ಭಾನುವಾರ, ಜನವರಿ 19, 2020
28 °C

‘2006ರ ಕಾಯ್ದೆ ವಿದ್ಯಾರ್ಥಿಗಳ ಪರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2006ರ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆ ಜಾರಿಯಿಂದ ಯಾವುದೇ ವಿದ್ಯಾರ್ಥಿ­ಗೂ ಅನ್ಯಾಯ ಆಗುವುದಿಲ್ಲ. ಈ ಕಾಯ್ದೆ ವಿದ್ಯಾರ್ಥಿಗಳ ಪರ­ವಾಗಿಯೇ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.ಕಾಯ್ದೆ ಜಾರಿಗೆ ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ‘2006ರ ಕಾಯ್ದೆ ಜಾರಿಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಶೇಕಡ 50ರಷ್ಟು ಮೀಸ­ಲಾತಿ ದೊರೆಯಲಿದೆ.ಪ್ರತಿಯೊಂದು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿನ ಎಲ್ಲ ಸೀಟುಗಳಿಗೆ ಏಕರೂಪ ಶುಲ್ಕ ನಿಗದಿ ಆಗಲಿದ್ದು, ಪ್ರವೇಶ ಪ್ರಕ್ರಿಯೆಯಲ್ಲಿ ಪೂರ್ಣ ಪಾರದರ್ಶಕತೆ ಬರಲಿದೆ’ ಎಂದು ಸಮರ್ಥಿಸಿಕೊಂಡರು.ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ 2006ರಲ್ಲಿ ಕಾಯ್ದೆ ರೂಪಿಸಲಾಗಿತ್ತು. ಇದರ ಜಾರಿಗೆ ಕಳೆದ ವರ್ಷವೇ ನಿರ್ಧಾರ ಕೈಗೊಳ್ಳಲಾಗಿತ್ತು. ನವೆಂಬರ್‌ ತಿಂಗಳಿನಲ್ಲೇ ಸಂಪುಟ ಸಭೆಯಲ್ಲೂ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಈ ಪ್ರಕ್ರಿಯೆ ಆರಂಭಿಸಲಾಗಿದೆ. ಇದು ತರಾತುರಿಯಲ್ಲಿ ಕೈಗೊಂಡ ನಿರ್ಧಾರ ಅಲ್ಲ ಎಂದರು.ಪ್ರವೇಶಕ್ಕೆ ಎರಡೇ ಪರೀಕ್ಷೆ:    ಈ ಕಾ­ಯ್ದೆ­­­­ಯ ಪ್ರಕಾರ ಸರ್ಕಾರಿ ವೃತ್ತಿ ಶಿಕ್ಷಣ ಕಾಲೇಜುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುತ್ತದೆ. ಎಲ್ಲ ಖಾಸಗಿ ಕಾಲೇಜುಗಳಿಗೆ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುತ್ತದೆ. ಖಾಸಗಿ ಕಾಲೇಜುಗಳು ಬಯಸಿದರೆ ಸರ್ಕಾರ ನಡೆಸುವ ಪರೀಕ್ಷೆಯ ವ್ಯಾಪ್ತಿಗೂ ಬರ­ಬಹುದು. ಹಿಂದೆ ಹಲವು ಪ್ರವೇಶ ಪರೀಕ್ಷೆಗಳು ನಡೆಯುತ್ತಿದ್ದವು. ಈಗ ಎರಡೇ ಪರೀಕ್ಷೆ ನಡೆಯಲಿದೆ ಎಂದು ವಿವರಿಸಿದರು.ಆಯಾ ಕಾಲೇಜುಗಳಲ್ಲಿ ಲಭ್ಯ­ವಿರುವ ಸೌಕರ್ಯಗಳನ್ನು ಆಧರಿಸಿ ಶುಲ್ಕ ನಿಗದಿ ಮಾಡಲಾಗುತ್ತದೆ. ಹೈಕೋರ್ಟ್‌ ಮುಖ್ಯನ್ಯಾಯ­ಮೂರ್ತಿ­ಯವರು ಶುಲ್ಕ ನಿಗದಿ ಸಮಿತಿಯನ್ನು ನೇಮಿಸುತ್ತಾರೆ. ಪ್ರವೇಶ ಪ್ರಕ್ರಿಯೆ ಮತ್ತು ಪ್ರವೇಶ ಪ್ರಕ್ರಿಯೆ ಮೇಲುಸ್ತುವಾರಿಗೆ ಪ್ರತ್ಯೇಕ ಸಮಿತಿ ನೇಮಿಸಲಾಗುತ್ತದೆ. ಎರಡೂ ಸಮಿತಿಗಳಿಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳೇ ಅಧ್ಯಕ್ಷ­ರಾಗಿ­ರು­ತ್ತಾರೆ ಎಂದರು.ರಾಜ್ಯದಲ್ಲಿ ಒಟ್ಟು 6,700 ವೈದ್ಯ­ಕೀಯ ಪದವಿ ಸೀಟುಗಳಿವೆ. ಕಳೆದ ವರ್ಷ ಸರ್ಕಾರಿ ಕೋಟಾದಡಿ 2,500 ಸೀಟು­ಗಳನ್ನು ಹಂಚಿಕೆ ಮಾಡಲಾಗಿತ್ತು. ಅದ­ರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಕೋಟಾಕ್ಕೆ ವರ್ಗಾಯಿಸಿದ 900 ಸೀಟು­ಗಳೂ ಸೇರಿದ್ದವು. ಈ ವರ್ಷ ಆರು ಹೊಸ ಸರ್ಕಾರ ವೈದ್ಯಕೀಯ ಕಾಲೇ­ಜುಗಳ ಸೀಟುಗಳ ಸಂಖ್ಯೆ 2,400ಕ್ಕೆ ­ಏರಿಕೆ ಆಗಲಿದೆ. ಇದರಿಂದಾಗಿ ಸರ್ಕಾರಿ ಕೋಟಾದಡಿ ಹಂಚಿಕೆಗೆ ಲಭ್ಯವಾಗುವ ಸೀಟುಗಳ ಸಂಖ್ಯೆಯಲ್ಲಿ ಹೆಚ್ಚಿನ ವ್ಯತ್ಯಾಸ ಆಗುವುದಿಲ್ಲ ಎಂದು ಹೇಳಿದರು.‘ಅನ್ಯಾಯ ಆಗಲು ಬಿಡುವುದಿಲ್ಲ’:

‘ಈವರೆಗೂ ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ನಡುವೆ ಸೀಟು ಹಂಚಿಕೆ ಒಪ್ಪಂದ ಆಗುತ್ತಿತ್ತು. ಇದರಿಂದ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಲಾಭ ಆಗುತ್ತಿತ್ತು. 2006ರ ಕಾಯ್ದೆಯ ಜಾರಿಯಿಂದ ಆಡಳಿತ ಮಂಡಳಿ ಕೋಟಾ ರದ್ದಾಗುತ್ತದೆ. ಸಮಿತಿ ನಿಗದಿ ಮಾಡಿದ ಶುಲ್ಕವನ್ನಷ್ಟೇ ಪಡೆಯಬೇಕಾಗುತ್ತದೆ’ ಎಂದರು.‘ಈ ಕಾಯ್ದೆಯ ಜಾರಿಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಸರ್ಕಾರದ ನಿಯಂತ್ರಣಕ್ಕೆ ಬರುತ್ತವೆ. ಎಲ್ಲ ಸೀಟುಗಳನ್ನೂ ಮೆರಿಟ್‌ ಆಧಾರದಲ್ಲೇ ಭರ್ತಿ ಮಾಡ­ಬೇಕಾ­ಗುತ್ತದೆ’ ಎಂದರು.ಈ ಕಾಯ್ದೆಯ ಜಾರಿಯಿಂದ ಬಡ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ತೊಂದರೆ ಆಗುವುದಿಲ್ಲವೇ? ಎಂಬ ಪ್ರಶ್ನೆಗೆ, ‘ನಿವೃತ್ತ ನ್ಯಾಯಮೂರ್ತಿ ಅಜಿತ್‌ ಗುಂಜಾಳ್‌ ನೇತೃತ್ವದ ಸಮಿತಿ ಶುಲ್ಕ ನಿಗದಿ ಕುರಿತು ಪರಿಶೀಲನೆ ನಡೆ­ಸುತ್ತಿದೆ. ಸಮಿತಿ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಈಗಲೇ ಶುಲ್ಕ ದುಬಾರಿ ಆಗ­ಲಿದೆ ಎಂದು ಊಹಿಸಲು ಸಾಧ್ಯ­ವಿಲ್ಲ’ ಎಂದು ಉತ್ತರಿಸಿದರು.‘ಹಣದ ಕೊರತೆಯಿಂದ ಯಾವುದೇ ವಿದ್ಯಾರ್ಥಿಗೂ ತೊಂದರೆ ಆಗದಂತೆ ಸರ್ಕಾರ ಎಚ್ಚರ ವಹಿಸಲಿದೆ. ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸರ್ಕಾರ ನೆರವಾಗಲಿದೆ’ ಎಂದ ಸಚಿವರು, ಯಾವ ರೀತಿ ನೆರವು ನೀಡುವ ಪ್ರಸ್ತಾವವಿದೆ ಎಂಬುದನ್ನು ಬಹಿರಂಗಪಡಿಸಲಿಲ್ಲ.ಕೋರ್ಟ್‌ಗೆ ಕಾಲೇಜುಗಳು?

‘2006ರ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂ­ತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ­ಗಳ ಪರವಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಕಾಲೇಜುಗಳ ಆಡಳಿತ ಮಂಡಳಿ­ಯವರೇ ಈ ಕಾಯ್ದೆ ಜಾರಿ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ’ ಎಂದು ಸಚಿವರು ಹೇಳಿದರು. ‘ಈ ಕಾಯ್ದೆ ಜಾರಿಯಾ ಗುವುದು ಆಡಳಿತ ಮಂಡಳಿಗಳಿಗೆ ಬೇಕಿಲ್ಲ. ಆದ್ದ­ರಿಂದ ಕಾಯ್ದೆ ಜಾರಿಯ ವಿರುದ್ಧ ಕಾನೂನು ಸಮರ ಆರಂಭಿ­ಸಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ನನಗೆ ಲಭ್ಯವಾಗಿದೆ’ ಎಂದರು.

ಪ್ರತಿಕ್ರಿಯಿಸಿ (+)