ಮಂಗಳವಾರ, ಜೂನ್ 22, 2021
28 °C
ಡಾ.ಎನ್‌.ಎಸ್‌.­ಲಕ್ಷ್ಮಿನಾರಾಯಣ ಭಟ್ಟಗೆ ‘ಶ್ರೀ ಸಾಹಿತ್ಯ ಪ್ರಶಸ್ತಿ’ ಪ್ರದಾನ

‘ಹೊಸಗನ್ನಡ ಸಾಹಿತ್ಯದ ಯುಗಪುರುಷ ಬಿಎಂಶ್ರೀ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕನ್ನಡದ ಉದ್ಧಾರವೆ ಜೀವನದ ಉದ್ದೇಶ ಎಂದು ನಂಬಿದ್ದವರು ಬಿಎಂಶ್ರೀ. ಕನ್ನಡದ ಏಳಿಗೆ­ಗಾಗಿ ಅಹರ್ನಿಶಿ ದುಡಿದವರು ಅವರು’ ಎಂದು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹೇಳಿದರು.ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನವು ನಗರದ ಮಿಥಿಕ್‌ ಸೊಸೈಟಿ­ಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯ­ಕ್ರಮದಲ್ಲಿ ಕವಿ ಡಾ.ಎನ್‌.ಎಸ್‌.­ಲಕ್ಷ್ಮಿನಾರಾಯಣ ಭಟ್ಟ ಅವರಿಗೆ ‘ಶ್ರೀ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.‘ಬಿಎಂಶ್ರೀ ಅವರ ನೇರ ಶಿಷ್ಯನಾಗುವ ಅವಕಾಶ ದೊರೆ­ತಿದ್ದು ನನ್ನ ಪುಣ್ಯ. ಅವರ ಪಾಠವನ್ನು ಕೇಳಿ­ದರೆ ಕಾವ್ಯದ ಆಸ್ವಾದವಾಗುತ್ತಿತ್ತು. ಅವರು ಪಂಪನ ಕಾವ್ಯವನ್ನು ಓದುವ ರೀತಿಯಿಂದಲೆ ಹಳ­ಗನ್ನಡ ಅರ್ಥವಾಗುತ್ತಿತ್ತು. ಅವರ ಉಪನ್ಯಾಸ­ವನ್ನು ಕೇಳಲು ಬೇರೆ ಬೇರೆ ಕಾಲೇಜಿನಿಂದ ವಿದ್ಯಾ­ರ್ಥಿ­ಗಳು ಮಹಾರಾಜ ಕಾಲೇಜಿಗೆ ಬರುತ್ತಿದ್ದರು.  ಅವರ ಪಾಠ ಕೇಳಲು ತರಗತಿಯ ಕೊಠಡಿ ಕಿಕ್ಕಿರಿದು ತುಂಬಿರುತ್ತಿತ್ತು’ ಎಂದು ಸ್ಮರಿಸಿಕೊಂಡರು.‘ಬಿಎಂಶ್ರೀ ಮಹಾ ವಿದ್ವಾಂಸ. ಇಂಗ್ಲಿಷ್‌ ಪ್ರಾಧ್ಯಾ­ಪ­ಕರಾಗಿದ್ದರೂ ಕನ್ನಡದ ಅಭಿಮಾನಕ್ಕಾಗಿ ದುಡಿದ­ವರು. ಅವರ ವೈಯಕ್ತಿಕ ಜೀವನದಲ್ಲಿ ಅನೇಕ ವ್ಯಥೆ­ಗಳಿ­ದ್ದವು. ಆದರೆ, ಅವುಗಳನ್ನು ಮರೆತು ಕನ್ನಡದ ಏಳಿಗೆಗೆ ಶ್ರಮಿಸಿದರು’ ಎಂದು ನುಡಿದರು.‘ಬಿಎಂಶ್ರೀ ಅವರ ಹೆಸರಿನಲ್ಲಿ ಸರ್ಕಾರ ಪ್ರಶಸ್ತಿ­ಯನ್ನು ನೀಡಬೇಕಿತ್ತು. ಆದರೆ, ಅವರ ಮೊಮ್ಮ­ಗಳು ಕಮಲಿನಿ ಶಾ ಬಾಲೂರಾವ್‌ ಅವರು ಅವರ ಅಜ್ಜನ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಿರುವುದು ಶ್ಲಾಘನೀಯ’ ಎಂದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲಕ್ಷ್ಮಿ­ನಾರಾಯಣ ಭಟ್ಟ ಅವರು, ‘ಬಿಎಂಶ್ರೀ ಅವರು ಹೊಸ­ಗನ್ನಡ ಸಾಹಿತ್ಯದ ಯುಗ ಪುರುಷ. ಅವರ ಹೆಸ­ರಿ­ನಲ್ಲಿ ದೊರೆತಿರುವ ಈ ಪ್ರಶಸ್ತಿ ಬೇರೆ ಎಲ್ಲಾ ಪ್ರಶ­ಸ್ತಿಗಿಂತ ಅಮೂಲ್ಯವಾದುದು’ ಎಂದು ಅವರು ಹೇಳಿದರು.‘ಬಿಎಂಶ್ರೀ ಅದ್ಭುತ ವಾಗ್ಮಿಯಾ­ಗಿದ್ದರು. ಕನ್ನಡವೇ ಅವರ ಉಸಿರಾಗಿತ್ತು. ಕನ್ನಡಕ್ಕಾಗಿ ದುಡಿದ ಕನ್ನಡದ ಕಣ್ವ ಎಂಬ ಮಾತು ಸತ್ಯವಾಗಿದೆ’ ಎಂದು ಹೇಳಿದರು.ಸಾಹಿತಿ ಪ್ರೊ.ಎಂ.ಎಚ್‌.ಕೃಷ್ಣಯ್ಯ ಮಾತನಾಡಿ, ‘ಬಿಎಂಶ್ರೀ ಅವರು ಇಂಗ್ಲಿಷ್‌ ಗೀತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು. ಸೊಗಸಾಗಿ ಕವನಗಳನ್ನು ರಚಿಸಿ, ಮುಂದಿನ ಜನಾಂಗ ಕನ್ನಡ ಸಾಹಿತ್ಯವನ್ನು ಕೊಂಡೊಯ್ಯಬೇಕಾದ ಮಾರ್ಗವನ್ನು ತಿಳಿಸಿದರು’ ಎಂದರು.‘ಶ್ರೀ ಸಾಹಿತ್ಯ ಪ್ರಶಸ್ತಿ’

ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನದಲ್ಲಿ ಬಿಎಂಶ್ರೀ ಅವರ ಮೊಮ್ಮಗಳು ಕಮಲಿನಿ ಶಾ.ಬಾಲೂ­ರಾವ್‌ ಅವರು ಬಿಎಂಶ್ರೀ ಅವರ ಹೆಸರಿನಲ್ಲಿ ‘ಶ್ರೀ ಸಾಹಿತ್ಯ ಪ್ರಶಸ್ತಿ’ಯನ್ನು  ಪ್ರತಿ ವರ್ಷ ನೀಡಲು ಹದಿನೈದು ಲಕ್ಷ ರೂಪಾಯಿಗಳ ದತ್ತಿಯನ್ನು  ಸ್ಥಾಪಿಸಿದ್ದಾರೆ.ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆಯನ್ನು ನೀಡಿದ ಸಾಹಿತಿ­ಯೊಬ್ಬರಿಗೆ ಒಂದು ಲಕ್ಷ ರೂಪಾಯಿಯ ನಗದು ಪುರಸ್ಕಾರವನ್ನು ನೀಡಲಾಗುವುದು. ಮೊದಲ ವರ್ಷದ ಪ್ರಶಸ್ತಿಯನ್ನು ಕವಿ ಎಸ್‌.ಲಕ್ಷ್ಮಿನಾರಾ­ಯಣ ಭಟ್ಟ ಅವರಿಗೆ ನೀಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.