’ಅನ್ನಭಾಗ್ಯ’ ಯೋಜನೆ ನೌಕರರ ಧರಣಿ

7

’ಅನ್ನಭಾಗ್ಯ’ ಯೋಜನೆ ನೌಕರರ ಧರಣಿ

Published:
Updated:

ಶ್ರೀರಂಗಪಟ್ಟಣ: ಅನ್ನಭಾಗ್ಯ ಯೋಜನೆಯ ದಿನಗೂಲಿ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರ ಕೆಎಸ್‌ಎಫ್‌ಸಿ ಗೋದಾಮು ಎದುರು ಧರಣಿ ನಡೆಸಿದರು.ಬೆಳಿಗ್ಗೆ 10.30ರಿಂದ ಸಂಜೆ 5 ಗಂಟೆ ವರೆಗೆ ಕೆಲಸ ಸ್ಥಗಿತಗೊಳಿಸಿ ಧರಣಿ ನಡೆಸಿದರು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ಕಳೆದ 30 ವರ್ಷಗಳಿಂದ ಹಮಾಲಿಗಳಾಗಿ ದುಡಿಯುತ್ತಿದ್ದೇವೆ. ಆದರೆ ನಮಗೆ ಭವಿಷ್ಯನಿಧಿ ಸೇರಿದಂತೆ ಯಾವುದೇ ಸವಲತ್ತು ಸಿಗುತ್ತಿಲ್ಲ. ಆರೋಗ್ಯ ಹದಗೆಟ್ಟರೆ ಚಿಕಿತ್ಸೆ ಸೌಲಭ್ಯವಿಲ್ಲ. ವಾರದಲ್ಲಿ 15 ದಿನ ಮಾತ್ರ ಕೆಲಸ ಸಿಗುತ್ತದೆ. ಉಳಿದ ದಿನ ಕೆಲಸ ಇಲ್ಲದೆ ಬರಿಗೈಲು ವಾಪಸ್‌ ಹೋಗುತ್ತಿದ್ದೇವೆ. ನಮ್ಮ ಕೆಲಸಕ್ಕೆ ನ್ಯಾಯಯುತ ಕೂಲಿಯೂ ಸಿಗುತ್ತಿಲ್ಲ. ಹಾಗಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಮಹದೇವು ಇತರರು ಸಮಸ್ಯೆ ತೋಡಿಕೊಂಡರು. ಅನ್ನಭಾಗ್ಯ ಯೋಜನೆ ಜಾರಿಗೆ ಬಂದ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ. ಗೋದಾಮಿಗೆ ಬರುವ ಭಾರದ ಅಕ್ಕಿ, ಸಕ್ಕರೆ, ಗೋದಿ ಮೂಟೆಗಳನ್ನು ವಾಹನದಿಂದ ಇಳಿಸುವ ಮತ್ತು ತುಂಬುವ ವೇಳೆ ಅಪಾಯ ಲೆಕ್ಕಿಸದೆ ಕೆಲಸ ಮಾಡುತ್ತಿದ್ದೇವೆ. ಇಷ್ಟಾದರೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ನಮ್ಮನ್ನು ಕಡೆಗಣ್ಣಿನಿಂದ ಕಾಣುತ್ತಿದ್ದಾರೆ.ಸ್ವಲ್ಪ ಲೋಪವಾದರೂ ಲಘು ಭಾಷೆಯಿಂದ ನಿಂದಿಸುವುದಲ್ಲದೆ ಕೆಲಸದಿಂದ ತೆಗೆಯುವ ಬೆದರಿಕೆ ಒಡ್ಡುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ದೌರ್ಜನ್ಯ ನಡೆಸುತ್ತಿದ್ದು, ಕಾರ್ಮಿಕ ಕಾಯಿದೆಯನ್ನು ಉಲ್ಲಂಘಿಸುತ್ತಿದ್ದಾರೆ ಎಂದು ದೂರಿದರು. ರಾಜ್ಯ ಸಮಿತಿ ಸೂಚಿಸಿದರೆ ಮಾತ್ರ ಧರಣಿ ನಿಲ್ಲಿಸುತ್ತೇವೆ. ಇಲ್ಲದಿದ್ದರೆ ಧರಣಿ ಅನಿರ್ಧಿಷ್ಟಾವಧಿ ಮುಂದುವರೆಯಲಿದೆ ಎಂದು ಮುಖಂಡ ರಾಜು ತಿಳಿಸಿದರು. ಲೋಕೇಶ್‌, ಪಾಷ, ಪುಟ್ಟೇಗೌಡ, ಪ್ರಕಾಶ್‌, ಬಸವರಾಜು ಇತರರು ಧರಣಿಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry