ಗುರುವಾರ , ಅಕ್ಟೋಬರ್ 17, 2019
24 °C
‘ಬಾಹುಬಲಿ’ ನಿರ್ದೇಶಕ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಸಂದರ್ಶನ

ಮಗನ ಬಗ್ಗೆ ಹೇಳಿಕೊಳ್ಳಲು ರಾಜಮೌಳಿ ಅಪ್ಪನಿಗೆ ಎಷ್ಟೆಲ್ಲಾ ವಿಷಯಗಳಿವೆ...

Published:
Updated:
S S Rajamouli

‘ಬಾಹುಬಲಿ’ ರೂಪುಗೊಳ್ಳುವುದರ ಹಿಂದೆ ರಾಜಮೌಳಿ ಅವರ ಶ್ರಮ–ಜಾಣ್ಮೆ–ದಿಟ್ಟತನ ಇರುವಂತೆ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರ ಕನಸೂ ಇದೆ. ಈ ವಿಶೇಷ ಸಂದರ್ಶನ 2015ರ ಜುಲೈ 30ರಂದು ಪ್ರಕಟವಾಗಿತ್ತು. ರಾಜಮೌಳಿ ಹುಟ್ಟುಹಬ್ಬದ  ಹಿನ್ನೆಲೆಯಲ್ಲಿ ಇಂದು (ಅ.10) ಮತ್ತೊಮ್ಮೆ ಪ್ರಕಟಿಸಲಾಗಿದೆ.

---

ಕೆ.ವಿ. ವಿಜಯೇಂದ್ರ ಪ್ರಸಾದ್‌ ಹೆಸರನ್ನು ಈಗ ಅನೇಕ ಸಿನಿಪ್ರೇಮಿಗಳು ನೆನಪಿಸಿಕೊಳ್ಳಲು ಕಾರಣವಿದೆ. ಒಂದೂವರೆ ಡಜನ್ನು ಚಿತ್ರಕಥೆಗಳ ಜೊತೆಗೆ ಆರ್‌.ಆರ್‌. ರಾಜಮೌಳಿ ಜನ್ಮದಾತ ಅವರೆನ್ನುವುದು ಈ ನೆನಕೆಗೆ ಕಾರಣ. ‘ಬಾಹುಬಲಿ’ಯ ಯಶಸ್ಸು ಒಂದು ಕಡೆ, ‘ಬಜರಂಜಿ ಭಾಯಿಜಾನ್‌’ ಜಯಭೇರಿ ಇನ್ನೊಂದು ಕಡೆ. ಎರಡೆರಡು ಸಿನಿಮಾಗಳು ಇಷ್ಟು ದೊಡ್ಡ ಮಟ್ಟದಲ್ಲಿ ಗೆದ್ದರೆ ಚಿತ್ರಕತೆಗಾರನಿಗೆ ಖುಷಿಯಾಗದೇ ಇದ್ದೀತೆ. ಖುಷಿಯ ಜೊತೆಗೆ ವಿಪರೀತ ಬ್ಯುಸಿಯೂ ಆಗಿರುವ ವಿಜಯೇಂದ್ರ ಪ್ರಸಾದ್‌ ಬಿಡುವು ಮಾಡಿಕೊಂಡು ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು.


ತಂದೆ ಕೆ.ವಿ.ವಿಜಯ್‌ಪ್ರಸಾದ್ ಅವರೊಂದಿಗೆ ಎಸ್‌.ಎಸ್‌.ರಾಜಮೌಳಿ

ಇಪ್ಪತ್ತೇಳು ವರ್ಷಗಳ ಹಿಂದೆ ‘ಜಾನಕಿ ರಾಮುಡು’ ತೆಲುಗು ಸಿನಿಮಾಗೆ ಚಿತ್ರಕಥೆ ಬರೆಯುವುದರಿಂದ ನೀವು ಖಾತೆ ತೆರೆದಿದ್ದು. ಅಂದಿನಿಂದ ಪದೇಪದೇ ರಾಮಾಯಣ, ಮಹಾಭಾರತದ ಉಪಕಥೆಗಳನ್ನು ಹೋಲುವ ಒನ್‌ಲೈನರ್‌ಗಳು ನಿಮ್ಮ ಸಿನಿಮಾಗಳಲ್ಲಿ ಎದ್ದುಕಾಣುತ್ತಿವೆ. ಇದೇಕೆ ಹೀಗೆ?
ಚಿಕ್ಕಂದಿನಿಂದ ಮನೆಯಲ್ಲಿ ಅಪ್ಪ–ಅಮ್ಮ, ತಾತ–ಅಜ್ಜಿ ಹೇಳಿದ್ದೇ ಪುರಾಣದ ಕಥೆಗಳನ್ನು. ಅವುಗಳನ್ನು ಕೇಳಿದ ಭಾಗ್ಯಶಾಲಿ ಕಿವಿಗಳಿವು. ತಲೆಯಲ್ಲಿ ಆಗಿನಿಂದಲೂ larger than life ಪಾತ್ರಗಳನ್ನೇ ಸೃಷ್ಟಿಸಬೇಕು ಎನಿಸುತ್ತಿತ್ತು. ಭಾರತದ ಸಿನಿಮಾಗಳಿಗೆ ಕಥೆಯೂ ಇರಬೇಕು, ಫ್ಯಾಂಟಸಿಯೂ ಸೇರಿರಬೇಕು. ಅದನ್ನು ದೊಡ್ಡದಾಗಿ ತೋರಿಸುವ ಅವಕಾಶ ಈಗೀಗ ಹೆಚ್ಚಾಗಿ ಕೂಡಿಬರುತ್ತಿದೆ. ಅದರ ಫಲವೇ ಇಂಥ ಕಥೆಗಳು. ನಾನು ಕೇಳಿದ ಕಥೆಗಳೇ ಬೇರೆ ರೂಪದಲ್ಲಿ ಸಿನಿಮಾ ಆಗಿ ಹೊರಬರುತ್ತಿರಬಹುದು.

‘ಬಾಹುಬಲಿ’ ಚಿತ್ರಕಥೆಯ ಬೀಜ ಬಿತ್ತಿದ್ದು ನೀವೇ? ನಿಮ್ಮ ಮಗ ರಾಜಮೌಳಿ ಅದನ್ನು ಬೆಳೆಸಿದ್ದು ಹೇಗೆ?
ನಾನು ಆಗೀಗ ಕಥೆಗಳನ್ನು ಹೇಳುತ್ತಲೇ ಇರುತ್ತೇನೆ. ‘ಬಾಹುಬಲಿ’ ಕಥೆಯೂ ಅವುಗಳಲ್ಲಿ ಒಂದು. ಅದನ್ನು ರಾಜಮೌಳಿ ಚಿತ್ರಕಥೆಯಲ್ಲಿ ತೋರಲು ಆಯ್ಕೆ ಮಾಡಿಕೊಂಡ ಮಾರ್ಗ ಅವನದ್ದೇ. ಅದರಲ್ಲಿ ಅವನು ದಿನೇದಿನೇ ಪಳಗುತ್ತಿದ್ದಾನೆ.

ಇದನ್ನೂ ಓದಿ: ಬಾಹುಬಲಿ ಗೆಲುವಿಗೆ ಕಾರಣಗಳೇನು?

ಇಡೀ ಚಿತ್ರಕಥೆಯನ್ನು ಬರೆದು ಮುಗಿಸಲು ಎಷ್ಟು ಸಮಯ ಹಿಡಿಯಿತು?
ಮೂರು ತಿಂಗಳು ಬರೆಯಲು ಬೇಕಾಯಿತು. ಇನ್ನೊಂದು ತಿಂಗಳು ತಿದ್ದಲು ಸಾಕಾಯಿತು. ಆಮೇಲಿನದ್ದು ಚಿತ್ರೀಕರಣದ ಕಷ್ಟಗಳು. ಇಷ್ಟೊಂದು ದೊಡ್ಡ ಬಜೆಟ್‌ನ ಸಿನಿಮಾ ಮಾಡಲು ಹೊರಟಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ರಾಜಮೌಳಿ ಸ್ಕ್ರಿಪ್ಟ್‌ಗೆ ಬದ್ಧರಾಗಿಯೇ ಸಿನಿಮಾ ನಿರ್ದೇಶಿಸಿದರೋ? ಚಿತ್ರೀಕರಣಕ್ಕೆ ಹೋದಮೇಲೆ ಏನಾದರೂ ತಿದ್ದುಪಡಿ ಮಾಡಬೇಕಾಯಿತೋ?
ಚಿತ್ರಕಥೆಯಲ್ಲಿ ಏನೂ ಬದಲಾವಣೆ ಮಾಡಲಿಲ್ಲ. ಆದರೆ, ಅಲ್ಲಲ್ಲಿ ಫೈನ್‌ಟ್ಯೂನಿಂಗ್‌ ಮಾಡುವುದು, ದೃಶ್ಯದ ಬೆರಗು ಹೆಚ್ಚಿಸುವುದು ಆಗಿದೆ. ನಾಯಕಿ ತಮನ್ನಾ ಇರುವಿಕೆಯನ್ನು ದಾಟಿಸುವ ‘ಮಾಸ್ಕ್’ ಬಂದು ಜಲಪಾತದತ್ತ ಬೀಳುವ  ಸನ್ನಿವೇಶ ಇದೆಯಲ್ಲ; ಅದನ್ನು ಚಿತ್ರೀಕರಣಕ್ಕೆ ಹೋದಾಗ ಸುಧಾರಣೆ ಮಾಡಿದೆವು. ಆ ಮಾಸ್ಕ್‌ ಬಳಸಿ, ನಾಯಕನು ನಾಯಕಿಯ ಚಿತ್ರ ಹೀಗಿರಬಹುದೇ ಎಂದು ಬಿಡಿಸುವ ಸನ್ನಿವೇಶ ಅಲ್ಲಿ ಆದ ಸುಧಾರಣೆ. ಇಂಥ ಚಿಕ್ಕಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ.

‘ಬಾಹುಬಲಿ’ಯ ಗೆಲುವಿಗೆ ಏನು ಕಾರಣವೆಂದು ನಿಮಗನ್ನಿಸುತ್ತದೆ? ಪ್ರೇಕ್ಷಕರ ನಾಡಿಮಿಡಿತವನ್ನು ಅರಿಯಲು ನೀವು ವಿಶೇಷವಾಗಿ ಏನನ್ನಾದರೂ ಮಾಡುತ್ತೀರಾ?
ಸಿನಿಮಾ ಎನ್ನುವುದು ಮ್ಯಾಜಿಕ್‌. ಪ್ರೇಕ್ಷಕರ ನಾಡಿಮಿಡಿತ ಅರಿಯಲು ಏನು ಮಾಡಬೇಕು ಎನ್ನುವುದು ನನಗಂತೂ ಗೊತ್ತಿಲ್ಲ. ಸದಾ ನಾವು ಕಾಣುವ ಜನರಿಗಿಂತ ವಿಶೇಷ ಎನ್ನಿಸುವ ಪಾತ್ರಗಳನ್ನು ಸೃಷ್ಟಿಸುವುದರಲ್ಲೇ ನನಗೆ ಮಜಾ. ಸಿನಿಮಾ ಗೆದ್ದಾಗ ನಮ್ಮ ಯೋಚನೆಗೆ ಬಲ ಬಂದಂತಾಗುತ್ತದೆ.

ಇದನ್ನೂ ಓದಿ: ಗೆದ್ದರೆ ಗೆಲ್ಲಬೇಕು ‘ಬಾಹುಬಲಿ’ಯಂತೆ

‘ಬಜರಂಗಿ ಭಾಯಿಜಾನ್‌’ ಹಿಂದಿ ಸಿನಿಮಾದ ಚಿತ್ರಕಥೆಯೂ ನಿಮ್ಮದೇ. ಅಲ್ಲಿ ರಾಮಾಯಣದ ಹನುಮಂತನನ್ನು ನಾಯಕನ ಪಾತ್ರದ ಆತ್ಮ ಹೋಲುತ್ತದೆ ಅಲ್ಲವೇ?
ಇರಬಹುದು. ಆ ಸಿನಿಮಾಗೆ ನಾನು ಚಿತ್ರಕಥೆ ಬರೆಯಲು ಒಂದು ಘಟನೆ ಸ್ಫೂರ್ತಿ. ಪಾಕಿಸ್ತಾನದ ದಂಪತಿಯ ಹೆಣ್ಣುಮಗುವೊಂದಕ್ಕೆ ಹೃದಯದಲ್ಲಿ ರಂಧ್ರ ಆಗಿತ್ತು. ಅದರ ಶಸ್ತ್ರಚಿಕಿತ್ಸೆಗೆ ಪಾಕಿಸ್ತಾನದ ಆಸ್ಪತ್ರೆಯಲ್ಲಿ 15 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದರಂತೆ. ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಮೂರು ಲಕ್ಷ ರೂಪಾಯಿಗೇ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಆಯಿತು. ನಾವು ಯಾವಾಗಲೂ ಪಾಕಿಸ್ತಾನ, ಭಾರತದ ವಿಷಯ ಬಂದಕೂಡಲೇ ಭಾವುಕರಾಗಿ, ಬ್ಲ್ಯಾಕ್‌ ಅಂಡ್‌ ವೈಟ್‌ ಆಗಿ ವರ್ತಿಸುತ್ತೇವೆ. ಅದನ್ನು ಮೀರಿದ ಬದುಕು ಇದೆ. ಆ ಹೊತ್ತಿನಲ್ಲಿ ಹೊಳೆದದ್ದು ‘ಬಜರಂಗಿ ಭಾಯಿಜಾನ್‌’ ಕಥಾವಸ್ತು. ರಾಕ್‌ಲೈನ್‌ ವೆಂಕಟೇಶ್‌ ಆ ಕಥೆಯನ್ನು ಸಿನಿಮಾ ಆಗಿಸಿದ ಉತ್ತಮ ನಿರ್ಮಾಪಕ. ಅವರು ರಜನೀಕಾಂತ್‌ ಸೇರಿದಂತೆ ಅನೇಕ ಪ್ರಮುಖ ನಟರಿಗೆ ಆ ಕಥೆಯನ್ನು ಹೇಳಿದರು. ಯಾರೂ ಮಾಡದೇ ಇದ್ದಾಗ ಸಲ್ಮಾನ್‌ ಖಾನ್‌ ಅದನ್ನು ಒಪ್ಪಿಕೊಂಡರು. ಫಲಿತಾಂಶ ಈಗ ಕಣ್ಣಮುಂದೆ ಇದೆ.

‘ಬಾಹುಬಲಿ’ಯನ್ನು ಎರಡು ಭಾಗಗಳಾಗಿ ಮಾಡುವ ಯೋಚನೆ ಮೂಡಿದ್ದು ಏಕೆ? ಮೊದಲ ಭಾಗ ನೋಡಿದ ಮೇಲೆ ಏನೇನು ಲೋಪಗಳಿವೆ ಎನ್ನಿಸಿತು?
ಕಥಾಹಂದರವನ್ನು ಸಲೀಸಾಗಿ ಹೇಳಬಹುದಾದರೂ ಅದರ ಕ್ರಮದಲ್ಲಿ ವಿಸ್ತಾರ ದೊಡ್ಡದಾಯಿತು. ಹಾಗಾಗಿ ಮೊದಲೇ ಅದನ್ನು ಎರಡು ಭಾಗಗಳಲ್ಲಿ ಮಾಡುವುದು ಉತ್ತಮ ಎಂದು ನಾವು ಚರ್ಚಿಸಿದ್ದೆವು. ಇನ್ನು ಲೋಪಗಳ ವಿಷಯ. ನೂರಾರು ಲೋಪಗಳು ನನಗೆ ಕಾಣುತ್ತವೆ. ಸುಧಾರಣೆಗೆ ಅವಕಾಶ ಇದ್ದೇ ಇರುತ್ತದೆ. ಮುಂದಿನ ಭಾಗದಲ್ಲಿ ಏನು ತಿದ್ದಿಕೊಳ್ಳಬೇಕು ಎಂದುಕೊಂಡರೂ ಆಮೇಲೂ ಕೊರತೆಗಳು ಕಂಡೇ ಕಾಣುತ್ತವೆ. ಸಿನಿಮಾದ ರೋಚಕತೆಯೇ ಅದು.

ನಾವು ನೋಡಿದ ಸಿನಿಮಾ: ಬಾಹುಬಲಿ 1– ಪ್ರೀತಿಯ ಪುಳಕ ಸಮರ ಕಥಾನಕ

ನಿಮ್ಮ ಹಾಗೂ ನಿಮ್ಮ ಮಗ ರಾಜಮೌಳಿ ನಡುವೆ ಕಥಾಚರ್ಚೆ ಹೇಗೆ ನಡೆಯುತ್ತದೆ. ಇಬ್ಬರಲ್ಲಿ ಯಾರು ಹೆಚ್ಚು ವಾಚಾಳಿಗಳು?
ಇದು ಸೂಕ್ಷ್ಮವಾದ ಹಾಗೂ ನಗು ತರಿಸುವ ಪ್ರಶ್ನೆ. ನಾವಿಬ್ಬರೂ ಚರ್ಚೆಗೆ ತೆರೆದುಕೊಳ್ಳುತ್ತೇವೆ. ನಾನು ಒಂದು ವಿಷಯ ಹೇಳಿದರೆ, ರಾಜಮೌಳಿ ಅದನ್ನು ದೃಶ್ಯ ಸಾಧ್ಯತೆಯ ದೃಷ್ಟಿಯಿಂದ ವಿಸ್ತರಿಸುತ್ತಾನೆ. ಕಥೆ ಹೆಣೆಯುವ ಈ ಪ್ರಕ್ರಿಯೆ ನಮ್ಮಿಬ್ಬರಿಗೂ ಖುಷಿ ಕೊಡುತ್ತದೆ. ಇಬ್ಬರೂ ಆಗೀಗ ವಾಚಾಳಿಗಳೂ ಹೌದು, ಕೇಳುಗರೂ ಹೌದು.

ಕನ್ನಡದಲ್ಲಿ ಸದ್ಯಕ್ಕೆ ಯಾವ ಸಿನಿಮಾಗೆ ಕಥೆ ನೀಡಿದ್ದೀರಿ?
‘ಜಾಗ್ವಾರ್‌’ ಆಯಿತು. ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಅವರಿಗೆ ಒಂದು ಕಥೆ ಕೊಟ್ಟಿದ್ದೇನೆ. ಅದರ ಶೀರ್ಷಿಕೆ ಗೊತ್ತಿಲ್ಲ. ಅವರು ಆಸಕ್ತಿಕರ ನಿರ್ಮಾಪಕ ಎನ್ನುವುದಂತೂ ನಿಜ.

‘ಬಾಹುಬಲಿ 2’ರಲ್ಲಿ ಈಗ ಏನಾದರೂ ಬದಲಾವಣೆ ಮಾಡಿಕೊಳ್ಳುತ್ತಿದ್ದೀರಾ?
ಇಲ್ಲ. ಚಿತ್ರಕಥೆಗೆ ನಾವು ಈಗಲೂ ಬದ್ಧ. ಆಗಲೇ ಹೇಳಿದಂತೆ ಸುಧಾರಣೆಗೆ ಅವಕಾಶ ಇದ್ದೇ ಇರುತ್ತದೆ. 

 

ಇನ್ನಷ್ಟು...

ರಾಜಮೌಳಿ ಅದ್ದೂರಿತನಕ್ಕೆ ಮತ್ತೊಂದು ಉದಾಹರಣೆ; ಮೂರು ದೃಶ್ಯಕ್ಕೆ ₹85 ಕೋಟಿ!
ಅಭಿಮಾನಿಗಳ ಹೋಲಿಕೆ, ರಾಜಮೌಳಿಗೆ ತಲೆನೋವು
ರಾಜಮೌಳಿಯ ಸಿನಿಮಾದಲ್ಲಿ ನಟಿಸುವುದೇ ಅದೃಷ್ಟ: ಆಲಿಯಾ
ದೇವರ ಮಗು ರಾಜಮೌಳಿ: ಸೂಪರ್‌ಸ್ಟಾರ್‌ ರಜನಿಕಾಂತ್‌

 

 

Post Comments (+)