‘ಸ್ಯಾಲ್ಮೆನೆಲ್’ನಿಂದ ದಲ್ಲಾಳಿಗಳಿಗೆ ಲಾಭ?

7
ರಫ್ತಿನ ಮೇಲೆ ನಿರ್ಬಂಧ ಸಾಧ್ಯತೆ; ಕಾಳುಮೆಣಸು ಬೆಳೆಗಾರರ ಆತಂಕ

‘ಸ್ಯಾಲ್ಮೆನೆಲ್’ನಿಂದ ದಲ್ಲಾಳಿಗಳಿಗೆ ಲಾಭ?

Published:
Updated:

ಬೆಂಗಳೂರು: ಮಸಾಲೆ ಪದಾರ್ಥಗಳಲ್ಲಿ ಸ್ಯಾಲ್ಮೆನೆಲ್ ಬ್ಯಾಕ್ಟೀರಿಯಾ ಕಂಡುಬಂದ ಹಿನ್ನೆಲೆಯಲ್ಲಿ, ಭಾರತದಿಂದ ಸಂಬಾರು ಪದಾರ್ಥ ರಫ್ತು ಮಾಡುವ 200 ಕಂಪೆನಿಗಳನ್ನು ಅಮೆರಿಕ ‘ಕೆಂಪು ಪಟ್ಟಿ’ಗೆ ಸೇರಿಸಿದೆ. ಇದನ್ನೇ ಮುಂದಿಟ್ಟು­ಕೊಂಡು, ದಲ್ಲಾಳಿಗಳು ಕಡಿಮೆ ದರದಲ್ಲಿ ರೈತರಿಂದ ಉತ್ಪನ್ನ ಖರೀದಿಸುವ ಅಪಾಯ ಎದುರಾಗಿದೆ.ಸ್ಯಾಲ್ಮೆನೆಲ್‌ ಬ್ಯಾಕ್ಟೀರಿಯಾ ಮಿಶ್ರಣವಾದ ಪದಾರ್ಥಗಳಲ್ಲಿ ಕಾಳುಮೆಣಸು ಕೂಡ ಒಂದು. ಕೇರಳಕ್ಕೆ ಹೋಲಿಸಿದರೆ ಕರ್ನಾಟಕದಲ್ಲೇ ಅಧಿಕ ಕಾಳುಮೆಣಸು ಉತ್ಪಾದನೆಯಾ­ಗುತ್ತಿದೆ. ಆದರೆ ರೈತರು ಸಂಘಟಿತರಾಗದೇ ದಲ್ಲಾಳಿಗಳಿಗೆ ತಮ್ಮ ಉತ್ಪನ್ನ ಮಾರಾಟ ಮಾಡುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಒಂದೊಮ್ಮೆ ರಫ್ತಿನ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದರೆ ಬೇಡಿಕೆ ಕಡಿಮೆಯಾಗಿ, ದರ ಕುಸಿಯುವ ಸಾಧ್ಯತೆಯೂ ಇದೆ.ಆದರೆ, ತನ್ನ ಕಡೆಯಿಂದ ರಫ್ತಾಗುವ ಮಸಾಲೆ ಪದಾರ್ಥ­ಗಳು ಶುದ್ಧವಾಗಿದ್ದು, ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ಮುಕ್ತವಾಗಿವೆ ಎಂದು ಸಂಬಾರು ಮಂಡಳಿ ಸ್ಪಷ್ಟಪಡಿಸಿದೆ.

ಭೇದಿ, ಹೊಟ್ಟೆನೋವು ಹಾಗೂ ಜ್ವರಕ್ಕೆ ಕಾರಣವಾಗುವ ಸ್ಯಾಲ್ಮೆನಲ್ ಬ್ಯಾಕ್ಟೀರಿಯಾ ಮಿಶ್ರಣವಾಗಿದೆ ಎಂಬ ಕಾರಣಕ್ಕೆ ಭಾರತದಿಂದ ಆಮದಾಗುತ್ತಿರುವ ಆಹಾರ ಮತ್ತು ಸಾಂಬಾರು ಪದಾರ್ಥಗಳನ್ನು ಅಮೆರಿಕದ ಆರೋಗ್ಯ ಕಾವಲು ಪಡೆ ಎಫ್‌ಡಿಎ (ಫೆಡರಲ್ ಡ್ರಗ್ ಅಡ್ಮಿನಿಸ್ಟ್ರೇಶನ್) ಪರಿಶೀಲನೆಗೆ ಒಳಪಡಿಸಿತ್ತು.  ಆಗ ಶೇ 7ರಷ್ಟು ಪ್ರಮಾಣದ ಉತ್ಪನ್ನದಲ್ಲಿ ಸ್ಯಾಲ್ಮೆನೆಲ್ ಕಂಡು ಬಂದಿತ್ತು.ಭಾರತದಿಂದ ರಫ್ತು ಮಾಡುವ ಮುನ್ನ ಸಂಬಾರು ಪದಾರ್ಥಗಳನ್ನು ಹಲವು ಬಗೆಯ ತಪಾಸಣೆಗೆ ಒಳಪಡಿಸಲಾ­ಗುತ್ತಿದೆ. ಅದರಲ್ಲೂ ರಾಸಾಯನಿಕ ಕೀಟನಾಶಕಗಳ ಅವಶೇಷ ಉಳಿದುಕೊಂಡಿರುವ ಪದಾರ್ಥಗಳ ಬಗ್ಗೆ ಮುಂದುವರಿದ ದೇಶಗಳಲ್ಲಿ ಕಳವಳ ಹೆಚ್ಚುತ್ತಿದ್ದು, ಇದಕ್ಕಾಗಿ ಕೊಯ್ಲೋತ್ತರ ವಿಧಾನಗಳಲ್ಲಿ ವೈಜ್ಞಾನಿಕ ಕ್ರಮ ಅನುಸರಿಸಲಾಗುತ್ತಿದೆ. ಇಷ್ಟೆಲ್ಲ ಮುನ್ನೆಚ್ಚರಿಕೆ ಅನುಸರಿಸಿದರೂ, ಅಮೆರಿಕದ ಎಫ್‌ಡಿಎ ನಡೆಸಿದ ಪರೀಕ್ಷೆಗಳಲ್ಲಿ ಸ್ಯಾಲ್ಮೆನೆಲ್ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಇದು ರಫ್ತಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.ಕರ್ನಾಟಕದಲ್ಲಿ ಏರಿಕೆ

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬೆಳೆಯುತ್ತಿರುವ ಸಂಬಾರು ಪದಾರ್ಥಗಳ ಪೈಕಿ ಕಾಳುಮೆಣಸು ಕೂಡ ಒಂದು. ಕರ್ನಾಟಕದ ಚಿಕ್ಕಮಗಳೂರು, ಕೊಡಗು ಸೇರಿದಂತೆ ಕೆಲವೇ ಜಿಲ್ಲೆಗಳಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಕೇರಳಕ್ಕೆ ಹೋಲಿಸಿದರೆ, ಕರ್ನಾಟಕದಲ್ಲಿ ಈ ಬೆಳೆ ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗುತ್ತಲೇ ಇದೆ. 2000–01ರಲ್ಲಿ ಬರೀ 7,250 ಹೆಕ್ಟೇರ್‌ ಪ್ರದೇಶದಲ್ಲಿದ್ದ ಕಾಳುಮೆಣಸು ಕೃಷಿ, 2010ರ ಹೊತ್ತಿಗೆ 20,000 ಹೆಕ್ಟೇರ್‌ಗೆ ಏರಿಕೆಯಾಗಿದೆ. ಪ್ರತಿ ಹೆಕ್ಟೇರ್‌ಗೆ 243 ಕಿಲೋದಷ್ಟಿದ್ದ ಉತ್ಪಾದಕತೆಯು, ಈ ಹತ್ತು ವಷರ್ಗಳ ಅವಧಿಯಲ್ಲಿ 761 ಕಿಲೋಗಳಿಗೆ ಏರಿದೆ. ಬಳ್ಳಿಗಳ ಮರು ನಾಟಿ ಇನ್ನಿತರ ಕ್ರಮಗಳಿಂದಾಗಿ ಉತ್ಪಾದನೆ ಪ್ರಮಾಣದಲ್ಲೂ ಅಧಿಕವಾಗಿದೆ. ಅಚ್ಚರಿಯ ಸಂಗತಿ ಎಂದರೆ, ಕಾಳುಮೆಣಸಿಗೆ ಖ್ಯಾತಿ ಪಡೆದಿದ್ದ ಕೇರಳ ಆ ಸ್ಥಾನದಿಂದ ಕ್ರಮೇಣ ಕೆಳಕ್ಕೆ ಇಳಿಯುತ್ತಿದೆ!ಕಾಳುಮೆಣಸಿನಲ್ಲಿ ಸ್ಯಾಲ್ಮೆನೆಲ್ ಬ್ಯಾಕ್ಟೀರಿಯಾ ಮಿಶ್ರಣವಾ­ಗುವ ಸಾಧ್ಯತೆ ಇರುವುದರಿಂದ, ಕರ್ನಾಟಕದ ರೈತರು ಆತಂತಕ್ಕೆ ಒಳಗಾಗಿದ್ದಾರೆ. ಒಂದೊಮ್ಮೆ ಭಾರತದಿಂದ ಕಾಳುಮೆ­ಣಸು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದರೆ, ರಾಜ್ಯದ ಬೆಳೆಗಾರರೂ ಬಾಧಿತರಾಗಲಿದ್ದಾರೆ. ಈ ಬಗ್ಗೆ ಅವರಲ್ಲೂ ಕಳವಳ ಮೂಡಿದೆ.‘ಮಿಶ್ರ ಬೆಳೆ ಪದ್ಧತಿಯಲ್ಲಿ ಕಾಫಿ ಜತೆ ಕಾಳುಮೆಣಸು ಬೆಳೆಯುತ್ತಿದ್ದೇವೆ. ಕಾಳುಮೆಣಸಿಗೆ ಬಹುತೇಕವಾಗಿ ರಾಸಾಯನಿಕ ಬಳಸುವುದಿಲ್ಲ. ಆದರೆ ಕಾಫಿ ಬೆಳೆಗೆ ಬಳಸುವ ರಾಸಾ­ಯನಿಕ, ಮೆಣಸಿನಲ್ಲೂ ಸೇರಿಕೊಳ್ಳಬಹುದು. ಮೆಣ­ಸನ್ನು ಒಣಗಿಸಿ ಪ್ಯಾಕ್ ಮಾಡಿ ವ್ಯಾಪಾರಿಗಳಿಗೆ ಮಾರಿ ಬಿಡು­ತ್ತೇವೆ. ಇಷ್ಟು ಬಿಟ್ಟರೆ ಬೇರೇನೂ ನಮಗೆ ಗೊತ್ತಿಲ್ಲ. ಆದರೆ ರಾಸಾಯನಿಕ ಅವಶೇಷ ಅಥವಾ ಬ್ಯಾಕ್ಟೀರಿಯಾ ಕಂಡುಬಂದರೆ ಹೊರದೇಶಗಳಲ್ಲಿ ನಮ್ಮ ಕಾಳುಮೆಣಸಿಗೆ ಬೇಡಿಕೆ ಕಡಿಮೆಯಾಗಬಹುದು; ಆಗ ದರ ಕೂಡ ಕುಸಿಯ­ಬಹುದು’ ಎಂದು ಸಕಲೇಶಪುರದ ಕೃಷಿಕ ವಿ.ಸಿ.ರುದ್ರಪ್ಪ ಕಳವಳ ವ್ಯಕ್ತಪಡಿಸಿದರು.‘ಸ್ಯಾಲ್ಮೆನೆಲ್ ಮುಕ್ತ’

ಸ್ಯಾಲ್ಮೆನೆಲ್‌ ಬ್ಯಾಕ್ಟೀರಿಯಾ ಮುಕ್ತ ಮಸಾಲೆ ಪದಾರ್ಥವನ್ನೇ ಸಂಬಾರು ಮಂಡಳಿ ಸರಬರಾಜು ಮಾಡುತ್ತಿದೆ ಎಂದು ಮಂಡಳಿ ಅಧ್ಯಕ್ಷ ಡಾ. ಜಯತಿಲಕ್‌ ಪ್ರತಿಕ್ರಿಯಿಸಿದರು. ‘ಜನತೆ ಶುದ್ಧವಾದ ಸಂಬಾರು ಪದಾರ್ಥ ಬಯಸುತ್ತಾರೆ. ಅದನ್ನು ನಾವು ಪೂರೈಸುತ್ತಿದ್ದೇವೆ’ ಎಂದು ಅವರು ಕೊಚ್ಚಿನ್‌ನಿಂದ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.‘ಯಾವುದೇ ಮಸಾಲೆ ಪದಾರ್ಥವನ್ನು ರಫ್ತು ಮಾಡುವ ಮುನ್ನ ಹಲವು ಬಗೆಯ ತಪಾಸಣೆ ನಡೆಸಿ, ಆ ಸಾಮಗ್ರಿ ಶುದ್ಧ ಎಂಬುದನ್ನು ಖಚಿತಪಡಿಸಿಕೊಳ್ಳುವುದನ್ನು ಭಾರತ ಸರ್ಕಾರ ಕಡ್ಡಾಯಪಡಿಸಿದೆ. ನಮ್ಮ ಸಂಸ್ಥೆಯಿಂದ ರಫ್ತಾಗುವ ಕಾಳುಮೆಣಸು ಸ್ಯಾಲ್ಮೆನೆಲ್ ಮುಕ್ತವಾಗಿದೆ’ ಎಂದು ಕೊಚ್ಚಿಯಲ್ಲಿರುವ ಸಂಬಾರು ಮಂಡಳಿಯ ಉಪ ನಿರ್ದೇಶಕ ಡಾ. ಪಿ.ಎಸ್.ಎಸ್.ಥಂಪಿ ತಿಳಿಸಿದರು. ‘ವೈಜ್ಞಾನಿಕ ಕೊಯ್ಲೋತ್ತರ ವಿಧಾನ ಅಳವಡಿಸಿ, ರಾಸಾಯನಿಕಗಳ ಅವಶೇಷಗಳನ್ನು ತೆಗೆದು ಹಾಕಲಾಗುತ್ತದೆ; ಉಳಿದಂತೆ ರಫ್ತು ಮಾಡುವ ಮುನ್ನ ಹಲವು ಬಗೆಯ ಪರೀಕ್ಷೆಗಳನ್ನು ಕರಾರುವಾಕ್ಕಾಗಿ ನಡೆಸಿ, ಉತ್ತಮ ಗುಣಮಟ್ಟದ ಪದಾರ್ಥಗಳನ್ನೇ ರಫ್ತು ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ರಫ್ತು ನಿಗಾ ಏಜೆನ್ಸಿ ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸದೇ ಯಾವುದೇ ಪದಾರ್ಥಗಳನ್ನೂ ರಫ್ತು ಮಾಡುತ್ತಿಲ್ಲ. ಸಂಬಾರು ಪದಾರ್ಥಗಳು ಸ್ಯಾಲ್ಮೆನಲ್‌ಮುಕ್ತ ಆಗಿರುವುದನ್ನು ಖಚಿತಪಡಿಸಿಕೊಂಡ ಬಳಿಕವಷ್ಟೇ ರಫ್ತು ಮಾಡಲಾಗುತ್ತಿದೆ’ ಎಂದು ಡಾ. ಥಂಪಿ ವಿವರಿಸಿದರು.ಈ ಹಿಂದೆಯೂ ಇದೇ ರೀತಿಯ ಆತಂಕ ಎದುರಾಗಿದ್ದಾಗ, ಅಮೆರಿಕದ ಎಫ್‌ಡಿಎ ಸಹಯೋಗದೊಂದಿಗೆ ಹಲವು ಮಾರ್ಗದರ್ಶಿ ಸೂತ್ರಗಳನ್ನು ಮಂಡಳಿಯು ರೂಪಿಸಿತ್ತು. ಅವುಗಳನ್ನು ಈಗಲೂ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರಲಾಗುತ್ತಿದೆ ಎಂದು ಡಾ. ಥಂಪಿ ಹೇಳಿದರು.ಸುಮಾರು 11,100 ಕೋಟಿ ರೂಪಾಯಿ ಮೊತ್ತದ 7 ಲಕ್ಷ ಟನ್‌ ಸಂಬಾರು ಪದಾರ್ಥಗಳನ್ನು 2012–13ರ ಅವಧಿಯಲ್ಲಿ ಭಾರತ ಅಮೆರಿಕಕ್ಕೆ ರಫ್ತು ಮಾಡಿದೆ. ಇದರ ಹಿಂದಿನ ವರ್ಷ 9,700 ಕೋಟಿ ರೂಪಾಯಿ ಮೊತ್ತದ 5.75 ಲಕ್ಷ ಟನ್‌ಗಳಷ್ಟು ಪ್ರಮಾಣದ ಪದಾರ್ಥಗಳನ್ನು ರಫ್ತು ಮಾಡಲಾಗಿತ್ತು. ಅರಿಷಿಣ, ಲವಂಗ, ಯಾಲಕ್ಕಿ, ಕೇಸರಿ, ಶುಂಠಿ, ಜೀರಿಗೆ, ಹವೀಜ, ಬೆಳ್ಳುಳ್ಳಿ ಸೇರಿದಂತೆ ಭಾರತದಲ್ಲಿ ಉತ್ಪಾದನೆಯಾಗುವ ಹಲವು ಬಗೆಯ ಸಂಬಾರು ಪದಾರ್ಥಗಳಿಗೆ ಅಮೆರಿಕದಲ್ಲಿ ಉತ್ತಮ ಮಾರುಕಟ್ಟೆಯಿದೆ.‘ಮಾಹಿತಿ ಸಂಗ್ರಹದ್ದೇ ಸಂಶಯ’

‘ಎಫ್‌ಡಿಎ’ದ ಆಹಾರ ಸುರಕ್ಷತಾ ವಿಭಾಗದ ತಜ್ಞರು ಕಳೆದ ಸೆಪ್ಟೆಂಬರ್‌ಬಲ್ಲಿ ಕೊಚ್ಚಿನ್‌ಗೆ ಬಂದು, ಒಂದು ವಾರದ ತರಬೇತಿ ನೀಡಿದ್ದರು. ಇದರಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿಶ್ವವಿದ್ಯಾಲಯದ ವಿಜ್ಞಾನಿಗಳು, ಉದ್ಯಮಿಗಳು ಭಾಗವಹಿಸಿದ್ದರು. ಪರಿಸ್ಥಿತಿ ಹೀಗಿರುವಾಗ, ಯಾವುದೋ ಸಂಸ್ಥೆಯೊಂದು ನೀಡಿದ ಮಾಹಿತಿಯ ಖಚಿತತೆಯನ್ನು ಸಂಬಾರು ಮಂಡಳಿ ಸಂಶಯದಿಂದಲೇ ಪ್ರಶ್ನಿಸಲಿದೆ.

– ಡಾ. ಪಿ.ಎಸ್‌.ಎಸ್‌.ಥಂಪಿಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry