‘ಸೋಲು–ಗೆಲುವು ಸಮನಾಗಿ ಸ್ವೀಕರಿಸಿ’

7

‘ಸೋಲು–ಗೆಲುವು ಸಮನಾಗಿ ಸ್ವೀಕರಿಸಿ’

Published:
Updated:

ಬೆಳಗಾವಿ: ‘ಸೋಲಿಗೆ ಹೆದರಿ ಖಿನ್ನತೆಗೆ ಒಳಗಾಗಬೇಡಿ. ಬದಲಾಗಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಬೆಳೆಸಿಕೊಳ್ಳಿ’ ಎಂದು ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ಡಾ. ಚಂದ್ರಕಾಂತ ಕೊಕಾಟೆ ಸಲಹೆ ನೀಡಿದರು. ಇಲ್ಲಿನ ಮರಾಠಾ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಲಿಕಾ ಆದರ್ಶ ವಿದ್ಯಾಲಯದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.‘ಸೋಲುಗಳು ವಿದ್ಯಾರ್ಥಿಗಳಿಗೆ ಬದುಕಿನ ಬಗ್ಗೆ ಒಳ್ಳೆಯ ಪಾಠ ಕಲಿಸುತ್ತವೆ. ಸೋಲುಗಳಿಂದಲೇ ಹಲ­ವರು ಎಚ್ಚೆತ್ತುಕೊಂಡು ಜೀವನದಲ್ಲಿ ಅತ್ಯುನ್ನತ ಸಾಧನೆ ಮಾಡಿದ ನಿದರ್ಶನ­ಗಳಿವೆ. ಈ ಹಿನ್ನೆಲೆಯಲ್ಲಿ ಸೋಲು ಕಂಡಾಗ ಖಿನ್ನತೆಗೆ ಒಳಗಾಗಿ ಬದುಕಿನ ಬಗ್ಗೆ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಅವುಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಜೀವನದಲ್ಲಿ ಯಶಸ್ಸು ಗಳಿಸಿ’ ಎಂದರು.‘ಶಿಕ್ಷಕ ಸದೃಢ ಸಮಾಜವನ್ನು ನಿರ್ಮಿಸುವ ನೈಜ ಶಿಲ್ಪಿ. ಇಡೀ ದೇಶದ ಭವಿಷ್ಯ ಶಿಕ್ಷಕರ ಕಾರ್ಯವೈಖರಿಯ ಮೇಲೆ ಅವಲಂಬಿತವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಮಾನವೀಯ ಮೌಲ್ಯಗಳನ್ನು ಒಳಗೊಂಡ ಗುಣ­ಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡ­ಬೇಕು. ಈ ಮೂಲಕ ಸಮಾಜಕ್ಕೆ ಪ್ರತಿ­ಭಾವಂತ ನಾಗರಿಕರನ್ನು ನೀಡಬೇಕು’ ಎಂದು ತಿಳಿಸಿದರು.‘ವಿಜ್ಞಾನ ಹಾಗೂ ತಂತ್ರಜ್ಞಾನದ ಪ್ರಭಾವದಿಂದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ, ವೈದ್ಯಕೀಯ ಸೇರಿದಂತೆ ಎಲ್ಲ ರಂಗಗಳಲ್ಲೂ ಬದಲಾವಣೆಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆಧು­ನಿಕತೆಗೆ ತಕ್ಕಂತೆ ತಮ್ಮ ಮನೋಧೋರಣೆ ಬದಲಿಸಿಕೊಳ್ಳಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ­ಗಳಲ್ಲೂ ಗಮನಾರ್ಹ ಸಾಧನೆ ತೋರಿ ಉಜ್ವಲ ಭವಿಷ್ಯ ತಮ್ಮದಾಗಿ­ಸಿಕೊಳ್ಳಬೇಕು’ ಎಂದರು.ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಮಾತನಾಡಿ, ಬ್ರಿಟಿಷ್‌ ಕಾಲದಿಂದಲೇ ಗಡಿಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಪ್ರಜ್ಞಾವಂತ ಸಮಾಜ ನಿರ್ಮಿಸುತ್ತಿರುವ ಬಾಲಿಕಾ ಆದರ್ಶ ವಿದ್ಯಾಲಯದ ಕಾರ್ಯ ಶ್ಲಾಘನೀಯ. ಬಾಲಿಕಾ ಆದರ್ಶ ವಿದ್ಯಾಲಯದ ಅಭಿವೃದ್ಧಿಗಾಗಿ ಶೀಘ್ರದಲ್ಲೇ ₨ 2 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು.ಬಾಲಿಕಾ ಆದರ್ಶ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಗೋವಿಂದ ಫಡಕೆ, ‘ಬಾಲಿಕಾ ಆದರ್ಶ ವಿದ್ಯಾಲ­ಯವು ಸ್ವಾತಂತ್ರ್ಯ ಪೂರ್ವದಿಂದಲೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ಶಾಲೆಯ ವತಿಯಿಂದ ಬಡಮಕ್ಕಳಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಶಾಲೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ’ ಎಂದು ತಿಳಿಸಿದರು.ಕೆಎಲ್‌ಇ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿ.ಡಿ.ಪಾಟೀಲ, ಏಕನಾಥ ಪಾಟೀಲ ಮಾತನಾಡಿದರು. ಈ ಸಂದರ್ಭದಲ್ಲಿ ಬಾಲಿಕಾ ಆದರ್ಶ ವಿದ್ಯಾಲಯದ ನಿವೃತ್ತ ಮುಖ್ಯಾಧ್ಯಾಪಕ­ರಾದ ಡಿ.ಬಿ.ಸೋಮನಿ, ಅನುರಾಧಾ ಪೋಡಬೊಲೆ, ಆಶಾ ರತನಜೀ, ಅರುಣ ಪವಾರ, ಪ್ರಮೋದ ಹೆಗಡೆ, ಲೀಲಾ ಉದೋಶಿ, ಅನಿಲ ಕುಲಕರ್ಣಿ, ದೇಣಿಗೆದಾರರು ಹಾಗೂ ವಿದ್ಯಾಲಯದ ಏಳ್ಗೆಗಾಗಿ ದುಡಿದ ಮಹನೀಯರನ್ನು ಸತ್ಕರಿಸಲಾಯಿತು.ಸ್ಮಿತಾ ಶಿರಗಾಂವಕರ, ವಿದ್ಯಾ ಬಾಳ್‌, ಆದರ್ಶ ಬಾಲಿಕಾ ವಿದ್ಯಾಲಯದ ಅಧ್ಯಕ್ಷೆ ಅನುತಾಯಿ ಕಿತ್ತೂರ, ಮಾಧುರಿ ಶಾನಭಾಗ್, ಮುಖ್ಯಾ­ಧ್ಯಾಪಕಿ ಪ್ರೇಮ­ಲತಾ ಧೋಂಗಡಿ, ರೋಹಿಣಿ ಗೋಗಟೆ, ಚಂದ್ರಜ್ಯೋತಿ ದೇಸಾಯಿ ಇದ್ದರು. ಬಳಿಕ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry