ಸೋಮವಾರ, ಜೂನ್ 21, 2021
20 °C

10ನೇ ಶತಮಾನದ ಕವಿಗಳಿಂದ ಕನ್ನಡ ಅಸ್ಮಿತೆಯ ವಿಸ್ಮೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಹತ್ತನೇ ಶತಮಾನದ ಕವಿಗಳು ಕನ್ನಡದ ಅಸ್ಮಿತೆಯನ್ನು ನಾಶಗೊಳಿಸಿದರು. ಆದರೆ 12ನೇ ಶತಮಾನದ ಬಸವಣ್ಣ ಕನ್ನಡ ಅಸ್ಮಿತೆಯ ಜಾಗೃತಿ ಮೂಡಿಸಿದರು ಎಂದು ಹಿರಿಯ ವಿದ್ವಾಂಸ, ವಿಮರ್ಶಕ ಡಾ. ಎಂ.ಎಂ. ಕಲಬುರ್ಗಿ ಹೇಳಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿಜಯನಗರದ ಸರ್ಕಾರಿ ಮಹಿಳಾ ಕಾಲೇಜು ಮತ್ತು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಆಶ್ರಯದಲ್ಲಿ ಆಯೋಜಿಸಲಾಗಿದ್ದ `ಹಳಗನ್ನಡ ಕಾವ್ಯ; ಓದು ವ್ಯಾಖ್ಯಾನ, ರಸಗ್ರಹಣ~ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.`ಹತ್ತನೇ ಶತಮಾನದ ಪಂಪ, ರನ್ನ, ನಾಗವರ್ಮ, ನಾಗಚಂದ್ರರು ಅತ್ಯುತ್ತಮ ಕವಿಗಳು. ಆದರೆ, ಉತ್ತರ ಭಾರತದ ರಾಮಾಯಣ, ಮಹಾಭಾರತವನ್ನು ಇಲ್ಲಿಯ ವರಿಗೆ ನೀಡಿದರು. ಆದರೆ, ಕನ್ನಡದ ಪುಲಿಕೇಶಿ, ನೃಪತುಂಗರಂತಹ ಕಥಾನಾಯಕರು ಅವರ ಕಣ್ಣಿಗೆ ಬೀಳಲಿಲ್ಲ. ಅಲ್ಲಿಯೇ ನಮ್ಮ ಕನ್ನಡತನದ ಅಸ್ಮಿತೆಗೆ ದೊಡ್ಡ ಪೆಟ್ಟು ಬಿತ್ತು. ರಾಮ, ಲಕ್ಷ್ಮಣ, ಸೀತೆ, ಕೃಷ್ಣರನ್ನು ವೈಭವಿಕರಿಸಲು ನಮ್ಮ ಭಾಷೆ ಬಳಸಿಕೊಂಡರು.ನಾವೂ ಅದನ್ನು ಮನದಲ್ಲಿ ತುಂಬಿಕೊಂಡು ನಮ್ಮತನ ಕಳೆದು ಕೊಂಡಿದ್ದೇವೆ. ಅದೇ ತಮಿಳುನಾಡಿನ ಕವಿಗಳು ಅಲ್ಲಿಯ ರಾಜಮಹಾರಾಜರನ್ನು ಕಥಾ ನಾಯಕರನ್ನಾಗಿ ಮಾಡಿ, ಪರಂಪರೆಯನ್ನು ಜೀವಂತವಾಗಿಟ್ಟರು. ಆದ್ದರಿಂದ ಹತ್ತನೇ ಶತಮಾನದ ಕವಿಗಳ ರಚನೆ ಮರು ವಿಮರ್ಶೆ ಗೊಳ್ಳಬೇಕು~ ಎಂದು ಅಭಿಪ್ರಾಯಪಟ್ಟರು.`ಶೈವ, ಜೈನ, ವೈದಿಕ ಮತ್ತು ಬೌದ್ಧ ಧರ್ಮಗಳು ನಮ್ಮ ರಾಜ್ಯದಲ್ಲ. ಹತ್ತನೇ ಶತಮಾನದ ಈ ನಾಲ್ಕು ಕವಿಗಳಲ್ಲಿ ಮೂವರು ಜೈನರು ಮತ್ತು ಒಬ್ಬರು ವೈದಿಕದವರು. ಹಾಗಾಗಿಯೇ ಅವರ ಕಾವ್ಯಗಳಲ್ಲಿ ಉತ್ತರ ಭಾರತದ ಸಂಸ್ಕೃತಿ ಮತ್ತು ಪರಂಪರೆ ಢಾಳವಾಗಿ ಕಾಣುತ್ತದೆ. ಈ ಧರ್ಮಗಳು ಇಲ್ಲಿಗೆ ಬರುವ ಮುನ್ನ ವೃತ್ತಿಯಾಧಾರಿತ ಜಾತಿಗಳು ಮಾತ್ರ ಇಲ್ಲಿದ್ದವು. ಆದರೆ ನಂತರ ಬಂದ ಧರ್ಮಗಳ ಸಂಘರ್ಷಗಳಲ್ಲಿ ಅವರಿವರೊಂದಿಗೆ ಸೇರಿದ ವಿವಿಧ ಜಾತಿಯ ಮಂದಿನ ಹೋರಾಡಿದರು. ಆದರೆ 12ನೇ ಶತಮಾನದಲ್ಲಿ ಬಸವಣ್ಣ ಕನ್ನಡದ ಈ ಎಲ್ಲ ಜಾತಿಗಳನ್ನು ಸೇರಿಸಿ ಕ್ರಾಂತಿ ಮಾಡಿದ. ಲಿಂಗಾಯತ ಧರ್ಮ ಈ ರಾಜ್ಯದ ನಿಜಧರ್ಮವಾಯಿತು. ಆದರೆ, ಇಂದು ಇದೇ ಜಾತಿಯನ್ನು ಸ್ವಾರ್ಥಕ್ಕೆ ಬಳಸಿಕೊಂಡವರು ಹಾಳುಗೆಡವಿದ್ದಾರೆ~ ಎಂದು ವಿಷಾದಿಸಿದರು.`ನಮ್ಮಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಶೂನ್ಯತೆ ಹತ್ತನೇ ಶತಮಾನದ ಕೊಡುಗೆಯೂ ಹೌದು. ಆದ್ದರಿಂದ ಇಂದಿನ ಕನ್ನಡ ಪ್ರಾಧ್ಯಾ ಪಕರು ಭಾಷೆ, ಇತಿಹಾಸವನ್ನು ಕಲಿಸುವಾಗ ಯಾಂತ್ರಿಕವಾಗಬಾರದು. ವಿದ್ಯಾರ್ಥಿಗಳಲ್ಲಿ ಕುತೂಹಲ ಹುಟ್ಟಿಸಬೇಕು. ಹೊಸ ಹೊಸ ವಿಷಯ, ವಿಮರ್ಶೆಗಳನ್ನು ಅವರ ಮುಂದೆ ಇಟ್ಟು ಚಿಂತನೆಗೆ ಹಚ್ಚಬೇಕು~ ಎಂದರು.`ಇಂದಿನ ಶಿಕ್ಷಕರು ತಮ್ಮ ಬೋಧನಾ ಕ್ರಮವನ್ನು ತಿದ್ದಿಕೊಳ್ಳುವ ಅವಶ್ಯಕತೆ ಇದೆ. ಹಾಡುಗಬ್ಬ, ಓದುಗಬ್ಬ ಮತ್ತು ನೋಡು ಗಬ್ಬಗಳ ಅಂತರವನ್ನು ಕಲಿಯಬೇಕಿದೆ. ಕವಿತೆ ಗಳನ್ನು ರಾಗಬದ್ಧವಾಗಿ ಹಾಡುವ ಮೂಲ ಕವೇ ಹೇಳಬೇಕು. ಅದನ್ನು ಓದುತ್ತ ಹೋದರೆ ಅದರ ಸ್ವಾರಸ್ಯಕ್ಕೆ ಚ್ಯುತಿ ಬಂದುಬಿಡುತ್ತದೆ.

 

ಇದು ಕಲಿಕಾಸಕ್ತಿಯನ್ನು ನಾಶ ಮಾಡುತ್ತದೆ. ಓದುವುದು ಒಂದು ಕಲೆ. ಇರುವ ವಿಷಯವನ್ನು ಆಕರ್ಷಕವಾಗಿ ಓದಿಬಿಡುವ ಕಲೆ ಕರಗತ ವಾಗಬೇಕು. ನೋಡುಗಬ್ಬ ನಾಟಕ, ದೃಶ್ಯ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಬೇಕು~ ಎಂದು ಸಲಹೆ ನೀಡಿದರು.`ಅಂದಿನ ಸಾಹಿತ್ಯ ಮತ್ತು ಸಮಕಾಲೀನ ಸ್ಥಿತಿಗತಿಗಳು ಒಂದಕ್ಕೊಂದು ಹೊಂದಬೇಕು. ಅದೇ ನಿಜವಾದ ಸಾಹಿತ್ಯವಾಗುತ್ತದೆ. ಕಾವ್ಯ, ಸಾಹಿತ್ಯಕ್ಕಾಗಿ ದುಡಿದ ನಮ್ಮ ಕವಿಗಳಿಗೆ ನ್ಯಾಯಯುತ ಸ್ಥಾನ ಸಿಗಬೇಕು~ ಎಂದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ಟಿ.ಎನ್. ಪ್ರಭಾಕರ್, ವಿಜಯನಗರ ಸರ್ಕಾರಿ ಮಹಿಳಾ ಕಾಲೇಜು ಪ್ರಾಚಾರ್ಯ ಪ್ರೊ.ಕೆ.ಎಸ್.ಲಕ್ಷ್ಮಣಗೌಡ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಪ್ರಾಚಾರ್ಯ ಪ್ರೊ.ಎಚ್.ಬಿ.ಮಲ್ಲಿಕಾರ್ಜುನ ಸ್ವಾಮಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಡಾ.ಎನ್.ಎಸ್.ತಾರಾನಾಥ್, ಹಿರಿಯ ವಿದ್ವಾಂಸ ವಿಷ್ಣುನಾಯ್ಕ, ಪ್ರೊ.ಎಂ.ಎಚ್. ಕೃಷ್ಣಯ್ಯ, ಡಾ. ಕೆ. ಅನಂತರಾಮು ಭಾಗವಹಿ ಸಿದ್ದರು. ಪ್ರಾಧಿಕಾರದ ಸಂಚಾಲಕ ಪ್ರೊ.ಎಂ. ಕೃಷ್ಣೇಗೌಡ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.