‘ಸೋಲು ಗೌರವಿಸದವನು ವಿಜ್ಞಾನಿ ಆಗಲಾರ’

ಬೆಂಗಳೂರು: ‘ವಿಜ್ಞಾನದ ಜತೆ ನಿರಂತರವಾಗಿ ಸ್ನೇಹವನ್ನು ಇರಿಸಿಕೊಳ್ಳಬೇಕಾದರೆ, ಸಮಯದ ಜತೆ ಸದಾ ಗುದ್ದಾಡಬೇಕು’ ಎಂದು ಹಿರಿಯ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಅಭಿಪ್ರಾಯಪಟ್ಟರು.
ಭಾರತೀಯ ವಿದ್ಯಾಭವನವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಕೆ.ಎಂ.ಮುನ್ಷಿ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಭಾರತದಲ್ಲಿ ವಿಜ್ಞಾನ ಕಾರ್ಯಾಚರಣೆ’ ಕುರಿತು ಮಾತನಾಡಿದರು.
‘ವಿಜ್ಞಾನವೆಂಬುದು ಸಂಸ್ಕೃತಿಯಲ್ಲಿ ಬೆರೆತು ಹೋಗಿದೆ. ವಿಶ್ವವಿದ್ಯಾಲಯ, ಪಂಡಿತರು, ವಿದ್ಯಾರ್ಥಿವೇತನ, ವಿಚಾರಸಂಕಿರಣ ಇವುಗಳು ಇಲ್ಲದೆಯೂ ವಿಜ್ಞಾನ ಇರುತ್ತದೆ. ಸೋಲನ್ನು ಗೌರವಿಸದವರು ವಿಜ್ಞಾನಿಗಳಾಗಲು ಸಾಧ್ಯವೇ ಇಲ್ಲ’ ಎಂದು ಹೇಳಿದರು.
ಪುರುಷಾಧಿಪತ್ಯ: ‘ಹೆಣ್ಣಿನ ಬೌದ್ಧಿಕ ಬೆಳವಣಿಗೆಯನ್ನು ಒಪ್ಪಿಕೊಳ್ಳುವಷ್ಟು ಪೂರಕ ವಾತಾವರಣ ಭಾರತದಲ್ಲಿ ಇಲ್ಲ. ಹೀಗಾಗಿ ಮಹಿಳಾ ವಿಜ್ಞಾನಿಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ.
ಮದುವೆ, ಕೌಟುಂಬಿಕ ವ್ಯವಹಾರಗಳಲ್ಲಿಯೇ ಕಳೆದುಹೋಗುವ ಸಂಶೋಧನಾ ವಿದ್ಯಾರ್ಥಿನಿಯರಿದ್ದಾರೆ. ಸರ್ಕಾರ ಸೂಕ್ತ ನೆರವು ನೀಡುತ್ತಿದ್ದರೂ, ಮಹಿಳಾ ವಿಜ್ಞಾನಿಗಳು ಬೆಳೆಯಲು ಪುರುಷ ಪ್ರಧಾನ ವ್ಯವಸ್ಥೆ ಬಿಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ವಿಜ್ಞಾನ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ಸಾಮ್ಯತೆ ಇದೆ. ಈ ಎರಡು ಕ್ಷೇತ್ರಗಳಲ್ಲಿ ಪರಿಪೂರ್ಣರಾಗುವುದು ಸಾಧ್ಯವಲ್ಲದ ಮಾತು. ಆದರೆ, ನಿರಂತರವಾಗಿ ಶ್ರಮವಹಿಸಿ, ಪ್ರೀತಿಯಿಂದ ವಿಜ್ಞಾನವನ್ನು ಅಪ್ಪಿಕೊಂಡರೆ ಎಂದಿಗೂ ಆ ಕ್ಷೇತ್ರ ಕೈಬಿಡದು’ ಎಂದು ಹೇಳಿದರು.
‘ಮುಂದಿನ ದಶಕವನ್ನು ಗುಣಮಟ್ಟದ ಶಿಕ್ಷಣ ಹಾಗೂ ಶಿಕ್ಷಕರನ್ನು ರೂಪಿಸುವುದಕ್ಕೆ ಮೀಸಲಿಡಬೇಕು. ದೇಶದ ನಿವ್ವಳ ಆಂತರಿಕ ಉತ್ಪನ್ನದಲ್ಲಿ ಶೇ 2ರಷ್ಟು ಹಣವನ್ನು ಉನ್ನತ ಶಿಕ್ಷಣಕ್ಕಾಗಿ ವಿನಿಯೋಗಿಸಬೇಕು.
ಎಲ್ಲೂ ಸಲ್ಲದವರು ಶಿಕ್ಷಕರಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಫಿನ್ಲ್ಯಾಂಡ್ ಮಾದರಿಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಕರನ್ನು ರೂಪಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು."
ಸಂಶೋಧನಾ ವಿದ್ಯಾರ್ಥಿಗಳೇ ಇಲ್ಲ: ‘ನನ್ನ ಬೆಂಗಳೂರು ಹಣ ಮಾಡುವ ದಂಧೆಯ ಸ್ಥಳವಾಗಿ ಮಾರ್ಪಾಡಾಗಿರುವುದನ್ನು ನೆನೆದರೆ ನೋವಾಗುತ್ತದೆ. ಕಳೆದ 20 ವರ್ಷಗಳಿಂದೀಚೆಗೆ ಬೆಂಗಳೂರಿನಿಂದ ಒಬ್ಬರೇ ಒಬ್ಬರು ಸಂಶೋಧನಾ ವಿದ್ಯಾರ್ಥಿಗಳಿಲ್ಲ. ಎಲ್ಲರಿಗೂ ಹಣ ಮಾಡುವ ಧಾವಂತ. ಹಾಗಾಗಿ ವಿಜ್ಞಾನ, ಸಂಶೋಧನೆಯೆಂದರೆ ಅಲಕ್ಷ್ಯ’ ಎಂದು ನೊಂದು ನುಡಿದರು.
‘ಆರ್ಥಿಕ ಕ್ಷೇತ್ರದ ಬೆಳವಣಿಗೆಯಷ್ಟೆ ಅಭಿವೃದ್ಧಿಯಲ್ಲ. ವಿಜ್ಞಾನ ಕ್ಷೇತ್ರದಲ್ಲಿನ ಪ್ರಗತಿಯಿಂದ ಮಾತ್ರ ‘ಅಭಿವೃದ್ಧಿ’ಯ ಮಂತ್ರ ಪೂರ್ಣಗೊಳ್ಳುತ್ತದೆ’ ಎಂದು ತಿಳಿಸಿದರು.
ಪೋಷಕರ ಮಾತನ್ನು ಕೇಳಬೇಡಿ: ‘ಸಾಹಿತ್ಯ, ಸಂಗೀತ, ಕಲೆ, ನಾಟಕ, ವಿಜ್ಞಾನ ಯಾವುದಾದರೊಂದು ಕ್ಷೇತ್ರದಲ್ಲಿ ಅದಮ್ಯ ಆಸಕ್ತಿ ಬೆಳೆಸಿಕೊಂಡು ಮುಂದುವರಿಯಿರಿ. ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಪೋಷಕರ ಮಾತನ್ನು ಕೇಳಬೇಡಿ’ ಎಂದು ಕಿವಿಮಾತು ಹೇಳಿದರು.
‘ಎದೆಯಲ್ಲಿ ಒಂದಿಷ್ಟು ಪ್ರೀತಿ, ಮಾನವೀಯತೆಯನ್ನು ಉಳಿಸಿಕೊಂಡು, ದೇಶಕ್ಕಾಗಿ ದುಡಿಯುವ ಸಂಕಲ್ಪ ಮಾಡಿ. ಜಾತಿ, ಮತ, ಪಂಥದಂತಹ ಕ್ಷುಲ್ಲಕ ಕಾರಣಗಳಿಗಾಗಿ ತಲೆಕೊಡಬೇಡಿ. ನಿಚ್ಚಳವಾದ ಬದುಕನ್ನು ಬದುಕಲು ಶ್ರಮ ವಹಿಸಿ’ ಎಂದು ಸಲಹೆ ನೀಡಿದರು.
ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಮಾತನಾಡಿ, ‘ಹೊಸ ತಲೆಮಾರಿನ ಯುವಜನಾಂಗಕ್ಕೆ ಕಲೆಯ ಜತೆಗೆ ವಿಜ್ಞಾನವೂ ದಾರಿ ದೀಪವಾಗಬೇಕಿದೆ. ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಮಹತ್ವ ದೊರೆಯಬೇಕು’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.