ಗುರುವಾರ , ಜೂನ್ 24, 2021
28 °C

‘ಸುಗ್ಗಿ–ಹುಗ್ಗಿ’ಯಲ್ಲಿ ಮಿಂದೆದ್ದ ಗ್ರಾಮೀಣರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂತೇಮರಹಳ್ಳಿ: ಸಮೀಪದ ಉಮ್ಮತ್ತೂರು ಗ್ರಾಮದಲ್ಲಿ ಸೋಮವಾರ ಗ್ರಾಮೀಣ ಜನಪದ ಕಲೆ, ಸಂಸ್ಕೃತಿ ಅನಾವರಣಗೊಂಡಿತು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜನಪದ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸಲು ಸುಗ್ಗಿ ಹುಗ್ಗಿ ಹೆಸರಿನಡಿ ಹಮ್ಮಿಕೊಂಡಿದ್ದ ಗ್ರಾಮೀಣ ಸಂಸ್ಕೃತಿ ಸಂಭ್ರಮ ಗ್ರಾಮದಲ್ಲಿ ಮೇಳೈಸಿತ್ತು.ಬೆಳಿಗ್ಗೆ ಮಂಟೇಸ್ವಾಮಿ ದೇವಾಲಯದ ಮುಂಭಾಗ ಚಾಲನೆಗೊಂಡ ವೈವಿಧ್ಯಮಯ ಜನಪದ ಕಲಾ ಪ್ರಕಾರಗಳ ಮೆರವಣಿಗೆ ಸತತವಾಗಿ 3 ತಾಸು ನಡೆಯಿತು. ಒಂದು ಕಿ.ಮೀ. ಉದ್ದಕ್ಕೂ ಹೆಚ್ಚು ಇದ್ದ ಕಲಾತಂಡಗಳ ಮೆರವಣಿಗೆಯು ನೋಡುಗರಿಗೆ ಮೈಸೂರಿನ ಇತಿಹಾಸ ಪ್ರಸಿದ್ಧ ಮಿನಿ ಜಂಬೂಸವಾರಿ ಮೆರವಣಿಗೆಯಂತೆ ಭಾಸವಾಯಿತು.ನಂದಿಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ಆರಂಭವಾದ ಮೆರವಣಿಗೆಗೆ ದಾರಿಯುದ್ದಕ್ಕೂ ಅಭೂತಪೂರ್ವ ಸಹಕಾರ ದೊರೆಯಿತು. ನಾದಸ್ವರ, ತಮಟೆ ವಾದನ, ಡೊಳ್ಳು, ನಗಾರಿ ಕುಣಿತ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.ಗೊರವರ ಕುಣಿತದ ನೇತೃತ್ವವನ್ನು ಹಿರಿಯ ಕಲಾವಿದ ಪುಟ್ಟಮಲ್ಲೇಗೌಡ ಅವರು ವಹಿಸಿದ್ದು ವಿಶೇಷವಾಗಿತ್ತು. ಮತ್ತೊಂದೆಡೆ ಬಿಳಿಗಿರಿರಂಗನಬೆಟ್ಟದ ಸೋಲಿಗ ಕಲಾವಿದರ ಪಿನಾಸಿ ನೃತ್ಯದ ಸೊಬಗು ಸವಿಯುವ ಅವಕಾಶ ಗ್ರಾಮೀಣರಿಗೆ ಲಭಿಸಿತು.ಮಾತಂಗ ತಮಟೆ ಕಲಾವಿದರ ಅಬ್ಬರಕ್ಕೆ ಮರಗಾಲು ಕುಣಿತ ಕಲಾವಿದರು ಸಾಥ್ ನೀಡಿದರು. ಜತೆಗೆ ಸೋಮನ ಕುಣಿತ, ಪೂಜಾ ಕುಣಿತ, ವೀರಗಾಸೆ ತಂಡದ ಕಲಾವಿದರು ಸಹ ಬಿರುಬಿಸಿಲನ್ನು ಲೆಕ್ಕಿಸದೆ ಉತ್ಸಾಹದಿಂದ ಕುಣಿದು ಕುಪ್ಪಳಿಸಿದರು.

ಬಂಡಿಗೆರೆಯ ಹುಲಿವೇಷ ತೊಟ್ಟ ಕಲಾವಿದರು ನೆರೆದು ನಿಂತಿದ್ದ ಹಿರಿಯ ತಲೆಮಾರಿನ ಜನರನ್ನು ಹಳೆಯ ನೆನಪುಗಳತ್ತ ಜಾರುವಂತೆ ಮೋಡಿ ಮಾಡಿದರು.ಸಾಂಪ್ರದಾಯಿಕ ಕಲಾ ಪ್ರಕಾರಗಳಾದ ಕೋಲಾಟ, ಬೀಸುಕಂಸಾಳೆ ಕಲಾವಿದರು ಕೂಡ ವಿವಿಧ ಭಂಗಿಯಲ್ಲಿ ನಿಂತು ತಮ್ಮ ನೈಪುಣ್ಯತೆ ಪ್ರದರ್ಶಿಸಿದರು. ಮತ್ತೊಂದೆಡೆ ಹೂವು ಬಣ್ಣದ ವಸ್ತುಗಳಿಂದ ಅಲಂಕೃತಗೊಂಡ ಎತ್ತಿನ ಬಂಡಿಗಳು, ರಾಸುಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದವು.ಪೂರ್ಣ ಕುಂಭ ಕಲಶ ಹೊತ್ತ ಹೆಂಗೆಳೆಯರು ಮೆರವಣಿಗೆಯಲ್ಲಿ ಮುಂಚೂಣಿ ಯಲ್ಲಿದ್ದರು. ಇನ್ನೂ ಹಲವು ಹೆಣ್ಣುಮಕ್ಕಳು ಸಾಂಪ್ರದಾಯಿಕ ಉಡುಪು ಧರಿಸಿ ಗ್ರಾಮೀಣ ಹಬ್ಬದ ವೇಳೆ ಮಾಡುವ ತಂಬಿಟ್ಟಿನ ಆರತಿ ಹಿಡಿದು ಸಾಗಿದರು. ಶಾಲಾ ಮಕ್ಕಳು ಬ್ಯಾಂಡ್ ವಾದನದ ಮೂಲಕ ಹೆಜ್ಜೆ ಹಾಕಿ ಬೆರಗು ಮೂಡಿಸಿದರು.ಮೆರವಣಿಗೆಯ ಕೊನೆಯಲ್ಲಿ ಎತ್ತುಗಳ ಬದಲು ಜನರೇ ಬಂಡಿಯಲ್ಲಿ ಹೂಗಳಿಂದ ಅಲಂಕೃತಗೊಂಡಿದ್ದ ಮಂಟಪದಲ್ಲಿ ಜೈ ಭುವನೇಶ್ವರಿ ದೇವಿಯನ್ನು ಕುಳ್ಳರಿಸಿ ಮೆರವಣಿಗೆ ಮಾಡಿದರು. ಇಡೀ ಊರು ತಳಿರುತೋರಣ, ಬಾಳೆಕಂದುಗಳಿಂದ ಸಿಂಗಾರಗೊಂಡಿತ್ತು. ಮನೆಯ ಅಂಗಳದ ಮುಂದೆ ಬಣ್ಣದ ರಂಗೋಲಿ ಇಟ್ಟು ಜನ ಸಂಭ್ರಮಿಸಿದರು.

ಮಧ್ಯಾಹ್ನದ ವೇಳೆಗೆ ಉರುಕಾತೇಶ್ವರಿ  ದೇವಾಲಯದ ಬಳಿ ಮೆರವಣಿಗೆ ಮುಕ್ತಾಯಗೊಂಡಿತು. ಬಳಿಕ ಅಲ್ಲಿಯೇ ಸಿದ್ಧಪಡಿಸಲಾಗಿದ್ದ ವೇದಿಕೆಯಲ್ಲಿ ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಇನ್ನಷ್ಟು ಗ್ರಾಮೀಣ ಸೊಗಡು ಪರಿಚಯಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಭತ್ತ, ರಾಗಿ, ಜೋಳ, ತೆಂಗಿನಕಾಯಿ, ಸಿಹಿಕುಂಬಳ, ಮೆಣಸಿನಕಾಯಿ, ಹುಣಿಸೆಹಣ್ಣು ಸೇರಿದಂತೆ ಇತರೇ ದವಸಧಾನ್ಯಗಳ ರಾಶಿಗೆ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಹಿಳೆಯರು ಪೂಜೆ ಸಲ್ಲಿಸಿದರು.ಇದೇ ವೇಳೆ ಗ್ರಾಮೀಣರು ನಿತ್ಯದಲ್ಲಿ ಬಳಸುವ ಪರಿಕರಗಳಾದ ಸೇರು, ಕೊಳಗ, ಕೊಂಗ, ನೇಗಿಲು, ಒನಕೆ, ಬೀಸುಕಲ್ಲು, ಒತ್ತು ಶ್ಯಾವಿಗೆಗೆ ಬಳಸುವ ಮರದ ಒರಳು ಸೇರಿದಂತೆ ಅಪರೂಪದ ವಸ್ತುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು ಗಮನ ಸೆಳೆಯಿತು.ಗ್ರಾಮೀಣ ಸಂಸ್ಕೃತಿ ಉಳಿಸಲು ಸಲಹೆ

ಸಂತೇಮರಹಳ್ಳಿ: ‘ಗ್ರಾಮೀಣರು ಮೂಲ ಸಂಸ್ಕೃತಿ, ಪರಂಪರೆ ಮರೆಯಬಾರದು’ ಎಂದು ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸಮೀಪದ ಉಮ್ಮತ್ತೂರಿನಲ್ಲಿ ನಡೆದ ಸುಗ್ಗಿ ಹುಗ್ಗಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕತೆಯ ಭರಾಟೆಯಲ್ಲಿ ಎಲ್ಲವೂ ಬದಲಾಗುತ್ತಿದೆ. ಗ್ರಾಮೀಣರು ಇದಕ್ಕೆ ಮಾರುಹೋಗುತ್ತಿರುವುದು ಸರಿಯಲ್ಲ. ಮೂಲ ಸಂಸ್ಕೃತಿ ಆಚಾರ ವಿಚಾರಗಳನ್ನು ಗ್ರಾಮೀಣರು ತಪ್ಪದೆ ಉಳಿಸಬೇಕು ಎಂದರು.ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎನ್. ಅಣ್ಣೇಗೌಡ ಮಾತನಾಡಿ, ಗ್ರಾಮೀಣ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಪರಿಚಯಿಸಿ ಉಳಿಸುವ ಉದ್ದೇಶದಿಂದ ಸರ್ಕಾರ ಸುಗ್ಗಿ ಹುಗ್ಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.

ಆಧುನಿಕ ಬದುಕು ನಾಗಾಲೋಟದಲ್ಲಿ ಸಾಗಿದೆ. ಪ್ರಾಚೀನ ಆಚಾರ ವಿಚಾರಗಳ ಮಹತ್ವವನ್ನು ಮನವರಿಕೆ ಮಾಡಿಕೊಟ್ಟು ಸಂಸ್ಕಾರ ಬೆಳೆಸಲು ಗ್ರಾಮೀಣ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮಗಳು ನೆರವಾಗಲಿವೆ ಎಂದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪಿ. ಮಹಾಲಿಂಗಸ್ವಾಮಿ, ಉಪಾಧ್ಯಕ್ಷೆ ಪಾರ್ವತಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ಬಸವರಾಜು, ಉಪಾಧ್ಯಕ್ಷೆ ಸುಧಾ ಮಲ್ಲಣ್ಣ, ತಾಲ್ಲೂಕು ಪಂಚಾಯಿತಿ ಸದಸ್ಯೆ ಮಂಜುಳಾ ಚಂದ್ರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.