‘5 ವರ್ಷದೊಳಗೆ ಸಾವಿರ ನೀರಿನ ಘಟಕ’

7

‘5 ವರ್ಷದೊಳಗೆ ಸಾವಿರ ನೀರಿನ ಘಟಕ’

Published:
Updated:

ಉಡುಪಿ: ‘ಅತಿ ಹೆಚ್ಚಿನ ರೋಗಗಳು ಕುಡಿಯುವ ನೀರಿನಿಂದ ಬರುತ್ತಿದ್ದು, ರಾಷ್ಟ್ರಪತಿ, ಪ್ರಧಾನಮಂತ್ರಿಗಳು ಕುಡಿಯುವ ಶುದ್ಧ ನೀರು ಜನಸಾಮಾನ್ಯರಿಗೂ ಲಭ್ಯವಾಗಬೇಕು. ಆ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಲೀಟರಿಗೆ 10ಪೈಸೆ ದರದಲ್ಲಿ ಜನರಿಗೆ

ಶುದ್ಧ ಕುಡಿಯುವ ನೀರು ನೀಡಲು ಒಂದು ಸಾವಿರ ಘಟಕಗಳನ್ನು ರಾಜ್ಯದಲ್ಲಿ ಮುಂದಿನ ಐದು ವರ್ಷದೊಳಗೆ ಸ್ಥಾಪಿಸಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು.ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ  ಸೋಮವಾರ ‘1.5 ಟೆಸ್ಲಾ ಎಂಆರ್‌ಐ ಸ್ಕ್ಯಾನರ್‌’ಅನ್ನು ಉದ್ಘಾಟಿಸಿ ಬಳಿಕ ಡಾ.ಟಿ.ಎಂ.ಎ.ಪೈ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.ಬಡಜನರಿಗೆ ರಿಯಾಯಿತಿ ದರದಲ್ಲಿ ವೈದ್ಯಕೀಯ ಸೇವೆ ನೀಡುವ ಮೂಲಕ ಮಣಿಪಾಲ ಆಸ್ಪತ್ರೆ ಸರ್ಕಾರಕ್ಕೆ ಮಾದರಿಯಾಗಿದೆ. ಜನಸಾಮಾನ್ಯರಿಗೆ ಸರ್ಕಾರದ ಮೂಲಕ ಉಚಿತ ವೈದ್ಯಕೀಯ ಸೇವೆ ನೀಡಲು ಚಿಂತನೆ ನಡೆಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ವೈದ್ಯರು ಸೇವೆ ಸಲ್ಲಿಸಲು ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ತಿಳುವಳಿಕೆ ನೀಡಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ಮಣಿಪಾಲ ಆಸ್ಪತ್ರೆ ತೆರೆಯಲು ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಅವರು ಭರವಸೆ ನೀಡಿದರು. ಮಣಿಪಾಲ ವಿಶ್ವವಿದ್ಯಾಲಯದ ಕುಲಪತಿ ಡಾ. ರಾಮ್‌ದಾಸ್‌ ಎಂ. ಪೈ ಅಧ್ಯಕ್ಷತೆ ವಹಿಸಿದ್ದರು. 

ಸಚಿವ ವಿನಯ್‌ ಕುಮಾರ್‌ ಸೊರಕೆ, ಶಾಸಕ ಪ್ರಮೋದ್‌ ಮಧ್ವರಾಜ್‌, ವೈದ್ಯಾಧಿಕಾರಿಗಳಾದ ಡಾ. ಸುದರ್ಶನ್‌ ಬಲ್ಲಾಳ್‌, ಡಾ.ಜಿ. ಪ್ರದೀಪ್‌ ಕುಮಾರ್‌, ಡಾ. ಎಂ. ದಯಾನಂದ್‌ ಉಪಸ್ಥಿತರಿದ್ದರು. 9– 11 ಸಮಸ್ಯೆಗಳ ಬಗ್ಗೆ ಸೆ.19ರಂದು ಬೆಂಗ­ಳೂ­ರಿನಲ್ಲಿ ಸಭೆ: ಭೂಪರಿವರ್ತನೆಗೆ ಸಂಬಂಧಿಸಿ ನಮೂನೆ 9– 11ರ ಬಗ್ಗೆ ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 19ರಂದು ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಹಾಗೂ ಅದೇ ದಿನ ಅಥವಾ ಸೆ.21ರಂದು ನಡೆಯುವ ಸಂಪುಟ ಸಭೆಯಲ್ಲಿ ಚರ್ಚಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು  ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು.ಸೋಮವಾರ ಮಣಿಪಾಲದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಸುದ್ಧಿಗಾರರೊಂದಿಗೆ ಮಾತನಾಡಿ ಕಳೆದ ಐದು ವರ್ಷಗಳಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಓ, ಕಾರ್ಯದರ್ಶಿ ಮತ್ತು ಪಂಪ್‌ ಆಪರೇಟರ್‌ ಹುದ್ದೆಗಳು ಖಾಲಿ ಇದ್ದು ಒಂದು ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಸುವುದಾಗಿ ಅವರು ತಿಳಿಸಿದರು. ಸರ್ಕಾರಿ ನೌಕರರಲ್ಲಿ ಸಮಾನತೆ ಭಾವನೆ ಮೂಡಿಸಲು ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ ಇದನ್ನು ಪ್ರತಿಷ್ಠೆಯ ವಿಷಯವಾಗಿಸಬಾರದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry