ಶನಿವಾರ, ಮಾರ್ಚ್ 6, 2021
21 °C
ಮುತ್ತೂಟ್‌ ಫೈನಾನ್ಸ್‌ ನಲ್ಲಿ ಕಳವು: ನಾಲ್ವರು ಆರೋಪಿಗಳ ಬಂಧನ

₹ 1.5 ಕೋಟಿ ಮೌಲ್ಯದ ಚಿನ್ನಾಭರಣ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

₹ 1.5 ಕೋಟಿ ಮೌಲ್ಯದ ಚಿನ್ನಾಭರಣ ವಶ

ರಾಮನಗರ: ­ ಚನ್ನಪಟ್ಟಣದ ಮುತ್ತೂಟ್‌ ಮಿನಿ ಫೈನಾನ್ಸ್‌ ಕಂಪೆನಿಯಲ್ಲಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.‘ಪ್ರಕರಣದ ಪ್ರಮುಖ ಆರೋಪಿ, ಮುತ್ತೂಟ್‌ ಫೈನಾನ್ಸ್‌ನ ಚನ್ನಪಟ್ಟಣ ಶಾಖೆಯ ವ್ಯವಸ್ಥಾಪಕ ಎಂ.ಎಸ್‌. ನವೀನ್‌ ಹಾಗೂ ಆತನ ಕೃತ್ಯಕ್ಕೆ ಸಹಕರಿಸಿದ ಕೊಂಡಾಪುರದ ಯೋಗೀಶ್‌, ಬ್ಯಾಡರಹಳ್ಳಿಯ ಎಚ್‌. ಪ್ರದೀಪ್‌ ಹಾಗೂ ಹುಲುವಾಡಿಯ ಅನಿಲ್‌ಕುಮಾರ್‌ ಅವರನ್ನು ಬಂಧಿಸಲಾಗಿದೆ.ಇವರಿಂದ ಸುಮಾರು ₹ 1.5 ಕೋಟಿ ಮೌಲ್ಯದ 5 ಕೆ.ಜಿ. 60 ಗ್ರಾಂ ಚಿನ್ನಾಭರಣ ಹಾಗೂ ₹  4.33 ಲಕ್ಷ ನಗದು ವಶಪಡಿಸಿ ಕೊಳ್ಳಲಾಗಿದೆ’ ಎಂದು ಕೇಂದ್ರ ವಲಯ ಐಜಿಪಿ ಸೀಮಂತ್‌ಕುಮಾರ್‌ ಸಿಂಗ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.‘ಆರೋಪಿಗಳೆಲ್ಲರೂ ಬಿಬಿಎ ಪದವೀಧರರಾಗಿದ್ದು, ಸಹಪಾಠಿ ಗಳಾದ್ದರು. ನವೀನ್‌ ಒಬ್ಬರೇ ಆಭರಣ ಗಳನ್ನು ಕಳವು ಮಾಡಿದ್ದು, ಅದನ್ನು ಸ್ನೇಹಿತರ ಜೊತೆ ಹಂಚಿಕೊಂಡಿದ್ದರು. ಇದರ ಜಾಡು ಹಿಡಿದು ಪತ್ತೆ ಮಾಡಿ, ಶೇ 98ರಷ್ಟು ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ನವೀನ್‌ ಈ ಹಿಂದೆಯೂ ಕಂಪೆನಿಯಲ್ಲಿ ಸಣ್ಣಪುಟ್ಟ ಕಳ್ಳತನ ಮಾಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ’ ಎಂದು ಅವರು ಮಾಹಿತಿ ನೀಡಿದರು.ಕಂಪೆನಿಗೆ ನೋಟಿಸ್‌: ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿದ, ಮಿತಿಗಿಂತ ಹೆಚ್ಚು ಆಭರಣಗಳನ್ನು ಇಟ್ಟುಕೊಂಡ ಆರೋಪದ ಮೇಲೆ ಸಂಬಂಧಿಸಿದ ಕಂಪೆನಿಗೆ ನೋಟಿಸ್ ಜಾರಿ ಗೊಳಿಸುವುದಾಗಿ ಅವರು ತಿಳಿಸಿದರು. ಈ ಸಂಬಂಧ ಪ್ರತಿ ಜಿಲ್ಲೆಯಲ್ಲಿ ಹಣಕಾಸು ಕಂಪೆನಿಗಳ ಜೊತೆ ಸಭೆ ನಡೆಸಿ ಚರ್ಚಿಸುವುದಾಗಿ ಹೇಳಿದರು. ಮೈಕ್ರೋ ಫೈನಾನ್ಸ್‌ ಕಂಪೆನಿಗಳಿಂದ ನಿಯಮ ಉಲ್ಲಂಘನೆ ಮತ್ತು ಹೆಚ್ಚಿನ ಬಡ್ಡಿದರ ಆಕರಣೆ ದೂರುಗಳ ಕುರಿತು ಪರಿಶೀಲಿಸುವುದಾಗಿ ತಿಳಿಸಿದರು.ಸಿಬ್ಬಂದಿಗೆ ಬಹುಮಾನ: ಎಸ್ಪಿ ಚಂದ್ರಗುಪ್ತ, ಡಿವೈಎಸ್ಪಿ ಲೋಕೇಶ್‌ ಕುಮಾರ್ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಪತ್ತೆ ಮಾಡಿದ ಚನ್ನಪಟ್ಟಣ ಟೌನ್‌ ಠಾಣೆ ಸಿಪಿಐ ವಿ. ನಾರಾಯಣಸ್ವಾಮಿ, ಎಸ್ಐ ಪ್ರಕಾಶ್‌, ಸಿಬ್ಬಂದಿಯಾದ ಎಂ. ರಾಜು, ವರದರಾಜು, ಚನ್ನಪ್ಪ, ರತ್ನಮ್ಮ ಅವರನ್ನು ಒಳಗೊಂಡ ತಂಡಕ್ಕೆ ಇಲಾಖೆಯಿಂದ ₹ 50 ಸಾವಿರ ನಗದು ಬಹುಮಾನ ಕೊಡಿಸುವುದಾಗಿ ಅವರು ಹೇಳಿದರು.ಅಪಘಾತ ತಡೆಗೆ ಕ್ರಮ: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ರಸ್ತೆ ವಿಭಜಕಗಳು ಕೆಳಮಟ್ಟದಲ್ಲಿ ಇರುವ ಕಾರಣ ಪದೇಪದೇ ಅಪಘಾತಗಳು ಸಂಭವಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು ‘ಈ ಬಗ್ಗೆ ಈಗಾಗಲೇ ಪ್ರಾಧಿಕಾರದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಜಂಟಿ ಸಮೀಕ್ಷೆ ನಡಿದಿದೆ’ ಎಂದು ಹೇಳಿದರು.ಏನಿದುಪ್ರಕರಣ?

ಚನ್ನಪಟ್ಟಣದ ಸಾತನೂರು ವೃತ್ತದ ಬಳಿ ಇರುವ ಮುತ್ತೂಟ್‌ ಮಿನಿ ಫೈನಾನ್ಸ್‌ನ ಸ್ಟ್ರಾಂಗ್‌ ರೂಮ್‌ನಲ್ಲಿ ಇಡಲಾಗಿದ್ದ ಸುಮಾರು 5 ಕೆ.ಜಿ. 680 ಗ್ರಾಂ ತೂಕದ ಚಿನ್ನಾಭರಣ ಹಾಗೂ ನಗದನ್ನು ಈಚೆಗೆ ಕಳವು ಮಾಡಲಾಗಿತ್ತು. ಈ ಕುರಿತು ಕಂಪೆನಿಯ ಅಧಿಕಾರಿಗಳು ಚನ್ನಪಟ್ಟಣ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿ, ಕಂಪೆನಿಯ ವ್ಯವಸ್ಥಾಪಕ ನವೀನ್ ಅವರೇ ಕಳವು ಮಾಡಿರುವುದು ಕಂಡುಬಂದಿತ್ತು. ಎಚ್ಚೆತ್ತುಕೊಂಡ ಚನ್ನಪಟ್ಟಣ ಟೌನ್‌ ಪೊಲೀಸರು ಆರೋಪಿ ಪತ್ತೆಗೆ ತಂತ್ರ ಹೆಣೆದಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.