ಶನಿವಾರ, ಆಗಸ್ಟ್ 15, 2020
21 °C
ರಸ್ತೆ ವಿಸ್ತರಣೆ ನಿಯಮವೇ ಲೆಕ್ಕಕ್ಕಿಲ್ಲ

1.ಕಿ.ಮೀ ರಸ್ತೆ ಅಭಿವೃದ್ಧಿಗೆ 1 ಕೋಟಿ

ಪ್ರಜಾವಾಣಿ ವಾರ್ತೆ/ ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

1.ಕಿ.ಮೀ ರಸ್ತೆ ಅಭಿವೃದ್ಧಿಗೆ 1 ಕೋಟಿ

ಕೋಲಾರ: ಇದು ನಗರದ ಅಂತರಗಂಗೆ ರಸ್ತೆ. ನಗರದ ಹೃದಯಭಾಗದಲ್ಲಿರುವ ಪ್ರಮುಖ ರಸ್ತೆಗಳ ಪೈಕಿ ಒಂದು. ಹೊಸ ಬಸ್ ನಿಲ್ದಾಣ ವೃತ್ತದಿಂದ 1 ಕಿ.ಮೀವರೆಗೆ ಈ ರಸ್ತೆಯನ್ನು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ ನಡೆಯುತ್ತಿದೆ. ಆದರೆ ರಸ್ತೆಯನ್ನು ನೇರವಾಗಿ ನಿಗದಿತ ಅಳತೆಗೆ ತಕ್ಕಂತೆ ವಿಸ್ತರಿಸಿ ಅಭಿವೃದ್ಧಿಪಡಿಸುವ ಬದಲು ರಸ್ತೆ ಹೇಗಿದೆಯೋ ಹಾಗೆಯೇ ಅಭಿವೃದ್ಧಿ ಪಡಿಸುತ್ತಿರುವುದು ವಿಪರ್ಯಾಸ.ರಸ್ತೆ ವಿಸ್ತರಣೆಗೆ ಬೇಕಾದ ಪೂರ್ವ ಸಿದ್ಧತೆ. 1 ಕಿ.ಮೀ.ವರೆಗೂ ರಸ್ತೆ ವಿಸ್ತರಿಸಲು ಇರುವ ತೊಡಕುಗಳ ನಿವಾರಣೆ ಕುರಿತು ಯಾವುದೇ ಮುಂದಾಲೋಚನೆ ಅಥವಾ ಪೂರ್ವ ಯೋಜನೆಯ ಗೈರು ಹಾಜರಿ ಕುರಿತು ಸುತ್ತಮುತ್ತಲ ನಿವಾಸಿಗಳು ಅಚ್ಚರಿ ಮತ್ತು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಉದ್ದೇಶಿತ ಯೋಜನೆಯಂತೆ, ಹೊಸ ಬಸ್ ನಿಲ್ದಾಣ ವೃತ್ತದಿಂದ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನವರೆಗೂ ಕಾಂಕ್ರಿಟ್ ರಸ್ತೆ ವಿಭಜಕವನ್ನು ಅಳವಡಿಸುವ ಕೆಲಸ ಮುಗಿದಿದೆ. ಅಲ್ಲಿಂದ ಮುಂದಕ್ಕೆ 450 ಮೀಟರ್ ರಸ್ತೆಯಲ್ಲಿ ವಿಭಜಕ ಅಳವಡಿಸುವ ಕೆಲಸ ಸೋಮವಾರದಿಂದ ಶುರುವಾಗಿದೆ.ವೃತ್ತದಿಂದ ಕಾಲೇಜಿನವರೆಗೂ ರಸ್ತೆಯನ್ನು ಎರಡೂ ಬದಿಯಲ್ಲಿ ತಲಾ ಐದೂವರೆ ಮೀಟರಿನಂತೆ ವಿಸ್ತರಿಸಲಾಗುತ್ತಿದೆ. ಆದರೆ ಕಿರಿದಾಗಿರುವ ರಸ್ತೆಯನ್ನು ಅದು ಹೇಗಿದೆಯೋ ಹಾಗೆಯೇ ಪರಿಭಾವಿಸಿ ಕಾಮಗಾರಿ ನಡೆಸಲಾಗುತ್ತಿದೆ.ಬಸ್‌ನಿಲ್ದಾಣ ವೃತ್ತದಿಂದ ಕಾಲೇಜಿನವರೆಗೂ ಇರುವಷ್ಟೇ ಅಳತೆಯಲ್ಲಿಯೇ ರಸ್ತೆಯನ್ನು ವಿಸ್ತರಿಸುತ್ತಿಲ್ಲ. ಬದಲಿಗೆ, 11 ಮೀಟರ್ ಅಗಲದ ಬದಲು, 10 ಮೀಟರ್ ಅಗಲಕ್ಕೆ ಮಾತ್ರ ರಸ್ತೆ ವಿಸ್ತರಣೆಯನ್ನು ಮಾಡಲಾಗುತ್ತಿದೆ. ಹೀಗಾಗಿ ಒಟ್ಟಾರೆ ಒಂದು ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಯು ಒಂದು ನೇರವಾದ ಉದ್ದನೆಯ ರಸ್ತೆಯ ಸೌಕರ್ಯವನ್ನು ಜನರಿಗೆ ನೀಡುತ್ತಿಲ್ಲ.ಪರಿಣಾಮವಾಗಿ, ನೂತನ ಸರ್ಕಾರಿ ಕಾಲೇಜಿನವರೆಗೂ ಒಂದು ರೀತಿ ಕಾಣುವ ರಸ್ತೆಯು, ಅಲ್ಲಿಂದ ಮುಂದಕ್ಕೆ ಸೊಟ್ಟಗೆ ಕಾಣಿಸುತ್ತದೆ. ಈ ಚಿಕ್ಕರಸ್ತೆಗೆ ದೊಡ್ಡ ವಿಭಜಕವೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.ತೊಡಕೇನು?

ಸರ್ಕಾರಿ ಕಾಲೇಜಿನಿಂದ ಮುಂದಕ್ಕೆ ರಸ್ತೆಯ ಬಂದು ಬದಿ ಕಾಲೇಜು ಮತ್ತು ಕ್ರೀಡಾಂಗಣವಿದೆ. ಮತ್ತೊಂದು ಬದಿ ದೊಡ್ಡ ಹಳ್ಳವಿದೆ. ಅದನ್ನು ಮುಚ್ಚಲು ಸಾಧ್ಯವಿಲ್ಲ. ಹೀಗಾಗಿ ಇರುವಷ್ಟೇ ರಸ್ತೆಯನ್ನು 11 ಮೀ.ಗೆ ವಿಸ್ತರಿಸುವ ಬದಲು 10 ಮೀಟರ್‌ಗಷ್ಟೇ ಸೀಮಿತಗೊಳಿಸಿ ವಿಸ್ತರಿಸಲಾಗುತ್ತಿದೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮುನಿಸ್ವಾಮಿ.ಈ ರಸ್ತೆಯನ್ನು ನೇರವಾಗಿ ಬಸ್ ನಿಲ್ದಾಣ ವೃತ್ತದಿಂದ 1 ಕಿ.ಮೀ.ವರೆಗೂ ಒಂದೇ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಾಗುವುದಿಲ್ಲ. ಜಿಲ್ಲಾ ಕ್ರೀಡಾಂಗಣದಿಂದ ಮುಂದಕ್ಕೆ ರೈಲು ಕೆಳ ಸೇತುವೆ ನಿರ್ಮಾಣವಾಗಿರುವುದರಿಂದ ಅಲ್ಲಿ ರೈಲ್ವೆ ಇಲಾಖೆ ಕಾಂಕ್ರಿಟ್ ರಸ್ತೆ ನಿರ್ಮಿಸಿದೆ.ಹೀಗಾಗಿ, ಯೋಜನೆಯನ್ನು ಪೂರ್ಣಗೊಳಿಸಲು ಜಿಲ್ಲಾ ಕ್ರೀಡಾಂಗಣದ ಮುಂಭಾಗದ ರಸ್ತೆಗೆ ಡಾಂಬರು ಹಾಕಲು ನಿರ್ಧರಿಸಲಾಗಿದೆ. ಅನುಮೋದನೆಗೆ ಕಾಯುತ್ತಿದ್ದೇವೆ ಎಂದು ಅವರು ಮಂಗಳವಾರ `ಪ್ರಜಾವಾಣಿ'ಗೆ ತಿಳಿಸಿದರು.ದುಬಾರಿಯಲ್ಲವೇ?

ಕೇವಲ ಒಂದು ಕಿಮೀ ರಸ್ತೆ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿ ವಿನಿಯೋಗಿಸುತ್ತಿರುವುದು ದುಬಾರಿಯಾಗಲಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 1 ಕಿ.ಮೀ ಅಂತರದ ರಸ್ತೆಗೆ ಎರಡು ಪದರ ಡಾಂಬರು ಹಾಕಲಾಗುವುದು. ವಿಸ್ತರಣೆಯಾಗುವ ರಸ್ತೆಗೆ ಕಾಂಕ್ರಿಟ್ ಹಾಕಲಾಗುವುದು ಎಂದು ತಿಳಿಸಿದರು.ತಡವಾಯಿತು:

ಈ ರಸ್ತೆ ವಿಸ್ತರಣೆ ಕಾಮಗಾರಿಯ ಗುತ್ತಿಗೆಯನ್ನು ಕಳೆದ ವರ್ಷ ನೀಡಲಾಗಿತ್ತು. ಪ್ರಸ್ತುತ ಜುಲೈ 6ಕ್ಕೆ ಗುತ್ತಿಗೆ ಅವಧಿ ಮುಗಿದಿದೆ. ಆದರೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶಬೇಕೆಂದು ಗುತ್ತಿಗೆದಾರ ಸೊಣ್ಣೇಗೌಡ ಮನವಿ ಸಲ್ಲಿಸಿದ್ದಾರೆ. ಆದರೆ ಅದನ್ನು ಇನ್ನೂ ಪರಿಶೀಲಿಸಿಲ್ಲ ಎಂದು ಅವರು ತಿಳಿಸಿದರು.ಕೆಲವು ತಿಂಗಳ ಹಿಂದೆಯೇ ಹೊಸ ಬೀದಿದೀಪಗಳನ್ನು ಅಳವಡಿಸಿರುವುದರಿಂದ ರಸ್ತೆ ವಿಸ್ತರಣೆಗೆ ತೊಂದರೆಯಾಗಿದೆ. ಇದೇ ರಸ್ತೆಯಲ್ಲಿರುವ ಖಾಸಗಿ ನರ್ಸಿಂಗ್ ಹೋಂ ಮುಂಭಾಗದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ನಿಲ್ಲಿಸಿರುವುದೂ ಕಾಮಗಾರಿಗೆ ಅಡಚಣೆ ತಂದೊಡ್ಡಿದೆ. ಹೀಗಾಗಿ ರಸ್ತೆ ಇರುವ ರೀತಿಯಲ್ಲೇ ವಿಸ್ತರಣೆ ಮಾಡಲಾಗುತ್ತಿದೆ ಎಂದು ಸುತ್ತಮುತ್ತಲಿನ ಜನರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಆದರೆ, ಒಂದು ಕೋಟಿ ವೆಚ್ಚದಲ್ಲಿ ಕೇವಲ 1 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಎದುರಾಗುವ ಇಂಥ ಕೆಲವು ಸಾಮಾನ್ಯ ಅಡಚಣೆಗಳನ್ನು ನಿವಾರಿಸಿಕೊಳ್ಳದೇ ಲೋಕೋಪಯೋಗಿ ಇಲಾಖೆ ಮತ್ತು ಗುತ್ತಿಗೆದಾರರು ಹೇಗೆ ಕಾಮಗಾರಿಯನ್ನು ಆರಂಭಿಸಿದರು? ಎಂಬುದು ನಗರದ ನಾಗರೀಕರು ಪ್ರಶ್ನಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.