ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1 ಕೋಟಿ ಉದ್ಯೋಗಾವಕಾಶ ಸೃಷ್ಟಿ

Last Updated 25 ನವೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ / ವಾಷಿಂಗ್ಟನ್ (ಪಿಟಿಐ): ಬಹು ಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ಶೇ 51ರಷ್ಟು ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆಗೆ ಅವಕಾಶ ಮಾಡಿಕೊಡುವ ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ವಾಣಿಜ್ಯ ಸಚಿವ ಆನಂದ ಶರ್ಮಾ, ಶುಕ್ರವಾರ ಇಲ್ಲಿ ಅಧಿಕೃತ ಪ್ರಕಟಿಸಿದರು.

ಚಿಲ್ಲರೆ ವಹಿವಾಟಿಗೆ ಸಂಬಂಧಿಸಿದಂತೆ ಎಲ್ಲರ ಜತೆ ಪಾರದರ್ಶಕ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ಸುದೀರ್ಘವಾಗಿ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಇದರಿಂದ ಮುಂದಿನ ಮೂರು ವರ್ಷಗಳಲ್ಲಿ 1 ಕೋಟಿಗಳಷ್ಟು ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ. `ಎಫ್‌ಡಿಐ~ಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳನ್ನು ಮುಂದಿನ ವಾರ ಪ್ರಕಟಿಸಲಾಗುವುದು ಎಂದರು.

ಬಹು ಬ್ರಾಂಡ್ ರೀಟೇಲ್ ವಹಿವಾಟಿನಲ್ಲಿ ಕನಿಷ್ಠ ಹೂಡಿಕೆಯು 100 ದಶಲಕ್ಷ ಡಾಲರ್‌ಗಳಷ್ಟು  (ರೂ 500 ಕೋಟಿ) ಇರಲಿದೆ. ಇದರಲ್ಲಿ ಶೇ 50ರಷ್ಟು ಪಾಲು ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ನಿಗದಿಪಡಿಸಲಾಗಿರುತ್ತದೆ. ಬೃಹತ್ ಮಾರಾಟ ಮಳಿಗೆಗಳನ್ನು 10 ಲಕ್ಷ ಜನಸಂಖ್ಯೆಯ ನಗರಗಳಲ್ಲಿ ಮಾತ್ರ ಆರಂಭಿಸಲು ಅವಕಾಶ ಮಾಡಿಕೊಡಲಾಗುವುದು ಎಂದರು. ಸರ್ಕಾರದ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡ ಶರ್ಮಾ, ವಿದೇಶಿ  ರೀಟೇಲ್ ಸರಣಿ ಮಾರಾಟ ಸಂಸ್ಥೆಗಳ ಪ್ರವೇಶದಿಂದ ದಕ್ಷ ಪೂರೈಕೆ ಸರಣಿ ವ್ಯವಸ್ಥೆ ಮತ್ತು ಶೈತ್ಯಾಗಾರದಂತಹ ಮೂಲಸೌಕರ್ಯಗಳ ನಿರ್ಮಾಣ ರಂಗದಲ್ಲಿ ಅಗತ್ಯವಾದ ಬಂಡವಾಳದ ಸಮಸ್ಯೆ ದೂರವಾಗಲಿದೆ ಎಂದರು.

ಬಹುರಾಷ್ಟ್ರೀಯ ಬೃಹತ್ ಮಾರಾಟ ಸಂಸ್ಥೆಗಳು ರೈತರಿಂದ ನೇರವಾಗಿ ಸರಕು ಖರೀದಿಸುವುದರಿಂದ ಅವರಿಗೆ ಉತ್ತಮ ಬೆಲೆ ದೊರೆಯಲಿದೆ. ಮಧ್ಯವರ್ತಿಗಳ ಹಾವಳಿಯೂ ಗಮನಾರ್ಹವಾಗಿ ತಗ್ಗಲಿದೆ ಎಂದರು.

ಹಣದುಬ್ಬರ ಇಳಿಕೆ (ಚಂಡೀಗಡ ವರದಿ): ಸರ್ಕಾರ ಕೈಗೊಂಡಿರುವ ನಿರ್ಧಾರದಿಂದ ಖಂಡಿತವಾಗಿಯೂ ಸರಕುಗಳ ಪೂರೈಕೆ ಸರಣಿ ಸುಧಾರಣೆಯಾಗಿ ಹಣದುಬ್ಬರ ಇಳಿಯಲು ನೆರವಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಡಿ. ಸುಬ್ಬರಾವ್ ಅಂದಾಜಿಸಿದ್ದಾರೆ.

ದಿಟ್ಟ ನಿರ್ಧಾರ (ವಾಷಿಂಗ್ಟನ್ ವರದಿ): ದೇಶದ  ದೊಡ್ಡ ಪ್ರಮಾಣದ ಬಹು ಬ್ರಾಂಡ್ ಚಿಲ್ಲರೆ ವಹಿವಾಟನ್ನು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಮುಕ್ತಗೊಳಿಸಿ ಭಾರತ ಸರ್ಕಾರವು ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಅಮೆರಿಕದ ಪ್ರಮುಖ ವಾಣಿಜ್ಯ ಸಂಘಟನೆ `ಅಮೆರಿಕ - ಭಾರತ ವಾಣಿಜ್ಯ ಮಂಡಳಿ~ ಪ್ರತಿಕ್ರಿಯಿಸಿದೆ. ಇದರಿಂದ ಭಾರತದ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಏರುತ್ತಲೇ ಸಾಗಿರುವ ಆಹಾರ ಧಾನ್ಯಗಳ ಬೆಲೆ ಏರಿಕೆಗೆ ಕಡಿವಾಣ ವಿಧಿಸಲೂ ಸಾಧ್ಯವಾಗಲಿದೆ ಎಂದು ಮಂಡಳಿಯು ಅಭಿಪ್ರಾಯಪಟ್ಟಿದೆ.

ಮಹತ್ವದ ಹೆಜ್ಜೆ; ವಾಲ್‌ಮಾರ್ಟ್ (ನ್ಯೂಯಾರ್ಕ್ ವರದಿ): `ಇದೊಂದು ಮಹತ್ವದ ಮೊದಲ ಹೆಜ್ಜೆಯಾಗಿದೆ~ ಎಂದು ವಿಶ್ವದ ಅತಿದೊಡ್ಡ ಚಿಲ್ಲರೆ ವಹಿವಾಟು ಸಂಸ್ಥೆ ವಾಲ್‌ಮಾರ್ಟ್ ಬಣ್ಣಿಸಿದೆ. ಬಹುರಾಷ್ಟ್ರೀಯ ಸಂಸ್ಥೆಗಳು ದೇಶದ ಅರ್ಥ ವ್ಯವಸ್ಥೆ ಬಲಪಡಿಸಲು ನೆರವಾಗಲಿವೆ ಎನ್ನುವುದು ಭಾರತ ಸರ್ಕಾರಕ್ಕೆ ಮನವರಿಕೆ ಆಗಿರುವುದು ಸ್ವಾಗತಾರ್ಹ ಎಂದು ಹೇಳಿದೆ.

ವಾಲ್‌ಮಾರ್ಟ್ ಮಳಿಗೆಗೆ ಬೆಂಕಿ ಹಚ್ಚುವೆ: ಉಮಾ ಅಬ್ಬರ (ಲಖನೌ ವರದಿ): ದೇಶದ ಯಾವುದೇ ಭಾಗದಲ್ಲಿ ವಾಲ್‌ಮಾರ್ಟ್ ಮಳಿಗೆಗಳು ಆರಂಭವಾದರೂ ಅವುಗಳಿಗೆ ಬೆಂಕಿ ಹಚ್ಚುವುದಾಗಿ ಬಿಜೆಪಿ ನಾಯಕಿ ಉಮಾ ಭಾರತಿ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.

`ವಾಲ್‌ಮಾರ್ಟ್ ಮಳಿಗೆಗಳ ಸ್ಥಾಪನೆ ಮೂಲಕ ಸಗಟು ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದನ್ನು ಬಿಜೆಪಿ  ವಿರೋಧಿಸುತ್ತದೆ. ಇಂಥ ಮಳಿಗೆಗಳ ಮೂಲಕ ಸರ್ಕಾರ, ಬಡವರು, ದಲಿತರು ಮತ್ತು ಹಿಂದುಳಿದ ವರ್ಗಗಳ ಉದ್ಯೋಗಾವಕಾಶವನ್ನು ಕಸಿದುಕೊಂಡಿದೆ. ದೇಶದಲ್ಲಿ ಎಲ್ಲೇ ಮಳಿಗೆ ಆರಂಭವಾದರೂ ನಾನೇ ಸ್ವತಃ ಅದಕ್ಕೆ ಬೆಂಕಿ ಹಚ್ಚುತ್ತೇನೆ. ನನಗೆ ಬಂಧನದ ಭೀತಿ ಇಲ್ಲ~ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT