ಶನಿವಾರ, ಮಾರ್ಚ್ 6, 2021
21 °C
ನಾದದ ಬೆನ್ನೇರಿ

‘ಸುನಾದ’ ಎಂಬ ಹೆಮ್ಮರ

ಉಮಾ ಅನಂತ್‌ Updated:

ಅಕ್ಷರ ಗಾತ್ರ : | |

‘ಸುನಾದ’ ಎಂಬ ಹೆಮ್ಮರ

‘ಸುನಾದ’ ಎಂಬುದು ಸಂಗೀತದ ಹೆಮ್ಮರ. ‘ಸುನಾದ ಕಲ್ಚರಲ್‌ ಸೆಂಟರ್’ನಲ್ಲಿ ಕಲಿತ ಸುಮಾರು ನೂರಕ್ಕೂ ಹೆಚ್ಚು ಶಿಷ್ಯಂದಿರು ವಿದ್ವತ್‌ ಮುಗಿಸಿ ಇದೀಗ ತಮ್ಮದೇ ಆದ ಸಂಗೀತ ಶಾಲೆ ನಡೆಸಿ ನೂರಾರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ.ಇದರ ರೂವಾರಿ ವಿದುಷಿ ಮೈಸೂರು ನಾಗಮಣಿ ಶ್ರೀನಾಥ್‌. ಇವರು ನಾಡಿನಾದ್ಯಂತ ನೂರಾರು ಶಿಷ್ಯವರ್ಗವನ್ನು ತಯಾರು ಮಾಡಿದ್ದು, ಸುನಾದ ಸಂಸ್ಥೆಯು ಸಂಗೀತದ ಬೇರುಗಳನ್ನು ಆಳವಾಗಿ ಊರಿದೆ. ನಾಡಿನಲ್ಲಷ್ಟೇ ಅಲ್ಲದೆ ಸಂಗೀತ ಸುಗಂಧ ವಿದೇಶಗಳಿಗೂ ಪಸರಿಸಿದೆ.ಪ್ರಶಾಂತ ನಗರದಲ್ಲಿರುವ ‘ಸುನಾದ ಕಲ್ಚರಲ್‌ ಸೆಂಟರ್‌’ನಲ್ಲಿ ಉನ್ನತ ಮಟ್ಟದ ಸಂಗೀತ ಶಿಕ್ಷಣ ಸಿಗುತ್ತದೆ. ಇಲ್ಲಿ ಕಲಿತ ಬಹುತೇಕ ಎಲ್ಲರೂ ಕಛೇರಿ ನೀಡುವ ಕಲಾವಿದರಾಗಿ ರೂಪುಗೊಂಡಿದ್ದಾರೆ. ಇಲ್ಲಿ ವಿದುಷಿ ನಾಗಮಣಿ ಶ್ರೀನಾಥ್‌ ಅವರು ವಿದ್ವತ್‌ ಹಂತದ ಶಿಷ್ಯರಿಗೆ ಕರ್ನಾಟಕ ಸಂಗೀತ ಪಾಠ ಮಾಡುತ್ತಾರೆ. ಜೂನಿಯರ್‌ ಮತ್ತು ಸೀನಿಯರ್‌ ಹಂತದ ಮಕ್ಕಳಿಗೆ ಇಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳೇ ಕಲಿಸುತ್ತಿದ್ದಾರೆ. ನಾಗಮಣಿ ಅವರು ಬೆಂಗಳೂರು ಮಾತ್ರವಲ್ಲದೆ ವಿದೇಶಗಳಲ್ಲೂ ಹಲವಾರು ಶಿಷ್ಯರನ್ನು ಹೊಂದಿದ್ದು, ಆನ್‌ಲೈನ್‌ನಲ್ಲೂ ಪಾಠ ಮಾಡುತ್ತಾರೆ.ಇಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮಾತ್ರ ಹೇಳಿಕೊಡಲಾಗುತ್ತಿದ್ದು, ಕಳೆದ 40 ವರ್ಷಗಳಿಂದ ಸಂಗೀತ ಶಾಲೆ ಕಾರ್ಯನಿರ್ವಹಿಸುತ್ತಿದೆ. ಪ್ರತ್ಯೇಕ ಪಾಠ ಮತ್ತು ಗುಂಪಿನಲ್ಲೂ ಸಂಗೀತ ಶಿಕ್ಷಣ ಲಭ್ಯ.

ನಾಗಮಣಿ ಅವರ ಬಳಿ ಕಲಿತ ಪಿ. ರಮಾ, ಪಿ. ಚಂದ್ರಿಕಾ, ಉಮಾ ಕುಮಾರ್‌, ಭಾಗೀರತಿ, ದೀಪ್ತಿ ಶ್ರೀನಾಥ್‌, ಭಾಗ್ಯಲಕ್ಷ್ಮಿ, ಆಶಾ ಜಗದೀಶ್‌, ಎಚ್‌.ಎಸ್‌. ರಾಜಲಕ್ಷ್ಮಿ, ಅಶ್ವಿನಿ, ಶಶಿಕಲಾ, ಉಷಾ ರಾಜನ್‌, ನಂದಿನಿ ರಾವ್‌, ವರುಣ್‌ ಕೆ, ಸೀಮಾ ಕಸ್ತೂರಿ, ದೀಪಾ ಲಕ್ಷ್ಮಿ, ಗಿರಿಜಾ ಹರಿ ಮುಂತಾದವರು ಈಗಾಗಲೇ ಉತ್ತಮ ಕಲಾವಿದರಾಗಿದ್ದು, ದೇಶ ವಿದೇಶಗಳಲ್ಲಿ ಅನೇಕ ಕಛೇರಿಗಳನ್ನು ನೀಡಿದ್ದಾರೆ.ಸಂಗೀತದ ಪ್ರಾರಂಭದ ಅಭ್ಯಾಸ ಗಾನವನ್ನು ಕಲಿಸುವವರು ಅನೇಕರು. ಆದರೆ ಉನ್ನತ ಸಂಗೀತ ಶಿಕ್ಷಣ ನೀಡುವ ಪ್ರೌಢ ಶಿಕ್ಷಣಕ್ಕಾಗಿ ಗುರುಗಳು ವಿರಳ. ಗುಣಮಟ್ಟದ ಸಂಗೀತದ ಜೊತೆಗೆ ಅದಕ್ಕೆ ಸಂಬಂಧಿಸಿದ ವಿವಿಧ ಆಯಾಮಗಳನ್ನು ಕಲಿಸಿ ಪರಿಪೂರ್ಣ ಕಲಾವಿದರನ್ನಾಗಿ ರೂಪಿಸುವ ಈ ಸಂಸ್ಥೆ ಬಹಳ ಅಪರೂಪದ್ದು ಎನ್ನಬಹುದು.ಹತ್ತು ಹಲವು ಕಾರ್ಯಕ್ರಮ

ಸುನಾದ ಕಲ್ಚರಲ್ ಸೆಂಟರ್ ಹತ್ತು- ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಕಳೆದ ನಲವತ್ತು ವರ್ಷಗಳಿಂದ ಆಸಕ್ತ ಸಂಗೀತಾಭ್ಯಾಸಿಗಳಿಗೆ ಹೆಚ್ಚಿನ ಜ್ಞಾನಾರ್ಜನೆಗಾಗಿ ಸಂಗೀತ ಶಿಬಿರ, ವಿಚಾರ ಸಂಕಿರಣ, ಉಪನ್ಯಾಸ, ಸಂಗೀತ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುತ್ತಾ ಬಂದಿದೆ. ಲಾಲ್ಗುಡಿ ಜಯರಾಮನ್, ತಿಟ್ಟೆಕೃಷ್ಣ ಅಯ್ಯಂಗಾರ್, ಟಿ.ಆರ್.ಸುಬ್ರಮಣ್ಯಂ, ಟಿ.ಎನ್.ಶೇಷಗೋಪಾಲನ್, ಗೌರಿಕುಪ್ಪುಸ್ವಾಮಿ ಮುಂತಾದ ಸಂಗೀತ ದಿಗ್ಗಜರಿಂದ ಸಂಗೀತ ಶಿಬಿರಗಳನ್ನು ಏರ್ಪಡಿಸಿ, ಉದಯೋನ್ಮುಖ ಸಂಗೀತಾಸಕ್ತರಿಗೆ ಮಾರ್ಗದರ್ಶನ ನೀಡಿದೆ. ಈಗಲೂ ಸಂಗೀತ ಕುರಿತ ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಲೇ ಇದೆ.ಕರ್ನಾಟಕ ಶಾಸ್ತ್ರೀಯ ಸಂಗೀತದ ಲಕ್ಷ್ಯ -ಲಕ್ಷಣವನ್ನು ಎಳೆಎಳೆಯಾಗಿ ಬೋಧಿಸುವ ಧ್ವನಿ ಸುರುಳಿಗಳನ್ನು ಬಿಡುಗಡೆ ಮಾಡಿರುವುದು ಸಂಸ್ಥೆಯ ಹೆಗ್ಗಳಿಕೆ. ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗೆ ನಿಗದಿ ಪಡಿಸಿರುವ ಪಠ್ಯವನ್ನು ಧ್ವನಿಸುರುಳಿಯಲ್ಲಿ ಬೋಧಿಸಿ, ಸಂಗೀತಾಭ್ಯಾಸಿಗಳ ಕಲಿಕೆಗೆ ಸಹಾಯಕವಾಗಿದೆ.ಕಲಿಸುವ ಗುರುಗಳು ಲಭ್ಯವಿಲ್ಲದೇ ಇರುವ ಸನ್ನಿವೇಶ, ಕಲಿತೂ ನೆನಪಿನಲ್ಲಿ ಇರದೇ ಇರುವ ಸಂದರ್ಭದಲ್ಲಿ ಕಲಿಯಲು ಹಂಬಲಿಸುವ ಸಂಗೀತಾಭಿಲಾಷಿಗಳಿಗೆ ಈ ಧ್ವನಿ ಮುದ್ರಣ ಸಹಾಯಕ. ಸ್ವರ ಪ್ರಸ್ತಾರವನ್ನು ಹೊಂದಿರುವ ಪುಸ್ತಕವೂ ಧ್ವನಿ-ಮುದ್ರಣದೊಂದಿಗೆ ದೊರಕುವಂತೆ ಮಾಡಿರುವ ಪ್ರಯತ್ನ ಶ್ಲಾಘನೀಯ.ಕರ್ನಾಟಕ ಸಂಗೀತದ ವರ್ಣಗಳು, ಕೃತಿಗಳು, ಭಜನೆಗಳು, ಜಾವಳಿ, ಪದ, ತಿಲ್ಲಾನಗಳು ರಾಗಾಲಾಪನೆ, ಸ್ವರ ಕಲ್ಪನೆ, ನೆರವಲ್, ರಾಗಂ-ತಾನಂ-ಪಲ್ಲವಿ, ಸಂಗೀತ ಶಾಸ್ತ್ರ, ರಾಗ ಲಕ್ಷಣ ಇವುಗಳ ವಿವರಣೆಯೊಂದಿಗೆ ಎಲ್ಲವನ್ನೂ ಕಲಿಸುವ ಸಮಗ್ರ ಹೊತ್ತಿಗೆಯನ್ನು ಹೊರತರಲಾಗಿದೆ. ೫೦೦ ಗಂಟೆಗಳಷ್ಟು ಅವಧಿಯ ಧ್ವನಿ ಮುದ್ರಣವು ಈಗಾಗಲೇ ಲೋಕಾರ್ಪಣೆಯಾಗಿದೆ. ಜತೆಗೆ ಇದರ ಪರಿಕಲ್ಪನೆ, ನಿರ್ದೇಶನ ನಾಗಮಣಿ ಶ್ರೀನಾಥ್ ಅವರದ್ದೇ.ಪ್ರತಿಭಾನ್ವಿತ ಯುವ ಕಲಾವಿದರಿಗೆ ವೇದಿಕೆ ನೀಡಿರುವ ಸಂಸ್ಥೆಯು ಹೊರಗಿನ ಊರುಗಳಲ್ಲಿಯೂ ಅನೇಕ ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಪುತ್ತೂರು ಹೀಗೆ ೪ ಪ್ರಾಂತ್ಯಗಳಲ್ಲಿ ಪ್ರತಿಭಾನ್ವೇಷಣೆ ಎಂಬ ಉತ್ಸವವನ್ನು ನಡೆಸಿ, ಆ ಪ್ರಾಂತ್ಯಗಳಿಂದ ಆರಿಸಲಾದ ಪ್ರತಿಭಾವಂತರಿಗೆ ಅಂತಿಮ ಸುತ್ತಿನಲ್ಲಿ ಭಾಗವಹಿಸುವ ಅವಕಾಶವನ್ನು ನೀಡುತ್ತದೆ. ಅಂತಿಮ ಸುತ್ತಿನಲ್ಲಿ ನಾಡಿನ ಹಿರಿಯ ಕಲಾವಿದರಿಂದ ಆಯ್ಕೆಯಾದ ೨೦ ಯುವ ಕಲಾವಿದರಿಗೆ ರಾಜ್ಯದಾದ್ಯಂತ ಮತ್ತು ಹೊರ ರಾಜ್ಯದ ವಿವಿಧ ಸಂಘ-ಸಂಸ್ಥೆ, ಉತ್ಸವಗಳಲ್ಲಿ ಸಂಗೀತ ಪ್ರಸ್ತುತಪಡಿಸಲು ವೇದಿಕೆಯನ್ನು ಕಲ್ಪಿಸಿ ಕೊಡುತ್ತಿದೆ.ಬಹುಶ್ರುತ ವಿದುಷಿ

ಸುನಾದ ಕಲ್ಚರಲ್ ಸೆಂಟರ್ ಮೈಸೂರು ನಾಗಮಣಿ ಶ್ರೀನಾಥ್ ಅವರ ಕನಸಿನ ಕೂಸು. ಆಕಾಶವಾಣಿ ಮತ್ತು ದೂರದರ್ಶನದ ‘ಎ’ ಟಾಪ್ ಕಲಾವಿದೆಯಾದ ನಾಗಮಣಿ ಅವರು ಲೇಖಕಿ, ಶಿಕ್ಷಕಿ, ನಿರ್ದೇಶಕಿ, ವ್ಯವಸ್ಥಾಪಕಿ, ವಾಗ್ಗೇಯಗಾರ್ತಿ, ಉತ್ತಮ ವಾಗ್ಮಿ –ಹೀಗೆ -ಬಹುಶ್ರುತರು.

 

ಅವರು ತಮ್ಮ ೫ನೇ ವಯಸ್ಸಿನಲ್ಲೇ ಸಂಗೀತ ಅಭ್ಯಾಸವನ್ನು ಆರಂಭಿಸಿ, ೯ನೇ ವಯಸ್ಸಿಗೆ ವೇದಿಕೆಯಲ್ಲಿ ಹಾಡಲು ಪ್ರಾರಂಭಿಸಿದರು. ಅರಿಕೆರೆ ನಾರಾಯಣ ರಾವ್, ಎಂ.ಎಲ್.ವಸಂತ ಕುಮಾರಿ, ಪಾಲಘಾಟ್ ಕೆ.ವಿ.ನಾರಾಯಣಸ್ವಾಮಿ, ಟಿ.ಎಮ್. ತ್ಯಾಗರಾಜನ್, ಸಂಧ್ಯಾವಂದನಂ ಶ್ರೀನಿವಾಸ ರಾವ್, ಟಿ.ಬೃಂದಮ್ಮ- ಮುಕ್ತಮ್ಮ, ಡಿ.ಕೆ.ಜಯರಾಮನ್, ಶ್ರೀ ರಾಮರತ್ನಂ, ಗೌರಿ ಕುಪ್ಪಸ್ವಾಮಿ, ಆರ್.ವಿಶ್ವೇಶ್ವರನ್, ರಾಮರಾವ್ ಹೀಗೆ ಸಂಗೀತ ದಿಗ್ಗಜರೆಲ್ಲರ ಬಳಿ ಮಾರ್ಗದರ್ಶನ ಪಡೆದರು. ಅಷ್ಟೇ ಅಲ್ಲದೆ ಮದ್ರಾಸಿನ ರಾಮನಾಡ್ ಕೃಷ್ಣನ್ ಅವರಲ್ಲಿ ಗುರುಕುಲ ಪದ್ಧತಿಯಲ್ಲಿಯೂ ಕಲಿತ ಇವರ ಅನುಭವ ಅಗಾಧ. ರಾಜ್ಯೋತ್ಸವ ಪ್ರಶಸ್ತಿ, ಗಾನ ಕಲಾಭೂಷಣ, ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ ಇವರಿಗೆ ಸಂದಿವೆ. ಜತೆಗೆ ಭಾರತ ಸರ್ಕಾರದ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕಾರವನ್ನು ಪಡೆದ ಕರ್ನಾಟಕದ ಮೊದಲ ಮಹಿಳಾ ಕಲಾವಿದೆ ಎಂಬ ಹಿರಿಮೆಗೂ  ಪಾತ್ರರಾದವರು.

ವಿಳಾಸ: ವಿದುಷಿ ನಾಗಮಣಿ ಶ್ರೀನಾಥ್‌, ಸುನಾದ ಕಲ್ಚರಲ್ ಸೆಂಟರ್‌, ನಂ.11, 8ನೇ ಕ್ರಾಸ್‌, ಮೊದಲನೆ ಮುಖ್ಯರಸ್ತೆ, ಪ್ರಶಾಂತನಗರ, ಬೆಂಗಳೂರು-79. ಫೋನ್‌: 080 -23585705/ 98451 19995.ಗುರು ಮಾತ್ರವಲ್ಲ; ಶಕ್ತಿ

ಸಂಗೀತದ ಜತೆಗೆ ಭಾರತೀಯ ಸಂಸ್ಕೃತಿಯನ್ನು ಸಂಪೂರ್ಣವಾಗಿ ಪರಿಚಯಿಸುವ ವಿಶಿಷ್ಟ ಕೆಲಸವನ್ನು ‘ಸುನಾದ ಕಲ್ಟರಲ್‌ ಸೆಂಟರ್‌’ ಮಾಡುತ್ತಿದೆ. ಸಂಗೀತದಲ್ಲಿ ಒಂದು ಹಂತಕ್ಕೆ ಬಂದವರಿಗೆ ಮಾತ್ರ ಇಲ್ಲಿ ಅವಕಾಶ. ಅಂತಹ ಕೆಲವೇ ಆಯ್ದ ಶಿಷ್ಯಂದಿರಿಗೆ ಇಲ್ಲಿ ಉನ್ನತ ಮಟ್ಟದ ಸಂಗೀತ ತರಬೇತಿ ಸಿಗುತ್ತದೆ. ಸಂಗೀತದಲ್ಲಿ ಸರ್ವತೋಮುಖ ಯಶಸ್ಸನ್ನು ಸಾಧಿಸಬಯಸುವವರಿಗೆ ಈ ಸಂಗೀತ ಸಂಸ್ಥೆ ನಿಜವಾಗಿಯೂ ದಾರಿದೀಪ. ಇಂತಹ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ನಾನು ಭಾಗ್ಯಶಾಲಿ ಎಂದೇ ಹೇಳಬೇಕು.ಬರೀ ಹಾಡಲು ಬಂದರೆ ಸಾಲದು. ಅದರ ಆಳಕ್ಕಿಳಿದು ಸಂಪೂರ್ಣವಾಗಿ ವಿಶ್ಲೇಷಿಸುವ, ವಿಷದಪಡಿಸುವ ಮತ್ತು ಸಂಗೀತದ ಒಳಹೊರಗನ್ನು ಸಮರ್ಥವಾಗಿ ಅಭಿವ್ಯಕ್ತಿಸುವ ಸಾಮರ್ಥ್ಯ ಇರಬೇಕು ಎನ್ನುವುದು ಗುರು ನಾಗಮಣಿ ಅವರ ಅನಿಸಿಕೆ. ಇದನ್ನು ಚಾಚೂ ತಪ್ಪದೆ ಪಾಲಿಸಿ, ತಮ್ಮ ಶಿಷ್ಯಬಳಗಕ್ಕೆ ಸಂಗೀತದ ಸಂಪೂರ್ಣ ಸಾರವನ್ನು ಧಾರೆ ಎರೆಯುವ ಇವರು ಒಬ್ಬ ಅಪರೂಪದ ಸಾಧಕಿ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಕೃತಿ, ಕೀರ್ತನೆ, ಆಲಾಪ, ಕಲ್ಪನಾಸ್ವರ, ನೆರವಲ್‌, ರಾಗ-, ತಾನ-, ಪಲ್ಲವಿ ಮುಂತಾದ ಪ್ರಕಾರಗಳ ಹಾಡುಗಾರಿಕೆ ಇವೆಲ್ಲವನ್ನೂ ಒಬ್ಬರೇ ಪರಿಪೂರ್ಣವಾಗಿ ಹಾಡುವುದು ಕಷ್ಟ. ಸುನಾದ ಸಂಸ್ಥೆಯ ವಿಶೇಷವೆಂದರೆ, ಯಾರು ಯಾವ ಪ್ರಕಾರದಲ್ಲಿ ಆಸಕ್ತರಾಗಿದ್ದಾರೋ ಅಂಥವರನ್ನು ಗುರುತಿಸಿ ಅವರನ್ನು ಪರಿಪೂರ್ಣ ಕಲಾವಿದರನ್ನಾಗಿ ಇಲ್ಲಿ ರೂಪಿಸಲಾಗುತ್ತದೆ. ಕಳೆದ 12 ವರ್ಷಗಳಿಂದ ವಿದುಷಿ ನಾಗಮಣಿ ಅವರ ಬಳಿ ಕಲಿಯುತ್ತಿರುವ ನನಗೆ ಇವರು ಒಂದು ‘ಸಂಗೀತ ಶಕ್ತಿ’ ಎಂದು ಅನಿಸಿದೆ.

ಉಮಾ ಕುಮಾರ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.