ಸೋಮವಾರ, ಜೂನ್ 14, 2021
26 °C

‘ಹೊಸ ಕೋರ್ಸ್ ಒಂದು ಫ್ಯಾಷನ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ‘ಸೂಕ್ತ ಸಿಬ್ಬಂದಿ ಹಾಗೂ ಮೂಲ ಸೌಕರ್ಯ ಇಲ್ಲದಿದ್ದರೂ ಹೊಸ ಕೋರ್ಸ್‌ಗಳನ್ನು ಆರಂಭಿ­ಸುವುದು ವಿ.ವಿ.ಗಳಿಗೆ ಫ್ಯಾಷನ್‌ ಆಗಿದೆ’ ಎಂದು ಕರ್ನಾಟಕ ವಿ.ವಿ. ಕುಲಪತಿ ಪ್ರೊ.ಎಚ್‌.­ಬಿ.ವಾಲೀಕಾರ ಟೀಕಿಸಿದರು.ಶುಕ್ರವಾರ ಸುವರ್ಣ ಮಹೋತ್ಸವ ಸಭಾಂಗಣ­ದಲ್ಲಿ ನಡೆದ ಅಕಾಡೆಮಿಕ್‌ ಕೌನ್ಸಿಲ್‌ ಸಭೆಯಲ್ಲಿ, ಹೊಸ ಕೋರ್ಸ್‌ ಆರಂಭಕ್ಕೆ ಪ್ರಸ್ತಾವ ಬಂದಿರು­ವುದರ ಮೇಲೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ‘ಇತ್ತೀಚೆಗೆ ಬಹುತೇಕ ವಿ.ವಿ.ಗಳಲ್ಲಿ ಸಾರ್ವಜನಿಕ ಆಡಳಿತ ವಿಷಯವನ್ನು ಒಂದು ಪಿಜಿ ಕೋರ್ಸ್‌ ಆಗಿ ಬೋಧಿಸ­ಲಾಗುತ್ತಿದೆ. ಆ ವಿಷಯಕ್ಕೆ ಸರ್ಕಾರ ಮಾನ್ಯತೆ ನೀಡಿದೆಯೋ ಇಲ್ಲವೋ ಎಂಬ ಬಗ್ಗೆ ತಲೆಕೆಡಿಸಿ­ಕೊಳ್ಳದೇ ಸುಮ್ಮನೆ ಕೋರ್ಸ್‌ ಆರಂಭಿಸಲಾಗಿದೆ. ಇಂತಹ ಕೋರ್ಸ್‌ಗಳಿಂದ ಉದ್ಯೋಗಾವಕಾಶ ಸಿಗುತ್ತದೋ ಇಲ್ಲವೋ ಎಂಬುದನ್ನೂ ನೋಡಬೇಕು’ ಎಂದು ಅಭಿಪ್ರಾಯಪಟ್ಟರು.ಇಷ್ಟು ವರ್ಷಗಳವರೆಗೆ ಡಿಪ್ಲೊಮಾ ಕೋರ್ಸ್‌ ಆಗಿ ಬೋಧಿಸಲಾಗುತ್ತಿದ್ದ ಮಹಿಳಾ ಅಧ್ಯಯನ ವಿಷಯವನ್ನು 2014–15ನೇ ಶೈಕ್ಷಣಿಕ ವರ್ಷದಿಂದ ಪಿಜಿ ಕೋರ್ಸನ್ನಾಗಿ ಪರಿವರ್ತಿಸಲು ಸಭೆ ಅನುಮೋದನೆ ನೀಡಿತು. ಈ ಮೂಲಕ ಮಹಿಳಾ ಅಧ್ಯಯನ ಕೇಂದ್ರದ ಬಹುದಿನಗಳ ಕನಸು ಈಡೇರಿದಂತಾಗಿದೆ. ಇದನ್ನು ಸಮರ್ಥವಾಗಿ ನಡೆಸಲು ವಿ.ವಿ. ಕುಲಸಚಿವೆ ಡಾ.ಚಂದ್ರಮಾ ಕಣಗಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ವಾಲೀಕಾರ ಸೂಚಿಸಿದರು.ಮಿಲಿಟರಿ ವಿಷಯ ಸೇರಿಸಲು ಅಪಸ್ವರ: ಸಮಾಜ ವಿಜ್ಞಾನ ನಿಕಾಯವು ಶಿಕ್ಷಣ ಸಂಸ್ಥೆಗಳಲ್ಲಿ ಮಿಲಿಟರಿ ವಿಷಯವನ್ನು ಪಠ್ಯವನ್ನಾಗಿ ಸೇರ್ಪಡೆ ಮಾಡುವ ಸಂಬಂಧ ನೀಡಿದ ಶಿಫಾರಸಿನ ಬಗ್ಗೆ ಸಭೆಯಲ್ಲಿ ಅಪಸ್ವರ ವ್ಯಕ್ತವಾಯಿತು. ಈ ವಿಷಯವನ್ನು ಬೋಧಿಸಲು ತಜ್ಞ ಸಿಬ್ಬಂದಿ ದೊರೆಯುವುದಿಲ್ಲ. ಇದಕ್ಕಾಗಿಯೇ ಪಠ್ಯವನ್ನು ರಚಿಸುವ, ಪ್ರಶ್ನೆಪತ್ರಿಕೆ ತೆಗೆಯುವ, ಪರೀಕ್ಷೆ ನಡೆಸುವ ಅನಿವಾರ್ಯತೆಗಳು ಬರುತ್ತವೆ. ಆದ್ದರಿಂದ ಸದ್ಯಕ್ಕೆ ಅಳವಡಿಸುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಆದರೂ, ಕೆಲ ಸದಸ್ಯರು, ಈಗಾಗಲೇ ಮಿಲಿಟರಿ ಬಗ್ಗೆ ಮಹಾರಾಷ್ಟ್ರದಲ್ಲಿ ಪಠ್ಯವನ್ನು ರೂಪಿಸಲಾಗಿದೆ ಎಂದರು. ಇದರ ಸಾಧ್ಯಾಸಾಧ್ಯತೆಗಳನ್ನು ಮರುಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿದರು.ಬಿಬಿಎ ಕೋರ್ಸ್‌ಗೆ ಕೊಕ್‌

ವಿದ್ಯಾರ್ಥಿಗಳ ಕೊರತೆ ಹಾಗೂ ಕಾಲೇಜಿನಲ್ಲಿ ಸಮರ್ಪಕ ಮೂಲಸೌಕರ್ಯ ಇಲ್ಲದ ಹಿನ್ನೆಯಲ್ಲಿ ಉತ್ತರ ಕನ್ನಡ ಹಾಗೂ ಹಾವೇರಿ ಜಿಲ್ಲೆಯ ಮೂರು ಸರ್ಕಾರಿ ಕಾಲೇಜುಗಳ ಬಿಬಿಎ ಕೋರ್ಸ್‌ಗೆ ಸಂಯೋಜನೆ ನೀಡುವುದಕ್ಕೆ ಕರ್ನಾಟಕ ವಿ.ವಿ. ನಿರಾಕರಿಸಿತು.ಸ್ಥಾನಿಕ ತನಿಖಾ ಸಮಿತಿ (ಎಲ್‌ಐಸಿ) ನೀಡಿದ ಶಿಫಾರಸಿನ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಅಕ್ಕಿ ಆಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿಳುವಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಮಂಕಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಬಿಎ ಕೋರ್ಸ್‌ ಮುಂದುವರಿಸಲು ಆಯಾ ಕಾಲೇಜುಗಳ ಪ್ರಾಚಾರ್ಯರು ಕೋರಿಕೆ ಸಲ್ಲಿಸಿದ್ದರು. ಆದರೆ, ವಿದ್ಯಾರ್ಥಿಗಳ ಕೊರತೆಯ ಹಿನ್ನೆಲೆ­ಯಲ್ಲಿ ವಿ.ವಿ.ಯು ಈ ಕೋರ್ಸ್ ಸಂಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಕುಲಪತಿಗಳು ತಿಳಿಸಿದರು.ಸರ್ಕಾರದಿಂದ ವಿಶೇಷ ಸೂಚನೆ ಬಂದರೆ ಆ ಬಳಿಕ ಸಂಯೋಜನೆ ನೀಡುವ ಕುರಿತು ಪರಿಶೀಲಿಸುವುದಾಗಿಯೂ ಅವರು ಹೇಳಿದರು.ಕೆಸಿಡಿಗೆ ವರ್ಗಾವಣೆ!

ಕರ್ನಾಟಕ ವಿಶ್ವವಿದ್ಯಾಲಯದ ಕೆಲ ಪ್ರಾಧ್ಯಾಪಕರು ಕರ್ನಾಟಕ ಕಾಲೇಜಿನ (ಕೆಸಿಡಿ)ಲ್ಲಿ ಇರುವ ಪಿಜಿ ಕೋರ್ಸ್‌ಗೆ ಪಾಠ ಮಾಡಲು ನಿರಾಸಕ್ತಿ ತೋರುತ್ತಿದ್ದಾರೆ. ಇದು ಹೀಗೇ ಮುಂದುವರೆದರೆ ಬರುವ ಜುಲೈನಲ್ಲಿ ಅಂಥವರನ್ನು ಕೆಸಿಡಿ ಕಾಲೇಜಿಗೇ ವರ್ಗಾವಣೆ ಮಾಡುತ್ತೇನೆ ಎಂದು ಕುಲಪತಿ ಡಾ.ವಾಲೀಕಾರ ಎಚ್ಚರಿಕೆ ನೀಡಿದರು.ಕೆಸಿಡಿ ಕಾಲೇಜಿಗೆ ಹೋಗಿ ಪಾಠ ಮಾಡುವುದಕ್ಕೆ ಕೀಳರಿಮೆ ಬೇಡ. ತಾನು ವಿ.ವಿ. ಪ್ರಾಧ್ಯಾಪಕನಾಗಿದ್ದರೂ ಪ್ರಾಥಮಿಕ ಶಾಲೆಗೆ ಹೋಗಿ ಪಾಠ ಮಾಡಲೂ ಸಿದ್ಧನಾಗುವವ ಮಾತ್ರ ಉತ್ತಮ ಪ್ರಾಧ್ಯಾಪಕ ಎಂದೂ ನೀತಿ ಬೋಧೆ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.