದ ದಿನಗಳು, ಆ ಸಂಸ್ಥೆ ಎದುರಿಸಿದ ಸವಾಲುಗಳು ಮತ್ತು ಸಮಸ್ಯೆಗಳನ್ನು ಸ್ಮರಿಸಿಕೊಂಡ ಅವರು, ‘ದೇಶದ ಅತ್ಯುತ್ತಮ ಸಂಸ್ಥೆಗಳಿಂದ ಶಿಕ್ಷಣ ಪಡೆದ ಮತ್ತು ಅತ್ಯಂತ ಬುದ್ಧಿವಂತ ಯುವಕರು ಈಗ ಈ ಸಂಸ್ಥೆಯಲ್ಲಿರುವುದರಿಂದ ಇಸ್ರೋ ಮುಂದಿನ ದಿನಗಳಲ್ಲಿ ಹೊಸ ಹೊಸ ಮೈಲಿಗಲ್ಲು ಸ್ಥಾಪಿಸುತ್ತ ವಿಶ್ವದ ಗಮನ ಸೆಳೆಯುತ್ತದೆ ಎಂಬ ವಿಶ್ವಾಸವಿದೆ. ಯುವಕರು ಯಾವತ್ತೂ   ಅತ್ಯುನ್ನತ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಜ್ಞಾನಾರ್ಜನೆಯ ಪ್ರಿಕ್ರಿಯೆಯನ್ನು ಯಾವತ್ತೂ ಬಿಡಬಾರದು’ ಎಂದರು.ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಚಿನ್ನದ ಪದಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಿ ಮಾತನಾಡಿದ ಕುವೆಂಪಿ ವಿ.ವಿ.ಯ ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದ ಗೌಡ, ‘ಎಂಜಿನಿಯರ್‌ಗಳು ಹೊಸ ಹೊಸ ಉತ್ಪನ್ನಗಳನ್ನು ತಯಾರಿಸಿ ಜನರಿಗೆ ಸೇವೆ ನೀಡುತ್ತ ದೇಶದ ಅಭಿವೃದ್ಧಿಗೆ ತಮ್ಮದೇ ಆದ ರೀತಿಯಲ್ಲಿ ಕಾಣಿಕೆ ನೀಡುತ್ತಾರೆ’ ಎಂದರು.ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. 2013ನೇ ಸಾಲಿನಲ್ಲಿ ಎಂಜಿನಿಯರಿಂಗ್‌ ಪದವಿ ಮುಗಿಸಿದ ವಿದ್ಯಾಥಿರ್ಗಳಿಗೆ ಪ್ರಮಾಣಪತ್ರ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಇತರ ಸಿಬ್ಬಂದಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry