ಬುಧವಾರ, ಜೂನ್ 23, 2021
30 °C

‘ಹೊಗೆ ರಹಿತ ಒಲೆ’ಗಳತ್ತ ಮಹಿಳೆಯರ ಚಿತ್ತ!

ಪ್ರಜಾವಾಣಿ ವಾರ್ತೆ/ ಸುಭಾಸ ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

‘ಹೊಗೆ ರಹಿತ ಒಲೆ’ಗಳತ್ತ ಮಹಿಳೆಯರ ಚಿತ್ತ!

ಗುಲ್ಬರ್ಗ:  ‘ಹೊಗೆ ರಹಿತ ಒಲೆ’ಗಳನ್ನು ನಿರ್ಮಿಸಿ ಕೊಡುವ ಮೂಲಕ ಗ್ರಾಮೀಣ ಮಹಿಳೆಯರಿಗೆ ನೆಮ್ಮದಿಯ ಜೀವನ ಕಲ್ಪಿಸಲು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮುಂದಾಗಿದೆ.ಆಳಂದ ತಾಲ್ಲೂಕಿನ ಕಡಂಗಚಿ ಗ್ರಾಮದಲ್ಲಿರುವ ಕೇಂದ್ರೀಯ ವಿ.ವಿಯು, ಆಳಂದ ತಾಲ್ಲೂಕಿನ ಕಡಗಂಚಿ ಮತ್ತು ಸುಂಟನೂರ ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದು, ಅಲ್ಲಿನ ಮಹಿಳೆಯರಿಗೆ ಹೊಗೆ ರಹಿತ ಒಲೆಗಳನ್ನು ಉಚಿತವಾಗಿ ನಿರ್ಮಿಸಿ ಕೊಡುತ್ತಿದೆ. ಅಲ್ಲದೇ, ಒಲೆ ನಿರ್ಮಿಸುವ ಬಗ್ಗೆ 10 ಮಹಿಳೆಯರಿಗೆ ಈಗಾಗಲೇ ತರಬೇತಿ ನೀಡಿದೆ.ಕೇಂದ್ರೀಯ ವಿವಿಯಲ್ಲಿ ‘ಸಿಯುಕೆ ಇನೋವೇಷನ್ ಕ್ಲಬ್’ ಆರಂಭಿಸಲಾಗಿದ್ದು, ಅದರ ಮೂಲಕ ವಿವಿಯ ಸುತ್ತಲಿನ ಗ್ರಾಮಸ್ಥರಿಗೆ ಕೌಶಲ ತರಬೇತಿ ನೀಡಲಾಗುತ್ತಿದೆ. ಈ ಪೈಕಿ ಹೊಗೆ ರಹಿತ ಒಲೆಗಳ ನಿರ್ಮಾಣವೂ ಒಂದಾಗಿದೆ.ವಿವಿಯ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಲಕ್ಷ್ಮಣ ಹಾಗೂ ಭೂಗೋಳಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರಿಯಾ ನಾರಾಯಣ ಅವರು ‘ಇನೋವೇಷನ್ ಕ್ಲಬ್‌’ನ ಉಸ್ತುವಾರಿ ವಹಿಸಿಕೊಂಡಿದ್ದು, ಹೊಗೆ ರಹಿತ ಒಲೆಗಳ ನಿರ್ಮಾಣ ಮತ್ತು ತರಬೇತಿ ನೀಡುವಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಕಡಗಂಚಿ ಗ್ರಾಮದಲ್ಲಿ 5 ಮಹಿಳೆಯರಿಗೆ ತರಬೇತಿ ನೀಡಲಾಗಿದ್ದು, 40 ಒಲೆ ನಿರ್ಮಿಸಲಾಗಿದೆ. ತರಬೇತಿ ಪಡೆದ ಮಹಿಳೆಯರು ಗ್ರಾಮದ ಇತರೆ ಮಹಿಳೆಯರಿಗೆ ತರಬೇತಿ ನೀಡುತ್ತಿದ್ದು, ಒಂದು ಒಲೆ ನಿರ್ಮಿಸಿ ಕೊಡಲು ₨ 250 ಶುಲ್ಕ ತೆಗೆದುಕೊಳ್ಳುತ್ತಾರೆ. ಒಲೆ ನಿರ್ಮಾಣಕ್ಕೆ ₨ 900 ರಿಂದ 1 ಸಾವಿರ ವೆಚ್ಚ ತಗುಲುತ್ತಿದ್ದು, ಇದನ್ನು ಕೇಂದ್ರೀಯ ವಿವಿ ಭರಿಸುತ್ತದೆ. ಅದೇ ರೀತಿ, ಸುಂಟನೂರು ಗ್ರಾಮದಲ್ಲಿ ಈಗಾಗಲೇ 20 ಒಲೆಗಳನ್ನು ನಿರ್ಮಿಸಲಾಗಿದೆ.‘ಅರಣ್ಯ ಇಲಾಖೆಯು ಹೊಗೆ ರಹಿತ ಒಲೆಗಳನ್ನು ನಿರ್ಮಿಸಲು ಪ್ರೋತ್ಸಾಹ ಜತೆಗೆ ಅದಕ್ಕೆ ಬೇಕಾದ ಸಾಮಗ್ರಿಗಳನ್ನು ನೀಡುತ್ತದೆ. ಆದರೆ, ಒಲೆಗಳನ್ನು ಹೇಗೆ ನಿರ್ಮಿಸಿಕೊಳ್ಳಬೇಕು ಎಂಬುದು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಗೊತ್ತಿಲ್ಲ. ವಿವಿ ವತಿಯಿಂದ ತರಬೇತಿ ನೀಡಿರುವುದರಿಂದ ಒಲೆ ನಿರ್ಮಿಸುವ ಕಲೆ ಅವರಿಗೆ ಗೊತ್ತಾಗಿದೆ. ಇದರಿಂದ ಮಹಿಳೆಯರು ನೆಮ್ಮದಿಯಾಗಿ ಅಡುಗೆ ಮಾಡಬಹುದಾಗಿದೆ’ ಎಂದು ಸಹಾಯಕ ಪ್ರಾಧ್ಯಾಪಕ ಡಾ.ಜಿ.ಲಕ್ಷ್ಮಣ ಹೇಳುತ್ತಾರೆ.‘ಗ್ರಾಮೀಣ ಪ್ರದೇಶದ ಮಹಿಳೆಯರು ಅಡುಗೆ ತಯಾರಿಗೆ ಇಂದಿಗೂ ಒಲೆಗಳನ್ನೇ ಅವಲಂಬಿಸಿದ್ದಾರೆ. ಅದರಿಂದ ಹೊರಸೂಸುವ ಹೊಗೆ ದೇಹ ಪ್ರವೇಶಿಸಿ ಶ್ವಾಸಕೋಶ ಕ್ಯಾನ್ಸರ್ ಸೇರಿದಂತೆ ಇತರೆ ರೋಗಗಳಿಗೆ ಕಾರಣವಾಗುತ್ತದೆ.ಈ ಕಾರಣಕ್ಕಾಗಿಯೇ ಹೊಗೆ ರಹಿತ ಒಲೆಗಳನ್ನು ಬಳಸುವಂತೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಎರಡೂ ಗ್ರಾಮಗಳಿಂದ ನಮ್ಮ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಅವರು ಹೇಳುತ್ತಾರೆ.ಒಲೆ ನಿರ್ಮಾಣಕ್ಕೆ ಬೇಕಾದ ಸಾಮಗ್ರಿ

* 4 ಇಂಚು ವ್ಯಾಸ, 10 ಅಡಿ ಪಿವಿಸಿ

    ಪೈಪ್

* 6X6 ಇಂಚು ಅಳತೆಯ ಕಬ್ಬಿಣದ     

   ಒಲೆ

* ಮಣ್ಣು–15 ಬುಟ್ಟಿ

* ಮರಳು–5 ಬುಟ್ಟಿ

* ಕೆಂಪು ಟೈಲ್ಸ್‌–4

* ₨ 900–1 ಸಾವಿರ ಖರ್ಚು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.