‘ಹಾಸ್ಟೆಲ್‌ ಅವ್ಯವಸ್ಥೆ ಸರಿಪಡಿಸಲು ಗಡುವು’

7
ಸಚಿವ ಅಭಯಚಂದ್ರ ಜೈನ್‌ ದಿಢೀರ್‌ ಭೇಟಿ

‘ಹಾಸ್ಟೆಲ್‌ ಅವ್ಯವಸ್ಥೆ ಸರಿಪಡಿಸಲು ಗಡುವು’

Published:
Updated:

ಚಿಕ್ಕಮಗಳೂರು: ನಗರದಲ್ಲಿರುವ ವಿದ್ಯಾರ್ಥಿ ನಿಲಯಗಳಿಗೆ ಸೋಮವಾರ ದಿಢೀರ್‌ ಭೇಟಿ ನೀಡಿ ಮೂಲಸೌಕರ್ಯ ಮತ್ತು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್‌, 15 ದಿನದೊಳಗೆ ಜಿಲ್ಲೆಯಲ್ಲಿರುವ ಎಲ್ಲ ಹಾಸ್ಟೆಲ್‌ಗಳಲ್ಲಿರುವ ಅವ್ಯವಸ್ಥೆ ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಬಾರ್‌ಲೈನ್‌ ರಸ್ತೆಯಲ್ಲಿರುವ ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಮೊದಲು ಭೇಟಿ ನೀಡಿದ ಸಚಿವರು, ಒಂದೊಂದು ಕೊಠಡಿಯಲ್ಲಿ ತಲಾ 8 ವಿದ್ಯಾರ್ಥಿನಿಯರಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಬಡವರು ಸರ್ಕಾರದ ಮೇಲೆ ವಿಶ್ವಾಸವಿಟ್ಟು ಮಕ್ಕಳನ್ನು ವಿದ್ಯಾಭ್ಯಾಸ ಮಾಡಲು ಹಾಸ್ಟೆಲ್‌­ಗಳಿಗೆ ಕಳುಹಿಸುತ್ತಾರೆ. ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಕೂಡ ಸಾಕಷ್ಟು ಹಣ ವಿನಿ­ಯೋಗ ಮಾಡುತ್ತಿದೆ. ನಾವು ನೀಡಿರುವ ಭರ­ವಸೆಗಳು ಭಾಷಣಕ್ಕೆ ಸೀಮಿತವಾಗುವುದನ್ನು ಸರ್ಕಾರ ಸಹಿಸುವುದಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಸ್ಟೆಲ್‌ಗಳಲ್ಲಿರುವ ಮಕ್ಕಳನ್ನು ತಮ್ಮ ಮಕ್ಕಳಂತೆ ಭಾವಿಸಿ, ಗುಣಮಟ್ಟದ ಆಹಾರ ಮತ್ತು ಸೌಕರ್ಯ ಕಲ್ಪಿಸಬೇಕು. 15 ದಿನಗಳ ನಂತರ ಮತ್ತೆ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲಿಸ­ಲಾಗುವುದು. ಸುಧಾರಣೆ ಕಾಣದಿ­ದ್ದರೆ ಕಠಿಣ ಕ್ರಮ ಖಚಿತ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಹಾಸ್ಟೆಲ್‌ನಲ್ಲಿರುವ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿನಿಯರನ್ನು ಸಚಿವರು ವಿಚಾರಿಸಿದಾಗ, ಹಾಸ್ಟೆಲ್‌ನಲ್ಲಿ ಬಿಸಿ ನೀರು ನೀಡುತ್ತಿಲ್ಲ. ಶೌಚಾಲಯ ಸ್ವಚ್ಛತೆ ಇಲ್ಲ. ಚಪ್ಪಲಿ ಸ್ಟ್‍ಯಾಂಡ್‌, ಓದುವ ಮೇಜು, ಮಂಚ ನೀಡಿಲ್ಲ. ಓದಲು ಪತ್ರಿಕೆಗಳು, ನಿಯತಕಾಲಿಕೆಗಳನ್ನು ಹಾಕಿಸುತ್ತಿಲ್ಲ ಎಂದು ಮೆಟ್ರಿಕ್‌ ನಂತರ ಬಾಲಕಿಯರು ದೂರಿ­ದರು. ತಕ್ಷಣವೇ ಈ ಸಮಸ್ಯೆಗಳನ್ನು ನಿವಾರಿಸ­ಬೇಕು ಎಂದು ಸ್ಥಳದಲ್ಲೇ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.ಶೌಚಾಲಯ ಮತ್ತು ಸ್ನಾನಗೃಹಗಳನ್ನು ಎರಡು ದಿನಕ್ಕೊಮ್ಮೆ ಸ್ವಚ್ಛಗೊಳಿಸುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದಾಗ, ಪ್ರತಿದಿನ ಸ್ವಚ್ಛತೆ ಕೆಲಸ ನಿರ್ವಹಿಸಬೇಕು ಎಂದು ಸಚಿವರು ತಾಕೀತು ಮಾಡಿದರು.ಸಂಜೆ 6.30ರ ನಂತರ ಹಾಸ್ಟೆಲ್‌ನಿಂದ ವಿದ್ಯಾರ್ಥಿಗಳು ಹೊರ ಹೋಗುವಂತಿಲ್ಲ. ನಿಗದಿತ ಅವಧಿಯೊಳಗೆ ವಿದ್ಯಾರ್ಥಿಗಳು ಹಾಸ್ಟೆಲ್‌ ಸೇರಿಕೊಳ್ಳಬೇಕು. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಗೆ ಮೊದಲ ಆದ್ಯತೆ ನೀಡಬೇಕು. ಇದರಲ್ಲಿ ಲೋಪವಾಗಿ, ಅಹಿತಕರ ಘಟನೆಗೆ ಆಸ್ಪದವಾದರೆ ಅಧಿಕಾರಿಗಳೇ ತಲೆದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಇದೇ ಸಂದರ್ಭ ಸಚಿವರು ರಾಮನಹಳ್ಳಿಯಲ್ಲಿರುವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಮತ್ತು ಜಯನಗರದಲ್ಲಿರುವ ವಿದ್ಯಾರ್ಥಿನಿಯರ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ವಿಧಾನ ಪರಿಷತ್‌ ಸದಸ್ಯೆ ಗಾಯತ್ರಿ ಶಾಂತೇಗೌಡ ಮತ್ತು ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಂ.ಎಲ್‌.ಮೂರ್ತಿ ಹಾಸ್ಟೆಲ್‌ಗಳಲ್ಲಿರುವ ಅವ್ಯವಸ್ಥೆಯನ್ನು ಸಚಿವರಿಗೆ ವಿವರಿಸಿದರು. ಜಿಲ್ಲಾಧಿಕಾರಿ ಬಿ.ಎಸ್‌.ಶೇಖರಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry