ಭಾನುವಾರ, ಮಾರ್ಚ್ 7, 2021
32 °C

‘ಸಿಂಗರ್‌ ಕಥೆಗಳು’ ಕೃತಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಿಂಗರ್‌ ಕಥೆಗಳು’ ಕೃತಿ ಬಿಡುಗಡೆ

ಬೆಂಗಳೂರು: ‘ಇಂಗ್ಲಿಷ್‌ ಹೊರತು ಪಡಿಸಿದ ಭಾಷೆಗಳ ಬರಹಗಳನ್ನು ಅನುವಾದದ ಮೂಲಕವೇ ನೋಡಬೇಕು. ಹಾಗಾಗಿ ಅನುವಾದ ಕೃತಿಗಳು ತಮ್ಮತನವನ್ನು ಒಳಗೊಂಡು, ನೈಜತೆಗೆ ಹತ್ತಿರವಿದ್ದರೆ ಓದುಗನಿಗೆ ಹೆಚ್ಚು ಆಪ್ತವಾಗುತ್ತವೆ’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯ ಪಟ್ಟರು.ಓ.ಎಲ್‌. ನಾಗಭೂಷಣಸ್ವಾಮಿ ಅವರು ಅನುವಾದಿಸಿರುವ ‘ಸಿಂಗರ್‌ ಕಥೆಗಳು’ ಪುಸ್ತಕವನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು. ‘ನೊಬೆಲ್‌ ಪ್ರಶಸ್ತಿ ಪುರಸ್ಕೃತ ಇಸಾಕ್‌ ಭಾಷೆಯ ವಿಸ್‌ ಕಥೆಗಾರ ಸಿಂಗರ್‌ನ ಕಥೆಗಳನ್ನು ಓದುವಾಗ ಯಾವುದೋ ಅನುವಾದ ಕೃತಿಯನ್ನು ಓದುತ್ತಿರುವಂತೆ ಭಾಸವಾಗದೆ, ನಮ್ಮದೆ ಕಥೆಗಳನ್ನು ಓದುತ್ತಿರುವಂತೆ ಅನ್ನಿಸುತ್ತದೆ. ಇದು ಓ.ಎಲ್‌.ಎನ್‌ ಅವರ ಅನುವಾದದ ಶಕ್ತಿ’ ಎಂದರು.ವಿಮರ್ಶಕ ಡಾ.ಎಚ್‌.ಎಸ್‌. ರಾಘವೇಂದ್ರ ರಾವ್‌ ಅವರು ಮಾತನಾಡಿ, ‘ಧರ್ಮ ಎಂಬುದು ಜಡವಾದ ಸಂಗತಿ ಅಲ್ಲ. ಅದು ಕಾಲದಿಂದ ಕಾಲಕ್ಕೆ ಬದ

ಲಾಗುತ್ತಾ ಹೋಗುತ್ತದೆ. ಈ ಬದಲಾವಣೆಯ ಅಂತರಂಗ ಯಾವುದು ಎಂದು ಸಿಂಗರ್‌ ತನ್ನ ಕಥೆಗಳ ಮೂಲಕ ಹುಡುಕಾಟ ನಡೆಸಿದ್ದಾನೆ. ಇದು ಇಂದಿನ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಮಹತ್ವವಾದ ಸಂಗತಿ’ ಎಂದು ತಿಳಿಸಿದರು.‘ಬಹಿರಂಗ ಅಥವಾ ಅಂತರಂಗ ಹೀಗೆ ಯಾವುದಾದರೊಂದು ಚಲನೆ ಧರ್ಮಕ್ಕೆ ಇರುತ್ತದೆ. ಧರ್ಮ, ಶ್ರದ್ಧೆಯನ್ನು ನಿರಾಕರಿಸುವುದರಿಂದ ಉಂಟಾಗುವ ನಿರ್ವಾತ ಇಂದು ನಮ್ಮನ್ನು ಕಾಡುತ್ತಿದೆ. ಸಿಂಗರ್‌ನ ಕಥೆಗಳಲ್ಲಿ ಧರ್ಮದ ಅರ್ಥದ ಹುಡುಕಾಟ ಮತ್ತು ನಾಶವಾಗುತ್ತಿರುವ ಭಾಷಿಕ ಸಂಸ್ಕೃತಿಯ ಹುಡುಕಾಟವಿದೆ. ಬೇರೆ ಬೇರೆ ಪೀಳಿಗೆಯ ಮೂಲಕ ಸಿಂಗರ್‌ ತನ್ನ ಕಥೆಗಳಲ್ಲಿ ಈ ಹುಡುಕಾಟ ನಡೆಸುತ್ತಾ ಹೋಗುತ್ತಾನೆ’ ಎಂದರು.ಕಥೆಗಾರ ಸಿಂಗರ್‌ ಬಗೆಗೆ  ಮಾಹಿತಿಗಳನ್ನು ಹಂಚಿಕೊಂಡ ಸಾಹಿತಿ ವಿವೇಕ ಶಾನಭಾಗ, ‘ಸಿಂಗರ್‌ ತನ್ನ ಕಥೆಗಳಲ್ಲಿ ಚಿತ್ರಿಸುತ್ತಿದ್ದ ಜಗತ್ತು. ಅವನ ಕಾಲದ

ಲ್ಲಿಯೇ ಕಾಣೆಯಾಗಿತ್ತು. ಅವನು ಬರೆಯುತ್ತಿದ್ದ ಜಗತ್ತಿಗೂ ಬದುಕುತ್ತಿದ್ದ ಜಗತ್ತಿಗೂ ಬಹಳ ಅಂತರವಿತ್ತು’ ಎಂದು ವಿವರಿಸಿದರು. ‘ಅನುವಾದ, ಸಾಹಿತ್ಯದ ಬಹುದೊಡ್ಡ ಸವಾಲು ಎನ್ನುವುದು ಸಿಂಗರ್‌ ಅಭಿಪ್ರಾಯ’ ಎಂದರು.ಅನುವಾದಕ ಓ.ಎಲ್‌. ನಾಗಭೂಷಣಸ್ವಾಮಿ ಅವರು ಮಾತನಾಡಿ, ‘ನಟನಾಗಬೇಕು ಎಂಬ ನನ್ನ ಬಾಲ್ಯದ ಮತ್ತು ಈಗಲೂ ಇರುವ ಕನಸನ್ನು ಎಲ್ಲಾ ಪಾತ್ರಗಳನ್ನು ಆಹ್ವಾನ ಮಾಡಿಕೊಂಡು ಬೋಧಿಸುವ ಶಿಕ್ಷಕನಾಗಿ ಹಾಗೂ ಎಲ್ಲಾ ಬರಹಗಾರರ ಒಳಹೊಕ್ಕು ಆ ಬರಹಗಾರನೇ ಆಗುವ ಅನುವಾದಕನಾಗಿ ಈಡೇರಿಸಿಕೊಂಡಿದ್ದೇನೆ’ ಎಂದು ಅವರು ಹೇಳಿದರು.ಈ ಪುಸ್ತಕಕ್ಕೆ ಕೆ. ಸತ್ಯನಾರಾಯಣ ಮುನ್ನುಡಿ ಬರೆದಿದ್ದಾರೆ. ಕಾರ್ಯಕ್ರಮದಲ್ಲಿ ಅಭಿರುಚಿ ಪ್ರಕಾಶನದ ಗಣೇಶ್‌ ಅವರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.