‘ಹನಿ ಪಾರ್ಕ್: ಪರಿಶೀಲನಾ ಸಮಿತಿ ಶೀಘ್ರ ಭೇಟಿ’

7

‘ಹನಿ ಪಾರ್ಕ್: ಪರಿಶೀಲನಾ ಸಮಿತಿ ಶೀಘ್ರ ಭೇಟಿ’

Published:
Updated:

ಮಡಿಕೇರಿ: ಜೇನು ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಳೆದ ಬಾರಿ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ಹನಿ ಪಾರ್ಕ್ (ಜೇನುಕೃಷಿ  ಉದ್ಯಾನ) ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿತ್ತು. ಈ ನಿಟ್ಟಿನಲ್ಲಿ ಸೂಕ್ತ ಸ್ಥಳವನ್ನು ಪರಿಶೀಲಿಸಲು ರಾಜ್ಯ ಸಮಿತಿಯು ಸದ್ಯದಲ್ಲಿಯೇ ಕೊಡಗು ಜಿಲ್ಲೆಗೆ ಭೇಟಿ ನೀಡಲಿದೆ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಎಚ್.ಎಂ. ಕೃಷ್ಣಮೂರ್ತಿ  ತಿಳಿಸಿದರು.ಜಿಲ್ಲೆಯಲ್ಲಿ ಜೇನು ಕೃಷಿಗೆ ಸೂಕ್ತ ವಾತಾವರಣವಿದೆ. ಇಲ್ಲಿನ ಹವಾಗುಣ ಹಾಗೂ ಅರಣ್ಯವು ಇದಕ್ಕೆ ಪೂರಕವಾಗಿದೆ. ಇದೆಲ್ಲವನ್ನು ಗಮನಿಸಿ, ಸಮಿತಿಯು ತನ್ನ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಹೇಳಿದರು.ಭಾಗಮಂಡಲ, ಕೋರಂಗಾಲ, ಗಾಳಿಬೀಡು, ಕರಿಕೆ, ಜಕ್ಕನಹಳ್ಳಿ, ಶಾಂತಳ್ಳಿ, ಮಾದಾಪುರ, ಬಿ.ಶೆಟ್ಟಿಗೇರಿ, ಕೆದಮುಳ್ಳೂರು, ಬಿರುನಾಣಿ ಮತ್ತಿತರ ಭಾಗಗಳಲ್ಲಿ ಸಹಕಾರಿ ಮಧುವನ ಕೇಂದ್ರಗಳಿದ್ದು, ಈ ಕೇಂದ್ರಗಳಲ್ಲಿ ಜೇನು ಕೃಷಿ ಚಟುವಟಿಕೆಗಳು ನಿರಂತವಾಗಿ ನಡೆಯುತ್ತಿವೆ.ಜಿಲ್ಲೆಯಲ್ಲಿ 9,897 ಜೇನು ಕೃಷಿಕರಿದ್ದಾರೆ. 69,867 ಜೇನು ಪೆಟ್ಟಿಗೆಗಳಿವೆ. 46,623 ಕುಟುಂಬಗಳು ಜೇನು ಕೃಷಿ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ 3,059 ಟನ್ ಜೇನು ತುಪ್ಪ ಉತ್ಪಾದನೆಯಾಗುತ್ತಿದ್ದು, ಜೇನು ತುಪ್ಪದ ಅಂದಾಜು ಮೌಲ್ಯ ಪ್ರತಿ ಕೆ.ಜಿ.ಗೆ 200 ರೂ.ನಂತೆ 61.18 ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ.2 ಕೋಟಿ ಪ್ರಸ್ತಾವನೆ: ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಜೇನು ಕೃಷಿ ಉತ್ತೇಜನಕ್ಕೆ ಸಂಬಂಧಿಸಿದಂತೆ ಸುಮಾರು 2 ಕೋಟಿ ರೂಪಾಯಿಯಷ್ಟು ಕ್ರಿಯಾಯೋಜನೆ ರಚಿಸಲಾಗಿದೆ. ರೂ 1.58 ಕೋಟಿ ಮೊತ್ತದ ಕಾರ್ಯಕ್ರಮಕ್ಕೆ ಅನುಮೋದನೆ ದೊರೆತಿದೆ. ಈಗಾಗಲೇ 51 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಪ್ರೋತ್ಸಾಹ: ಜಿಲ್ಲಾವಾರು ಕಾರ್ಯಕ್ರಮದಡಿ 420 ಮಂದಿಗೆ, ರಾಜ್ಯ ವಲಯದಲ್ಲಿ 50 ಮಂದಿಗೆ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಸಾವಿರ ಮಂದಿಗೆ ಜೇನು ಕೃಷಿಕರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಶೇ.50ರಷ್ಟು ಸಹಾಯಧನ ನೀಡಲಾಗುತ್ತದೆ. ರಾಜ್ಯ ವಲಯದಡಿ 2 ಜೇನು ಪೆಟ್ಟಿಗೆ ಮತ್ತು ಜೇನು ಕುಟುಂಬ ನೀಡಲಾಗುತ್ತದೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಒಂದು ಜೇನು ಕುಟುಂಬಕ್ಕೆ 50 ಜೇನು ಪೆಟ್ಟಿಗೆ ನೀಡಲು ಅವಕಾಶದೆ. ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ಪರಿಶಿಷ್ಟ ಜಾತಿ ಪಂಗಡದವರಿಗೆ ಜೇನು ಕೃಷಿಗೆ ಉತ್ತೇಜನ ನೀಡುವ ಕಾರ್ಯಕ್ರಮವಿದೆ ಎಂದು ಅವರು ಹೇಳಿದರು.ಗುತ್ತಿಗೆ ಆಧಾರದಲ್ಲಿ ನೇಮಕ: ತೋಟಗಾರಿಕೆ ಇಲಾಖೆಯ ವ್ಯಾಪ್ತಿಗೊಳಪಡುವ ಮಧುವನ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಹೊರಗುತ್ತಿಗೆ ಆಧಾರದಲ್ಲಿ ಅರ್ಹರನ್ನು ನಿಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.  ಜೇನುಕೃಷಿಯಲ್ಲಿ ಆಸಕ್ತಿ ಹೊಂದಿರುವವರು ಆಯಾ ತಾಲ್ಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿ, ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry