ಭಾನುವಾರ, ಫೆಬ್ರವರಿ 28, 2021
23 °C
ಮಹಾಮಸ್ತಕಾಭಿಷೇಕ ಯಶಸ್ವಿಗೆ ಬದ್ಧ: ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸಚಿವರ ಘೋಷಣೆ

₹ 540 ಕೋಟಿ ಕ್ರಿಯಾ ಯೋಜನೆ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

₹ 540 ಕೋಟಿ ಕ್ರಿಯಾ ಯೋಜನೆ ಸಿದ್ಧ

ಹಾಸನ:  ಶ್ರವಣಬೆಳಗೊಳದಲ್ಲಿ 2018 ರಲ್ಲಿ ನಡೆಯಲಿರುವ ಭಗವಾನ್‌ ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಈಗಿನಿಂದಲೇ ಸಿದ್ಧತೆ ನಡೆಯುತ್ತಿದ್ದು, ಅಂದಾಜು ₹ 540 ಕೋಟಿ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ ಎಂದು ಸಚಿವ ಎ. ಮಂಜು ಹೇಳಿದರು.ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ  70ನೇ ಸ್ವಾತಂತ್ರ್ಯ ದಿನದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ಯಶಸ್ಸಿಗಾಗಿ ಮೂಲ ಸೌಕರ್ಯ, ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಎಲ್ಲರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಜಿಲ್ಲೆಯ ಕೆರೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಕಾಚೇನಹಳ್ಳಿ ಹಾಗೂ ಎತ್ತಿನಹೊಳೆ ಯೋಜನೆಗಳ ಮೂಲಕ ಜಿಲ್ಲೆಯ ಜನರಿಗೆ ಕುಡಿಯುವ ನೀರು ಒದಗಿಸಲು ಕ್ರಮ ವಹಿಸಲಾಗಿದೆ. ಇಂದಿರಾ ಆವಾಸ್, ಬಸವ ವಸತಿ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಯೋಜನೆಯಡಿ 10,412 ಮನೆಗಳ ನಿರ್ಮಿಸಲಾಗಿದೆ.  ಜಿಲ್ಲೆಯಲ್ಲಿ 12,127 ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ, 17,859 ಮಂದಿಗೆ ವಿಧವಾ ವೇತನ, 6704 ಮಂದಿಗೆ ಅಂಗವಿಕಲರ ವೇತನ, 47,347 ಜನರಿಗೆ ಸಂಧ್ಯಾ ಸುರಕ್ಷಾ ಹಾಗೂ 5365 ಮಂದಿಗೆ ರಾಷ್ಟ್ರೀಯ ಕುಟುಂಬ ನೆರವು, 9943 ಜನರಿಗೆ ಅಂತ್ಯ ಸಂಸ್ಕಾರ ನೆರವು ಯೋಜನೆ ಕಲ್ಪಿಸಿಕೊಡಲಾಗಿದೆ ಎಂದು ಹೇಳಿದರು.ಜಿಲ್ಲೆಯಾದ್ಯಂತ 2700 ಎಕರೆ ಪ್ರದೇಶದಲ್ಲಿ 1806 ಬೆಳೆಗಾರರು ರೇಷ್ಮೆ ಕೃಷಿ ಮಾಡಿಕೊಂಡಿದ್ದು, ರೇಷ್ಮೆ ಕೃಷಿ ಅಭಿವೃದ್ಧಿಗಾಗಿ ಮೂರು ವರ್ಷಗಳಲ್ಲಿ ₹  1,219 ಕೋಟಿ ಬಿಡುಗಡೆ ಮಾಡಲಾಗಿದೆ. ಕೆರೆಗಳ ಅಭಿವೃದ್ಧಿಗಾಗಿ ₹ 8613 ಲಕ್ಷ        ಅನುದಾನ ಒದಗಿಸಿದೆ. ಜೊತೆಗೆ 176 ಚೆಕ್‌ ಡ್ಯಾಂ ಕಾಮಗಾರಿ ಕೈಗೊಳ್ಳಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಿ ಅಹವಾಲು ಸ್ವೀಕರಿಸಿ, ಅರ್ಜಿಗಳನ್ನು 15 ದಿನದೊಳಗೆ ಇತ್ಯರ್ಥ ಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ನುಡಿದರು.ಎಲ್ಲರೂ ಸಾಮಾಜಿಕವಾಗಿ, ಶೈಕ್ಷಣಿಕ, ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು. ಆ ಮೂಲಕ ಸದೃಢ ರಾಜ್ಯವನ್ನು ಸೌಹಾರ್ದಯುತ ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಎಲ್ಲರೂ ಪಣ ತೊಡಬೇಕು ಎಂದು ಕರೆ ನೀಡಿದರು.ಶಾಸಕ ಎಚ್.ಎಸ್. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ನಗರಸಭೆ ಅಧ್ಯಕ್ಷ ಎಚ್.ಎಸ್. ಅನಿಲ್‌ಕುಮಾರ್, ಆಹಾರ ನಿಗಮ ಅಧ್ಯಕ್ಷ ಎಸ್.ಎಂ. ಆನಂದ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಟಿ. ಸತೀಶ್, ಜಿಲ್ಲಾಧಿಕಾರಿ ವಿ. ಚೈತ್ರಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್. ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪುರವಾಡ್ ಇದ್ದರು.ಆಕರ್ಷಕ ಪಥಸಂಚಲನ: ಪಥ ಸಂಚಲನದಲ್ಲಿ ಎಂ. ಕೃಷ್ಣ ಅಂಧ ಮಕ್ಕಳ ಶಾಲೆ ಸೇರಿದಂತೆ 20ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು.

ನಗರ ಪೊಲೀಸರು, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಎನ್‌ಸಿಸಿ, ಶಾಲಾ, ಕಾಲೇಜು ವಿದ್ಯಾರ್ಥಿಗಳ ಪಥ ಸಂಚಲನ ಆಕರ್ಷಕವಾಗಿತ್ತು. ಸ್ತಬ್ಧ ಚಿತ್ರಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದ ಗಣ್ಯರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.

ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಸ್ವಾತಿ ಜೆ.ಎಸ್, ಭಾರ್ಗವಿ ಎಚ್.ಎಸ್, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಐಶ್ವರ್ಯ ವಿ. ಯಜಮಾನ್, ನಿಶ್ವಿತ ರವಿ, ಕಾವ್ಯಾ ಬಿ.ಆರ್, ಪದವಿ ಹಂತದಲ್ಲಿ ಚಾಂದಿನಿ ಕೆ.ಆರ್, ಸುಷ್ಮಿತಾ ಡಿ.ಆರ್, ದೀಪಿಕಾ ಎಸ್.ಎನ್, ಅಸ್ಫಿಯಾ ಬಾನು, ವೀಣಾ ಎಸ್.ಎಸ್, ಅನಘಾ ಎಚ್.ಎನ್, ವೇದಾವತಿ. ಕ್ರೀಡಾಪಟು ಪಿ.ಜಿ. ಲಾವಣ್ಯಕುಮಾರ, ಸ್ಕೌಟ್ ಅಂಡ್‌ ಗೈಡ್ಸ್- ವಿಭಾಗದಲ್ಲಿ ಸಮರ್ಥ ಆರ್, ಎಸ್.ಎಂ. ನಿಖಿಲ್, ನಿಹಾಲ್ ಅಸ್ವಾನ್, ಧನುಷ್, ಸಾತ್ವಿಕ್ ಗೌಡ, ಎಚ್.ಎಸ್. ವರ್ಷಿಣಿ ಎಫ್.ಜಿ, ಪತ್ರಿಕಾ ಛಾಯಾಗ್ರಾಹಕ- ನಟರಾಜ್, ಸ್ವಾತಂತ್ರ್ಯ ಹೋರಾಟಗಾರ ಎ.ಆರ್. ನಾರಾಯಣಸ್ವಾಮಿ, ಪೌರ ಕಾರ್ಮಿಕ ಸರ್ದಾನಿ, ನೀಲಕಂಠ,- ಕೀರ್ತಿರಾಜ್ ಆರ್. ಅವರನ್ನು ಸಚಿವ ಮಂಜು ಸನ್ಮಾನಿಸಿದರು.ಹರಿದು ಬಂದ ಜನಸಾಗರ

ಹಾಸನ: ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ಸಾರ್ವಜನಿಕರು ಸಾಗರೋಪಾದಿಯಲ್ಲಿ ಬಂದಿದ್ದರು. ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಕ್ರೀಡಾಂಗಣ ತುಂಬಿ ತುಳುಕುತಿತ್ತು. ಕೆಸರಿ, ಬಿಳಿ, ಹಸಿರು ಬಣ್ಣ ಕಂಗೊಳಿಸುತ್ತಿತ್ತು. ದೇಶಭಕ್ತಿ ಗೀತೆ, ನೃತ್ಯಕ್ಕೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಶಾಲಾ ಮಕ್ಕಳು ಪ್ರಸ್ತುತ ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ಚಪ್ಪಾಳೆ – ಶಿಳ್ಳೆಗಳ ಸದ್ದು ಜೋರಾಗಿ ಕೇಳಿಬಂತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.