ಭಾನುವಾರ, ಜೂನ್ 20, 2021
26 °C

‘ಸಿರಿಮುಡಿ ಪರಿಕ್ರಮಣ’ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸ್ತ್ರೀ ಶಕ್ತಿಯನ್ನು ದ್ರೌಪ­ದಿ­ಯ ಸಂಕೇತದ ಮೂಲಕ ಕಟ್ಟಿ­ಕೊಟ್ಟಿ­ರುವುದು ‘ಸಿರಿಮುಡಿ ಪರಿ­ಕ್ರಮಣ’ ಮಹಾ­ಕಾವ್ಯದ ಹೆಗ್ಗ­ಳಿಕೆಯಾಗಿದೆ’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.ಮಾಹೇಶ್ವರಿ ಪ್ರಕಾಶನವು ನಗರದ ಜೆ.ಎನ್‌.ಟಾಟಾ ಸಭಾಂಗಣದಲ್ಲಿ ಶನಿ­ವಾರ ಆಯೋಜಿಸಿದ್ದ ಕಾರ್ಯ­ಕ್ರಮ­ದಲ್ಲಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ವಿರಚಿತ ‘ಸಿರಿಮುಡಿ ಪರಿ­ಕ್ರಮಣ’ ಮಹಾಕಾವ್ಯವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.‘ವ್ಯಾಸ ಭಾರತದಲ್ಲಿ ನಿರ್ದಿಷ್ಟ ನಾಯಕರಿಲ್ಲ. ಪಂಪ ಅರ್ಜುನನನ್ನು, ರನ್ನ ಭೀಮನನ್ನು, ಕುಮಾರವ್ಯಾಸ ಕೃಷ್ಣ­ನನ್ನು ನಾಯಕನನ್ನಾಗಿ ಮಾಡಿ­ಕೊಂಡು ಮಹಾ­ಭಾರತ ಕಾವ್ಯವನ್ನು ಪುನರಚಿಸಿ­ದ್ದಾರೆ. ಆದರೆ ಇಲ್ಲಿ ಮೊಯಿಲಿ ಅವರು ದ್ರೌಪದಿಯನ್ನು ನಾಯಕಿ­ಯನ್ನಾಗಿ ಮಾಡಿಕೊಂಡು ಕಾವ್ಯವನ್ನು ರಚಿಸಿ, ಈ ಬಗೆಯ ಗ್ರಹಿಕೆಯಿಂದಲೇ ಕಥಾ­ವಸ್ತುವಿಗೆ ಹೊಸ ಬಗೆಯ ಸಾಧ್ಯ­ತೆ­­ಗಳನ್ನು ಒದಗಿಸಿದ್ದಾರೆ’ ಎಂದರು.‘ರಾಮಾಯಣ ಮತ್ತು ಮಹಾ­ಭಾರತ ಕಾವ್ಯಗಳು ನಮ್ಮ ದೇಶ­ವನ್ನು ಅತಿ­ಯಾಗಿ ಕಾಡಿದ ಕಾವ್ಯಗಳು. ಅದರಲ್ಲೂ ಮಹಾಭಾರತ ಕಾಡಿದಷ್ಟು ಯಾವ ಮಹಾಕಾವ್ಯವೂ ಕಾಡಿಲ್ಲ.  ಅದು ಹತ್ತು ಸಾವಿರ ವರ್ಷಗಳಿಂದ ಹೊಸ ರೂಪು ಪಡೆದು ನಮ್ಮ ಮುಂದೆ ನಿಲ್ಲುತ್ತದೆ. ಮೊದಲು ಆರಂಭದಲ್ಲಿ 7,000 ಶ್ಲೋಕಗಳಿಂದ ಕಾವ್ಯವು ಇಂದು 1,49,000 ಶ್ಲೋಕಗಳನ್ನು ಹೊಂದಿದೆ’ ಎಂದು ಹೇಳಿದರು.ವಿಮರ್ಶಕ ನರಹಳ್ಳಿ ಬಾಲ­ಸುಬ್ರಹ್ಮಣ್ಯ ಮಾತನಾಡಿ, ‘ರಾಮಾ­ಯಣ ಮತ್ತು ಮಹಾಭಾರತ ಕಾವ್ಯ­ಜಗ­ತ್ತಿನ ಎರಡು ಪ್ರಮುಖ ಮಾದ­ರಿಗಳನ್ನು ಪ್ರತಿನಿಧಿಸುತ್ತವೆ. ರಾಮಾ­ಯಣ ಮೌಲ್ಯ ಪ್ರತಿ­ಪಾದನೆಯ ಕಾವ್ಯ­ವಾದರೆ, ಮಹಾ­ಭಾರತ ಮೌಲ್ಯಗಳ ಸಂಘರ್ಷದ ಕಥೆ­ಯಾಗಿದೆ. ಮಹಾ­ಭಾರತವು ಕಾಲಕ್ಕೆ ತಕ್ಕಂತೆ ಪುನರ್‌ ಸೃಷ್ಟಿಯಾಗುತ್ತಿದೆ. ಮೊಯಿಲಿ ಅವರು ‘ಸಿರಿಮುಡಿ ಪರಿ­ಕ್ರಮಣ’ ದ ಮೂಲಕ ಮಹಾ­ಭಾರತವನ್ನು ಆಧುನಿಕ ನೆಲೆಯಲ್ಲಿ ಗ್ರಹಿಸಿದ್ದಾರೆ’ ಎಂದರು.‘ಮೊಯಿಲಿ ಅವರಿಗೆ ಹೆಣ್ಣು ಪೊರೆ­ಯುವ ಶಕ್ತಿ ಮತ್ತು ಪ್ರತಿಭಟಿಸುವ ಚೈತನ್ಯವಾಗಿದ್ದಾಳೆ, ದ್ರೌಪದಿಯು ಇಲ್ಲಿ ಎರಡೂ ಧೀಃಶಕ್ತಿಗಳ ಸಂಗಮ­ವಾಗಿ ರೂಪುಗೊಂಡಿದ್ದಾರೆ. ದ್ರೌಪದಿ ಎದು­ರಿ­ಸುವ ಸಂಘರ್ಷ ಪುರುಷ ಪ್ರಧಾನ ರೂಢಿಗತ ಜಗತ್ತಿನ ಅನೇಕ ನಂಬಿಕೆ­ಗಳನ್ನು ಪ್ರಶ್ನಿಸುತ್ತದೆ’ ಎಂದು ನುಡಿದರು.ಲೇಖಕ ಕಬ್ಬಿನಾಲೆ ವಸಂತ ಭಾರ­ದ್ವಾಜ ಕೃತಿಯ ಕುರಿತು ಮಾತನಾಡಿ, ‘ಮಹಾಭಾರತದ ಕಥಾಭಿವ್ಯಕ್ತಿಯನ್ನು ಹೊಸ­ದಾದ ರೂಪದಲ್ಲಿ ಹೇಳಿದ್ದಾರೆ. ಇಲ್ಲಿ ದ್ರೌಪದಿ ನಾಯಕಿ­ಯಾಗಿ­ರುವು­ದರಿಂದ, ಹೆಣ್ಣಿನ ಅಂತರಂಗದಿಂದ ನೋಡಲು ಸಾಧ್ಯವಾಗಿದೆ’ ಎಂದರು.‘ಮಹಾಭಾರತದ ಮೂಲ ಪ್ರೇರಣೆ ಕೃಷ್ಣ­ನಾದರೆ, ಅದನ್ನು ಪ್ರತಿನಿಧಿ­ಸುವವಳು ದ್ರೌಪದಿ. ಕುರುಕ್ಷೇತ್ರ ಯುದ್ಧ ನಾಳೆಗಾಗಿ ಇಂದು ನಡೆದ ಮಹಾ­­­ಯಜ್ಞವಾಗಿದೆ’ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಲತಿ ಮೊಯಿಲಿ, ನರಹಳ್ಳಿ ಬಾಲಸುಬ್ರಹ್ಮಣ್ಯ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.