ಗುರುವಾರ , ಜನವರಿ 30, 2020
22 °C

‘ಸ್ಮಶಾನ ವಿಚಾರ ನಿರ್ಲಕ್ಷಿಸಿದರೆ ಪ್ರತಿಭಟನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಮಂಗಲ :  ಪಟ್ಟಣದ ಮಂಡ್ಯ ವೃತ್ತಕ್ಕೆ ಡಾ.ಅಂಬೇಡ್ಕರ್ ವೃತ್ತ ಎಂದು ನಾಮಕರಣ  ಹಾಗೂ ದಲಿತರಿಗೆ ಸ್ಮಶಾನ ನೀಡುವ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಮಿನಿ ವಿಧಾನಸೌಧದ ಮುಂದೆ  ಶವ ಸಂಸ್ಕಾರ ಮಾಡಿ ಪ್ರತಿಭಟನೆ ಮಾಡುವುದಾಗಿ ದಲಿತ ಮುಖಂಡರು ಎಚ್ಚರಿಸಿದ್ದಾರೆ.ಪಟ್ಟಣದ ಮಿನಿ ವಿಧಾನೌಧದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ ಹಿತರಕ್ಷಣ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ದಲಿತ ಮುಖಂಡ ಬೆಳ್ಳೂರು ಶಿವಣ್ಣ ಯಾವುದೇ ಸಭೆಯಲ್ಲಿ  ಮಂಡ್ಯ ವೃತ್ತಕ್ಕೆ ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡುವಂತೆ ಪ್ರತಿ ಸಭೆಯಲ್ಲೂ ಒತ್ತಾಯಿಸುತ್ತಾ ಬಂದಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಪಟ್ಟಣ ಪಂಚಾಯಿತಿ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತೀರಿ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅವರನ್ನು ಪ್ರಶ್ನಿಸಿದರು.ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ದಲಿತರಿಗೆ  ಶವ ಸಂಸ್ಕಾರಕ್ಕೆ ಜಾಗವಿಲ್ಲ  ಅದಷ್ಟು ಬೇಗ ಸ್ಮಶಾನಕ್ಕೆ ಜಾಗವನ್ನು ನೀಡುವಂತೆ  ದಸಂಸ ಮುಖಂಡ ಭೀಮನಹಳ್ಳಿ ನಾಗರಾಜ್ ಸಭೆಯಲ್ಲಿ ಮಾತನಾಡಿದರು.ಈ ಬಗ್ಗೆ ಉತ್ತರಿಸಿದ ಸಭಾಧ್ಯಕ್ಷರಾದ ತಹಶೀಲ್ದಾರ್ ಶಿವಣ್ಣ ತಾಲ್ಲೂಕಿನಲ್ಲಿ ಸರ್ವೆಯರ್‌ಗಳ ಕೊರತೆ ಇದೆ ಆದಾಗ್ಯೂ ಸಮಸ್ಯೆ ಗಂಭೀರವಾಗಿರುವುದರಿಂದ ಹೋಬಳಿಗೆ ಕನಿಷ್ಠ 2 ಗ್ರಾಮಗಳಲ್ಲಿ  ಸ್ಮಶಾನ ಜಾಗ ನಿಗದಿಗೊಳಿಸುವಂತೆ ಕ್ರಮವಹಿಸುವುದಾಗಿ ತಿಳಿಸಿದರು.ಸಭೆಯಲ್ಲಿ ಕಾಳಿಂಗನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅನುದಾನದಲ್ಲಿ ಸದಸ್ಯರು ಪ್ರವಾಸಮಾಡಿರುವ ಮತ್ತು ಬೆಟ್ಟದ ಮಲ್ಲೇನಹಳ್ಳಿಯಲ್ಲಿ ಇಲ್ಲದೆ ಇರುವ ಅಂಬೇಡ್ಕರ್ ಭವನಕ್ಕೆ ಹಣ ಡ್ರಾ ಮಾಡಲು ನಡೆಸಿರುವ ಅವ್ಯವಹಾರ  ಪ್ರಕರಣ ಚರ್ಚಿತವಾದವು.ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಸಿ.ಬಿ ನಂಜುಂಡಪ್ಪ, ಲಾಳನಕೆರೆ ಚಂದ್ರು, ನ್ಯಂಗನಹಳ್ಳಿ ಚಲುವಣ್ಣ, ಗೊಲ್ಲರಹಳ್ಳಿ ಪುಟ್ಟಸ್ವಾಮಿ, ಬಿದರಕೆರೆ ಮಂಜು, ಎಂ.ನಾಗರಾಜಯ್ಯ, ಬಿಎಸ್ಪಿ.ತಾಲ್ಲೂಕು ಅದ್ಯಕ್ಷ ಕೆ.ಎಚ್. ಮಹದೇವ್, ಜೆಡಿಎಸ್ ಮುಖಂಡ ತೊಳಲಿ ಕೃಷ್ಣಮೂರ್ತಿ, ಸಮಾಜ ಕಲ್ಯಾಣಾಧಿಕಾರಿ ರವಿಶಂಕರ್, ಪಿಎಸ್ಐ ಲಕ್ಷ್ಮೀನಾರಾಯಣ್, ಶಿರಸ್ತೆದಾರ್‌ ಶಿವಲಿಂಗಮೂರ್ತಿ ಮುಂತಾದವರು ಇದ್ದರು.

ಪ್ರತಿಕ್ರಿಯಿಸಿ (+)