ಭಾನುವಾರ, ಮೇ 9, 2021
25 °C
ಧನಂಜಯ ಕುಮಾರ್ ನಾಮಪತ್ರ ಸಲ್ಲಿಕೆ

‘ಸ್ಥಳೀಯ ಸಮಸ್ಯೆ ಅರಿವಿರುವರನ್ನು ಗೆಲ್ಲಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ‘ಉಡುಪಿ– ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದ ಕೆ. ಜಯ­ಪ್ರಕಾಶ್‌ ಹೆಗ್ಡೆ ಅವರ ಕಾರ್ಯ ವೈಖ­ರಿಯ ಬಗ್ಗೆ ಕ್ಷೇತ್ರದ ಜನರಿಗೆ ಅತೃಪ್ತಿ ಇದೆ. ಶೋಭಾ ಕರಂದ್ಲಾಜೆ ಈ ಕ್ಷೇತ್ರಕ್ಕೆ ತೀರ ಹೊಸಬರು. ಉಡುಪಿಯಲ್ಲಿಯೇ ವಿದ್ಯಾಭ್ಯಾಸ ಮಾಡಿದ ಮತ್ತು ಇಲ್ಲಿಂದಲೇ ರಾಜಕೀಯ ಆರಂಭಿಸಿದ ನನಗೆ ಈ ಕ್ಷೇತ್ರದ ಬಗ್ಗೆ ಪರಿಚಯ ಇದೆ. ಅಲ್ಲದೆ ಇಲ್ಲಿನ ಸಮಸ್ಯೆಗಳೇನು ಎಂಬ ಅರಿವಿದ್ದು ಜನರು ಈ ಬಾರಿ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸ ಇದೆ’ ಎಂದು ಜೆಡಿಎಸ್‌ ಅಭ್ಯರ್ಥಿ ವಿ. ಧನಂಜಯ ಕುಮಾರ್‌ ಹೇಳಿದರು.ನಾಮಪತ್ರ ಸಲ್ಲಿಸುವ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೋ ಒಬ್ಬ ವ್ಯಕ್ತಿ­ಯನ್ನು ಪ್ರಧಾನಿ ಮಾಡುವುದಾಗಿ ಬಿಜೆಪಿ ಅಭ್ಯರ್ಥಿ ಮತ ಯಾಚಿಸು­ತ್ತಿದ್ದಾರೆ. ಇಂತವರನ್ನು ಆಯ್ಕೆ ಮಾಡಿದರೆ ಅಭಿವೃದ್ಧಿ ಸಾಧ್ಯವಿಲ್ಲ. ಇಲ್ಲಿನ ಆಗು ಹೋಗುಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವವರನ್ನು ಗೆಲ್ಲಿಸಿದರೆ ಸಮಸ್ಯೆಗಳನ್ನು ಬಗೆಹರಿ­ಸಲು ಶ್ರಮಿಸಲಿದ್ದಾರೆ ಎಂದರು.ಕೇಂದ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ಸಮೀಕ್ಷೆಗಳು ಹೇಳುತ್ತಿವೆ. ತೃತೀಯ ಶಕ್ತಿಗೆ ಅವಕಾಶ ಇರುವುದು ಸ್ಪಷ್ಟ­ವಾಗಿದೆ. ಕೇಂದ್ರ ಸರ್ಕಾರದಲ್ಲಿ ಜೆಡಿ­ಎಸ್‌ ಪ್ರಮುಖ ಪಾತ್ರವಹಿಸುವ ಎಲ್ಲ ಸಾಧ್ಯತೆ ಇದೆ. ಆದ್ದರಿಂದ ಜೆಡಿಎಸ್‌ ಪಕ್ಷಕ್ಕೆ ಒಳ್ಳೆಯ ಅವಕಾಶ ಇದೆ ಎಂದು ಹೇಳಿದರು.‘ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಅಧ್ಯಕ್ಷನಾಗಿದ್ದ ಸಮಯದಲ್ಲಿ ಜಿಲ್ಲೆಯುದ್ದಕ್ಕೂ ಓಡಾಡಿ ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿತಿದ್ದೇನೆ. ಅಲ್ಲದೆ ನಾಲ್ಕು ಬಾರಿ ಸಂಸದನಾಗಿ, ಶಾಸಕ­ನಾಗಿ ಮತ್ತು ಕೇಂದ್ರ ಸಚಿವನಾಗಿ ಕೆಲಸ ಮಾಡಿದರೂ ನನ್ನ ಮೇಲೆ ಯಾವುದೇ ಆರೋಪಗಳಿಲ್ಲ. ಜನರ ಪ್ರೀತಿಯನ್ನು ಗಳಿಸಿದ್ದೇನೆ. 2003ರಲ್ಲಿ ಕಾಫಿ ಧಾರಣೆ ಕುಸಿದಾಗ ಕೇಂದ್ರ ಸಚಿವ ಜಸ್ವಂತ್‌ ಸಿಂಗ್‌ ಅವರನ್ನು ಕೊಡಗು ಮತ್ತು ಚಿಕ್ಕಮಗಳೂರಿಗೆ ಕರೆದುಕೊಂಡು ಬಂದು ವಸ್ತುಸ್ಥಿತಿಯ ಪರಿಚಯ ಮಾಡಿ­ಕೊಟ್ಟೆ. ಕಾಫಿ ಬೆಳೆಗಾರರ ಬಡ್ಡಿ ಮನ್ನಾ ಮಾಡಿಸಿದೆ ಮತ್ತು ಪರಿಹಾರ ಕೊಡಿಸಿದೆ’ ಎಂದು ಹೇಳಿದರು.ಸೊರಬ ಶಾಸಕ ಮಧು ಬಂಗಾರಪ್ಪ, ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ, ಜೆಡಿಎಸ್‌ ಉಡುಪಿ ಜಿಲ್ಲಾಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ, ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ ಮಂಜಪ್ಪ, ಮುಖಂಡ­ರಾದ ಎಸ್‌.ಎಲ್‌. ಬೋಜೇಗೌಡ, ಎಚ್‌.ಎಚ್‌. ದೇವರಾಜ್‌, ಪದ್ಮಾ ತಿಮ್ಮೇಗೌಡ, ಗುಲಾಂ ಮಹಮ್ಮದ್‌, ಶಾಲಿನಿ ಶೆಟ್ಟಿ ಕೆಂಚನೂರ್‌ ಮತ್ತಿತರರು ಉಪಸ್ಥಿತರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.