ಭಾನುವಾರ, ಜನವರಿ 19, 2020
20 °C

‘ಸ್ವಾರ್ಥಕ್ಕೆ ಸಹಕಾರಿ ಕ್ಷೇತ್ರ ಬಳಕೆ ಬೇಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಸಹಕಾರ ಕ್ಷೇತ್ರದ ಕಾರ್ಖಾನೆಗಳು ಸ್ಪರ್ಧೆ ಎದುರಿಸಲಾ­ರದೆ ಸಂಪೂರ್ಣ ನೆಲಕಚ್ಚಿದ್ದರೂ ಸಹ­ಕಾರ ಬ್ಯಾಂಕ್‌ಗಳು ರಾಜ್ಯದಲ್ಲಿ ಯಶಸ್ವಿ­ಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಸಹಕಾರ ಸಚಿವ ಎಚ್‌.ಎಸ್‌.­ಮಹಾದೇವಪ್ರಸಾದ್‌ ಅಭಿಪ್ರಾಯ­ಪಟ್ಟರು.ನಗರದಲ್ಲಿ ಭಾನುವಾರ ನಡೆದ ತುಮಕೂರು ಗ್ರೈನ್‌ ಮರ್ಚೆಂಟ್ಸ್‌ ಕೋ–ಆಪರೇಟಿವ್‌ ಬ್ಯಾಂಕ್‌ ಸುವರ್ಣ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ಸಹಕಾರಿ ಕ್ಷೇತ್ರವನ್ನು ಮೂಲ ಉದ್ದೇಶ ಮರೆತು ಸ್ವಾರ್ಥಕ್ಕೆ ಬಳಕೆ ಮಾಡಿ­ಕೊಳ್ಳುವಂತೆ ಆಗಬಾರದು. ಸರ್ವ­ಜನರ ಹಿತ ಸಹಕಾರ ಕ್ಷೇತ್ರದ ಮುಖ್ಯ ಉದ್ದೇಶ ಎಂದು ಹೇಳಿದರು.ಸೌಹಾರ್ದ ಸಹಕಾರ ಕಾಯ್ದೆ ಜಾರಿ­ಯಿಂದ ಜನರಿಗೆ ಪ್ರಯೋಜನವಾಗಿದೆ. ಕೇವಲ ಉಳ್ಳವರಿಗೆ ಸೀಮಿತವಾಗಿದ್ದ ಸಹಕಾರ ಕ್ಷೇತ್ರ ಎಲ್ಲರಿಗೂ ತೆರೆಯು­ವಂತಾಗಿದೆ. ನಿಯಮಗಳು ಕಠಿಣ­ವಾಗಿದ್ದರೂ, ಸಹಕಾರ ಸಂಘಗಳ ಉಳು­ವಿಗೆ ಎಲ್ಲವೂ ಅನಿವಾರ್ಯ. ರಾಷ್ಟ್ರೀಕೃತ ಬ್ಯಾಂಕ್‌ಗಳು ಕೇವಲ ಉಳ್ಳವರಿಗೆ, ಬೃಹತ್ ಉದ್ಯಮಿಗಳಿಗೆ ಮಾತ್ರ ಸಾಲ ನೀಡುತ್ತವೆ. ಆದರೆ ಸಹಕಾರ ಬ್ಯಾಂಕ್‌­ಗಳು ಎಲ್ಲರಿಗೂ ಸಮಾನ ಅವಕಾಶ ನೀಡುತ್ತವೆ ಎಂದು ತಿಳಿಸಿದರು.ರಾಜ್ಯದಲ್ಲಿ 3154 ಕೃಷಿ ಕ್ರೆಡಿಟ್‌ ಸಹಕಾರ ಬ್ಯಾಂಕ್‌ಗಳಿದ್ದು, ಕೃಷಿ ಕ್ಷೇತ್ರಕ್ಕೆ ರೂ. 2727 ಕೋಟಿ ಸಾಲ ನೀಡಿವೆ. 292 ಪಟ್ಟಣ ಸಹಕಾರ ಬ್ಯಾಂಕ್‌­ಗಳಿದ್ದು, ಇದರಲ್ಲಿ 22 ಬ್ಯಾಂಕ್‌ಗಳನ್ನು ಮಹಿಳೆಯರು ನಡೆಸುತ್ತಿದ್ದಾರೆ. ಇವು­ಗಳಲ್ಲಿ 1247 ಕೋಟಿ ದುಡಿಯುವ ಬಂಡವಾಳವಿದ್ದು, 287 ಕೋಟಿ ವಾರ್ಷಿಕ ನಿವ್ವಳ ಲಾಭ ಗಳಿಸಿವೆ. 14126 ಕೋಟಿ ಸಾಲ ನೀಡಲಾಗಿದೆ ಎಂದು ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.­ಜಯಚಂದ್ರ ಮಾತನಾಡಿ, ಅಮೆರಿಕ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಆರ್ಥಿಕ ಕುಸಿತ ಉಂಟಾಗಿ ಬ್ಯಾಂಕ್‌ಗಳು ದಿವಾಳಿಯಾದ ಸಂದರ್ಭದಲ್ಲಿ ದೇಶದ ಬ್ಯಾಂಕಿಂಗ್‌ ವ್ಯವಸ್ಥೆ ಉತ್ತಮವಾಗಿತ್ತು. ಇದರಲ್ಲಿ ಸಹಕಾರ ಕ್ಷೇತ್ರದ ಕೊಡು­ಗೆಯೂ ಇದೆ. ಸಹಕಾರಿ ಕ್ಷೇತ್ರ ಸ್ವಾಯತ್ತವಾಗಿ ಬೆಳೆಯುತ್ತದೆ. ಅಲ್ಲದೆ ಇಲ್ಲಿನ ಸ್ತ್ರೀಶಕ್ತಿ ಸಂಘಗಳು ರೂ. 700 ಕೋಟಿ ಬಂಡವಾಳ ಹೊಂದಿದ್ದು, ಉಳಿ­ತಾಯ ಪ್ರಜ್ಞೆ ಜಾಗೃತವಾಗಿದೆ. ಸಹ­ಕಾರ ಕ್ಷೇತ್ರದಲ್ಲಿ ಮಹಿಳೆಯರು   ಯಶಸ್ವಿಯಾಗಬಹುದು ಎಂಬುದಕ್ಕೆ ನಿದರ್ಶನ ಎಂದು ಹೇಳಿದರು.ಲೆವಿ ಅಕ್ಕಿಗೆ ಕೇಂದ್ರ ಸರ್ಕಾರ ರೂ. 2100 ನಿಗದಿ ಮಾಡಿದ್ದರೂ ರಾಜ್ಯ ಸರ್ಕಾರ ಕ್ವಿಂಟಲ್‌ಗೆ ರೂ. 2400 ನೀಡು­ತ್ತಿದೆ. ರೂ. 300 ಹೆಚ್ಚುವರಿ ನೀಡು­ತ್ತಿರುವುದರಿಂದ ಅಕ್ಕಿ ಗಿರಣಿ ಮಾಲೀಕರು ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿಯದೆ ಸಹಕರಿಸಬೇಕು. ಹಸಿವು ರಹಿತ ರಾಜ್ಯ ಮಾಡುವ ಗುರಿ ಹೊಂದಿದ್ದು, 5 ಲಕ್ಷ ಟನ್‌ ಅಕ್ಕಿ ನೀಡಬೇಕು ಎಂದು ಕೋರಿದರು.ಶಾಸಕ ಕೆ.ಎನ್‌.ರಾಜಣ್ಣ ಮಾತ­ನಾಡಿ, ಸಹಕಾರ ಸಂಘಗಳನ್ನು ನಡೆಸು­ವುದು ಕಷ್ಟದ ಕೆಲಸವಾಗಿದೆ. ಕೇಂದ್ರ ಸರ್ಕಾರ ಸಹಕಾರಿ ಸಂಸ್ಥೆಗಳ ಮೇಲೆ ಶೇ 30ರಷ್ಟು ವರಮಾನ ತೆರಿಗೆ ಹಾಕುತ್ತಿದೆ. ಆದರೆ ವಾಣಿಜ್ಯ ಬ್ಯಾಂಕ್‌ಗಳಿಗೆ ವಾರ್ಷಿಕ 20 ಸಾವಿರ ಕೋಟಿ ಹಣ ನೀಡುತ್ತದೆ. ಇಂತಹ ತದ್ವಿರುದ್ಧ ನೀತಿ ಕೈಬಿಡಬೇಕು ಎಂದು ಆಗ್ರಹಿಸಿದರು.ಬ್ಯಾಂಕ್‌ ಅಧ್ಯಕ್ಷ ಎನ್.ಆರ್‌.­ಜಗದೀಶ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಡಾ.ಎಸ್‌.­ರಫೀಕ್‌­ಅಹ್ಮದ್‌, ಕೆ.ಎಂ.ತಿಮ್ಮರಾಯಪ್ಪ, ಡಾ.ಎಂ.ಆರ್‌.ಹುಲಿನಾಯ್ಕರ್‌, ನಿರ್ದೇಶಕರಾದ ಎಂ.ಪಿ.ಮಹೇಶ್‌, ಆರ್‌.ಜೆ.ಅನಂತರಾಜಯ್ಯ, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೊಂಡ­ವಾಡಿ ಚಂದ್ರಶೇಖರ್‌, ಮುಖಂಡರಾದ ಪರಮಶಿವಯ್ಯ, ಶಫೀಅಹ್ಮದ್‌, ಸಹ-­ಕಾರ ಇಲಾಖೆ ಉಪ ನಿಬಂಧಕ ಬಾಲ­ಶೇಖರ್‌ ಇತರರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)