‘ಸ್ವರ್ಣಂ ಟ್ರಿನಿಟಿ’ ಯುವಜನೋತ್ಸವಕ್ಕೆ ಚಾಲನೆ

7

‘ಸ್ವರ್ಣಂ ಟ್ರಿನಿಟಿ’ ಯುವಜನೋತ್ಸವಕ್ಕೆ ಚಾಲನೆ

Published:
Updated:
‘ಸ್ವರ್ಣಂ ಟ್ರಿನಿಟಿ’ ಯುವಜನೋತ್ಸವಕ್ಕೆ ಚಾಲನೆ

ಬೆಳಗಾವಿ: ಕೆಎಲ್‌ಇ ವಿಶ್ವವಿದ್ಯಾಲಯದ ಜವಾಹರಲಾಲ್‌ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಸುವರ್ಣ ಮಹೋತ್ಸವದ ಅಂಗವಾಗಿ ಇಲ್ಲಿನ ಬಿ.ಎಸ್‌. ಜೀರಗೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಸ್ವರ್ಣಂ ಟ್ರಿನಿಟಿ–2013’ ಯುವಜನೋತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಯಿತು.ಯುವಜನೋತ್ಸವಕ್ಕೆ ಚಾಲನೆ ನೀಡಿ ಚಲನಚಿತ್ರ ನಟ ದಿಗಂತ ಮಾತನಾಡಿ, ‘ನೀವು ಹೊಗಳುತ್ತಿರುವಷ್ಟು ಖ್ಯಾತ ನಟ ನಾನಲ್ಲ. ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನವಿದ್ದರೆ ಚಲನಚಿತ್ರ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಬಲ್ಲೆ. ಅಭಿಮಾನಿಗಳ ಪ್ರೋತ್ಸಾಹ ಹಾಗೂ ಉತ್ತೇಜನವೇ ಕಲಾವಿದರಿಗೆ ಶ್ರೀರಕ್ಷೆ’ ಎಂದು ಹೇಳಿದರು.‘ನಾನು ಬಾಲ್ಯದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸೇರಬೇಕೆಂಬ ಕನಸು ಕಂಡಿದ್ದೆ. ಆದರೆ ಚಲನಚಿತ್ರ ನಟನಾದೆ. ಒಂದು ವೇಳೆ ನಾನು ವೈದ್ಯಕೀಯ ಕ್ಷೇತ್ರಕ್ಕೆ ಸೇರಿದ್ದರೆ ಖಂಡಿತವಾಗಿಯೂ ಕೆಎಲ್‌ಇ ವಿಶ್ವವಿದ್ಯಾಲಯದಲ್ಲಿಯೇ ವ್ಯಾಸಂಗ ಮಾಡುತ್ತಿದ್ದೆ’ ಎಂದು ತಿಳಿಸಿದರು.‘ವೈದ್ಯಕೀಯ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ ಸೃಜನಾತ್ಮಕತೆಯಿಂದ ಕೂಡಿತ್ತು. ಖಂಡಿತವಾಗಿಯೂ ನೀವು ಡಾಕ್ಟರ್‌ ಆಗ್ಲಿಲ್ಲ ಅಂದ್ರೆ ಆ್ಯಕ್ಟರ್‌ ಖಂಡಿತಾ ಆಗುತ್ತಿದ್ದೀರಿ. ನೋಡಿ, ಡಾಕ್ಟರ್‌ ಆಗ್ತಿರೋ ಅಥವಾ ನನ್ನ ತರಹ ಆ್ಯಕ್ಟರ್‌ ಆಗ್ತಿರೋ ಎಂದು ಹೇಳುವ ಮೂಲಕ ವಿದ್ಯಾರ್ಥಿಗಳನ್ನು ನಗೆಗಡಲಲ್ಲಿ ತೇಲಿಸಿದರು.ಕೆಎಲ್‌ಇ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿ.ಡಿ.ಪಾಟೀಲ ಮಾತನಾಡಿ, ‘ಸೋಲೇ ಗೆಲುವಿನ ಸೋಪಾನ. ಸೋಲು ಗೆಲುವಗಿಂತ ಭಾಗವಹಿಸುವಿಕೆ ಮುಖ್ಯ. ಹೀಗಾಗಿ ವಿದ್ಯಾರ್ಥಿಗಳು ಸೋಲಿನ ಬಗ್ಗೆ ಚಿಂತಿಸದೇ ಯುವಜನೋತ್ಸವದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಈ ವೇದಿಕೆಯನ್ನು ಬಳಸಿಕೊಂಡು ತಮ್ಮಲ್ಲಿ ಅಡಗಿರುವ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಹೊರಹಾಕಬೇಕು. ಈ ಮೂಲಕ ಕ್ರಿಯಾತ್ಮಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.ಯುವಜನೋತ್ಸವದಲ್ಲಿ ಸುಮಾರು 30 ವೈದ್ಯಕೀಯ ಮಹಾವಿದ್ಯಾಲಯಗಳ 2500 ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡಾ ಚಟುವಟಿಕೆ ಸೇರಿದಂತೆ 50 ವಿವಿಧ ಸ್ಪರ್ಧೆಗಳು ನಡೆಯಲಿವೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಗುರುತಿಸಲು ಈ ಯುವಜನೋತ್ಸವ ವೇದಿಕೆಯಾಗಲಿದೆ ಎಂದರು.ಜವಾಹರಲಾಲ್‌ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಎಸ್‌.ಗೋಧಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ವಿ.ಎಸ್‌. ಸಾಧುನವರ ಅಧ್ಯಕ್ಷತೆ ವಹಿಸಿದ್ದರು. ಉತ್ಕರ್ಷ ಕುಳ್ಳಿ, ಪೂಜಾ ಕವಟಗಿಮಠ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಡಾ. ಎನ್‌.ಎಂ.ಪಾಟೀಲ ಸ್ವಾಗತಿಸಿದರು. ಕೆಎಲ್‌ಇ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ. ರಂಜೀತ ಕಣಗಲೆ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry