ಭಾನುವಾರ, ಮಾರ್ಚ್ 7, 2021
29 °C
ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಎ.ಎಸ್.ನಾಂದ್ರೇಕರ ಅಭಿಮತ

‘ಹೊಸ ತಂತ್ರಜ್ಞಾನ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹೊಸ ತಂತ್ರಜ್ಞಾನ ಅಗತ್ಯ’

ಬಾಗಲಕೋಟೆ: ‘ದ್ರಾಕ್ಷಿ ಒಣಗಿಸಲು ಹೊಸ ಸಂಶೋಧನೆ ಅಗತ್ಯವಿದೆ’ ಎಂದು ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಎ.ಎಸ್.ನಾಂದ್ರೇಕರ ಹೇಳಿದರು.ನವನಗರದ ತೋಟಗಾರಿಕೆ ಸಂಶೋ­ಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ದ್ರಾಕ್ಷಿ ಬೆಳೆ ಕ್ಷೇತ್ರೋತ್ಸವ ಹಾಗೂ ಉತ್ಪಾದನಾ ತಾಂತ್ರಿಕತೆ ಕುರಿತು ಚರ್ಚಾಗೋಷ್ಠಿಯಲ್ಲಿ ಅವರು ಮಾತನಾಡಿದರು.‘ಪ್ರಸ್ತುತ ರೈತರು ಅನುಸರಿಸುತ್ತಿರುವ ವಿಧಾನದನ್ವಯ ದ್ರಾಕ್ಷಿ ಒಣಗಿಸಲು 12 ದಿನಗಳು ಬೇಕಾಗಿದೆ. ಅದೇ ಸೋಲಾರ್‌ ಸಿಸ್ಟಂನಲ್ಲಿ ಕೇವಲ 2 ದಿನ ಸಾಕಾಗುತ್ತದೆ. ಇಂತಹ ಹೊಸ ವಿಧಾನವನ್ನು ಅನುಷ್ಠಾನಗೊಳಿಸಲು ಸರ್ಕಾರ ಸಹಾಯ ಮಾಡಬೇಕು’ ಎಂದರು. ತೋಟಗಾರಿಕೆ ವಿಜ್ಞಾನಗಳ ವಿಶ್ವ­ವಿದ್ಯಾಲಯದಲ್ಲಿಯೇ ಒಣ ದ್ರಾಕ್ಷಿ ಕುರಿತು ಸಂಶೋಧನೆ ಮಾಡುವಂತಾಗ­ಬೇಕು ಎಂದರು.ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿಗೆ ತಿಂಗಳಿಗೆ ಒಂದು ತಾಲ್ಲೂಕಿನಂತೆ ಮಣ್ಣು ಪರೀಕ್ಷೆ ಮಾಡಬೇಕು ಎಂದರು. ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ತೋಟಗಾರಿಕೆ ವಿಜ್ಞಾನ­ಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಡಾ.ಬಾಬು ರಾಜೇಂದ್ರ ನಾಯಕ, ‘ರೈತರು ಒಂದೇ ಬೆಳೆಯ ಮೇಲೆ ಅವಲಂಬನೆಯಾಗದೇ ಪರ್ಯಾಯ ಬೆಳೆ ಬೆಳೆಯಲು ಮುಂದಾಗಬೇಕು’ ಎಂದು ಹೇಳಿದರು.‘ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಜ್ಞಾನಿಗಳು ಸಂಶೋಧನೆಗಳನ್ನು ಮಾಡಬೇಕು. ವಿಜ್ಞಾನಿಗಳಿಗೂ ಸಂಶೋಧನೆ ಮಾಡಲು ಮುಕ್ತ ಅವಕಾಶ ನೀಡಬೇಕು’ ಎಂದರು.  ಬೆಂಗಳೂರಿನ ಐಐಎಚ್ಆರ್‌ನ ಯೋಜನಾ ಸಂಯೋಜಕ ಡಾ.ಪ್ರಕಾಶ ಪಾಟೀಲ ಮಾತನಾಡಿ, ‘ರೈತರಿಗೆ ಅನು­ಕೂಲವಾಗುವ ನಿಟ್ಟಿನಲ್ಲಿ ಸಂಶೋಧನೆ­ಗಳು ಅಗತ್ಯವಾಗಿದ್ದು, ಅವರ ಸಮಸ್ಯೆಗಳಿಗೆ ಅನುಗುಣವಾಗಿರಬೇಕು. ರೈತರಿಗೆ ಹವಾಮಾನದ ಮುನ್ಸೂಚನೆ­ಗಳು ಅಗತ್ಯವಾಗಿದೆ. ಈ ಕುರಿತು ಮಾಹಿತಿ ನೀಡಲು ವಿಶ್ವವಿದ್ಯಾಲಯ ಮುಂದಾಗಬೇಕು’ ಎಂದು ಹೇಳಿದರು.ತೋವಿವಿಯ ಸಂಶೋಧನಾ ನಿರ್ದೇಶಕ ಡಾ.ಜೆ.ವೆಂಕಟೇಶ ಮಾತ­ಮಾಡಿ, ‘ದ್ರಾಕ್ಷಿ ಒಣಗಿಸಲು ಕೋಯ್ಲೋ­ತ್ತರ ತಂತ್ರಜ್ಞಾನ ಅವಶ್ಯವಿದೆ’ ಎಂದರು.

‘ರೈತರು ವೈಜ್ಞಾನಿಕ ರೀತಿಯಿಂದ ದ್ರಾಕ್ಷಿ ಬೆಳೆಯಲು ಮುಂದಾಗಬೇಕು. ವಿಶ್ವವಿದ್ಯಾಲಯ ನಡೆಸುವ ಪ್ರಾತ್ಯಕ್ಷಿಕೆಗಳ ಲಾಭವನ್ನು ರೈತರು ಪಡೆದುಕೊಂಡು ಸಮಸ್ಯೆಗಳನ್ನು ಬಗೆ ಹರಸಿಕೊಳ್ಳಬೇಕು’ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತೋವಿವಿಯ ಕುಲಪತಿ ಡಾ.ಡಿ.ಎಲ್.­ಮಹೇಶ್ವರ ಮಾತನಾಡಿ, ‘ದ್ರಾಕ್ಷಿ ಉದ್ದಿಮೆಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ವಿವಿಧ ತಳಿಯ ದ್ರಾಕ್ಷಿ ಬೆಳೆಗಳನ್ನು ಬೆಳೆಯಲಾಗಿದೆ’ ಎಂದರು.‘ವಿಜ್ಞಾನಿ ಮತ್ತು ರೈತರ ನಡುವೆ ಚರ್ಚೆ ಅಗತ್ಯವಾಗಿದೆ. ಇದರಿಂದ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುತ್ತದೆ’ ಎಂದರು.

‘ದ್ರಾಕ್ಷಿಯು ಮಾವಿನ ಬೆಳೆಯ ನಂತರ ನಮ್ಮ ದೇಶದ ಪ್ರಮುಖ ವಾಣಿಜ್ಯ ಹಣ್ಣಿನ ಬೆಳೆಯಾಗಿದೆ. ಭಾರತದ ಒಟ್ಟು ದ್ರಾಕ್ಷಿ ಕ್ಷೇತ್ರದಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 16,286 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ’ ಎಂದರು.ಉತ್ತರ ಕರ್ನಾಟಕದ  ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಕಲಬುರ್ಗಿ, ಬಳ್ಳಾರಿ ಜಿಲ್ಲೆಗಳಲ್ಲಿ ದ್ರಾಕ್ಷಿ ಹೆಚ್ಚು ಬೆಳೆಯಲಾಗುತ್ತಿದೆ ಎಂದರು. ದ್ರಾಕ್ಷಿಯಲ್ಲಿ ನೂತನ ತಳಿಗಳು ಹಾಗೂ ಉತ್ಪಾದನೆ ಕುರಿತು ವಿಜ್ಞಾನಿ ಡಾ.ಜಿ.ಎಸ್.ಕರಿಬಸಪ್ಪ, ದ್ರಾಕ್ಷಿಯಲ್ಲಿ ಕೋಯ್ಲೋತ್ತರ ತಂತ್ರಜ್ಞಾನ ಹಾಗೂ ಗುಣಮಟ್ಟದ ಒಣದ್ರಾಕ್ಷಿ ತಯಾರಿಕೆ ಕುರಿತು ಡಾ.ಅಜಯ ಶರ್ಮಾ, ದ್ರಾಕ್ಷಿ ಬೆಳೆಯ ಮುಖ್ಯ ರೋಗಗಳ ಹಾಗೂ ಸಂರಕ್ಷಣಾಕ್ರಮಗಳ ಕುರಿತು ಡಾ.ರಾಘ­ವೇಂದ್ರ ಆಚಾರಿ ಹಾಗೂ ದ್ರಾಕ್ಷಿ ಬೆಳೆಯ ಮುಖ್ಯ ಕೀಟಗಳು ಹಾಗೂ ಸಂರಕ್ಷಣಾ ಕ್ರಮಗಳ ಕುರಿತು ಡಾ.ಎ.ಎಂ.ನಧಾಪ್ ಮಾಹಿತಿ ನೀಡಿದರು.

ಆರಂಭದಲ್ಲಿ ದ್ರಾಕ್ಷಿ ತಳಿಗಳ ಕುರಿತ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಲಾಯಿತು.  ತೋವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯ ಜಿ.ಆರ್.ಗುಜ್ಜನ್ನ­ವರ, ತೋಟಗಾರಿಕೆ ವಿವಿಯ ಬಟವಡೆ ಅಧಿಕಾರಿ  ಹಾಗೂ ಪ್ರಾಧ್ಯಾಪಕ ಡಾ.ಐ.ಬಿ.ಬಿರಾದಾರ, ಸಹ ಪ್ರಾಧ್ಯಾಪಕ ಡಾ.ಕಾಂತೇಶ ಗಾಂಡೋಳಕರ ಇದ್ದರು.ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಹವಾಮಾನ ಆಧಾರಿತ ಮಾಹಿತಿಯನ್ನು ಎಸ್.ಎಂ.ಎಸ್. ಮೂಲಕ ನೀಡಲಾಗುವುದು

ಡಾ.ಡಿ.ಎಲ್‌.ಮಹೇಶ್ವರ್‌,

ಕುಲಪತಿ, ತೋ.ವಿ.ವಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.