‘ಹೀನರ ಸಹವಾಸದಿಂದ ಯುವಕರ ಮನಸ್ಸು ರೋಗಗ್ರಸ್ಥ’

7

‘ಹೀನರ ಸಹವಾಸದಿಂದ ಯುವಕರ ಮನಸ್ಸು ರೋಗಗ್ರಸ್ಥ’

Published:
Updated:
‘ಹೀನರ ಸಹವಾಸದಿಂದ ಯುವಕರ ಮನಸ್ಸು ರೋಗಗ್ರಸ್ಥ’

ಶಿವಮೊಗ್ಗ: ಹೇಡಿಗಳ, ಹೀನರ ಸಹವಾಸದಿಂದ ಯುವಕರ ಮನಸ್ಸು ರೋಗಗ್ರಸ್ಥವಾಗಿದೆ ಎಂದು ಸ್ವಾಮಿ ತ್ಯಾಗೀಶ್ವರಾನಂದ ಹೇಳಿದರು.ನಗರದ ಎನ್‌ಇಎಸ್‌ ಮೈದಾನದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದ ಅವರ 150 ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಸ್ವಾಮಿ ವಿವೇಕಾನಂದ ರಥಯಾತ್ರೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿರು.ಇಂದಿನ ಯವಕರ ಮನಸ್ಸು ಬಲಿಷ್ಠವಾಗಿಲ್ಲ. ಅವರು ಬಾಹ್ಯವಾಗಿ ಮನುಷ್ಯರಂತೆ ಕಾಣುತ್ತಾರೆ. ಆದರೆ, ಆಂತರಿಕವಾಗಿ ತಮ್ಮಲ್ಲಿ ಸ್ವಾಭಿಮಾನ, ದೇಶಾಭಿಮಾನ ಇದೆಯೇ ಎಂದು ಯುವಕರು ಪ್ರಶ್ನೆ ಮಾಡಿಕೊಳ್ಳಬೇಕು ಎಂದರು.ವಿವೇಕಾನಂದರು ಯಾರನ್ನೂ ವೈಯಕ್ತಿಕಾಗಿ ದೂಷಿಸುತ್ತಿರಲಿಲ್ಲ. ದುಷ್ಟತನ ಬರಲು ಪರಿಸರ ಕಾರಣವೇ ಹೊರತು ವ್ಯಕ್ತಿ ಕಾರಣವಲ್ಲ ಎಂದು ಹೇಳುತ್ತಿದ್ದರು. ಹಾಗೆಯೇ ಯುವಜನತೆ ದಾರಿ ತಪ್ಪುವುದರಲ್ಲಿ ಅವರು ಕಾರಣರಲ್ಲ. ಸಮಾಜ, ವ್ಯವಸ್ಥೆ, ಶಾಲೆ ಮತ್ತು ಪೋಷಕರು ಕಾರಣ ಎಂದರು.ಪ್ರಸ್ತುತ ವಿದ್ಯಾಭ್ಯಾಸದ ಮಟ್ಟ ಕೇವಲ ಕೆಲಸ ಹುಡುಕುವುವರನ್ನು ತಯಾರು ಮಾಡುತ್ತಿದೆಯೇ ಹೊರತು ಉದ್ಯೋಗ ಸೃಷ್ಟಿಸುವವರನ್ನು ತಯಾರಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು,ವಿವೇಕಾನಂದರು ಅಂದಿನ ದಿನಗಳಲ್ಲೇ ದೇಶ ನಿರ್ಮಾಣಕ್ಕೆ ಅವಶ್ಯವಿರವ ಯುವಕರನ್ನು ಸೃಷ್ಟಿಸುವ ಶಿಕ್ಷಣದ ಅವಶ್ಯವಿದೆ ಎಂದು ಕನಸು ಕಂಡಿದ್ದರು ಎಂದು ತಿಳಿಸಿದರು.ಸ್ವಾಮಿ ವಿವೇಕಾನಂದ ಅವರು ಯುವಜನತೆಯ ಮೇಲೆ ನಂಬಿಕೆ ಇಟ್ಟಿದ್ದರು. ಅವರ ಸಾಮರ್ಥ್ಯದ ಮೇಲೆ ವಿಶ್ವಾಸ ಹೊಂದಿದ್ದರು. ಯುವಶಕ್ತಿ ಇದ್ದರೇ ಇಡೀ ಜಗತ್ತನ್ನೇ ಬದಲಾಯಿಸುತ್ತೇನೆ ಎಂಬ ಆತ್ಮವಿಶ್ವಾಸ ಹೊಂದಿದ್ದ ಅವರು, ಯುವಶಕ್ತಿಯನ್ನು ದೇಶದ ಶಕ್ತಿಯನ್ನಾಗಿ ನಿರ್ಮಾಣ ಮಾಡಲು ಚಿಂತಿಸಿದ್ದರು ಎಂದರು.  ಇಂದಿನ ಯುವಕರು ರಾಜಕಾರಣಿಗಳಿಂದ ವ್ಯವಸ್ಥೆ ಭ್ರಷ್ಟವಾಗಿದೆ ಎಂದು ದೂರುತ್ತಾರೆ. ಆದರೆ, ಭ್ರಷ್ಟ ರಾಜಕೀಯ ವ್ಯಕ್ತಿಯನ್ನು ಆರಿಸಿ ಸಮಾಜವೇ ಭ್ರಷ್ಟ ಆಗಿರುವುದು ಅವರ ಅರಿವಿಗೆ ಬರಬೇಕು. ಸರ್ಕಾರ, ರಾಜಕೀಯ ವ್ಯಕ್ತಿಗಳನ್ನು ದೂಷಿಸುವ ಬದಲು ಭ್ರಷ್ಟರ ಆಯ್ಕೆಯನ್ನು ತಡೆಯಲು ಹೋರಾಡಬೇಕು ಎಂದು ಕರೆ ನೀಡಿದರು. ಸ್ವಾಮಿ ವಿನಯಾನಂದ ಮಾತನಾಡಿ, ವಿವೇಕಾನಂದರ ವ್ಯಕ್ತಿತ್ವ ದೇಶ –ವಿದೇಶದ ಮಹಾನ್ ವ್ಯಕ್ತಿಗಳ,

ವಿಜ್ಞಾನಿಗಳ, ಸಾಧಕರ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಿದೆ. ಮಹಾತ್ಮ ಗಾಂಧೀಜಿ ಅವರು ‘ನನ್ನಲ್ಲಿ ದೇಶಾಭಿಮಾನ ಇತ್ತು.ಆದರೆ, ವಿವೇಕಾನಂದರನ್ನು ಓದಿದ ನಂತರ ಅದು ಸಾವಿರಪಟ್ಟು ಹೆಚ್ಚಿತು’ ಎಂದು ಹೇಳಿದ್ದಾರೆ. ಹೀಗೆ ಹಲವು ಸಾಧಕರ ಮೇಲೆ ಪ್ರಭಾವ ಬೀರಿರುವ ವಿವೇಕಾನಂದರು ಇಲ್ಲದಿದ್ದರೆ ನಾವು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೆವು. ಅವರು ದೇಶದ ಶಕ್ತಿ, ಯುವಕರಿಗೆ ಮಾದರಿ ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ತದನಂತರ ವಿಧಾನ ಪರಿಷತ್ತು ಸಭಾಪತಿ ಡಿ.ಎಚ್‌.ಶಂಕರಮೂರ್ತಿ, ಶಾಸಕ ಕೆ.ಬಿ.ಪ್ರಸನ್ನಕುಮಾರ್‌ ಮಾತನಾಡಿದರು.ನಗರಸಭೆ ಅಧ್ಯಕ್ಷೆ ಖುರ್ಷಿದ್‌ ಬಾನು, ವಿಧಾನ ಪರಿಷತ್ತು ಸದಸ್ಯರಾದ ಗಣೇಶ್‌ ಕಾರ್ಣಿಕ್‌, ಆರ್‌.ಕೆ.ಸಿದ್ದರಾಮಣ್ಣ, ಉದ್ಯಮಿ ಮಂಜುನಾಥ ಬಂಡಾರಿ, ರಥಯಾತ್ರೆ ಸಮಿತಿ ಪದಾಧಿಕಾರಿಗಳಾದ ಡಾ.ಚಿಕ್ಕಸ್ವಾಮಿ, ಡಿ.ಎಲ್‌.ಮಂಜುನಾಥ್‌, ರಾಜು, ಎಂ.ಎನ್‌.ಸುಂದರರಾಜ್‌, ಜಿ.ನಂಜುಂಡಪ್ಪ, ಅಶ್ವತ್ಥನಾರಾಯಣಶೆಟ್ಟಿ, ಎಸ್.ಬಿ.ಅಶೋಕ್‌ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.ಸಮಿತಿ ಗೌರವ ಕಾರ್ಯದರ್ಶಿ ಎಸ್‌.ವಿ.ತಿಮ್ಮಯ್ಯ ಸ್ವಾಗತಿಸಿದರು. ಸಮನ್ವಯ ಕಾಶಿ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry