1ನೇ ಸುರಂಗ ನಿರ್ಮಾಣ ಪೂರ್ಣಗೊಳಿಸಿದ `ಹೆಲೆನ್'

7

1ನೇ ಸುರಂಗ ನಿರ್ಮಾಣ ಪೂರ್ಣಗೊಳಿಸಿದ `ಹೆಲೆನ್'

Published:
Updated:

ಬೆಂಗಳೂರು: ಸೆಂಟ್ರಲ್ ಕಾಲೇಜು ಮುಂಭಾಗದ ಸರ್ ಎಂ.ವಿಶ್ವೇಶ್ವರಯ್ಯ ನೆಲದಡಿಯ ನಿಲ್ದಾಣದಿಂದ ವಿಧಾನಸೌಧದ ಮುಂಭಾಗದ ನೆಲದಡಿಯ ನಿಲ್ದಾಣದವರೆಗೆ ಜೋಡಿ ಸುರಂಗದ ಮಾರ್ಗದ ಪೈಕಿ ಒಂದನೇ ಸುರಂಗದ ನಿರ್ಮಾಣ ಕಾರ್ಯವನ್ನು `ಹೆಲೆನ್' ಹೆಸರಿನ `ಟನೆಲ್ ಬೋರಿಂಗ್ ಮೆಷಿನ್' (ಟಿಬಿಎಂ) ಬುಧವಾರ ಪೂರ್ಣಗೊಳಿಸಿತು.`ಮಾರ್ಗರೀಟಾ' ಹೆಸರಿನ ಟಿಬಿಎಂ ಎರಡನೇ ಸುರಂಗವನ್ನು ಕೊರೆದು ನಿರ್ಮಿಸುತ್ತಿದ್ದು, ಅದರ ಕಾರ್ಯವು ಎರಡೂವರೆ ತಿಂಗಳಲ್ಲಿ ಸಂಪೂರ್ಣಗೊಳ್ಳುವ ನಿರೀಕ್ಷೆ ಇದೆ.ತಂತ್ರಜ್ಞರು ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಅಂದರೆ ಬೆಳಿಗ್ಗೆ 11.55ಕ್ಕೆ ವಿಧಾನಸೌಧದ ಮುಂಭಾಗದ ನೆಲದಡಿಯ ನಿಲ್ದಾಣದಲ್ಲಿ ಬಂಡೆಯನ್ನು ಸೀಳಿಕೊಂಡು `ಹೆಲೆನ್' ಹೊರಬಂದಿತು. ಈ ಯಂತ್ರವು ಸೆಂಟ್ರಲ್ ಕಾಲೇಜಿನಿಂದ ವಿಧಾನಸೌಧದವರೆಗೆ 724.5 ಮೀಟರ್ ಉದ್ದ ಸುರಂಗವನ್ನು ಕೊರೆದು, ತಲಾ ಒಂದೂವರೆ ಮೀಟರ್ ಉದ್ದದ 483 ಕಾಂಕ್ರಿಟ್ ಬಳೆಗಳನ್ನು ಅಳವಡಿಸಿದೆ.ಈ ಕ್ಷಣಕ್ಕೆ ಕಾನೂನು ಸಚಿವ ಎಸ್. ಸುರೇಶ್‌ಕುಮಾರ್, ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶೈಲಂ, ನಿರ್ದೇಶಕರಾದ ಬಿ.ಎಸ್. ಸುಧೀರ್ ಚಂದ್ರ, ಡಿ.ಡಿ. ಪಹುಜ, ಮುಖ್ಯ ಎಂಜಿನಿಯರ್‌ಗಳಾದ ಎನ್.ಪಿ. ಶರ್ಮ, ಹೆಗ್ಗಾರಡ್ಡಿ, ಉಪ ಮುಖ್ಯ ಎಂಜಿನಿಯರ್ ಸುಬ್ರಹ್ಮಣ್ಯ ಗುಡ್ಗೆ, ಹಿರಿಯ ಸ್ಥಾನಿಕ ಎಂಜಿನಿಯರ್ ಬಾಲಸುಬ್ರಹ್ಮಣ್ಯಂ, ಸುರಂಗ ತಂತ್ರಜ್ಞ ತೆಜುಕ ಮೊದಲಾದವರು ಸಾಕ್ಷಿಯಾದರು.`ಹೆಲೆನ್' ಯಂತ್ರವನ್ನು ನಿಲ್ದಾಣದ ಇನ್ನೊಂದು ಬದಿಯಲ್ಲಿ ಇರಿಸಿ ಮಿನ್ಸ್ಕ್ ಚೌಕದೆಡೆಗೆ ಸುರಂಗ ನಿರ್ಮಿಸುವ ಕಾರ್ಯ ಎರಡು ತಿಂಗಳ ನಂತರ ಪ್ರಾರಂಭವಾಗುವ ಸಾಧ್ಯತೆ ಇದೆ. ಈ ದೈತ್ಯ ಯಂತ್ರವನ್ನು ಬಿಚ್ಚಿ, ಅದರ ಬಿಡಿಭಾಗಗಳನ್ನು ಮತ್ತೆ ಜೋಡಿಸುವ ಕಾರ್ಯಕ್ಕೆ ಕನಿಷ್ಠ 45 ದಿನಗಳ ಕಾಲಾವಕಾಶ ಬೇಕಾಗಲಿದೆ. ಈಗ ಸಂಪೂರ್ಣಗೊಂಡಿರುವ ಜೋಡಿ ಸುರಂಗ ಮಾರ್ಗದಲ್ಲಿ ಹಳಿ, ವಿದ್ಯುತ್ ಪ್ರವಹಿಸುವ ಮೂರನೇ ಹಳಿ ಅಳವಡಿಸುವ ಕಾರ್ಯವನ್ನು ಕೈಗೊಳ್ಳಬೇಕಿದೆ.

ನರಸಿಂಹ ಬಂದಂತಾಯ್ತು!

`ಭಕ್ತ ಪ್ರಹ್ಲಾದ' ಚಲನಚಿತ್ರದಲ್ಲಿ ದೈತ್ಯ ಕಂಬವನ್ನು ಸೀಳಿಕೊಂಡು ನರಸಿಂಹ ಹೊರಬಂದಂತೆ `ಹೆಲೆನ್' ಯಂತ್ರವು ಬಂಡೆಯನ್ನು ಸೀಳಿಕೊಂಡು ಹೊರಬಂತು. ಅದನ್ನು ನೋಡಿ ನಾನು ಪುಳಕಗೊಂಡೆ. ಮೆಟ್ರೊ ಯೋಜನೆ ಬೇಗ ಪೂರ್ಣಗೊಳ್ಳಬೇಕೆಂದು ನಾವೆಲ್ಲರೂ ಬಯಸುತ್ತೇವೆ. ಆದರೆ ಮೆಟ್ರೊ ಕಾಮಗಾರಿಯನ್ನು ಖುದ್ದಾಗಿ ವೀಕ್ಷಿಸಿದರೆ ಮಾತ್ರ ಕಾರ್ಮಿಕರು ಮತ್ತು ತಂತ್ರಜ್ಞರು ಎಷ್ಟೆಲ್ಲ ಕಷ್ಟಗಳು, ಸವಾಲುಗಳನ್ನು ಎದುರಿಸಿ ಮುಂದೆ ಸಾಗುತ್ತಿದ್ದಾರೆ ಎಂಬುದು ಮನವರಿಕೆಯಾಗುತ್ತದೆ

- ಎಸ್. ಸುರೇಶ್‌ಕುಮಾರ್

ಕಾನೂನು ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry