ಭಾನುವಾರ, ಮಾರ್ಚ್ 7, 2021
27 °C

‘ಹುಲಿ’ ಕಂಡಂತೆ ‘ಕಬಾಲಿ’

ಜೆ.ಪಿ. ಕೋಲಾರ Updated:

ಅಕ್ಷರ ಗಾತ್ರ : | |

‘ಹುಲಿ’ ಕಂಡಂತೆ ‘ಕಬಾಲಿ’

ಶಿವಾಜಿ (ರಜನೀಕಾಂತ್) ಅವರನ್ನು ನಾನು ಖುದ್ದಾಗಿ ನೋಡದೆ ಇಪ್ಪತ್ತು ವರ್ಷಗಳೇ ಕಳೆದುಹೋಗಿದ್ದವು. ಈ ಅವಧಿಯಲ್ಲಿ ರಜನೀಕಾಂತ್‌ ಆಗಿ ಶಿವಾಜಿ ಚಲನಚಿತ್ರ ನಕಾಶೆಯಲ್ಲಿ ಕಾಯಂಸ್ಥಾನ ಪಡೆದುಕೊಂಡಿದ್ದರು.ರಜನಿ ಬಿಡುವಿಲ್ಲದ ಕಲಾವಿದ. ನಾನು ಚಲನಚಿತ್ರದ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಾ ಮುಂಬೈ–ಮದ್ರಾಸ್‌ ಸುತ್ತುತ್ತ ಕೊನೆಗೆ ಬೆಂಗಳೂರಿಗೆ ಹಿಂತಿರುಗಿದ್ದೆ. ನಾವಿಬ್ಬರೂ ಪರಸ್ಪರ ಭೇಟಿ ಆಗದಿರಲು ಯಾವುದೇ ಕಾರಣಗಳಿರಲಿಲ್ಲ. ಆದರೂ ಭೇಟಿ ಸಾಧ್ಯವಾಗಿರಲಿಲ್ಲ.ಇತ್ತೀಚೆಗೆ ತೆರೆಕಂಡ ‘ಕಬಾಲಿ’ ಚಿತ್ರದ ಬಿಡುಗಡೆಯ ಅಬ್ಬರ ಜೋರಾಗಿತ್ತಷ್ಟೆ; ಬಿಡುಗಡೆಯ ದಿನ ಹತ್ತಿರವಾಗುತ್ತಿದ್ದ ದಿನಗಳಲ್ಲಿ ಜೀವದ ಗೆಳೆಯನನ್ನು ಮತ್ತೆ ಕಾಣಬೇಕೆಂಬ ಮನಸ್ಸಾಯಿತು. ನಮ್ಮ ಹಳೆಯ ಸ್ನೇಹಿತ ರಾಜ್‌ಬಹದ್ದೂರ್‌ ಮೂಲಕ ಸಂಪರ್ಕಿಸಿದಾಗ ಅಮೆರಿಕದಲ್ಲಿದ್ದ ರಜನಿ ‘ಕಬಾಲಿ’ ಬಿಡುಗಡೆ ನಂತರ ಚೆನ್ನೈಗೆ ವಾಪಸ್ಸಾಗುವುದಾಗಿ ತಿಳಿಯಿತು. ಅದರ ನಂತರ ನಾವೆಲ್ಲ ಸೇರಬಹುದೆಂದು ಅವರು ಹೇಳಿದ್ದರು.ಮೊನ್ನೆ ಆಗಸ್ಟ್ 1ರಂದು ನಮ್ಮ ಭೇಟಿ ನಿಗದಿಯಾಯಿತು. ಬಹದ್ದೂರ್‌ ಜೊತೆ ಮಾತಾಡಿದ ರಜನಿ ಉಳಿಯಲು ಬೇರೆಲ್ಲೂ ಹೋಗಬಾರದೆಂದೂ ತಮ್ಮ ರಾಘವೇಂದ್ರ ಕಲ್ಯಾಣ ಮಂಟಪದಲ್ಲೇ ಕೊಠಡಿಗಳನ್ನೇ ಕಾಯ್ದಿರಿಸಿರುವುದಾಗಿ ತಿಳಿಸಿದ್ದರು.ಬೆಳಿಗ್ಗೆ ಹತ್ತೂವರೆಗೆ ಭೇಟಿ ನಿಗದಿಯಾಗಿತ್ತು. ನಾವು ನಾಲ್ವರು (ಸಿ. ಚಂದ್ರಶೇಖರ್‌, ರಾಜ್‌ಬಹದ್ದೂರ್‌, ರಘುನಂದನ್‌ ಹಾಗೂ ಕಣ್ಣನ್‌) ಕಚೇರಿ ಪ್ರವೇಶಿಸುವ ವೇಳೆಗಾಗಲೇ ರಜನಿ ಬಂದಿದ್ದರು. ನಾವು ಒಳಗೆ ಹೋಗುತ್ತಿದ್ದಂತೆ ತಮ್ಮ ಕೊಠಡಿಯಿಂದ ಹೊರಬಂದು ನಮ್ಮೊಡನೆ ಮಾತಿಗಿಳಿದರು. ಆರಂಭಕ್ಕೆ ತುಸು ದಣಿದಂತಿದ್ದ ರಜನಿ ಲಹರಿ ಮತ್ತೆ ಮಾಮೂಲಿನಂತಾಯಿತು. ಹಳೆಯ ನೆನಪುಗಳು – ಘಟನೆಗಳು ಮಾತುಗಳ ನಡುವೆ ನುಸುಳಿದವು. ನನ್ನ ನೆನಪುಗಳ ಸುರುಳಿ ಬಿಚ್ಚಿಕೊಂಡಿತು.ಅದು ಅರವತ್ತರ ದಶಕ. ಬೆಂಗಳೂರಿನ ಹನುಮಂತನಗರದಲ್ಲಿ ನಮ್ಮಿಬ್ಬರ ವಾಸ. ಶಿವಾಜಿ ‘ಆಚಾರ್ಯ ಪಾಠ ಶಾಲೆ’ಯಲ್ಲಿ ಪಿ.ಯ.ಸಿ. ವಿದ್ಯಾರ್ಥಿ. ನಾನು ನ್ಯಾಷನಲ್‌ ಹೈಸ್ಕೂಲ್‌ನಲ್ಲಿ ಓದುತ್ತಿದ್ದೆ. ಹನುಮಂತನಗರದಲ್ಲಿ ಆಗಿದ್ದ ಆಟದ ತಂಡದಿಂದ ನಾವು  ಗೆಳೆಯರಾಗಿದ್ದೆವು.ಗೋಲಿ, ಚಿನ್ನಿದಾಂಡು, ಕಬ್ಬಡಿ, ಕ್ರಿಕೆಟ್‌ – ಎಲ್ಲ ಆಟಗಳನ್ನೂ ಆಡುತ್ತಿದ್ದೆವು. ಆಗಲೇ ಶಿವಾಜಿ ಒಳ್ಳೆಯ ಮೈಕಟ್ಟು ಹೊಂದಿದ್ದ ಹುಡುಗ. ಅಲ್ಲೇ ಇದ್ದ ‘ಕೆಂಪಣ್ಣ ಜಿಮ್‌’ಗೆ ಹೋಗಿ ಬರುತ್ತಿದ್ದ. ಹರೋಹರ ಗುಡ್ಡದ ‘ಭಾರತ ಮಾತಾ ಸ್ಕೂಲ್‌’ ಪಕ್ಕದಲ್ಲಿ ‘ರಾಜಲಕ್ಷ್ಮಿ ಟೂರಿಂಗ್‌ ಟಾಕೀಸ್‌’ ಇತ್ತು. ಅಲ್ಲಿ ಎಂ.ಜಿ.ಆರ್‌., ಶಿವಾಜಿಗಣೇಶನ್‌ ಚಿತ್ರಗಳನ್ನು ನೋಡುತ್ತಿದ್ದೆವು.ಶಿವಾಜಿ ಹಾಗೂ ನಾನು ಇಬ್ಬರೂ ಉದ್ದದ ಆಳುಗಳೇ. ಶಿವಾಜಿ ಕಪ್ಪಗಿದ್ದರೂ ಸದೃಢ ಮೈಕಟ್ಟು ಹೊಂಡಿದ್ದ. ಷರ್ಟ್‌ ಗುಂಡಿ ಬಿಚ್ಚಿ ವಿಶಾಲವಾದ ಎದೆಯ ಪ್ರದರ್ಶನ ಆತನ ಬಯಕೆ ಕೂಡ. ಜೊತೆಗೆ ಆಗಾಗ ಕಾಲರ್‌ ಹಾರಿಸುವ ಮ್ಯಾನರಿಸಂ!ನಮ್ಮಿಬ್ಬರಿಗೂ ಮೊದಲಿನಿಂದಲೂ ಸಿನಿಮಾ ಹುಚ್ಚು. 1970ರ ಸಮಯದಲ್ಲಿ ಆರ್‌. ನಾಗೇಂದ್ರ ರಾಯರು ಆರಂಭಿಸಿದ ‘ಆತ್ಮಮಿಲನ’ ಚಿತ್ರಕ್ಕೆ ಕ್ಲಾಪರ್‌ಬಾಯ್‌ ಕೆಲಸ ನನಗೆ ಸಿಕ್ಕಿತ್ತು. ತಿಪ್ಪಗೊಂಡನಹಳ್ಳಿ ಬಳಿ ಚಿತ್ರೀಕರಣ ನಡೆದಿತ್ತು. (ರಮೇಶ್‌ –  ಕಲ್ಪನಾ ತಾರಾಗಣ) ಉಳಿದಂತೆ ಗಾಂಧೀನಗರದ ಯುನಿಟ್‌ ರೂಮ್‌ಗೆ ದಿನವೂ ಹೋಗಿಬರಬೇಕಿತ್ತು. ಆಗ ಹನುಮಂತನಗರಕ್ಕೆ ಬರುತ್ತಿದ್ದುದು ಒಂದೇ ಬಸ್‌ – ರೂಟ್‌ ನಂಬರ್‌ 10.

ಅದಕ್ಕೆ ‘ಗಣೇಶ ಭವನ’ವೇ ಕೊನೆಯ ನಿಲ್ದಾಣ. ಅದು ಮಾರ್ಕೆಟ್‌ – ಹನುಮಂತನಗರ ನಡುವೆ ಓಡಾಡುತ್ತಿತ್ತು. ಇನ್ನೊಂದು ಬಸ್‌ ಶ್ರೀನಗರ – ಮೆಜೆಸ್ಟಿಕ್‌ ನಡುವೆ ಓಡಾಡಲಾರಂಭಿಸಿತು. ಆ ಬಸ್‌ನ ನಂಬರ್‌ ‘10ಎ’. ಆ ಬಸ್ಸಿಗೆ ರಾಜ್‌ಬಹದ್ದೂರ್‌ ಚಾಲಕ, ಶಿವಾಜಿ ಕಂಡಕ್ಟರ್‌. ಸಂಪಾದನೆ ಇರಲಿ ಬಿಡಲಿ, ಸಂಜೆ ವೇಳೆಗೆ  ರಮೇಶ್‌ಭಟ್‌ರ ಅಂಗಡಿಯಲ್ಲಿ ಬಾದಾಮಿ ಹಾಲು, ತುಸು ಕತ್ತಲಾದ ಮೇಲೆ ನಾಯ್ಡು ಬಾರ್‌ನಲ್ಲಿ ‘ಜಿ. ಜಿ. ಬ್ರಾಂಡ್‌’ ಬ್ರಾಂದಿ ಸೇವನೆ ಸಾಮಾನ್ಯವಾಗಿದ್ದ ದಿನಗಳವು.ಶಾಲಾ ದಿನಗಳಲ್ಲಿಯೇ ಎಚ್ಚಮನಾಯಕನ ಪಾತ್ರ ವಹಿಸಿದ್ದ ಶಿವಾಜಿಯಲ್ಲಿ ಅಭಿನಯ ಪ್ರತಿಭೆ ಹೊರಬಂದಿತ್ತು. ಆತ ಕಂಡಕ್ಟರ್‌ ಆಗಿಯೇ ಜನರನ್ನು ಸೆಳೆಯುತ್ತಿದ್ದ. ಟಿಕೆಟ್‌ ಹರಿಯುವುದೇ ವಿಶಿಷ್ಟ ಸ್ಟೈಲ್‌ ಆಗಿತ್ತು. ಆತನ ನಡಿಗೆಯ ಶೈಲಿಯೂ ಅಷ್ಟೇ. ಬಿ.ಟಿ.ಎಸ್‌. ಸೇರಿದ ಮೇಲೆ ಅಲ್ಲಿದ್ದ ಕಲಾಸಂಘದ ಮೂಲಕ ಟೌನ್‌ಹಾಲ್‌ನಲ್ಲಿ ನಡೆಯುತ್ತಿದ್ದ ಪೌರಾಣಿಕ ನಾಟಕಗಳಲ್ಲಿ ಶಿವಾಜಿ ಪಾತ್ರ ವಹಿಸುತ್ತಿದ್ದ. ಆತ ಕತ್ತಿ ಬೀಸುವುದೇ ಒಂದು ಬಗೆ. ಗದೆ ಎತ್ತಿ ಹೆಗಲ ಮೇಲಿಡುವುದೇ ಇನ್ನೊಂದು ಶೈಲಿ – ಹೀಗೆ ಶಿವಾಜಿ ಎಲ್ಲರ ಪ್ರಶಂಸೆ ಪಡೆಯುವುದು ಮಾಮೂಲಿಯಾಗಿತ್ತು.ನಾನು ಸಿನಿಮಾರಂಗದಲ್ಲಿ ನಿಧಾನವಾಗಿ ಬದುಕು ಕಂಡುಕೊಳ್ಳಲು ಶುರುಮಾಡಿದ್ದೆ. ಮದ್ರಾಸ್‌ನಲ್ಲಿ ಫಿಲಂ ಟ್ರೈನಿಂಗ್‌ ಸಂಸ್ಥೆಯ ಜಾಹೀರಾತು ರಾಜ್‌ಬಹದ್ದೂರ್‌ ಕಣ್ಣಿಗೆ ಬಿದ್ದು, ಅವರ ಒತ್ತಾಸೆಯಿಂದಲೇ ಶಿವಾಜಿ ಮದ್ರಾಸ್‌ಗೆ  ಹೋಗಿ ತರಬೇತಿ ಶಾಲೆಗೆ ಸೇರ್ಪಡೆಯಾದ.ಸತ್ಯನಾರಾಯಣ್ (ನಟಿ ಸೌಂದರ್ಯ ತಂದೆ), ಬಿ.ಎ. ಅರಸುಕುಮಾರ್‌, ಪಟ್ಟಾಭಿರಾಮ ರೆಡ್ಡಿ ಮೊದಲಾದವರೊಂದಿಗೆ ನಾನು ಕೆಲಸ ಮಾಡುತ್ತಿದ್ದೆ. ಆಗ ತಮಿಳಿನಲ್ಲಿ ಹಿಟ್‌ ಆಗಿದ್ದ ‘ಗಲಾಟಾ ಕಲ್ಯಾಣಂ’ ತಮಿಳು ಚಿತ್ರವನ್ನು ಕನ್ನಡದಲ್ಲಿ ‘ಹೊಸಿಲು ಮೆಟ್ಟಿದ ಹೆಣ್ಣು’ ಹೆಸರಿನಲ್ಲಿ ತಯಾರಿಸಲು ಸಿದ್ಧತೆ ನಡೆದಿತ್ತು. ಹಾಡುಗಳ ರೆಕಾರ್ಡಿಂಗ್‌ಗೆ ಮದ್ರಾಸ್‌ಗೆ ಹೋಗಬೇಕಾಯಿತು. ಆ ಚಿತ್ರಕ್ಕೆ ನಾನು ಅಸಿಸ್ಟೆಂಟ್‌ ಡೈರೆಕ್ಟರ್‌.ಹಾಡುಗಳ ಧ್ವನಿಮುದ್ರಣ ನಡೆಯುತ್ತಿತ್ತು. ಆಗ ಅದೇ ಹೋಟೆಲ್‌ನಲ್ಲಿ ಕೆಲಸದಲ್ಲಿದ್ದವರು ಚಂದ್ರಹಾಸ ಆಳ್ವ. ಅವರೂ ಸಿನಿಮಾ ತರಬೇತಿಗೆ ಸೇರಿದ್ದರು. ‘ಪ್ರಸಾದ್‌’ನಲ್ಲಿ ಗೀತೆಗಳ ಧ್ವನಿಮುದ್ರಣ ವೀಕ್ಷಿಸಲು ತಮ್ಮೊಡನೆ ಇದ್ದ ಕನ್ನಡ ಸ್ನೇಹಿತರನ್ನು ಕರೆತರುವುದಾಗಿ ಅವರು ಹೇಳಿದಾಗ ನಾನು ಒಪ್ಪಿಕೊಂಡೆ.ಆ ತಂಡದಲ್ಲಿ ನನ್ನ ಗೆಳೆಯ ಶಿವಾಜಿ ಇರುವ ಊಹೆಯೂ ಇರಲಿಲ್ಲ. ಆಗ ಅಶೋಕ್‌, ರವೀಂದ್ರನಾಥ್‌, ರಘುನಂದನ್‌, ಅಮರ್‌ಮಲ್ಲಾ ಹಾಗೂ ಶಿವಾಜಿ ಸ್ಟುಡಿಯೋಗೆ ಬರುತ್ತಿದ್ದರು. ಆಗ ಭಾನುವಾರ ‘ಅಮೆರಿಕಾ ಎಂಬೆಸಿ’ಯಲ್ಲಿ ತೋರಿಸುತ್ತಿದ್ದ 16 ಎಂ.ಎಂ. ಚಿತ್ರಗಳನ್ನು ಫಿಲಂ ಇನ್‌ಸ್ಟಿಟ್ಯೂಟ್‌ ವಿದ್ಯಾರ್ಥಿಗಳು ಉಚಿತವಾಗಿ ನೋಡಲು ಅವಕಾಶವಿತ್ತು. ನಾನು ಅವರೊಂದಿಗೆ ಹೋಗುತ್ತಿದ್ದೆ.ತರಬೇತಿ ಪಡೆಯುತ್ತಿದ್ದ ಶಿವಾಜಿ ಸಿಗರೇಟ್‌ ಅನ್ನು ವಿಶೇಷ ರೀತಿಯಲ್ಲಿ ಹಚ್ಚುವುದು, ಕೂಲಿಂಗ್‌ ಗ್ಲಾಸ್‌ ತಿರುಗಿಸಿ ಹಾಕಿಕೊಳ್ಳುವುದು ಇತ್ಯಾದಿ ಮ್ಯಾನರಿಸಂಗಳನ್ನು ತೋರಿಸುತ್ತಿದ್ದ. ಹೀಗೆಯೇ ಮೂರು ತಿಂಗಳು ಕಳೆದುಹೋಯಿತು. ಧ್ವನಿಮುದ್ರಣ ಕಾರ್ಯ ಮುಗಿದು ಚಿತ್ರೀಕರಣ ಶುರುವಾಗಬೇಕಿದ್ದ ಸಮಯಕ್ಕೆ ಬೆಂಗಳೂರಿನಿಂದ ಲಂಕೇಶರ ಪತ್ರ ಬಂತು

ಅಲ್ಲಿ ಪಟ್ಟಾಭಿರಾಮ ರೆಡ್ಡಿ, ‘ಚಂಡಮಾರುತ’ ಚಿತ್ರ ಆರಂಭಿಸಲು ತಯಾರಿ ನಡೆಸಿದ್ದರು. ಆಸ್ಟ್ರೇಲಿಯಾದಿಂದ ಛಾಯಾಗ್ರಾಹಕ ಟಾಂ ಕೋವನ್‌ (‘ಸಂಸ್ಕಾರ’ ಛಾಯಾಗ್ರಾಹಕ) ಬಂದಿದ್ದರು. ನಾನು ಬೆಂಗಳೂರಿಗೆ ಬಂದು ಚಿತ್ರದ ತಯಾರಿಯಲ್ಲಿ ತೊಡಗಿಕೊಂಡೆ.ಚಿಕ್ಕಮಗಳೂರು ಕಡೆಯ ಗೆಳೆಯರೊಬ್ಬರು ನೀವೇ ಯಾಕೆ ಸಿನಿಮಾ ನಿರ್ದೇಶಿಸಬಾರದು ಎಂಬ ಪ್ರಶ್ನೆ ಎಸೆದಿದ್ದು ಇದೇ ಸಂದರ್ಭ. ನಾನು ನರಭಕ್ಷಕ ಹುಲಿಗಳು ಹಾಗೂ ಬುಡಕಟ್ಟು ಜನರ ಬದುಕು ಕುರಿತ ಚಿತ್ರಕಥೆಯನ್ನು ಆಗ ಸಿದ್ಧ ಮಾಡಿಕೊಂಡಿದ್ದೆ.ಶಿವಾಜಿ ತರಬೇತಿ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದ. ನಮ್ಮ ದಿನಚರಿ ಮತ್ತೆ ಮೊದಲಾಯಿತು. ಒಮ್ಮೆ ನಾಯ್ಡು ಬಾರ್‌ನಲ್ಲಿ ಕುಳಿತಾಗ ನನ್ನ ಚಿತ್ರಕಥೆ ವಿಚಾರ ಶಿವಾಜಿಗೆ ಹೇಳಿದೆ. ಆತ ಅದರಲ್ಲಿ ಪಾತ್ರವಹಿಸುವ ಇಂಗಿತ ವ್ಯಕ್ತಪಡಿಸಿದ. ಈ ನಡುವೆ ಕುಣಿಗಲ್‌ ನಾಗಭೂಷಣ್ ಚಿತ್ರಕ್ಕೆ ಶಿವಾಜಿ ಆಯ್ಕೆಯಾಗಿದ್ದು, ಪುಟ್ಟಣ್ಣನವರ ಚಿತ್ರದಲ್ಲೂ ಅಭಿನಯಿಸಿದ್ದ. ಕೆ. ಬಾಲಚಂದರ್‌ ಅವರ ಬಳಿಗೆ ಹೋದಾಗ ತಮಿಳು ಭಾಷೆ ಕಲಿತು ಬರುವಂತೆ ಹೇಳಿಕಳುಹಿಸಿದ್ದರು. ಶಿವಾಜಿ ಮತ್ತೆ ಬೆಂಗಳೂರಿಗೆ ಬಂದು ರಾಜ್‌ಬಹದ್ದೂರ್‌ರಿಂದಲೇ ತಮಿಳು ಕಲಿಯಲು ಆರಂಭಿಸಿದ್ದ.ಬಾಲಚಂದರ್‌ ಗರಡಿಯಲ್ಲಿ ಸಾಮು ತೆಗೆದ ಶಿವಾಜಿರಾವ್‌ ಗಾಯಕ್‌ವಾಡ್‌ಗೆ ರಜನೀಕಾಂತ್‌ ಎಂಬ ಮರು ನಾಮಕರಣವಾಯಿತು. ದಿನದಿನಕ್ಕೆ ಜನಪ್ರಿಯ ನಟನಾಗಿ ಹೆಸರು ಮಾಡತೊಡಗಿದರು ರಜನಿ.ನಾನು ನರಭಕ್ಷಕ ಹುಲಿ ಕುರಿತ ‘ಹುಲಿ ಬಂತು ಹುಲಿ’ ತಯಾರಿಸಿದೆ. ಅದು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾದಲ್ಲಿ ಪ್ರದರ್ಶನಗೊಂಡಿತು. ನಂತರ ಮುಂಬೈಗೆ ಹೋದ ನಾನು ಪ್ರಸಿದ್ಧ ನಿರ್ದೇಶಕ ಮನಮೋಹನ್‌ ದೇಸಾಯಿ ಅವರೊಂದಿಗೆ ಸಹಾಯಕ ನಿರ್ದೇಶಕನಾಗಿ  ಕೆಲಸ ಮಾಡತೊಡಗಿದೆ. ಅಮಿತಾಭ್ ಬಚ್ಚನ್‌ ಅಭಿನಯದ ‘ಮರ್ದ್‌’ ಬಿಡುಗಡೆಯಾದಾಗ ಮತ್ತೆ ಚೆನ್ನೈಗೆ ಹೋದಾಗ ರಜನಿಯನ್ನು ಮಾತಾಡಿಸಿದೆ. ಅವರು ‘ಮರ್ದ್‌’, ‘ಅಲ್ಲಾರಖಾ’ ಚಿತ್ರದ ಕಥೆಗಳನ್ನು ಆಸಕ್ತಿಯಿಂದ ಕೇಳಿ ತಿಳಿದುಕೊಂಡರು.ಕೆಮ್ಮಣ್ಣುಗುಂಡಿಯಲ್ಲಿ ‘ಸಹೋದರರ ಸವಾಲ್‌’ ಚಿತ್ರದ ತೆಲುಗು ಆವೃತ್ತಿ ಚಿತ್ರೀಕರಣಕ್ಕೆ ರಜನಿ ಬಂದಿದ್ದರು. ನಾನು ಅಲ್ಲಿ ‘ದೊಡ್ಡಮನೆ ಎಸ್ಟೇಟ್‌’ ಚಿತ್ರಕಥೆ ಬರೆಯುತ್ತಿದ್ದೆ. ಅವರೇ ನನ್ನ ಗುರುತು ಹಿಡಿದು ಅಂದು ಸಂಜೆ ಒಂದು ಗೋಷ್ಠಿ ಏರ್ಪಡಿಸಿದರು.

ರಜನಿ ದಿನದಿಂದ ದಿನಕ್ಕೆ ಎತ್ತರಕ್ಕೆ ಏರುತ್ತಿದ್ದರು. ನಾನು ಮನಮೋಹನ ದೇಸಾಯಿ ನಿಧನಾನಂತರ ಬೆಂಗಳೂರಿಗೆ ವಾಪಸ್ಸಾಗಿ ಹೆಚ್ಚಾಗಿ ಡಾಕ್ಯುಮೆಂಟರಿಗಳನ್ನೇ ಮಾಡುತ್ತಿದ್ದೆ.* * *

ವರ್ಷಗಳ ಬಳಿಕ ಮೊನ್ನೆ ಮಾತಿಗೆ ಕುಳಿತಾಗ ಇಲ್ಲಿರುವ ಹಲವು ಘಟನೆಗಳು ಚರ್ಚೆಗೆ ಬಂದವು. ಅಲ್ಲಿದ್ದ ಎಲ್ಲಾ ಗೆಳೆಯರ ಪೂರ್ಣ ವಿವರಗಳನ್ನು ರಜನಿ ಕೇಳಿ ತಿಳಿದುಕೊಂಡರು. ಮನೆ, ಮಡದಿ, ಮಕ್ಕಳು ಯಾವ ವಿವರವನ್ನು ಅವರು ಬಿಡಲಿಲ್ಲ. ನಮ್ಮಗಳ ಸ್ಥಿತಿಗತಿ, ಹಣಕಾಸು ಪರಿಸ್ಥಿತಿ ಎಲ್ಲವನ್ನೂ ಪ್ರತಿಯೊಬ್ಬರಿಂದಲೂ ತಿಳಿದುಕೊಂಡರು. ಅಗತ್ಯವಾದರೆ ಯಾವುದೇ ನೆರವಿನ ಧ್ವನಿ ಅವರಲ್ಲಿತ್ತು.

ಹಿಂದಿನ ಯಾವ ಘಟನೆಗಳನ್ನೂ ಅವರು ಮರೆತಿರಲಿಲ್ಲ. ಎಲ್ಲರ ಬದುಕಿನ ಏರಿಳಿತಗಳ ಮಾತುಗಳು ಎರಡು ಗಂಟೆಗಳಷ್ಟು ಕಾಲ ನಡೆದವು. ‘ಕಬಾಲಿ’ ಬಿಡುಗಡೆಯ ಮಾರುಕಟ್ಟೆ ವಿಚಾರಗಳು ನಡುವೆ ಹಾದುಹೋದವು. ಕುಟುಂಬಗಳ ಆಗುಹೋಗು ಚರ್ಚೆಗೆ ಬಂತು. ಮಧ್ಯಾಹ್ನದ ಊಟವೂ ಅಲ್ಲೇ ಆಯಿತು. ರಾತ್ರಿ ಪಾರ್ಟಿಗೆ ಎಲ್ಲಾ ಏರ್ಪಾಡುಗಳನ್ನು ಮಾಡಿಸಿದರು ರಜನಿ.ರಜನಿ ಅವರ ಭೇಟಿ ಬದುಕಿನ ಸಾಗಿಬಂದ ಹಾದಿಯ ಅವಲೋಕನಕ್ಕೆ ನೆಪ ಒದಗಿಸಿತು. ಗೆಳೆಯರ ಭೇಟಿಯಿಂದ ರಜನಿ ಕೂಡ ಉಲ್ಲಾಸಗೊಂಡಿದ್ದರು. ತುಂಬ ಎತ್ತರಕ್ಕೆ ಏರಿದ ವ್ಯಕ್ತಿಯೊಬ್ಬ ತನ್ನ ಹಳೆಯ ಗೆಳೆಯರ ಬಗ್ಗೆ ಇಷ್ಟೊಂದು ಸ್ನೇಹಭಾವ ಹೊಂದಿರುವುದು ಈ ಕಾಲಕ್ಕೆ ತೀರ ಅಪರೂಪದ ಗುಣವೇ ಸರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.