ಸೋಮವಾರ, ಜೂನ್ 21, 2021
29 °C
ಬೀದರ್‌ ಪಶುವೈದ್ಯಕೀಯ ವಿ.ವಿ ನೇಮಕ ಪ್ರಕ್ರಿಯೆ

‘ಹೈ.ಕ ಭಾಗದವರಿಗೆ ಮೀಸಲಾತಿಯಲ್ಲಿ ಅನ್ಯಾಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಬೀದರ್‌ನಲ್ಲಿರುವ ಪಶುವೈದ್ಯ­ಕೀಯ ವಿಶ್ವವಿದ್ಯಾಲಯದಲ್ಲಿ ನಡೆಯು­ತ್ತಿ­ರುವ ವಿವಿಧ ಹುದ್ದೆಗಳ ನೇಮಕಾತಿ­ಯಲ್ಲಿ ಸಂವಿಧಾನದ 371ನೇ ಕಲಂ ಅನ್ವಯ ಲಭ್ಯವಾಗಿರುವ ಮೀಸಲಾತಿ ನಿಯಮಗಳನ್ನು ಸರಿಯಾಗಿ ಜಾರಿಗೊಳಿ­ಸುತ್ತಿಲ್ಲ ಎಂದು ದೂರಲಾಗಿದೆ.



ಈ ಕುರಿತು ಗುರುವಾರ ಹೇಳಿಕೆ ನೀಡಿರುವ ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಗಂಗಾಧರ ಕುಷ್ಟಗಿ, ನೇಮಕಾತಿಗೆ ಸಂಬಂಧಿಸಿದಂತೆ ಅನ್ಯಾಯ ಕಣ್ಣೆದುರಿಗೇ ನಡೆಯುತ್ತಿ­ದ್ದರೂ ಹೈ.ಕ ಭಾಗದ ಸಚಿವರು, ಶಾಸಕರು ಅರಿವಿಲ್ಲದವರಂತೆ ವರ್ತಿಸುತ್ತಿ­ದ್ದಾರೆ ಎಂದು ಆರೋಪಿಸಿದರು.



ಬೀದರ್‌ನಲ್ಲಿರುವ ಪಶು ವೈದ್ಯಕೀಯ ಕಾಲೇಜಿಗೆ ಅಂದಾಜು ನೂರರಷ್ಟು ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಸರ್ಕಾರವೇ ನಿರ್ಧರಿಸಿರುವ ಹೊಸ ಮೀಸಲಾತಿ ನಿಯಮಗಳ ಪ್ರಕಾರ ಹೈ.ಕ ಭಾಗದವರಿಗೆ ಶೇ 75–80ರಷ್ಟು ಹುದ್ದೆಗಳನ್ನು ಮೀಸಲಿಡ­ಬೇಕಾ­ಗಿತ್ತು. ಆದರೆ ರಾಜ್ಯ ಮಟ್ಟದ ನೇಮಕಾತಿ ಪ್ರಕ್ರಿಯೆ ಎಂದು ನೆಪ ಒಡ್ಡಿ ಈ ಭಾಗದವರಿಗೆ ಕೇವಲ ಶೇ 8ರಷ್ಟು ಹುದ್ದೆಗಳನ್ನು ಮಾತ್ರ ಮೀಸಲಿಟ್ಟಿರು­ವುದು ಅನ್ಯಾಯದ ಪರಮಾವಧಿ­ಯಾಗಿದೆ ಎಂದು ಗಂಗಾಧರ ಹೇಳಿದ್ದಾರೆ.



ವಿಶ್ವವಿದ್ಯಾಲಯದ ನೇಮಕಾತಿ ಕೇವಲ ಈ ಭಾಗಕ್ಕೆ ಸೀಮಿತವಾಗಿಲ್ಲ ಎಂದು ಅಧಿಕಾರಿಗಳು ವಾದಿಸುತ್ತಾರೆ. ಆದರೆ ಬೀದರ್‌ನಲ್ಲಿರುವ ಪಶುವೈ­ದ್ಯಕೀಯ ಕಾಲೇಜಿಗೆ ಈ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತಿರುವುದರಿಂದ ಇಲ್ಲಿಯ ಜನರಿಗೆ ನಿಗದಿತ ಮೀಸಲಾತಿ ದೊರೆಯಬೇಕು ಎಂದು ಕೇಳುವ ಹಕ್ಕು ಈ ಭಾಗದವರಿಗೆ ಇದೆ ಎಂದಿದ್ದಾರೆ.



ಅಲ್ಲದೇ ಸರ್ಕಾರ ಒಪ್ಪಿದರೆ ಹೈ.ಕ ಭಾಗದವರಿಗೆ ಉದ್ಯೋಗ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಿಸಲು ಸಾಧ್ಯವಿದೆ ಎಂಬುದು ನಿಯಮಗಳಲ್ಲಿದೆ. ಹಾಗಾಗಿ ಅನುಮತಿ ಪಡೆಯುವುದಕ್ಕಾಗಿ ಈಚೆಗೆ ನಡೆದ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಈ ವಿಷಯ ಪ್ರಸ್ತಾಪವಾಗಿತ್ತು. ಆದರೆ ಮೀಸಲಾತಿ ನಿಯಮಾವಳಿ ರಚನೆಯ ಉಪಸಮಿತಿ ಅಧ್ಯಕ್ಷರಾಗಿದ್ದ ಗ್ರಾಮೀಣಾ­ಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲರೇ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬುದು ಗೊತ್ತಾಗಿದ್ದು, ಇದು ದುರದೃಷ್ಟಕರ ಸಂಗತಿ ಎಂದರು.



ಹೈ.ಕ ಪ್ರದೇಶದ ಜನರಿಗೆ ಸಂವಿಧಾ­ನಬದ್ಧ ಸೌಲಭ್ಯಗಳನ್ನು ದೊರಕಿಸಿಕೊ­ಡು­ವುದೆಂದರೆ ಬೇರೆ ಭಾಗದ ಕೆಲ ಪ್ರಮುಖ ಸಚಿವರಿಗೆ ಬೇಡವಾದ ಸಂಗತಿಯಾಗಿದೆ. ಆದರೆ ಈ ಹುನ್ನಾರ­ವನ್ನು ಇಲ್ಲಿಯ ರಾಜಕಾರ­ಣಿಗಳು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಗಂಗಾಧರ ಆಕ್ರೋಶ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.