ಮಂಗಳವಾರ, ಮಾರ್ಚ್ 9, 2021
18 °C
ನಗರಸಭೆ ಸಾಮಾನ್ಯ ಸಭೆ: ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು

₨ 20.49 ಕೋಟಿ ಬಜೆಟ್‌ ಮಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

₨ 20.49 ಕೋಟಿ ಬಜೆಟ್‌ ಮಂಡನೆ

ಕಾರವಾರ: ನಗರಸಭೆಯ 2014-15 ನೇ ಸಾಲಿಗೆ ₨ 20.49 ಕೋಟಿ ಮೊತ್ತದ ಬಜೆಟ್‌ನ್ನು ನಗರಸಭೆ ಅಧ್ಯಕ್ಷೆ ಲೀಲಾಬಾಯಿ ಠಾಣೇಕರ ಮಂಗಳವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಿದರು.2014–15ನೇ ಸಾಲಿನಲ್ಲಿ ನಗರಸಭೆಯಿಂದ ₨ 4.57 ಕೋಟಿ ಆದಾಯ ಹಾಗೂ ಸರ್ಕಾರದಿಂದ ₨ 15.49 ಕೋಟಿ ಅನುದಾನ ಬರಬಹುದೆಂದು ನಿರೀಕ್ಷಿಸಲಾಗಿದೆ. ₨ 18.49 ಕೋಟಿ ವೆಚ್ಚವನ್ನು ತೋರಿಸಲಾಗಿದ್ದು, ₨ 1.99 ಕೋಟಿ ಉಳಿತಾಯ ಮಾಡಲಾಗಿದೆ. 

ಮೂಲಸೌಕರ್ಯಕ್ಕೆ ಒತ್ತು: ಈ ಬಾರಿಯ ಬಜೆಟ್‌ನಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕಚೇರಿ ನಿರ್ವಹಣೆ, ವಾಹನ ಖರೀದಿಗಾಗಿಯೂ ದೊಡ್ಡಮಟ್ಟದ ಹಣ ಮೀಸಲಿಡಲಾಗಿದೆ.ಮೀನು ಮಾರುಕಟ್ಟೆ ನಿರ್ಮಾಣಕ್ಕೆ ₨ 1 ಕೋಟಿ, ರಸ್ತೆ ಡಾಂಬರೀಕರಣ, ಪಾದಚಾರಿ ಮಾರ್ಗಗಳ ನಿರ್ಮಾಣಕ್ಕಾಗಿ ₨ 1.20 ಕೋಟಿ ಮೀಸಲಿಟ್ಟಿರುವುದು ಈ ಬಾರಿಯ ವಿಶೇಷ ಯೋಜನೆಗಳಾಗಿವೆ. ರಸ್ತೆ ಬದಿ ಚರಂಡಿ ನಿರ್ಮಾಣಕ್ಕಾಗಿ ಮೀಸಲು ಹಣವನ್ನು ಈ ಸಲ ₨ 1 ಕೋಟಿಗೆ ಹೆಚ್ಚಿಸಲಾಗಿದೆ.ಉಳಿದಂತೆ ಸ್ಮಶಾನ ಕಾಮಗಾರಿ ₨ 40 ಲಕ್ಷ, ನೀರು ವಿತರಣಾ ವ್ಯವಸ್ಥೆ ಕಾಮಗಾರಿಗೆ  ₨ 35 ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆಗೆ  ₨ 15 ಲಕ್ಷ, ಬೀದಿ ದೀಪಗಳ ನಿರ್ವಹಣೆಗೆ ₨ 35 ಲಕ್ಷ, ಶೌಚಾಲಯಗಳ ದುರಸ್ತಿಗಾಗಿ ₨ 4 ಲಕ್ಷ, ನಾಗರಿಕ ವಿನ್ಯಾಸದ ಕಾಮಗಾರಿ ಹಾಗೂ ಉದ್ಯಾನವನ ಸುಧಾರಣೆಗಾಗಿ ₨ 70 ಲಕ್ಷ ಕಾಯ್ದಿರಿಸಲಾಗಿದೆ. ತುರ್ತು ಸಂದರ್ಭದಲ್ಲಿ ನೀರು ಸರಬರಾಜು ಮಾಡಲು ಮತ್ತು ನೈರ್ಮಲ್ಯ ಸಾಮಗ್ರಿ ಖರೀದಿಗಾಗಿ ತಲಾ ₨ 5 ಲಕ್ಷ ಮೀಸಲಿಡಲಾಗಿದೆ.ಆಕ್ಷೇಪ: ಬಜೆಟ್‌ಲ್ಲಿ ಈ ಬಾರಿ ಒಳಚರಂಡಿ ಕಾಮಗಾರಿ ದುರಸ್ತಿ ಹಾಗೂ ಹೊರ ಗುತ್ತಿಗೆಗಾಗಿ ₨ 9 ಲಕ್ಷ ರೂಪಾಯಿ ಮೀಸಲಿಟ್ಟಿರುವುದಕ್ಕೆ ಸದಸ್ಯ ದೇವಿದಾಸ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು.‘ಒಳಚರಂಡಿ ನಿರ್ವಹಣೆಯನ್ನು ಇನ್ನೂ ನಗರಸಭೆ ಹಸ್ತಾಂತರಿಸಿಕೊಂಡಿಲ್ಲ. ಆದರೂ ಪ್ರತಿ ಬಜೆಟ್‌ಲ್ಲಿ ಒಳಚರಂಡಿ ನಿರ್ವಹಣೆಗಾಗಿ ಹಣ ಮೀಸಲಿಡಲಾಗುತ್ತಿದೆ. ಈ ಬಾರಿ ಇದಕ್ಕೆ ಅವಕಾಶ ನೀಡಬಾರದು’ ಎಂದರು.‘ಒಳಚರಂಡಿಯನ್ನು ನಗರಸಭೆ ಹಸ್ತಾಂತರಿಸಿಕೊಳ್ಳದೇ ಇದ್ದರೂ ಆಗಾಗ ಒಳಚರಂಡಿಯ ಮ್ಯಾನ್‌ಹೋಲ್‌ ಸೋರಿಕೆಯಾಗುತ್ತಿರುತ್ತದೆ. ಗುತ್ತಿಗೆ ಪಡೆದ ಕಂಪೆನಿ ಇದರ ನಿರ್ವಹಣೆ ಮಾಡುತ್ತಿಲ್ಲ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ತಾತ್ಕಾಲಿಕ ನಿರ್ವಹಣೆಗೆ ಹಣ ಅಗತ್ಯ’ ಎಂದು ಸದಸ್ಯ ಸಂದೀಪ ತಳೇಕರ ಸ್ಪಷ್ಟನೆ ನೀಡಿದರು.ಪ್ರಮಾಣ ವಚನ ಸ್ವೀಕಾರ: ನಗರಸಭೆಗೆ ಆಯ್ಕೆಯಾದ ನೂತನ ಸದಸ್ಯರು ಸಾಮಾನ್ಯ ಸಭೆ ಆರಂಭಕ್ಕೂ ಮೊದಲು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಗರಸಭೆ ಅಧ್ಯಕ್ಷೆ ಲೀಲಾಬಾಯಿ ಠಾಣೇಕರ ಪ್ರತಿಜ್ಞಾವಿಧಿ ಬೋಧಿಸಿದರು.ಮೀನು ಮಾರುಕಟ್ಟೆ ನಿರ್ಮಾಣಕ್ಕೆ ₨1 ಕೋಟಿ

ಈ ಬಾರಿಯ ಬಜೆಟ್‌ನಲ್ಲಿ ನಗರದ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇಲ್ಲಿಯ ಮೀನು ಮಾರುಕಟ್ಟೆಯ ಅವ್ಯವಸ್ಥೆ ಬಗ್ಗೆ ‘ಪ್ರಜಾವಾಣಿ’ ಇತ್ತೀಚೆಗೆ ವಿಶೇಷ ವರದಿ ಪ್ರಕಟಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.