‘ಸಾಲ ಮರುಪಾವತಿಯಿಂದ ಬ್ಯಾಂಕ್ ಪ್ರಗತಿ’

7

‘ಸಾಲ ಮರುಪಾವತಿಯಿಂದ ಬ್ಯಾಂಕ್ ಪ್ರಗತಿ’

Published:
Updated:

ದಾವಣಗೆರೆ: ‘ಗ್ರಾಹಕರ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕ್‌ಗಳ ಪಾತ್ರ ಮಹತ್ವದ್ದು, ಅದೇ ರೀತಿಯಲ್ಲಿ ಗ್ರಾಹಕರು ಬ್ಯಾಂಕಿನಿಂದ ಪಡೆದ ಸಾಲವನ್ನು ಸಕಾಲಕ್ಕೆ ಹಿಂತಿರುಗಿಸಿದಾಗ ಮಾತ್ರ ಆ ಬ್ಯಾಂಕ್‌ ಸಹ ಬೆಳವಣಿಗೆಯಾಗಲು ಸಾಧ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಅಭಿಪ್ರಾಯಪಟ್ಟರು.ನಗರದ ಚಾಮರಾಜ ಪೇಟೆಯಲ್ಲಿ ಮಂಗಳವಾರ ನಡೆದ ಸಿಂಡಿಕೇಟ್‌ ಬ್ಯಾಂಕ್‌ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಈಗಾಗಲೇ ನಗರದಲ್ಲಿ ಹಲವು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಹಿಂದುಳಿದ ಪ್ರದೇಶದಲ್ಲಿ ನೂತನವಾಗಿ ಸಿಂಡಿಕೇಟ್‌ ಬ್ಯಾಂಕ್‌ ಶಾಖೆ ಆರಂಭವಾಗಿರುವುದು ಸಂತಸವಾಗಿದೆ. ಈ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಮಂಡಕ್ಕಿಬಟ್ಟಿ ಕಾರ್ಮಿಕರು ಮತ್ತು ಬೀಡಿ ಕಟ್ಟುವ ಕಾರ್ಮಿಕರು ಸೇರಿದಂತೆ ಕೂಲಿ ಕಾರ್ಮಿಕರು ಹೆಚ್ಚಾಗಿ ಈ ಭಾಗದಲ್ಲಿ ವಾಸಿಸುತ್ತಿದ್ದಾರೆ. ಅರ್ಹ ವ್ಯಕ್ತಿಗಳನ್ನು ಗುರುತಿಸಿ, ಹೆಚ್ಚು ಸತಾಯಿಸದೇ ಅವರಿಗೆ ಸಕಾಲದಲ್ಲಿ ಸಾಲ ಮಂಜೂರು ಮಾಡಿ, ಅವರ ಅಭಿವೃದ್ಧಿಗೆ ಬ್ಯಾಂಕ್‌ ಅಧಿಕಾರಿಗಳು ಸಹಕರಿಸಬೇಕು. ಅದರಂತೆ ಬ್ಯಾಂಕ್‌ನಿಂದ ಸಾಲ ಪಡೆದವರು ಸಹ ನಿಗದಿತ ಅವಧಿಯೊಳಗೆ ಸಾಲ ಮರುಪಾವತಿಸಬೇಕು. ಜತೆಗೆ ಶಾಲಾ ವಿದ್ಯಾರ್ಥಿಗಳಿಗೆ ಅವರ ವಿದ್ಯಾರ್ಥಿವೇತನ ಪಡೆಯುವಲ್ಲಿ ಬ್ಯಾಂಕಿನಲ್ಲಿ ನೂತನ ಖಾತೆ ಆರಂಭಿಸುವಲ್ಲಿ ಬ್ಯಾಂಕ್‌ ಅಧಿಕಾರಿಗಳು  ಸಹಕರಿಸಬೇಕು ಎಂದು ಕಿವಿಮಾತು ಹೇಳಿದರು.ಬ್ಯಾಂಕ್‌ ವತಿಯಿಂದ ಪ್ರತಿ ವರ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಿ, ಉನ್ನತ ವಿದ್ಯಾಭ್ಯಾಸ ಪಡೆಯುವಂತೆ ಅವರನ್ನು ಪ್ರೇರೇಪಿಸಬೇಕು ಎಂದು ಇದೇ ಸಮಯದಲ್ಲಿ ಬ್ಯಾಂಕ್‌ ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.ಸೈಯದ್‌ ಸೈಪುಲ್ಲಾ ಮಾತನಾಡಿ, ಹಿಂದುಳಿದ ಪ್ರದೇಶದಲ್ಲಿ ಇನ್ನು ಹೆಚ್ಚು ರಾಷ್ಟ್ರೀಕೃತ ಬ್ಯಾಂಕ್‌ಗಳು ಆರಂಭವಾಗಬೇಕು. ಈ ರೀತಿಯ ಬ್ಯಾಂಕ್‌ಗಳಿಂದ ಸಕಾಲದಲ್ಲಿ ಸಾಲ ಪಡೆಯುವುದು ಸ್ವಲ್ಪ ಕಷ್ಟವಾಗುತ್ತದೆ. ಅರ್ಹ ವ್ಯಕ್ತಿಗಳು ತಾಳ್ಮೆ ವಹಿಸಿ, ಸಾಲ ಪಡೆದು, ಅದನ್ನು ಮರುಪಾವತಿ ಮಾಡಬೇಕು. ಈ ವಿಚಾರದಲ್ಲಿ ಬ್ಯಾಂಕ್‌ ಅಧಿಕಾರಿಗಳು ಮತ್ತು ಗ್ರಾಹಕರು ಒಬ್ಬರಿಗೊಬ್ಬರು ಸಹಕರಿಸುವುದು ಉತ್ತಮ ಎಂದರು.ಕಾರ್ಯಕ್ರಮಕ್ಕೂ ಮುನ್ನ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿ ಗಳನ್ನು ಬ್ಯಾಂಕ್‌ ವತಿಯಿಂದ ಸನ್ಮಾನಿಸ ಲಾಯಿತು. ನಂತರ ಸಿಂಡಿಕೇಟ್‌ ಬ್ಯಾಂಕ್‌ ಎಟಿಎಂ ಕೇಂದ್ರವನ್ನು ಉದ್ಘಾಟಿಸಲಾಯಿತು.ಸಚಿವ ಶಾಮನೂರು ಶಿವಶಂಕರಪ್ಪ, ಡಿವೈಎಸ್‌ಪಿ ರವಿನಾರಾಯಣ್‌, ಸಿಂಡಿಕೇಟ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಸುಧೀರ್‌ ಕುಮಾರ್‌ ಜೈನ್‌, ಬ್ಯಾಂಕ್‌ ನಿರ್ದೇಶಕ ಸಿ.ಆರ್‌. ನಸೀರ್‌ ಅಹಮದ್‌, ವಸಂತರಾಜ್‌, ಮೋತಿ ವೀರಣ್ಣ,ಎ.ಸಿ.ಜಯಣ್ಣ,  ಮುಜಾಹಿದ್ ಖಾನ್  ಉಪಸ್ಥಿತರಿದ್ದರು. ಚಿನ್ಮಯಿ ಪ್ರಾರ್ಥನೆ ಮಾಡಿದರು. ಸಿಂಡಿಕೇಟ್‌ ಬ್ಯಾಂಕ್‌ ನಿರ್ದೇಶಕ ಸಿ.ಆರ್‌.ನಸೀರ್‌ ಅಹಮದ್‌ ಸ್ವಾಗತಿಸಿದರು.ಸಚಿವರನ್ನೇ ಕಾಯಿಸಿದ ವ್ಯವಸ್ಥಾಪಕ!

ಬ್ಯಾಂಕ್‌ ಉದ್ಘಾಟನಾ ಸಮಾರಂಭ ಬೆಳಿಗ್ಗೆ 11.30ಕ್ಕೆ ನಿಗದಿಯಾಗಿತ್ತು. ಅಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಸಮಯಕ್ಕೆ ಸರಿಯಾಗಿ ಆಗಮಿಸಿದ್ದರು. ಆದರೆ, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಸುಧೀರ್‌ ಕುಮಾರ್‌ ಜೈನ್ ಅವರು 25ನಿಮಿಷ ತಡವಾಗಿ ಸಭೆಗೆ ಆಗಮಿಸಿ, ಸಚಿವರಲ್ಲಿ ಕ್ಷಮೆಯಾಚಿಸಿದ ಘಟನೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry